ADVERTISEMENT

‘ನೋವೇ ನನ್ನ ಮುಲಾಮು’

​ಪ್ರಜಾವಾಣಿ ವಾರ್ತೆ
Published 25 ಜುಲೈ 2017, 19:30 IST
Last Updated 25 ಜುಲೈ 2017, 19:30 IST
‘ನೋವೇ ನನ್ನ ಮುಲಾಮು’
‘ನೋವೇ ನನ್ನ ಮುಲಾಮು’   

–ರಮ್ಯಾ ಕೆದಿಲಾಯ

*

ಪಾಪ್ ಸಂಗೀತ ಲೋಕದ ಹೊಸ ಬೆಳಕು ದುವಾ ಲೀಪಾ. ಈಕೆಗೆ ಜಾಗತಿಕ ಖ್ಯಾತಿ ತಂದುಕೊಟ್ಟಿದ್ದು ‘ಸ್ಕೇರ್ಡ್ ಟು ಬಿ ಲೋನ್ಲಿ’ ಹಾಡು. ಪಾಪ್ ಸಂಗೀತದಲ್ಲಿ ಹೊಸ ಅಲೆ ಸೃಷ್ಟಿಸಿದ್ದು ಈಕೆಯ ‘ದಿ ಟುನೈಟ್ ಶೋ’ ಕಾರ್ಯಕ್ರಮ. ಮೃದು ಕಂಠದ ಇಂಪು ಆಲಿಸಿದ ಪ್ರೇಕ್ಷಕರು ನಾದದ ಅಲೆಯಲ್ಲಿ ತೇಲಿದ್ದು ವಿಶೇಷ.

ADVERTISEMENT

ತನ್ನ ಬದುಕಿನ ನೋವನ್ನೇ ಗೀತೆಯಾಗಿಸಿಕೊಂಡ ದುವಾ, ಸಾಧನೆಯ ಹಿಂದಿನ ಪ್ರೇರಣೆ ಹಂಚಿಕೊಳ್ಳಲು ಯಾವ ಅಳುಕೂ ಇಲ್ಲ. ತನ್ನ ಹಾಡುಗಳನ್ನು ‘ಕತ್ತಲ ಗೀತೆ’, ‘ಅಳುವ ನೃತ್ಯ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಕಳೆದ ಜೂನ್‌ನಲ್ಲಿ ಮಾರುಕಟ್ಟೆಗೆ ಬಂದ ಇವರ ಹೊಸ ಆಲ್ಬಂನ ಹೆಸರೂ 'ದುವಾ ಲೀಪಾ'.

ಆನ್‌ಲೈನ್ ಸ್ಟ್ರೀಮಿಂಗ್ ಮತ್ತು ರೇಡಿಯೊಗಳಲ್ಲಿ ಈಕೆಯ ‘ಹಾಟರ್ ದೆನ್ ಹೆಲ್’, ‘ ಬ್ಲೋ ಯುವರ್ ಮೈಂಡ್’, ‘ಬಿ ದಿ ಒನ್' ಹಾಡುಗಳು ಈ ಹಿಂದೆ ಜನಪ್ರಿಯವಾಗಿದ್ದವು. ಈಕೆಯ ಕಂಠದಿಂದ ಹೊಮ್ಮಿದ್ದ ‘ಸ್ಕೇರ್ಡ್ ಟು ಬಿ ಲೋನ್ಲಿ' ಹಾಡನ್ನು ಆಸ್ವಾಸಿದವರ ಸಂಖ್ಯೆ ಬರೋಬ್ಬರಿ 2.50 ಕೋಟಿ. ಈಕೆಯ ಯುಟ್ಯುಬ್‌ ಪುಟದ ಚಂದಾದಾರರ ಸಂಖ್ಯೆ 3.85 ಕೋಟಿ.

‘ನನ್ನ ಬದುಕಿನಲ್ಲಿ ನಡೆದುಹೋದ ಯಾವ ಕೆಟ್ಟ ಸಂಗತಿಗಳನ್ನೂ ನನ್ನಿಂದ ಮರೆಯಲು ಆಗಿಲ್ಲ. ಎದೆಯ ಮೂಲೆಯಲ್ಲಿ ಕಾವು ಪಡೆದ ಸಂಗತಿಗಳೇ ನನ್ನ ಹಾಡಾದವು. ಮೈದುಂಬಿ ಡಾನ್ಸ್‌ ಮಾಡಲು ಪ್ರೇರಣೆ ಕೊಟ್ಟವು. ಡಾನ್ಸ್‌ ಮಾಡುವಾಗ ಹಾಡು ಗುನುಗುತ್ತೇನೆ. ಆಗ ಪದ ಕೊಡುವ ಅರ್ಥ ನನಗೆ ಮುಖ್ಯವೇ ಅಲ್ಲ. ಮನದ ನೋವಿಗಿಂತ ಪ್ರೇರಣೆ ಮತ್ತೊಂದಿಲ್ಲ' ಎನ್ನುವುದು 21ರ ಹರೆಯದ ಈ ಯುವಗಾಯಕಿ ಕಂಡುಕೊಂಡಿರುವ ಸತ್ಯ.

ಈಗ ವಿಶ್ವದ ಪಾಪ್‌ ಪ್ರಿಯರ ಮನಗೆದ್ದಿರುವ ಲುವಾ ಅವರದ್ದು ಒಂದು ಥರ ನಮ್ಮ ಅಲ್ಲು ಅರ್ಜುನ್‌ನಂಥದ್ದೇ ಕಥೆ. ಪ್ರಾಥಮಿಕ ಶಾಲೆಯಲ್ಲಿರುವಾಗ ಗಾಯನವೃಂದಕ್ಕಾಗಿ ಆಡಿಷನ್ ಕೊಟ್ಟರು. ಮಿದು, ಆರ್ದ್ರ ದನಿಯ ಕಾರಣ ಆಕೆ ಆಯ್ಕೆಯಾಗಲಿಲ್ಲ. ಈ ಪ್ರಸಂಗವನ್ನು ಒಂದು ಸವಾಲಾಗಿ ಸ್ವೀಕರಿಸಿ, ಸಂಗೀತ ತರಗತಿಗೆ ಸೇರಿಕೊಂಡರು.

ಲುವಾಗೆ 11 ವರ್ಷವಿದ್ದಾಗ ಆಕೆಯ ಪೋಷಕರು ಕೊಸಾವೋಗೆ ಹೊರಟರು. ಆದರೆ ಪಾಪ್‌ಲೋಕದತ್ತ ಕನಸು ನೆಟ್ಟಿಗೆ ಲುವಾಗೆ ಲಂಡನ್‌ನದ್ದೇ ಕನಸು-ಕನವರಿಕೆ. ಕಡೆಗೂ ಲಂಡನ್‌ಗೆ ಹಿಂದಿರುಗಲು ತನ್ನ ಪೋಷಕರ ಮನವೊಲಿಸುವಲ್ಲಿ ಯಶಸ್ವಿಯಾದರು. 15ನೇ ವಯಸ್ಸಿನಿಂದಲೇ ಹಿಡಿದರು. ತಾನು ಹಾಡಿದ ಹಾಡುಗಳನ್ನು ಯುಟ್ಯೂಬ್‌ನಲ್ಲಿ ನಿಯಮಿತವಾಗಿ ಅಪ್‌ಲೋಡ್‌ ಮಾಡತೊಡಗಿದರು. 2012ರ ನಂತರ ತಮ್ಮದೇ ರಚನೆಯ ಹಾಡುಗಳನ್ನೂ ಫೇಸ್‌ಬುಕ್‌ ಪುಟಕ್ಕೆ ಅಪ್‌ಲೋಡ್ ಮಾಡಿದರು.

'ನನ್ನನ್ನು ಜಗತ್ತಿನೆದುರು ಬೆಳಕಿಗೆ ತಂದಿದ್ದೇ ಸಾಮಾಜಿಕ ಜಾಲತಾಣಗಳು. ಈಗ ಇದೇ ನನ್ನ ಗೀಳಾಗಿದೆ' ಎನ್ನುವುದು ಅವರ ಹೆಮ್ಮೆ. ಇವರ ‘ಬಿ ದಿ ಒನ್' ಹಾಡು, ಜರ್ಮನ್ ಸೇರಿದಂತೆ ಯೂರೋಪ್ ದೇಶದ ಅನೇಕ ರೇಡಿಯೊಗಳಲ್ಲಿ ಪ್ರಸಾರವಾಗಿ, ಜನಪ್ರಿಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.