ADVERTISEMENT

ಭಾಳ ಫೇಮಸ್ ನಮ್ ಸ್ಕೂಲು

​ಪ್ರಜಾವಾಣಿ ವಾರ್ತೆ
Published 21 ಜೂನ್ 2017, 19:30 IST
Last Updated 21 ಜೂನ್ 2017, 19:30 IST
ತೇಲುವ ಶಾಲೆಯಿದು
ತೇಲುವ ಶಾಲೆಯಿದು   

ಶಾಲೆ ಎಂದರೆ ಕಟ್ಟಡ, ಮೈದಾನ, ಕ್ಲಾಸ್‌ರೂಂ... ಇವೆಲ್ಲಾ ನೆನಪಿಗೆ ಬರುತ್ತವೆ. ಆದರೆ ಈ ತೇಲುವ ಶಾಲೆ ನೋಡಿ... ಈ ಬೋಟ್ ಶಾಲೆ ಇರುವುದು ಬಾಂಗ್ಲಾದೇಶದಲ್ಲಿ. ಬಾಂಗ್ಲಾದೇಶ ಪ್ರವಾಹಕ್ಕೆ ಹೆಸರುವಾಸಿ. ವರ್ಷದಲ್ಲಿ ಎರಡು ಬಾರಿಯಾದರೂ ಪ್ರವಾಹ ಆಗುತ್ತದೆ. ಇದರಿಂದ ನಿತ್ಯ ಜೀವನವೇ ದುಸ್ತರ. ಹೀಗಿರುವಾಗ ವಿದ್ಯಾರ್ಥಿಗಳು ಶಾಲೆಗೆ ಹೋಗುವುದಾದರೂ ಹೇಗೆ? ಇದೇ ಪ್ರಶ್ನೆಯೊಂದಿಗೆ ಶಿಧುಲೈ ಸ್ವನಿರ್ವಾರ್ ಸರ್ಕಾರೇತರ ಸಂಸ್ಥೆ ಬೋಟ್‌ಗಳಲ್ಲಿ ಶಾಲೆಗಳನ್ನು ರೂಪಿಸಿದೆ.

ಪ್ರತಿ ಬೋಟ್‌ನಲ್ಲೂ ಕಂಪ್ಯೂಟರ್ ಇದೆ. ಇಂಟರ್ನೆಟ್ ಸಂಪರ್ಕ ಇದೆ. ಹಾಗೇ ಪುಟ್ಟ ಲೈಬ್ರರಿ ಕೂಡ ಇದೆ. ಸೋಲಾರ್ ಪ್ಯಾನೆಲ್‌ಗಳಿಂದ ಇಲ್ಲಿಗೆ ಶಕ್ತಿ ಪೂರೈಸಲಾಗುತ್ತದೆ. ಪ್ರವಾಹ ಬಂದರೂ ಈ ಶಾಲೆಗಳು ಬಂದ್ ಆಗುವುದಿಲ್ಲ.  ವಿದ್ಯಾರ್ಥಿಗಳನ್ನು ಹತ್ತಿಸಿಕೊಂಡು ಶಾಲೆ ಮುಗಿದ ನಂತರ ಅವರವರ ಮನೆ ಸಮೀಪ ಬೋಟ್‌ನಲ್ಲೇ ಬಿಡಲಾಗುತ್ತದೆ. ನಂತರ ಇನ್ನೊಂದು ತಂಡದ ಸರದಿ.

*

ADVERTISEMENT


ಮನಬಂದಂತೆ ಇರಲು ಈ ಶಾಲೆ
ಇಲ್ಲಿ ಕಲಿಸಲು ಶಿಕ್ಷಕರೇ ಬೇಕೆಂದೇನಿಲ್ಲ. ವಿದ್ಯಾರ್ಥಿಗಳೇ ಪಾಠ ಮಾಡುತ್ತಾರೆ. ಇಂಥದ್ದೇ ಮಾಡಬೇಕೆಂಬ ನಿರ್ಬಂಧವೂ ಇಲ್ಲ. ವಿದ್ಯಾರ್ಥಿಗಳು ಟಿ.ವಿ ನೋಡಬಹುದು, ಯಾವುದೇ ವಿಷಯದ ಬಗ್ಗೆ ಮಾತನಾಡಬಹುದು, ಬೇಜಾರಾದರೆ ಹೊರಗೆ ಹೋಗಿ ತಿರುಗಾಡಿಯೂ ಬರಬಹುದು. ನಿದ್ದೆಯನ್ನೂ ಮಾಡಬಹುದು. ಇಷ್ಟವಿದ್ದರೆ ಶಾಲೆಗೆ ಬರಬಹುದು, ಇಲ್ಲವೆಂದರೆ ಬರದೆಯೂ ಇರಬಹುದು.

ಇದೆಲ್ಲಾ ಸಾಧ್ಯವಿರುವುದು ಅಮೆರಿಕದಲ್ಲಿನ ಬ್ರೂಕ್ಲಿನ್ ಫ್ರೀ ಸ್ಕೂಲ್‌ನಲ್ಲಿ. ಸ್ವತಂತ್ರವಾಗಿ ಚಿಂತಿಸುವ ರೀತಿಯನ್ನು ಚಿಕ್ಕಂದಿನಲ್ಲೇ ಬೆಳೆಸಬೇಕು ಎಂಬ ಉದ್ದೇಶ ಇಲ್ಲಿಯದು. ಇಲ್ಲಿ ಮಕ್ಕಳನ್ನು ಎರಡು ಭಾಗವಾಗಿ  ವಿಂಗಡಿಸಲಾಗಿದೆ. ಮೇಲಿನ ಅಂತಸ್ತು 11ರಿಂದ 18 ವಯಸ್ಸಿನ ವಿದ್ಯಾರ್ಥಿಗಳಿಗೆ. ಕೆಳಗೆ 4 ರಿಂದ 11 ವಯಸ್ಸಿನವರಿಗೆ. ಇಲ್ಲಿ ಯಾವುದೇ ಗ್ರೇಡ್ ಇಲ್ಲ. ಹೋಮ್‌ವರ್ಕ್ ಕೂಡ ಇಲ್ಲ. ಶಿಕ್ಷಕರ ಕೆಲಸ ಏನಿದ್ದರೂ ವಿದ್ಯಾರ್ಥಿಗಳಿಗೆ ನಿರ್ದೇಶನ ಮಾಡುವುದಷ್ಟೆ.

*


ಓಡಾಡುತ್ತಾ ಕಲಿಕೆ
ಪಾಕಿಸ್ತಾನದ ಕರಾಚಿಯಲ್ಲಿರುವ ಶಾಲೆಯಿದು. 1993ರಲ್ಲಿ ಕೊಳೆಗೇರಿ ಮಕ್ಕಳಿಗೆಂದು ಸರ್ಕಾರೇತರ ಸಂಸ್ಥೆಯೊಂದು ಈ ಶಾಲೆಯನ್ನು ವಿಶೇಷವಾಗಿ ರೂಪಿಸಿದ್ದು. ಕೊಳೆಗೇರಿಗಳಿಗೆ ಹೋಗಿ ಮಕ್ಕಳನ್ನು ಕರೆದುಕೊಂಡು ಈ ವ್ಯಾನ್‌ಗಳಲ್ಲಿ ಪಾಠ ಮಾಡಲಾಗುತ್ತದೆ. 160 ಮಂದಿ ಕೂತು ಈ ಬಸ್ಸಿನಲ್ಲಿ ಕಲಿಯಬಹುದು. ದಿನಕ್ಕೆ ನಾಲ್ಕು ಬ್ಯಾಚ್‌ಗಳಲ್ಲಿ ಪಾಠ ನಡೆಯುತ್ತದೆ.

*


ವಿಶ್ವದ ಹಸಿರು ಶಾಲೆ
ನೈಸರ್ಗಿಕ ವಸ್ತುಗಳನ್ನೇ ಬಳಸಿಕೊಂಡು ರೂಪಿಸಿದ ಪರಿಸರಸ್ನೇಹಿ ಶಾಲೆಯಿದು. ಇಲ್ಲಿ ಪಾಠ ನಡೆಯುವುದು ಬಿದಿರಿನ ಗುಡಿಸಲುಗಳಲ್ಲಿ. ಒಟ್ಟು ನೂರು ಸೋಲಾರ್ ಪ್ಯಾನೆಲ್‌ಗಳನ್ನು ಶಾಲೆ ಹೊಂದಿದೆ. ಪರಿಸರಪಾಠವನ್ನು ಪ್ರಾಯೋಗಿಕವಾಗಿ ಹೇಳುವ ಶಾಲೆ ಇದಂತೆ. ಅಂದ ಹಾಗೆ ಈ ಶಾಲೆ ಇರುವುದು ಇಂಡೋನೇಷ್ಯಾದಲ್ಲಿ. ವಿಶ್ವದ ಹಸಿರು ಶಾಲೆ ಎಂದು ಕರೆಸಿಕೊಂಡಿದೆ.

*


ಈ ಶಾಲೆಯಲ್ಲಿ ಪುಸ್ತಕವಿಲ್ಲ
ಮಣಭಾರದ ಪುಸ್ತಕಗಳನ್ನು ಹೊತ್ತು ಇಲ್ಲಿಗೆ ಬರಬೇಕಿಲ್ಲ. ಪುಸ್ತಕಗಳ ಜಾಗವನ್ನು ಕಂಪ್ಯೂಟರ್‌ಗಳೇ ಪಡೆದುಕೊಂಡಿವೆ. ಪಾಠ ನಡೆಯುವುದು, ನೋಟ್ಸ್ ತೆಗೆದುಕೊಳ್ಳುವುದು, ಎಲ್ಲವೂ ಡಿಜಿಟಲ್. ಆ್ಯಪ್‌ ಮೂಲಕವೇ ಹೋಂ ವರ್ಕ್ ಕೂಡ ನಡೆಯುವುದು. ಪಾಠ ನಡೆಯುವುದು ಸ್ಮಾರ್ಟ್‌ಬೋರ್ಡ್‌ಗಳ ಮೇಲೆ. ಐಡಿ ಕಾರ್ಡ್ ಸಹಾಯದಿಂದ ಡಿಜಿಟಲ್ ಲಾಕರ್‌ಗಳು ತೆರೆದುಕೊಳ್ಳುತ್ತವೆ. ಈ ಶಾಲೆ ಇರುವುದು ವೆಸ್ಟ್ ಫಿಲಡೆಲ್ಫಿಯಾದಲ್ಲಿ.

*


ನೆಲದಡಿ ನಡೆಯುತ್ತದೆ ಪಾಠ
ಈ ಶಾಲೆ ಹೆಸರು ‘ಅಬೊ ಎಲಿಮೆಂಟರಿ ಶಾಲೆ’. ಅಮೆರಿಕದಲ್ಲಿ ಇದು ನೆಲದಡಿಯ ಮೊದಲ ಶಾಲೆ ಎಂದೇ ಪ್ರಸಿದ್ಧಿ. ಈ ಶಾಲೆಯನ್ನು ನ್ಯೂಮೆಕ್ಸಿಕೊದ ಆರ್ಟೆಸಿಯಾದ ಅಧಿಕಾರಿಗಳು  ಸುರಕ್ಷತೆ ದೃಷ್ಟಿಯಿಂದ ನೆಲದಡಿ ಕಟ್ಟಿದ್ದು.  ಈ ಶಾಲೆಗೆ ಮೂರು ಬೃಹತ್ ಸ್ಟೀಲ್ ಬಾಗಿಲುಗಳಿವೆ. ಒಂದೊಂದು ಬಾಗಿಲೂ 800 ಕೆ.ಜಿ ತೂಕ. ರೇಡಿಯೇಷನ್ ಬರದಂತೆ ಹಾಗೂ ಹೊರಗೆ ಬಂಡೆಗಳು ಬ್ಲಾಸ್ಟ್ ಆದರೂ ಪಾಠಕ್ಕೇನೂ ತೊಂದರೆಯಾಗದಂತೆ ರೂಪಿಸಲಾಗಿದೆ. ಬಾವಿ, ಜನರೇಟರ್ ಹಾಗೂ ಹವಾನಿಯಂತ್ರಿತ ವ್ಯವಸ್ಥೆಯೂ ಇದೆ.  ಔಷಧ ಹಾಗೂ ಆಹಾರದ ದಾಸ್ತಾನು ಕೂಡ ಶಾಲೆ ಪಕ್ಕದಲ್ಲೇ ಆಗುವುದು. ಮೈದಾನವನ್ನು ಶಾಲೆ ಮೇಲೆ ಕಟ್ಟಲಾಗಿದೆ.

*


ತರಗತಿಗಳೇ ಇಲ್ಲದ ತಾಣ
‘ಕ್ಯೂಬಿಕಲ್ ಸ್ಕೂಲ್’– ತರಗತಿಗಳೇ ಇಲ್ಲದ ಶಾಲೆಯಿದು. ಇಲ್ಲಿ  ಕ್ಯೂಬಿಕಲ್‌ಗಳಲ್ಲಿ ಪಾಠ ನಡೆಯುವುದು.  ಜಿಮ್ನೇಷಿಯಂ ಎಂಬ ದೊಡ್ಡ ಜಾಗವಿದ್ದು, ಅದನ್ನು ಡ್ರಮ್ ಎಂದು ವಿಭಾಗಿಸಲಾಗಿದೆ. ಅಲ್ಲಿ ವಿದ್ಯಾರ್ಥಿಗಳು ಕುಳಿತು ಯೋಚನೆ ಮಾಡಬಹುದು. ಸದ್ಯಕ್ಕೆ ಡೆನ್ಮಾರ್ಕ್‌ನ ಈ ಶಾಲೆಯಲ್ಲಿ ಸಾವಿರದ ನೂರು ಮಕ್ಕಳಿದ್ದಾರೆ. ಮಕ್ಕಳನ್ನು ಕ್ರಿಯಾಶೀಲವಾಗಿ ಯೋಚಿಸಲು ಸಹಾಯ ಮಾಡುವ ವಿನ್ಯಾಸವೆಂದು ಇದನ್ನು ಅಳವಡಿಸಿ ಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.