ADVERTISEMENT

ಮುಖದ ಮೇಲೆ 3ಡಿ ವಿನ್ಯಾಸ

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 19:30 IST
Last Updated 21 ಜುಲೈ 2017, 19:30 IST
ಮುಖದ ಮೇಲೆ 3ಡಿ ವಿನ್ಯಾಸ
ಮುಖದ ಮೇಲೆ 3ಡಿ ವಿನ್ಯಾಸ   

ಗಾಢವಾದ ಲಿಪ್‌ಸ್ಟಿಕ್‌, ಬಣ್ಣದ ಸಂಯೋಜನೆಯಲ್ಲಿಯೂ ಒಂದಕ್ಕೊಂದು ಭಿನ್ನ. ಇದು ಮುಖದ ಮೇಲೆ ಗಾಫ್ರಿಕ್‌ ಡಿಸೈನ್‌ ಮಾಡಿದಂತೆ ಕಾಣುವ ನಿಯಾನ್‌ ಮೇಕಪ್‌ ಶೈಲಿ. ಇತ್ತೀಚೆಗೆ ಗಾಢ ಬಣ್ಣದ ಲಿಪ್‌ಸ್ಟಿಕ್‌, ಕಣ್ರೆಪ್ಪೆ ಕೂದಲಿನ ಶೇಡ್‌ಗಳು ಫ್ಯಾಷನ್‌ ಜಗತ್ತಿನಲ್ಲಿ ಸ್ಥಾನ ಪಡೆದಿರುವಂತೆ, ನಿಯಾನ್‌ ಮೇಕಪ್‌ ಕೂಡಾ ಟ್ರೆಂಡಿ ಎನ್ನಿಸಿಕೊಂಡಿದೆ.

ಇನ್‌ಸ್ಟಾಗ್ರಾಂನಲ್ಲಿ ಸಾಕಷ್ಟು ನಿಯಾನ್‌ ಮೇಕಪ್‌ ಬಗ್ಗೆ ಸಾಕಷ್ಟು ಮಾಹಿತಿ, ಫೋಟೊಗಳು ಅಪ್‌ಲೋಡ್‌ ಆಗುತ್ತಿವೆ. ಇದು ಜನಸಾಮಾನ್ಯರು ಬಳಸುವ ಮೇಕಪ್‌ ಅಲ್. ವೇದಿಕೆ, ರ‍್ಯಾಂಪ್‌ ಮೇಲೆ ಮಿಂಚು ಹರಿಸುವ ರೂಪದರ್ಶಿಗಳಿಗೆ ಮೀಸಲು ಈ ಮೇಕಪ್‌.

ತಿದ್ದಿತೀಡಿದ ಹುಬ್ಬು, ಮುಖ, ಕಣ್ಣಿಗೆ ಅಲಂಕಾರ ಮಾಡಿದ್ದರೂ ಸಹಜವಾಗಿಯೇ ಇರುತ್ತದೆ ಚಹರೆ. ಈ ಮೇಕಪ್‌ನಲ್ಲೂ ಹಲವು ಬಗೆಗಳಿವೆ. ತುಟಿ, ಕಣ್ಣಿನ ರೆಪ್ಪೆ, ಕೆನ್ನೆಯ ಮೇಲೆ ಒಂದೇ ಬಣ್ಣದಿಂದ ಅಲಂಕಾರ ಮಾಡುವುದಿಲ್ಲ. ಬದಲಾಗಿ ಹಲವು ಬಣ್ಣಗಳನ್ನು ಬಳಸಲಾಗುತ್ತದೆ. ತುಟಿಯ ಮೇಲೆಯೇ ಮೂರು, ನಾಲ್ಕು ಬಣ್ಣದ ಮೂಲಕ ಚಿತ್ತಾರ ಬಳಿಯಲಾಗುತ್ತದೆ.

ADVERTISEMENT

ಸರಳವಾಗಿ ಕಾಣುವಂತೆಯೂ ಇದನ್ನು ಹಚ್ಚಲಾಗುತ್ತದೆ. ತುಂಬಾ ಬೋಲ್ಡ್‌ ಆಗಿ ಕಾಣಿಸಿಕೊಳ್ಳುವ ಹೆಣ್ಣುಮಕ್ಕಳು ಇತ್ತೀಚೆಗೆ ಹೆಚ್ಚಾಗಿ ಪಾರ್ಟಿಗಳಲ್ಲಿ ಈ ರೀತಿಯ ಮೇಕಪ್‌ ಮಾಡಿಕೊಳ್ಳುತ್ತಾರೆ. 3ಡಿ ವಿನ್ಯಾಸದಂತೆ ಕಾಣುವ ಮೇಕಪ್‌ ಮುಖವನ್ನು ವಿಭಿನ್ನವಾಗಿ ತೋರಿಸುವುದು ಸುಲಭವಲ್ಲ. ನುರಿತ ಮೇಕಪ್‌ ಕಲಾವಿದರು ಮಾತ್ರವೇ ಇದರಲ್ಲಿ ಯಶಸ್ವಿಯಾಗುತ್ತಿದ್ದಾರೆ. ಇಲ್ಲದಿದ್ದರೆ ಅಪಹಾಸ್ಯಕ್ಕೆ ಈಡಾಗುವುದು ಖಚಿತ.

ಸಾಮಾನ್ಯವಾಗಿ ಬಿಳಿ ಮತ್ತು ಬೆಳ್ಳಿ ಬಣ್ಣದ ಲೈನರ್‌ ಬಳಸಿ ಮುಖದ ಹೊಳಪು ಇನ್ನಷ್ಟು ಹೊಳೆಯುವಂತೆ ಮಾಡಲಾಗುತ್ತದೆ. ರೂಪದರ್ಶಿಗಳು ವೇದಿಕೆಯಲ್ಲಿ ಎದ್ದು ಕಾಣುವಂತೆ ಮಾಡುವ ಉದ್ದೇಶದಿಂದ ಈ ಮೇಕಪ್‌ಅನ್ನು ಪ್ರಚುರಪಡಿಸಲಾಯಿತು. ದಿನೇದಿನೇ ಬದಲಾಗುತ್ತಿರುವ ಫ್ಯಾಷನ್‌ ಟ್ರೆಂಡ್‌ಗೆ ಹೊಂದಿಕೊಳ್ಳುತ್ತಾ, ಇನ್ನಷ್ಟು ಬೇಡಿಕೆ ಪಡೆಯುತ್ತಿದೆ. ದಿರಿಸಿಗೆ ಹೊಂದುವ ವಿವಿಧ ಬಣ್ಣಗಳಲ್ಲಿಯೂ ವಿಭಿನ್ನ ಪ್ರಯೋಗ ಮಾಡಲಾಗುತ್ತದೆ. ಗಾಢವಾದ ಈ ಮೇಕಪ್‌ ಬೇಸಿಗೆಯ ಫ್ಯಾಷನ್‌ ಶೋಗಳಲ್ಲಿ ಹೆಚ್ಚಾಗಿ ಕಾಣಬಹುದು.

ನಿಯಾನ್‌ ಮೇಕಪ್‌ನ ಪ್ರಯೋಗ ನಡೆದಿರುವುದು ಆಸ್ಟ್ರೇಲಿಯಾದ ಪ್ರಸಾಧನ ಕಲಾವಿದರಿಂದ. ತುಟಿಗಳ ಮೇಲೆ ಕಪ್ಪು ಲಿಪ್‌ಸ್ಟಿಕ್‌ ಅದರ ಮೇಲೆ ಬಿಳಿ ಮತ್ತು ಗುಲಾಬಿ ಬಣ್ಣದ ಶೇಡ್‌ ಬಳಿದು, ಹೊಳೆಯುವಂತೆ ಮಾಡಿದ ಮೇಕಪ್‌ನಿಂದಾಗಿ ಇದೇ ಬಗೆಯ ಹಲವು ಪ್ರಯೋಗಕ್ಕೆ ಸ್ಫೂರ್ತಿಯಾಯಿತು. ಕಣ್ಣಿನ ರೆಪ್ಪೆಗಳಿಗೆ ಸಾಮಾನ್ಯವಾಗಿ ಕಪ್ಪು ಬಣ್ಣದ ಮಸ್ಕರಾ ಹಚ್ಚಲಾಗುತ್ತದೆ. ಆದರೆ ನಿಯಾನ್‌ ಮೇಕಪ್‌ನಲ್ಲಿ ಕೆಂಪು, ನೀಲಿ ಬಣ್ಣವನ್ನು ಬಳಸುತ್ತಾರೆ. ಸಹಜ ಮೇಕಪ್‌ ಸಿದ್ಧಾಂತಕ್ಕೆ ವಿರುದ್ಧವಾದ ಪ್ರಯೋಗವೇ ಇದರ ಶೈಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.