ADVERTISEMENT

ಪುಂಗಿ ನಾದಕ್ಕೆ ಹಾವು ತಲೆ ಆಡಿಸೋದ್ಯಾಕೆ?

ಹೀಗೂ ಉಂಟು

​ಪ್ರಜಾವಾಣಿ ವಾರ್ತೆ
Published 29 ಜೂನ್ 2016, 19:30 IST
Last Updated 29 ಜೂನ್ 2016, 19:30 IST
ಪುಂಗಿ ನಾದಕ್ಕೆ ಹಾವು  ತಲೆ ಆಡಿಸೋದ್ಯಾಕೆ?
ಪುಂಗಿ ನಾದಕ್ಕೆ ಹಾವು ತಲೆ ಆಡಿಸೋದ್ಯಾಕೆ?   

ಪುಂಗಿ ಊದುತ್ತಾ ಎಲ್ಲೋ ಅವಿತಿರುವ ಹಾವನ್ನು ಹೊರಕರೆತಂದು ಅದರ ನಾದಕ್ಕೆ ತಲೆದೂಗಿಸುವ ರೋಚಕ ದೃಶ್ಯವನ್ನು ಹಲವು ಸಿನಿಮಾಗಳಲ್ಲಿ ನೋಡಿರುತ್ತೇವೆ. ಪುಂಗಿ ನಾದಕ್ಕೆ ಹಾವನ್ನು ಮರಳು ಮಾಡುವ ಶಕ್ತಿಯಿದೆ ಎಂಬುದನ್ನು ಬಿಂಬಿಸುವ ಪರಿಯದು. ಆದರೆ ನಿಜಕ್ಕೂ ಹಾವು ಪುಂಗಿ ನಾದಕ್ಕೆ ಸೋಲುತ್ತದೆಯೇ?

ಇದಕ್ಕೆ ಉತ್ತರ ‘ಇಲ್ಲ’ ಎಂಬುದು. ಹಾವಿನ ಮೇಲೆ ಸಂಗೀತ ಯಾವುದೇ ದೊಡ್ಡ ಪರಿಣಾಮ ಬೀರುವುದಿಲ್ಲ. ಹಾವು ಪುಂಗಿ ನೋಡಿ ಪ್ರತಿಕ್ರಿಯಿಸುತ್ತದೆ  ಹೊರತು ಅದರ ಸಂಗೀತಕ್ಕಲ್ಲ. 

ಹಾವಿನ ಕುರಿತು ಇನ್ನೂ ಒಂದು ವಾದವಿದೆ. ಎಷ್ಟೇ ಗದ್ದಲವಿದ್ದರೂ ಅದಕ್ಕೆ ಪ್ರತಿಕ್ರಿಯಿಸದ ಹಾವುಗಳನ್ನು ಕಂಡು, ಅವುಗಳಿಗೆ ಕಿವಿ ಇಲ್ಲದಿರುವುದರಿಂದ ಶಬ್ದಗಳು ಕೇಳುವುದಿಲ್ಲ ಎಂಬುದು. ಆದರೆ ಪ್ರಿನ್ಸ್‌ಟನ್‌ನಲ್ಲಿ ನಡೆದ ಸಂಶೋಧನೆ ಪ್ರಕಾರ ಹಾವುಗಳು ಶಬ್ದಗಳಿಗೆ ಚುರುಕಾಗಿ ಸ್ಪಂದಿಸುತ್ತವೆ.

ಹಾವಿಗೆ ಬಾಹ್ಯ ಕಿವಿಗಳಿಲ್ಲ. ಆದರೆ ನೆಲದಿಂದ ಪ್ರವಹಿಸುವ ಶಬ್ದ ತರಂಗಗಳು ಅದರ ದವಡೆ ಮತ್ತು ಹೊಟ್ಟೆಯ ಸ್ನಾಯುಗಳ ಮೂಲಕ ಗ್ರಹಿಕೆಗೆ ಸಿಗುತ್ತವೆ. ಅವು ಒಳಗಿವಿಯಿಂದ ವಾಯುವಾಹಿತ ಶಬ್ದಗಳನ್ನು ಗುರುತಿಸಬಲ್ಲವು.

ಹಾವಿನ ಒಳಗಿವಿ ಹೇಗೆ ಕೆಲಸ ಮಾಡುತ್ತದೆ ಎಂಬ ಕುರಿತೂ ಒಂದು ಸಂಶೋಧನೆ ನಡೆದಿದೆ. ವೋಲ್ಟಾ ಮೀಟರ್‌ ಮೂಲಕ ಹಾವುಗಳಲ್ಲಿ ವಾಯುವಾಹಿತ ಶಬ್ದಗಳು ಅವುಗಳ ಮೆದುಳಿನ ಮೇಲೆ ಬೀರುವ ಪರಿಣಾಮವನ್ನು ಅಳೆಯಲಾಗಿದೆ. ಇದರ ಪ್ರಕಾರ, ಅವುಗಳ ಶ್ರವಣ ಸಾಮರ್ಥ್ಯ ಎಷ್ಟಿದೆ ಎಂದರೆ,

ದೊಡ್ಡ ಪ್ರಾಣಿಗಳ ಚಲನ ವಲನದಿಂದ ಉಂಟಾಗುವ ಸಣ್ಣ ಶಬ್ದವನ್ನೂ ಗ್ರಹಿಸಬಲ್ಲಷ್ಟು ಸೂಕ್ಷ್ಮವಿದೆ. ಅಂದರೆ ಅವುಗಳಿಗೆ ನಾವು ಕೇಳುವ ಜೋರು ದನಿಯ ಸಂಗೀತ ಯಾವ ಲೆಕ್ಕದ್ದೂ ಅಲ್ಲ. ಹಾಗಿದ್ದರೆ ನಾಗರ ಹಾವು ಪುಂಗಿ ನಾದಕ್ಕೆ ತಲೆ ಆಡಿಸುವುದು ಏಕೆ ಎಂಬ ಪ್ರಶ್ನೆಯೂ ಮೂಡುತ್ತದೆ.

ಇದೊಂದು ನಂಬಿಕೆ ಅಷ್ಟೆ. ನಾಗರ ಹಾವಿಗೆ ಒಂದಿಷ್ಟು ತೊಂದರೆಯಾದರೂ ಅದು ಸೆಟೆದು ನಿಲ್ಲುತ್ತದೆ. ಅದು ಪುಂಗಿಯನ್ನು ಕಂಡಾಗಲೂ ಪ್ರತಿಕ್ರಿಯೆ ನೀಡುವುದು ಹೀಗೆಯೇ. ಪುಂಗಿ ನೋಡುತ್ತಾ ಅದರ ಚಲನವಲನಕ್ಕೆ ತಕ್ಕಂತೆ ವಾಲುತ್ತದೆ.

ಒಮ್ಮೆ ಪುಂಗಿಗೆ ಕುಟುಕುತ್ತದೆ. ಕುಟುಕಿದ್ದರಿಂದ ಹೆಚ್ಚು ನೋವಾಗಿ, ಒಮ್ಮೆ ನೋವು ಅನುಭವಿಸಿದ ಮೇಲೆ ಅವು ಪ್ರತಿರೋಧ ತೋರದೆ ಸುಮ್ಮನಿದ್ದುಬಿಡುತ್ತವೆ. ಅದನ್ನೇ ನಾವು ಪುಂಗಿ ನಾದಕ್ಕೆ ಹಾವು ಸೋಲುತ್ತವೆ ಎಂದು ಭಾವಿಸುತ್ತೇವೆ.

ನಾಗರ ಹಾವಿನ ಸಹಜ ಸ್ವಭಾವ ರಕ್ಷಣಾತ್ಮಕವಾಗಿರುವುದು, ಆಕ್ರಮಣಕಾರಿಯಾಗಿರುವುದಿಲ್ಲ. ಪುಂಗಿ ಹಾವಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT