ADVERTISEMENT

ಪಾಪ್‌ ತಾರೆಯ ಬೇಕು ಬೇಡಿಕೆಗಳು

​ಪ್ರಜಾವಾಣಿ ವಾರ್ತೆ
Published 8 ಮೇ 2017, 19:30 IST
Last Updated 8 ಮೇ 2017, 19:30 IST
ಜಸ್ಟಿನ್‌ ಡ್ರ್ಯೂ ಬೀಬರ್‌
ಜಸ್ಟಿನ್‌ ಡ್ರ್ಯೂ ಬೀಬರ್‌   

ಪಾಪ್‌ ಸಂಗೀತ ಪ್ರಿಯ ಮನಸ್ಸುಗಳಲ್ಲಿ ತುಂಬಿಕೊಂಡ ಸಂಗೀತಗಾರ ಜಸ್ಟಿನ್‌ ಡ್ರ್ಯೂ ಬೀಬರ್‌. ಈಗಿನ್ನೂ 23ರ ಹರೆಯದಲ್ಲಿರುವ ಕೆನಡಾ ಮೂಲದ ಈ ಕಲಾವಿದ ಗಾಯನ ಹಾಗೂ ಹಾಡುಗಳ ರಚನೆ ಮೂಲಕ ಹೆಸರಾದವರು. ಇದೀಗ ವಿಶ್ವಪರ್ಯಟನೆ ಮಾಡುತ್ತಾ ಸಂಗೀತದ ಹೊನಲು ಹರಿಸಲು ಮುಂದಾಗಿದ್ದಾರೆ.

ಮುಂಬೈನಲ್ಲಿ ಮೇ 10ರಂದು ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಮೇ 7ರಂದು ಭಾರತಕ್ಕೆ ಬರುವ ಅವರ ಸಂಗೀತ ತಂಡದಲ್ಲಿ ಬರೋಬ್ಬರಿ 120 ಜನರು ಇರುವುದು ವಿಶೇಷ.

ಐದು ದಿನಗಳ ಭಾರತ ಪ್ರವಾಸಕ್ಕಾಗಿ ಹತ್ತು ಲಕ್ಷುರಿ ಸೆಡಾನ್‌ ಕಾರುಗಳು, 2 ವೋಲ್ವೊ ಬಸ್‌ ಈ ತಂಡದ ಸೇವೆಗೆ ಮೀಸಲು. ಝೆಡ್‌ ಪ್ಲಸ್‌ ಭದ್ರತೆಯನ್ನೂ ಒದಗಿಸಲಾಗಿದೆ. ಈ ತಂಡಕ್ಕಾಗಿ ಎರಡು ಪಂಚತಾರಾ ಹೋಟೆಲ್‌ಗಳನ್ನು ಕಾಯ್ದಿರಿಸಲಾಗಿದ್ದು, ಒಳಾಂಗಣ ವಿನ್ಯಾಸವನ್ನು ಜಸ್ಟಿನ್‌ ಅಭಿರುಚಿಗೆ ತಕ್ಕಂತೆ ಮರುವಿನ್ಯಾಸಗೊಳಿಸಲಾಗಿದೆ.

ಯೋಗದ ಬಗ್ಗೆ ವಿಶೇಷ ಆಸ್ಥೆ ಹೊಂದಿರುವ ಜಸ್ಟಿನ್ ಅವರನ್ನು ಮೆಚ್ಚಿಸಲು ಅವರು ಉಳಿದುಕೊಳ್ಳುವ ಕೋಣೆಯಲ್ಲಿ ಆಸನ ಹಾಗೂ ಕುಂಡಲಿನಿ ಯೋಗಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಇರಿಸಲಾಗಿದೆ.

ಇವಿಷ್ಟೂ ಸಾಲದೆನ್ನುವ ಜಸ್ಟಿನ್ ತಮ್ಮ ಅಗತ್ಯದ ದೊಡ್ಡ ಪಟ್ಟಿಯನ್ನೇ ಕೊಟ್ಟಿದ್ದಾರೆ. 100 ಹ್ಯಾಂಗರ್‌, ರಾಶಿರಾಶಿ ಹಣ್ಣುಗಳು, ಸಾವಯವ ಬಾಳೆ ಹಣ್ಣು, ಬೀಜವಿಲ್ಲದ ದ್ರಾಕ್ಷಿ, ವೆನಿಲ್ಲಾ ಪರಿಮಳದ ರೂಂ ರಿಫ್ರೆಶ್ನರ್‌, ತೇವಾಂಶಭರಿತ ಲಿಪ್‌ಬಾಂಗಳು, ಕೂದಲಿಗೆ ಬಳಸುವ ಬಗೆಬಗೆಯ ಜೆಲ್‌ಗಳು, ಸುಶಿ ರೆಸ್ಟೊರೆಂಟ್ಸ್‌ (ಜಪಾನಿ ಖಾದ್ಯ ಸಿಗುವ ಸ್ಥಳ), ನೈಟ್‌ಕ್ಲಬ್ಸ್‌, ಬಾಸ್ಕೆಟ್‌ಬಾಲ್‌ ಕೋರ್ಟ್‌, ರೆಕಾರ್ಡಿಂಗ್‌ ಸ್ಟುಡಿಯೊ ಬೇಕು ಎಂದಿದ್ದಾರೆ.

ಅಲ್ಲದೆ ಪಿಂಗ್‌ಪಾಂಗ್‌ ಬಾಲ್‌ ಟೇಬಲ್‌, ಪ್ಲೇಸ್ಟೇಶನ್‌, 10 ಹೋವರ್‌ಬೋರ್ಡ್‌ಗಳು, ಸೋಫಾ ಸೆಟ್‌, ವಾಷಿಂಗ್‌ ಮೆಶಿನ್‌, ರೆಫ್ರಿಜರೇಟರ್‌, ವೇದಿಕೆಯ ಹಿಂಭಾಗದಲ್ಲಿ ಬಳಸಲು ಮೆಸೇಜ್‌ ಟೇಬಲ್‌ ಹೀಗೆ ಜೆಸ್ಟಿನ್‌ ಬೇಡಿಕೆಗಳ ಪಟ್ಟಿಯನ್ನೇ ಮುಂದಿಟ್ಟಿದ್ದಾರಂತೆ.

ಅಂದಹಾಗೆ ಜಸ್ಟಿನ್‌ ಉಳಿದುಕೊಂಡ ಸ್ಥಳದಿಂದ ಸಂಗೀತ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಹೆಲಿಕಾಫ್ಟರ್‌ನಲ್ಲಿ ಪ್ರಯಾಣ ಬೆಳೆಸಲಿದ್ದಾರಂತೆ. ಅವರ ಬೇಕುಗಳನ್ನು ಈಡೇರಿಸಲು ವ್ಯವಸ್ಥಾಪಕರು ಬೆವರೊರೆಸಿಕೊಳ್ಳುತ್ತಿದ್ದಾರೆ. ಅಂದಹಾಗೆ ಜಸ್ಟಿನ್‌ ಮುಂಬೈನ ಡಿ.ವೈ. ಪಾಟೀಲ್‌ ಸ್ಟೇಡಿಯಂನಲ್ಲಿ ಕಾರ್ಯಕ್ರಮ ನೀಡಲಿದ್ದು, ಲಕ್ಷಾಂತರ ಜನ ಸೇರುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.