ADVERTISEMENT

‘ಪದ್ದು’ ಭಕ್ತೆಯ ಇತಿವೃತ್ತಾಂತ

ಕಿರುತೆರೆ

ಸುಶೀಲಾ ಡೋಣೂರ
Published 19 ಮಾರ್ಚ್ 2017, 19:30 IST
Last Updated 19 ಮಾರ್ಚ್ 2017, 19:30 IST
–ದೀಪ್ತಿ ಮಾನೆ, ನಟಿ
–ದೀಪ್ತಿ ಮಾನೆ, ನಟಿ   

‘ನನ್ನ ಧ್ವನಿ ಹೇಗೆ ಎಂಬ ಬಗ್ಗೆ ನನ್ನಲ್ಲಿ ಗೊಂದಲವಿತ್ತು. ಅದಕ್ಕಾಗೇ ಹಿಂದಿನ ಯಾವ ಚಿತ್ರಗಳಲ್ಲಿಯೂ ನಾನು ಡಬ್ಬಿಂಗ್‌ ಮಾಡಿರಲಿಲ್ಲ. ಆದರೆ ‘ಪದ್ಮಾವತಿ’ ಧಾರಾವಾಹಿಯಲ್ಲಿ ಮೊದಲ ಬಾರಿಗೆ ಈ ಪ್ರಯತ್ನ ಮಾಡಿದೆ, ಖುಷಿಯಾಗಿದೆ.

ನನ್ನ ಹುಟ್ಟೂರು ದಾವಣಗೆರೆ. ಪಿಯುಸಿವರೆಗೆ ಓದಿದ್ದೂ ಅಲ್ಲಿಯೇ. ಮುಂದೆ ವಸ್ತ್ರವಿನ್ಯಾಸಕಿ ಆಗುವ ಕನಸಿತ್ತು. ಅದಕ್ಕಾಗಿಯೇ ಬೆಂಗಳೂರಿಗೆ ಬಂದೆ. ಫ್ಯಾಷನ್‌ ಡಿಸೈನಿಂಗ್‌ ಪದವಿ ಓದುತ್ತಿರುವಾಗ ರೂಪದರ್ಶಿಯಾಗಿ ರ್‍ಯಾಂಪ್‌ ಮೇಲೆ ಹೆಜ್ಜೆ ಹಾಕಿದ್ದೆ. ನಂತರ ಸಿನಿಮಾಗಳಲ್ಲಿ ಅವಕಾಶ ಸಿಕ್ಕಿತು. ಈಗ ‘ಪದ್ಮಾವತಿ’ಯಲ್ಲಿ ‘ತುಳಸಿ’ ಆಗಿದ್ದೇನೆ.

ಸಿನಿಮಾಗಳಲ್ಲಿ ನಟಿಸುವಾಗ ಧಾರಾವಾಹಿಯಲ್ಲಿ ನಟಿಸಬೇಕೇ ಬೇಡವೇ ಎಂಬ ಗೊಂದಲದಲ್ಲಿದ್ದೆ. ನಾನು ಯಾವತ್ತೂ ಪ್ರತಿ ಹೆಜ್ಜೆಯನ್ನೂ ಅಳೆದು–ತೂಗಿ ನೋಡುತ್ತೇನೆ ಆದರೆ ಕೊನೆಗೆ ಒಪ್ಪಿಕೊಳ್ಳುವುದು ಮನಸ್ಸಿಗೆ ಸರಿ ತೋಚಿದ್ದನ್ನೇ. ‘ಇನ್ನೂ ಸಿನಿಮಾದಲ್ಲಿ ಅವಕಾಶಗಳಿರುವಾಗ ಧಾರಾವಾಹಿ ಯಾಕೆ’ ಎಂದು ಕೆಲವರು ಕೇಳಿದರು. ನಾನು ಕಿವಿಗೊಡದೇ ತುಳಸಿ ಆಗಲು ಒಪ್ಪಿಕೊಂಡೆ. ಈ ಪಾತ್ರಕ್ಕಿರುವ ಪ್ರಾಮುಖ್ಯತೆ ಹಾಗೂ ಪ್ರತಿಭೆಗಿರುವ ಅವಕಾಶದ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡೆ. ಈಗ ಈ ಪಾತ್ರವೇ ನಾನಾಗಿ ಹೋಗಿದ್ದೇನೆ ಅನಿಸುತ್ತದೆ. ಈ ಹಿಂದೆ ಸಿನಿಮಾದಲ್ಲಿ ನಟಿಸಿದ್ದರೂ ಈ ಧಾರಾವಾಹಿ ಮೂಲಕ ಹೆಚ್ಚಿನ ಅಭಿಮಾನಿಗಳ ಪ್ರೀತಿಗೆ ಪಾತ್ರವಾಗಿದ್ದೇನೆ.

ADVERTISEMENT

ಈ ಧಾರಾವಾಹಿಯಲ್ಲಿ ತೊಡುವ ಬಟ್ಟೆಯನ್ನು ನಾನು ತೊಟ್ಟಿದ್ದು ಈ ಸೆಟ್‌ನಲ್ಲಿಯೇ ಮೊದಲು. ಒಂದೇ ಧಾರಾವಾಹಿಯಲ್ಲಿ ಎರಡು ಪಾತ್ರಗಳನ್ನು ನಿರ್ವಹಿಸಿದ ಅನುಭವ ನನ್ನದಾಗುತ್ತಿದೆ... ಹೀಗಾಗಿ ಒಪ್ಪಿಕೊಂಡೆ.

ಹಾಂ, ಅಂದಹಾಗೆ ಈ ಪಾತ್ರಕ್ಕೆ ನಾನೇ ಧ್ವನಿ ನೀಡಬೇಕು ಎಂದಾಗ ಮೊದಲು ತುಂಬಾ ಆತಂಕವಾಯ್ತು. ಜನ ನನ್ನ ದನಿಯನ್ನು ಒಪ್ಪಿಕೊಳ್ಳುತ್ತಾರೊ ಇಲ್ಲೊ ಎನ್ನುವ ಕುತೂಹಲವೂ ಇತ್ತು. ಆದರೆ ಮೊದಲ ಸಂಚಿಕೆ ಮುಗಿಯುತ್ತಿದ್ದಂತೆ ಜನ ನನ್ನ ದನಿಯನ್ನು ಮೆಚ್ಚಿಕೊಂಡಿದ್ದಾರೆ ಎಂದು ತಿಳಿದು ಸಂತಸ ಪಟ್ಟೆ.

ಫ್ಯಾಷನ್‌ ಡಿಸೈನಿಂಗ್‌ ನನ್ನ ಆಸಕ್ತಿಯ ಕ್ಷೇತ್ರವಾದರೂ ನಂತರ ಮಾಡೆಲಿಂಗ್‌ನಲ್ಲಿ ಮೊದಲ ಹೆಜ್ಜೆಯೂರಿದೆ. ಜಯಂತಿ ಬಲ್ಲಾಳ್‌, ರಮೇಶ್‌ ದೆಂಬ್ಲಾ ಅವರಂತಹ ವಿನ್ಯಾಸಕರ ಶೋಗಳಲ್ಲಿ ಹೆಜ್ಜೆಹಾಕಿದ್ದೇನೆ. ವರಮಹಾಲಕ್ಷ್ಮಿ ಸಿಲ್ಕ್ಸ್‌, ಆರ್‌.ಆರ್‌. ಗೋಲ್ಡ್‌ ಸೇರಿದಂತೆ ಅನೇಕ ಜಾಹೀರಾತುಗಳಿಗೆ ರೂಪದರ್ಶಿಯಾಗಿ ಕೆಲಸ ಮಾಡಿದ್ದೇನೆ.

ಹಾಗೆ ನೋಡಿದರೆ ನಟನಾ ಬದುಕು ನನ್ನತ್ತ ಕೈಚಾಚಿದ್ದು ಆಗಲೇ. ನನಗೆ ನಟಿಯಾಗುವ ಅವಕಾಶ ಮೊದಲು ಸಿಕ್ಕಿದ್ದು ತಮಿಳಿನ ‘ಎವನ್‌’ ಚಿತ್ರದಿಂದ.  ಅಲ್ಲಿಂದ ಕನ್ನಡದ ‘ಹಿಂಗ್ಯಾಕೆ’ ಹಾಸ್ಯ ಚಿತ್ರದಲ್ಲಿ ನಟಿಸಿದೆ. ಅದು ಅಷ್ಟೇನೂ ಹೆಸರು ತಂದುಕೊಡಲಿಲ್ಲ. ಆದರೆ ‘ನಮ್ಮೂರ ಹೈಕ್ಳು’ ಬಗ್ಗೆ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದೇನೆ.
‘ತುಳಸಿ’ಯಾಗಿ ಖುಷಿಯಾಗಿದ್ದೇನೆ: ಒಬ್ಬ ಕಲಾವಿದೆಯಾಗಿ ನೋಡುವುದಾದರೆ ನಮಗೆ ಧಾರಾವಾಹಿ–ಸಿನಿಮಾ ಎನ್ನುವುದು ಮುಖ್ಯವಲ್ಲ. ನಮ್ಮ ಅಭಿನಯಕ್ಕೆ, ಪ್ರತಿಭೆಗೆ ಎಷ್ಟು ಅವಕಾಶವಿದೆ ಎನ್ನುವುದನ್ನು ನೋಡಬೇಕು. ಅದರಲ್ಲೂ ‘ಪದ್ಮಾವತಿ’ ನನ್ನ ಕನಸಿನ ಪ್ರಾಜೆಕ್ಟ್‌. ಇಂತಹ ಪಾತ್ರವನ್ನು ನಾನು ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದೆ. ಆದರೆ ಧಾರಾವಾಹಿಯಿಂದಾಗಿ ನನ್ನ ಸಿನಿಮಾ ಅವಕಾಶಗಳಿಗೇನೂ ತೊಂದರೆ ಆಗಿಲ್ಲ. ಎರಡಕ್ಕೂ ಸಮಯ ಹೊಂದಿಸಿಕೊಳ್ಳುತ್ತಿದ್ದೇನೆ.

ಧಾರಾವಾಹಿಯಲ್ಲಿ ಇರುವಂತೆಯೇ ನಾನು ದೇವರನ್ನು ತುಂಬಾ ನಂಬ್ತೀನಿ. ಶಿವ ಅಂದ್ರೆ ಇಷ್ಟ. ದೇವರು ಅಂದ್ರೆ ನಮ್ಮ ಧನಾತ್ಮಕ ವರ್ತನೆಯೇ ವಿನಾ ಬೇರೇನೂ ಅಲ್ಲ. ಅದನ್ನು ನಾವು ಯಾವ ದೇವರ ರೂಪದಲ್ಲಿಯೂ ನೋಡಬಹುದು. ನಾನು ಎಲ್ಲೇ ಇದ್ದರೂ ಖುಷಿಯಾಗಿಯೇ ಇರುತ್ತೇನೆ.  ಎಲ್ಲರಲ್ಲೂ ಒಂದಿಲ್ಲ ಒಂದು ಒಳ್ಳೆಯ ಗುಣ ಇರುತ್ತಲ್ಲ, ಅದನ್ನೇ ನಾನು ನೋಡೋದು. ಎಲ್ಲರನ್ನೂ ನಗಿಸ್ತಾ ಇರುತ್ತೇನೆ. ನಗ್ತಾ ಇದ್ರೆ ಕಷ್ಟ ಹತ್ರ ಬರೋಲ್ಲ ಎನ್ನುವ ನಂಬಿಕೆ. ನಗುವಿನಲ್ಲೇ ಗೆಲುವಿದೆ ಅಲ್ವೇ?

ಉಡುಗೆ–ತೊಡುಗೆ ಸಿಂಪಲ್‌ ಆಗಿದ್ದಷ್ಟೂ ಚೆಂದ. ನಮ್ಮ ದೇಹಕ್ಕೆ ಯಾವುದು ಒಪ್ಪುತ್ತೊ ಅದನ್ನೇ ತೊಡಬೇಕು. ನನಗೆ ಉದ್ದ ಲಂಗ ಒಪ್ಪುತ್ತೆ. ಅದನ್ನೇ ಹೆಚ್ಚು ತೊಟ್ಟುಕೊಳ್ಳುವೆ. ಮೇಕಪ್‌ನಲ್ಲಿ ಲಿಪ್‌ಸ್ಟಿಕ್‌ ಅಂದ್ರೆ ತುಂಬಾ ಇಷ್ಟ. ಅದಿಲ್ಲದೆ ಹೊರಗೆ ಹೋಗೋದೇ ಇಲ್ಲ. ಸಿಂಪಲ್‌ ಲುಕ್‌ ನೀಡುವ ಲಿಪ್‌ಸ್ಟಿಕ್‌ ಇಷ್ಟ. ಉಳಿದಂತೆ ಸ್ಕಿನ್‌ ಟೋನ್‌, ಲಿಪ್‌ಬಾಮ್‌ ಇದ್ರೂ ಸಾಕು.

ತಿನ್ನೋದ್ರಲ್ಲಿ ನನಗೆ ಯಾವುದೇ ಮಡಿವಂತಿಕೆ ಇಲ್ಲ. ವೆಜ್‌–ನಾನ್‌ವೆಜ್‌ ಯಾವುದಾದರೂ ಸರಿ. ಎಲ್ಲವನ್ನೂ ತಿನ್ನುತ್ತೇನೆ. ದಪ್ಪ ಆಗ್ತೀನಿ ಅನ್ನೊ ಚಿಂತೆ ನನಗಿಲ್ಲ. ಯಾಕಂದ್ರೆ ಯೋಗ ಮಾಡ್ತೀನಿ.  ಶೂಟಿಂಗ್‌ ಸಮಯದಲ್ಲಿ ಐದು ನಿಮಿಷ ಬಿಡುವಿದ್ದರೂ ವಾಕ್‌ ಮಾಡ್ತೀನಿ.

**

ನನ್ನ ಪ್ರಕಾರ ನಾವು ಏನು ತೊಡುತ್ತೇವೆ, ಹೇಗಿರುತ್ತೇವೆ, ಹೇಗೆ ವರ್ತಿಸುತ್ತೇವೆ ಎನ್ನುವುದೇ ಫ್ಯಾಷನ್‌. ಅದಕ್ಕೆ ಅಂತ ಒಂದು ನಿಯಮ ಎನ್ನುವುದಿಲ್ಲ
–ದೀಪ್ತಿ ಮಾನೆ,
ನಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.