ADVERTISEMENT

‘ನಾವೂ ಕಾಲೆಳಿತೀವಿ’

ಹರವು ಸ್ಫೂರ್ತಿ
Published 15 ಮೇ 2017, 19:30 IST
Last Updated 15 ಮೇ 2017, 19:30 IST
‘ನಾವೂ ಕಾಲೆಳಿತೀವಿ’
‘ನಾವೂ ಕಾಲೆಳಿತೀವಿ’   

‘ಐಟಂಸಾಂಗ್‌ ಬರೆಯುತ್ತೀರೋ, ಪ್ರೇಮಗೀತೆಯನ್ನು ಬರೆಯುತ್ತೀರೋ’ ಎಂದಾಗ ‘ಐಟಂ ಸಾಂಗ್‌ ಬರೆಯುತ್ತೀನಿ’ ಎಂದು ಆಯ್ಕೆ ಮಾಡಿಕೊಂಡವರು ನಂದಿನಿ ನಂಜಪ್ಪ.

ಸಾಮಾಜಿಕ ಜಾಲತಾಣದಲ್ಲಿ ಹಾಸ್ಯ ಬರಹ, ಬೋಲ್ಡ್‌ ಟ್ರೋಲ್‌ ಬರಹಗಳಿಗೆ ಹೆಸರಾಗಿರುವ ಇವರು, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯವರು. ಫೇಸ್‌ಬುಕ್‌ ಬರಹಗಳಿಂದಲೇ ಜನಪ್ರಿಯರಾಗಿ ಇಂದು ಸಿನಿಮಾ ಗೀತೆಗಳಿಗೆ ಸಾಹಿತ್ಯ ಬರೆಯುತ್ತಿದ್ದಾರೆ.

‘ಬಣ್ಣದ ನೆರಳು’ ಸಿನಿಮಾಕ್ಕೆ ಮೂರು ಗೀತೆ, ‘ಹುಲಿರಾಯ’ ಸಿನಿಮಾಕ್ಕೆ ಒಂದು, ‘ಅಮರ ಪ್ರೇಮಕಾವ್ಯ’ ಸಿನಿಮಾಕ್ಕೆ ಒಂದು ಗೀತೆಯನ್ನು ಬರೆದಿದ್ದಾರೆ. ತಮ್ಮ ಟ್ರೋಲ್‌ ಬರವಣಿಗೆ ಬಗ್ಗೆ ‘ಗುಲ್‌ಮೊಹರ್’ ಜೊತೆ ಮಾತನಾಡಿದ್ದಾರೆ.

ADVERTISEMENT

* ನಿಮ್ಮ ಸ್ಟೇಟಸ್‌ಗಳು ಟ್ರೆಂಡ್‌ ಆಗುತ್ತಿವೆ...
ಫೇಸ್‌ಬುಕ್‌ ಬರಹವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಫೇಸ್‌ಬುಕ್‌ ಬರಹಗಾರರನ್ನು ಉಡಾಳರು ಎಂದೇ ಕೆಲವರು ಪರಿಗಣಿಸುತ್ತಾರೆ. ಆದರೆ ನಾನು ಆ ಉಡಾಳತನವನ್ನೇ ಬಂಡವಾಳವಾಗಿಸಿಕೊಂಡೆ. ಗಂಡು ಮಕ್ಕಳ ಬಗ್ಗೆ ಟ್ರೋಲ್, ಹಾಸ್ಯ ಬರಹಗಳನ್ನು ಬರೆಯುತ್ತಾ ಹೋದೆ.

* ಗಂಡು ಮಕ್ಕಳ ಮೇಲೆ ಲಿಟ್ರೇಚರ್ ರೌಡಿಸಂ ಮಾಡುತ್ತಿದ್ದೀರಿ ಎಂಬ ಆರೋಪವಿದೆ...
ಹ್ಹಾ... ಹ್ಹಾ.. ಗಂಡು ಮಕ್ಕಳು ನನ್ನ ಮೇಲಿನ ಈ ಭಯವನ್ನು ಮುಂದುವರೆಸಲಿ. ಆದರೆ ಅವರಿಗೆ ಭಯ ಹುಟ್ಟಿಸುವುದು ನನ್ನ ಉದ್ದೇಶವಲ್ಲ. ಅನಿಸಿದ್ದನ್ನು ನೇರವಾಗಿ ಹೇಳುತ್ತೇನೆ.  ಮೊದಲ ರಾತ್ರಿ ಅನುಭವದಿಂದ ಹಿಡಿದು ಎಲ್ಲಾ ತರಹದ ವಿಚಾರಗಳ ಬಗ್ಗೆ ಆರೋಗ್ಯಕರ ಚರ್ಚೆ, ತಮಾಷೆ ಮಾಡಬಹುದು.

* ಮಹಿಳಾ ಟ್ರೋಲ್‌ ಬರಹಗಾರರನ್ನು ವಿಚಿತ್ರವಾಗಿ ನೋಡುತ್ತಾರೆಯೇ?
ಗಂಡು ಮಕ್ಕಳು ಮಾತ್ರ ತಮಾಷೆ ಮಾಡಬಹುದಾ? ಗಂಡು ಮಕ್ಕಳು ಜೋಕ್ಸ್‌ ಬರೆದರೆ ಅದಕ್ಕೆ ಬರುವ ಕಮೆಂಟ್‌ಗೂ ಹೆಣ್ಣು ಮಕ್ಕಳು ಬರೆದ ಜೋಕ್ಸ್‌ಗೆ ಬರುವ ಕಮೆಂಟ್‌ ಗಮನಿಸಿದರೆ ವ್ಯತ್ಯಾಸ ನೋಡಿದರೆ ಗೊತ್ತಾಗುತ್ತದೆ. ಟ್ರೋಲ್‌ ಬರಹಗಾರ್ತಿಯರನ್ನು ವಿಚಿತ್ರವಾಗಿ ನೋಡುತ್ತಿದ್ದಾರೆ. ಟ್ರೋಲ್ ಬರಹಗಳನ್ನು ಲಿಂಗಾಧಾರಿತವಾಗಿ ನೋಡಬಾರದು. ಮನರಂಜನೆ ಅಷ್ಟೆ.

* ಹಾಸ್ಯ ಮತ್ತು ಟ್ರೋಲ್‌ ಬರಹರ್ಗಾತಿಯಾಗಿರುವ ಸವಾಲು..
‘#ಪ್ರೇಮ, #ಮಧ್ಯರಾತ್ರಿ_ಪದ್ಯಗಳು, #unromantic_* ove_story,  #simp* e_Agond_buddies_story,#ಮೊದಲ_ರಾತ್ರಿ_ಅನುಭವ’ ಎಂಬ ಆ್ಯಶ್‌ ಟ್ಯಾಗ್‌ನಲ್ಲಿ ಹಲವು ತಮಾಷೆ ಪದ್ಯಗಳನ್ನು ಬರೆದೆ. ಈ ಪದ್ಯಗಳನ್ನು ಬರೆದಾಗ ತುಂಬಾ ಜನ ಮೆಸೇಜ್ ಮಾಡಿದ್ದರು. ಯಾರ ಬಗ್ಗೆ ಬರೆದಿದ್ದೀರಾ?, ನೀವು ಇನ್ನು ಮದುವೆಯಾಗಿಲ್ಲಲ್ವಾ, ಮೊದಲ ರಾತ್ರಿ ಅನುಭವದ ಬಗ್ಗೆ ಹೇಗೆ ಬರೆದ್ರಿ ಎಂದು ಪ್ರಶ್ನೆಗಳನ್ನು ಕೇಳುತ್ತಿದ್ದರು. ನಾನು ಮುಜುಗರಪಡಲಿಲ್ಲ. ಅನುಭವನೇ ಇರಬೇಕು ಅಂತ ಏನಿಲ್ಲ. ಕಾವ್ಯ–ಹಾಸ್ಯ ಕಲ್ಪನೆಯಿಂದಲೇ ಹುಟ್ಟುವುದು. ಇಂಥ ಪ್ರಶ್ನೆ ಕೇಳಿದವರಿಗೆ ಧೈರ್ಯವಾಗಿಯೇ ಉತ್ತರಿಸಿದ್ದೇನೆ.

* ಯಾವ ಬಗೆಯ ಟ್ರೋಲ್ ಮಾಡುತ್ತೀರಿ..
ಜೀವನಾನುಭವದ ರಸವೇ ನನ್ನ ಕಾಮಿಡಿ ಮತ್ತು ಟ್ರೋಲ್ ಬರವಣಿಗೆಗೆ ಕಚ್ಚಾವಸ್ತು. ಸ್ಟೇಟಸ್‌ನಲ್ಲಿ ಓದುಗರ ಸ್ಪಂದನೆಗೂ ಅವಕಾಶ ಕೊಡಬೇಕು. ನಿಮ್ಮ ಮೊದಲ ಪ್ರೇಮನಿವೇದನೆ ಬಗ್ಗೆ ಬರೆಯಿರಿ ಎಂದಿದ್ದರು. ಆಗ ನನ್ನ ಅನುಭವವನ್ನು ಸೇರಿಸಿ ಬರೆದಿದ್ದೆ. ಅದು ತುಂಬಾ ಚೆನ್ನಾಗಿ ಜನರಿಗೆ ತಲುಪಿತ್ತು.

ಈ ಫೇಸ್‌ಬುಕ್‌ನಲ್ಲಿ ಭಗ್ನ ಪ್ರೇಮದ ಬಗ್ಗೆ ತಮಾಷೆಯಾಗಿ ಬರೆದಾಗ 300ಕ್ಕೂ ಹೆಚ್ಚು ಜನ ಪ್ರತಿಕ್ರಿಯಿಸಿದ್ದರು.

* ಪುರುಷ ಬರೆಯುವ ಎಲ್ಲಾ ಜೋಕ್‌ಗಳಲ್ಲೂ ಮಹಿಳಾ ಪಾತ್ರವೇ ಗೂಬೆ. ಯಾಕೆ ಹೀಗೆ?
ವಿಜ್ಞಾನ ತಂತ್ರಜ್ಞಾನದ ವಿಚಾರ, ಸಾಹಸ, ಸಾಮಾಜಿಕ ಒಡನಾಟದಂಥ ವಿಚಾರಗಳಲ್ಲಿ ಮಹಿಳೆಯನ್ನು ‘ಗೂಬೆ’ ಎನ್ನುವಂತೆಯೇ ಪುರುಷರು ಜೋಕ್ಸ್ ಬರೆಯುತ್ತಾರೆ. ಹೆಂಡತಿ, ಗರ್ಲ್‌ಫ್ರೆಂಡ್ ಪದಗಳಾಗಿ ಜೋಕ್ಸ್‌ನಲ್ಲಿ ಹಿಂಸಾತ್ಮಕ ಪದವಾಗಿ ಬಳಕೆಯಾಗುತ್ತಿವೆ. ಹೆಂಡತಿ ಎಂದರೆ ಗಂಡನಿಗೆ ಹಿಂಸೆಮಾಡುವವಳು ಎನ್ನುವಂತಾಗಿದೆ.

ಹೆಣ್ಮಕ್ಕಳು ಲೇಟಾಗಿ ರೆಡಿಯಾಗುತ್ತಾರೆ. ಬ್ಯೂಟಿಪಾರ್ಲರ್‌ಗಳಲ್ಲಿ ಗಂಟೆಗಟ್ಟಲೆ ಕೂರುತ್ತಾರೆ, ಗಂಡನಿಗೆ ಮೊಟಕುತ್ತಾರೆ ಇವು ಮಹಿಳೆ ಮೇಲಿರುವ ಸಾಮಾನ್ಯ ಜೋಕ್‌ಗಳು.

ಮೊದಲು  ಗಂಡಸರಿಗೆ  ಸಲೂನ್‌ ಮಾತ್ರ ಇರುತ್ತಿದ್ದವು. ಇವತ್ತು 100ರಲ್ಲಿ 60ರಷ್ಟು ಯುನಿಸೆಕ್ಸ್‌ ಸ್ಪಾಗಳು ಇವೆ. ಆದರೆ ತಮಾಷೆ ಮಾಡುವುದು ಹೆಣ್ಣು ಮಕ್ಕಳನ್ನು ಮಾತ್ರ.

* ಮಹಿಳೆಯರ ಬಗ್ಗೆಯೂ ಟ್ರೋಲ್‌ ಬರೆಯುತ್ತೀರಾ..
ಹೌದು. ಯಾವ ಭಾಷೆಯ ಹಾಸ್ಯ ಬರಹ ಓದಿದರೂ ಅದರಲ್ಲಿ ಮಹಿಳೆಯ ಬಗ್ಗೆ ಒಂದು ತಮಾಷೆ ಇದ್ದೇ ಇರುತ್ತದೆ. ಹಾಗಾಗಿ ನಾನು ಗಂಡಸರ ಬಗ್ಗೆ ಬರೆಯೋಣ ಎಂದುಕೊಂಡೆ. ಇದರಲ್ಲಿ ಯಾವುದೇ ಪೂರ್ವಾಗ್ರಹವಿಲ್ಲ.

ಸಂದರ್ಭ, ವಿಷಯ ಅಷ್ಟೆ ಮುಖ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.