ADVERTISEMENT

ಮತ್ತೆ ಬಂತು ಮಿನಿ ಸ್ಕರ್ಟ್‌

​ಪ್ರಜಾವಾಣಿ ವಾರ್ತೆ
Published 1 ಜೂನ್ 2018, 19:30 IST
Last Updated 1 ಜೂನ್ 2018, 19:30 IST
ಮತ್ತೆ ಬಂತು ಮಿನಿ ಸ್ಕರ್ಟ್‌
ಮತ್ತೆ ಬಂತು ಮಿನಿ ಸ್ಕರ್ಟ್‌   

‘ಮಿನಿ ಕೂಪರ್’ ಕಾರು ಪ್ರಿಯೆ, ಲಂಡನ್‌ ಮೂಲದ ವಸ್ತ್ರ ವಿನ್ಯಾಸಕಿ ಮೇರಿ ಕ್ವಾಂಟ್‌ ತಮ್ಮ ನೆಚ್ಚಿನ ಕಾರಿನ ಹೆಸರಿನಲ್ಲೇ ಚಿಕ್ಕ ಚಿಕ್ಕ ಸ್ಕರ್ಟ್‌ಗಳನ್ನು ವಿನ್ಯಾಸ ಮಾಡುತ್ತಿದ್ದರಂತೆ. ಕಾರು ಮತ್ತು ಸ್ಕರ್ಟ್‌ ಅವರ ಪ್ರಕಾರ ಮಹತ್ವಾಕಾಂಕ್ಷೆ, ಸಮೃದ್ಧತೆ ಮತ್ತು ಮೋಜಿನ ಸಂಕೇತ.

ಇದು, 1950ರ ದಶಕದ ಮಾತು. ಲಂಡನ್‌ನ ಕಿಂಗ್ಸ್‌ ರೋಡ್‌ನಲ್ಲಿ ತಮ್ಮ ಬೂಟಿಕ್‌ನಲ್ಲಿ ಮ್ಯಾನಿಕ್ವೀನ್‌ಗಳಿಗೆ ಹಾಕಿದಂತಹುದೇ ಮಿನಿ ಸ್ಕರ್ಟ್‌ಗಳನ್ನು ಕ್ವಾಂಟ್‌ ಧರಿಸುತ್ತಿದ್ದರಂತೆ. ಮ್ಯಾನಿಕ್ವೀನ್‌ನಲ್ಲಿ ನೋಡಿದ ಸ್ಕರ್ಟ್‌ಗಿಂತಲೂ, ಕ್ವಾಂಟ್‌ ಧರಿಸಿದ್ದಕ್ಕಿಂತಲೂ ಗಿಡ್ಡ ಇರುವ ಸ್ಕರ್ಟ್‌ಗಳನ್ನು ತಮಗೆ ವಿನ್ಯಾಸ ಮಾಡಿಕೊಡುವಂತೆ ಗ್ರಾಹಕರು ಕೇಳುತ್ತಿದ್ದರಂತೆ.

ಮಿನಿ ಸ್ಕರ್ಟ್‌ ಅನ್ವೇಷಣೆ ಮಾಡಿದವರು ಕ್ವಾಂಟ್‌ ಅಲ್ಲದೇ ಇರಬಹುದು. ಆದರೆ ಈ ಉಡುಪಿಗೆ ಬಗೆ ಬಗೆಯ ವಿನ್ಯಾಸ, ನೋಟ ನೀಡಿದ ಜಗದ್ವಿಖ್ಯಾತಿ ಮಾತ್ರ ಕ್ವಾಂಟ್‌ ಅವರದು.

ADVERTISEMENT

ಆಗ ಲಂಡನ್‌ನಲ್ಲಿ ಮಕ್ಕಳ ಉಡುಪಿಗೆ ತೆರಿಗೆ ಇರುತ್ತಿರಲಿಲ್ಲವಂತೆ. ಹಾಗಾಗಿ ಮಕ್ಕಳ ಉಡುಪಿನ ಆಕಾರ ಮತ್ತು ಉದ್ದಳತೆಯ ಉಡುಪು ಎಂಬ ಕಾರಣಕ್ಕೂ ಮಿನಿ ಡ್ರೆಸ್‌ ಮತ್ತು ಮಿನಿ ಸ್ಕರ್ಟ್‌ ಎಲ್ಲಾ ವಯೋಮಾನದ ಹೆಣ್ಣು ಮಕ್ಕಳಿಗೆ ಅಚ್ಚುಮೆಚ್ಚಿನದಾಗಿತ್ತಂತೆ. ಅವರ ಪ್ರಯತ್ನಗಳಿಗೆ ಕೊಡುಗೆ ಎಂಬಂತೆ, 2009ರಲ್ಲಿ ‘ಬ್ರಿಟಿಷರ 10 ಅಪೂರ್ವ ಉಡುಗೆಗಳು’ ಎಂಬ ಸರಣಿಯಲ್ಲಿ ಕ್ವಾಂಟ್‌ ವಿನ್ಯಾಸದ ಈ ಮಿನಿ ಉಡುಗೆಗೂ ಮನ್ನಣೆ ಸಿಕ್ಕಿತ್ತು.

ಮಿನಿ ಸ್ಕರ್ಟ್‌ ಈಗ ಮತ್ತೆ ಫ್ಯಾಷನ್‌ ಜಗತ್ತಿನಲ್ಲಿ ಟ್ರೆಂಡ್‌ ಹುಟ್ಟಿಸುತ್ತಿದೆ. ಬಾಲಿವುಡ್‌ ಬೆಡಗಿಯರು ಮಿನಿ ಡ್ರೆಸ್‌ಗಳನ್ನು ಎಲ್ಲಾ ಕಾಲಮಾನದಲ್ಲಿ ಮೆಚ್ಚಿನ ಉಡುಗೆಯಾಗಿಸಿಕೊಂಡದ್ದಿದೆ. ಆದರೆ ಮಿನಿ ಸ್ಕರ್ಟ್‌ ಹೊಸ ಟ್ರೆಂಡ್‌ಗಳ ಅಲೆಯಲ್ಲಿ ಹಿಂದಕ್ಕೆ ಕೊಚ್ಚಿಹೋಗಿತ್ತು. ತಮ್ಮ ‘ವೀರೆ ದಿ ವೆಡ್ಡಿಂಗ್‌’ ಸಿನಿಮಾದ ಪ್ರಚಾರಕ್ಕಾಗಿ ಮೆಟ್ರೊ ನಗರಗಳಲ್ಲಿ ಸುತ್ತಾಡುತ್ತಿರುವ ನಟಿಯರಾದ ಕರೀನಾ ಕಪೂರ್‌, ಸೋನಂ ಕಪೂರ್‌, ಸ್ವರಭಾಸ್ಕರ್‌ ಮತ್ತು ಸಾಕ್ಷಿ ಮಿನಿ ಸ್ಕರ್ಟ್‌ ಧರಿಸಿ ತಮ್ಮ ಅಭಿಮಾನಿಗಳ ಎದೆಗೆ ಕಿಚ್ಚು ಹಚ್ಚುತ್ತಿದ್ದಾರೆ. ಸ್ವರ ಭಾಸ್ಕರ್‌ ಮಿನಿ ಡ್ರೆಸ್‌ಗಿಂತ ಮಿನಿ ಸ್ಕರ್ಟ್‌ ಹೆಚ್ಚು ಇಷ್ಟ ಎಂದು ಹೇಳಿದ್ದರೆ, ಅನೇಕ ಬಾರಿ ಧರಿಸಿದ ಕರೀನಾ ಕಪೂರ್‌ ‘ಹಾಟ್‌ ಬೆಡಗಿ’ ಎಂದು ಕರೆಸಿಕೊಂಡಿದ್ದಾರೆ. ಸದಾ ಹೊಸ ಟ್ರೆಂಡ್‌ಗಳಿಗೆ ತೆರೆದುಕೊಳ್ಳುವ ಸೋನಂ ಕಪೂರ್‌ ಅಹುಜಾ ಈ ಉಡುಪು ಧರಿಸುವ ಅವಕಾಶವನ್ನು ಮಿಸ್‌ ಮಾಡಿಕೊಳ್ಳುವುದುಂಟೇ?

ಐಪಿಎಲ್‌ ಕ್ರಿಕೆಟ್‌ನ ಆರಂಭದಲ್ಲಿ ಆಟಗಾರರು ಮತ್ತು ಆಟಕ್ಕಿಂತಲೂ ಹೆಚ್ಚು ಜನಾಕರ್ಷಣೆ ಪಡೆದವರು ಚೀರ್‌ ಗರ್ಲ್ಸ್‌. ಅವರು ಧರಿಸುತ್ತಿದ್ದ ಮಿನಿ ಸ್ಕರ್ಟ್‌ ಮತ್ತು ಹೆಮ್‌ ಲೈನ್‌ಗಳು ಅವರ ನೃತ್ಯಕ್ಕೆ ಅನುಗುಣವಾಗಿ ಸೊಂಟದ ಬಳುಕು, ಕುಲುಕು ಕ್ರಿಕೆಟ್‌ ಅಭಿಮಾನಿಗಳನ್ನು ರಂಜಿಸುತ್ತಿತ್ತು. ಟೆನಿಸ್‌ ಆಟಗಾರ್ತಿಯರ ನೆಚ್ಚಿನ ಉಡುಗೆಯಿದು. ವಿಲಿಯಮ್ಸ್‌ ಸಹೋದರಿಯರು ಧರಿಸುವುದನ್ನು ಮಿನಿ ಸ್ಕರ್ಟ್‌ ಅನ್ನುವುದಕ್ಕಿಂತಲೂ ಹೆಮ್‌ಲೈನ್‌ ಎನ್ನುವುದೇ ಸೂಕ್ತ.

ಮಕ್ಕಳ ಉಡುಗೆಯಾಗಿ ಮಿನಿ ಸ್ಕರ್ಟ್‌ ಬೇಡಿಕೆ ಕಳೆದುಕೊಂಡಿದ್ದೇ ಇಲ್ಲ. ಆದರೆ ಹೆಣ್ಣು ಮಕ್ಕಳ ಆಧುನಿಕ ಉಡುಪುಗಳ ವಿಭಾಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಇದು ಕಾಣಿಸಿಕೊಂಡಿರಲಿಲ್ಲ. ಇತ್ತೀಚಿನ ಟ್ರೆಂಡ್‌ ಗಮನಿಸಿದರೆ, ಇದು 2018ರ ಬಹುಬೇಡಿಕೆಯ ಉಡುಗೆ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಲಕ್ಷಣ ಕಾಣುತ್ತಿದೆ.

ನೀವೂ ಫ್ಯಾಷನ್‌ ಜಗತ್ತಿನ ಟ್ರೆಂಡ್‌ಗಳಿಗೆ ತಕ್ಷಣ ಅಪ್‌ಡೇಟ್‌ ಆಗುವವರಾದರೆ ಮಿನಿ ಸ್ಕರ್ಟ್‌ ಧರಿಸಿ ಖುಷಿಪಡಬಹುದು.
**
ಹೆಮ್‌ಲೈನ್‌, ಮಿನಿ, ಮೈಕ್ರೊ ಸ್ಕರ್ಟ್‌ಗಳು
ಮಿನಿ ಸ್ಕರ್ಟ್‌, ಪೆನ್ಸಿಲ್‌ ಸ್ಕರ್ಟ್‌ನ ಸಹಸ್ಪರ್ಧಿಯಂತೆ ಕಾಣುತ್ತದೆ. ಸ್ವಲ್ಪ ಬಿಗಿಯಾದ, ಮಂಡಿಯಿಂದ ಆರೇಳು ಇಂಚಿನಷ್ಟಾದರೂ ಮೇಲಕ್ಕಿರುವ ಸ್ಕರ್ಟ್‌ ಇದು. ವಿದೇಶಗಳಲ್ಲಿ ಮಿನಿ ಸ್ಕರ್ಟ್‌ಗಳು ತೊಡೆಯಿಂದ ಮಂಡಿಯ ಮಧ್ಯದವರೆಗಷ್ಟೇ ಇರುತ್ತವೆ. ಅಂದರೆ ಸೊಂಟದಿಂದ 10 ಸೆಂ.ಮೀ ಕೆಳಗೆ. ಸೊಂಟದಿಂದ ನಿತಂಬದವರೆಗೆ ಇರುವ ‘ಹೆಮ್‌ಲೈನ್‌’ ಎಂಬ ಸ್ಕರ್ಟ್‌ನ ಮುಂದುವರಿದ ಭಾಗ ಈ ಮಿನಿಸ್ಕರ್ಟ್‌. ಈಗ ಈ ವಿನ್ಯಾಸವನ್ನು ‘ಮೈಕ್ರೊ ಮಿನಿಸ್ಕರ್ಟ್‌’ ಎಂದು ಕರೆಯುತ್ತಾರೆ.
**
ಬಣ್ಣ, ಬಟನ್‌ಗಳೂ ಮುಖ್ಯ
ಮಿನಿ ಸ್ಕರ್ಟ್‌ನಲ್ಲಿ ಬಿಳಿ, ಕೆನೆ ಬಿಳಿ, ಕಪ್ಪು, ಕೆಂಪು, ಮರೂನ್‌ ಮತ್ತು ಚರ್ಮದ ಬಣ್ಣಕ್ಕೆ ಯಾವತ್ತೂ ಹೆಚ್ಚು ಬೇಡಿಕೆ.

ಈ ಉಡುಪುಗಳು ಹೆಚ್ಚು ಆಕರ್ಷಕವಾಗಬೇಕಾದರೆ ಬಟನ್‌ಗಳಿರಬೇಕು. ಒಂದೇ ಕಾಲಿಗೆ, ಎರಡೂ ಕಾಲುಗಳಿಗೆ ಬಟನ್‌ಗಳಿರುವ ವಿನ್ಯಾಸಗಳ ನೋಟವೂ ಚೆನ್ನಾಗಿರುತ್ತದೆ. ಬಲಗಡೆ ಒಂದು ಜೇಬು ಇದ್ದರೂ ಇನ್ನಷ್ಟು ಸಮೃದ್ಧ ನೋಟ ಸಿಗುತ್ತದೆ. ಈಗಿನ ಮಿನಿ ಸ್ಕರ್ಟ್‌ಗಳಲ್ಲಿ ಫ್ಲೇರ್ಸ್‌, ಅಂಬ್ರೆಲಾ, ಅಸಿಮೆಟ್ರಿಕ್‌ ವಿನ್ಯಾಸಗಳಿಗೆ ಬೇಡಿಕೆ ಹೆಚ್ಚು ಇದೆ.

ಜೀನ್ಸ್‌, ಲೆದರ್‌, ಲಿನನ್‌ ಮತ್ತು ಯಾವುದೇ ದಪ್ಪಗಿನ ಬಟ್ಟೆಯಲ್ಲಿ ಮಿನಿ ಸ್ಕರ್ಟ್‌ ವಿನ್ಯಾಸ ಒಪ್ಪ–ಓರಣವಾಗಿರುತ್ತದೆ. ಬ್ರ್ಯಾಂಡೆಡ್‌ ಮಳಿಗೆಗಳು ಮತ್ತು ಆನ್‌ಲೈನ್‌ನಲ್ಲಿ ಮಿನಿ ಸ್ಕರ್ಟ್‌ಗಳೂ ಯಥೇಚ್ಛವಾಗಿ ಲಭ್ಯವಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.