ADVERTISEMENT

ನಿರಂತರ ಆನ್‌ಲೈನ್‌ ಗೇಮ್‌ ಪ್ರಾಣಕ್ಕೆ ಕುತ್ತು...

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2015, 19:30 IST
Last Updated 9 ಸೆಪ್ಟೆಂಬರ್ 2015, 19:30 IST

ಬಹು ಆಕರ್ಷಿತ ಕಂಪ್ಯೂಟರ್‌ ಗೇಮ್‌  ತಾತ್ಕಾಲಿಕವಾಗಿ ಮನಸ್ಸನ್ನು ರಂಜಿಸಬಹದು. ಆದರೆ ನಿರಂತರವಾಗಿ ಆಟ ಆಡುತ್ತ ಹೋದರೆ ಪ್ರಾಣಕ್ಕೆ ಕುತ್ತು ಬರುವುದರಲ್ಲಿ ಅನುಮಾನವಿಲ್ಲ ಎನ್ನುತ್ತಾರೆ ವೈದ್ಯರು. ಹಾಗಾಗಿ ಪೋಷಕರು ಕಂಪ್ಯೂಟರ್‌ ಗೇಮ್‌ ಆಡುವ ಮಕ್ಕಳ ಮೇಲೆ ನಿಗಾವಹಿಸುವುದು ಅತ್ಯಗತ್ಯ.

ನಿರಂತರವಾಗಿ 22 ದಿನ ಆನ್‌ಲೈನ್‌ ಕಂಪ್ಯೂಟರ್‌  ಗೇಮ್‌ ಆಡಿ ಹದಿ ಹರೆಯದ ಯುವಕನೊಬ್ಬ ಪ್ರಾಣ ಕಳೆದುಕೊಂಡಿರುವ ಘಟನೆ ರಷ್ಯಾದಲ್ಲಿ ನಡೆದಿದೆ. 17 ವರ್ಷದ ರುಸ್ತಮ್‌ ನಿರಂತರವಾಗಿ ಕಂಪ್ಯೂಟರ್‌ ಗೇಮ್‌ ಆಡಿದ್ದರಿಂದ ಮಿದುಳು ನಿಷ್ಕ್ರಿಯಗೊಂಡು ‌ ಮೃತಪಟ್ಟಿದ್ದಾರೆ. ಕಳೆದ ತಿಂಗಳು ರುಸ್ತಮ್‌ಗೆ ರಸ್ತೆ ಅಪಘಾತವಾಗಿತ್ತು. ಬಲ ಗಾಲಿಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ನಿದ್ದೆ ಮತ್ತು ಊಟದ ವೇಳೆಯನ್ನು ಹೊರತು ಪಡಿಸಿ ಉಳಿದ ಸಮಯ ಪೂರ್ತಿ ನಿರಂತರವಾಗಿ  ಗೇಮ್‌ ಆಡಿದ್ದಾರೆ. ಇದರಿಂದ ಮಿದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ರುಸ್ತಮ್‌ ಒಂದು ದಿನಕ್ಕೆ 7 ರಿಂದ 8 ಗಂಟೆ  ನಿರಂತರವಾಗಿ ಗೇಮ್‌ ಆಡುತ್ತಿದ್ದರು.  ಅವರು ಕಳೆದ 6 ತಿಂಗಳಲ್ಲಿ ಒಟ್ಟು 2000 ಗಂಟೆ ಗೇಮ್‌ ಆಡಿದ್ದಾರೆ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಭಾರತ ಸೇರಿದಂತೆ ಯುರೋಪ್‌ ಹಾಗೂ ಪಾಶ್ಚಿಮಾತ್ಯ ದೇಶಗಳಲ್ಲಿ ಮಕ್ಕಳು ಮತ್ತು ಹದಿ ಹರೆಯದವರು ಆನ್‌ಲೈನ್‌ ಗೇಮ್‌ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.  ಇದರಿಂದ  ಅವರ ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತಿದೆ ಎಂದು ಶಿಕ್ಷಣ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.