ADVERTISEMENT

ಯಶಸ್ಸು ಗಳಿಸಿದವರ ನೆಚ್ಚಿನ 7 ಹವ್ಯಾಸ

ವ್ಯಕ್ತಿತ್ವ ವಿಕಸನ

ಅಮಿತ್ ಎಂ.ಎಸ್.
Published 6 ಫೆಬ್ರುವರಿ 2017, 19:30 IST
Last Updated 6 ಫೆಬ್ರುವರಿ 2017, 19:30 IST
ಯಶಸ್ಸು ಗಳಿಸಿದವರ ನೆಚ್ಚಿನ 7 ಹವ್ಯಾಸ
ಯಶಸ್ಸು ಗಳಿಸಿದವರ ನೆಚ್ಚಿನ 7 ಹವ್ಯಾಸ   
ಯಶಸ್ಸಿನ ನೈಜ ಮೂಲ ಯಾವುದು? ಇದು ಉತ್ತರ ಕಂಡುಕೊಳ್ಳಲು ಸಾಧ್ಯವಿಲ್ಲದ ಪ್ರಶ್ನೆ. ಹೆಚ್ಚಿನವರು ತಮ್ಮ ಯಶಸ್ಸಿನ ಶ್ರೇಯಸ್ಸನ್ನು ‘ಅದೃಷ್ಟ’ಕ್ಕೆ ಬಿಟ್ಟುಕೊಡುತ್ತಾರೆ. ವಾಸ್ತವವಾಗಿ ಗೆಲುವಿನ ಬೇರು ನಮ್ಮಲ್ಲಿಯೇ ಹುದುಗಿರುತ್ತದೆ. ಕೆಲವರಿಗೆ ಕೌಟುಂಬಿಕ ಹಿನ್ನೆಲೆಯೇ ಆಧಾರ. ಕೆಲವರಿಗೆ ಬುದ್ಧಿವಂತಿಕೆ, ಕೌಶಲ, ಶ್ರಮ, ವ್ಯವಹಾರ ಸಾಮರ್ಥ್ಯಗಳೇ ಗೆಲುವಿನ ದಾರಿ ತೋರುತ್ತವೆ.
 
ಯಶಸ್ಸು ಗಳಿಸಿದ ಪ್ರತಿ ವ್ಯಕ್ತಿಯದ್ದೂ ಒಂದೊಂದು ಅನುಭವ, ಒಂದೊಂದು ಕಥೆ. ಆದರೆ ಬಹುತೇಕರಲ್ಲಿ 7 ಅಂಶಗಳು ಸಾಮಾನ್ಯವಾಗಿರುತ್ತವೆ ಎಂಬುದನ್ನು ಲೇಖಕ ಮೈಕೆಲ್‌ ಸ್ಟಾವಿಕ್ಕಿ ಕಂಡುಕೊಂಡ. ನಾವೂ ಅಳವಡಿಸಿಕೊಳ್ಳಬಹುದಾದ ಅಂತಹ ವರ್ತನೆಯ ಏಳು ಆಸಕ್ತಿಕರ ಸಂಗತಿಗಳು ಇಲ್ಲಿವೆ.
 
ತಮ್ಮ ಮಾತಿಗೆ ತಾವೇ ಕೇಳುಗರು
ಜೀವನದಲ್ಲಿ ಯಶಸ್ಸು ಗಳಿಸಿದ ಬಹುತೇಕ ಜನರು ತಮ್ಮೊಂದಿಗೆ ತಾವು ಮಾತನಾಡಿಕೊಳ್ಳಲು ಕೆಲ ಸಮಯ ಮೀಸಲಿಟ್ಟಿರುತ್ತಾರೆ. ತಮಗೆ ತಾವೇ ಬೆಸ್ಟ್‌ ಫ್ರೆಂಡ್‌ ಸಹ ಆಗಿರುತ್ತಾರೆ. ಕನ್ನಡಿ ಎದುರು ನಿಂತು ನಮ್ಮೊಂದಿಗೆ ನಾವು ಮಾತನಾಡುವುದು ಎಷ್ಟೋ ಬಾರಿ ಮತ್ತೊಬ್ಬರೊಂದಿಗೆ ಮಾತನಾಡಿದ ಅನುಭವವನ್ನೇ ನೀಡುತ್ತದೆ. ನಮ್ಮ ಸಂವಹನ ಸುಧಾರಣೆಗೆ ಇದು ಸಹಕಾರಿ.
 
ದಿನಚರಿ ಎಂಬ ಸಂಗಾತಿ
ರೋಮ್‌ ಚಕ್ರವರ್ತಿ ಮಾರ್ಕಸ್‌ ಆರೆಲಿಯಸ್‌, ಫ್ರಾನ್ಸ್‌ ಚಕ್ರವರ್ತಿ ನೆಪೊಲಿಯನ್‌ ಬೊನಪಾರ್ಟೆ ಮುಂತಾದವರು ತಮ್ಮೊಂದಿಗೆ ಸದಾ ಡೈರಿ ಇಟ್ಟುಕೊಂಡಿರುತ್ತಿದ್ದರಂತೆ. ನಿಮಗೂ ಯಶಸ್ಸು ಗಳಿಸಬೇಕು ಎಂಬ ಆಸೆ ಇದ್ದರೆ ಮೊದಲು ದಿನಚರಿ ಇರಿಸಿಕೊಳ್ಳಿ. ನಿಮ್ಮೊಳಗಿನ ಚಿಂತನೆಗಳು, ಅನುಭವ, ಭಾವನೆಗಳನ್ನು ದಾಖಲಿಸಿ. ವಿದ್ಯಾರ್ಥಿ ದೆಸೆಯಿಂದಲೇ ಈ ಹವ್ಯಾಸ ಆರಂಭವಾದರೆ ಒಳಿತು.
 
ಏಕಾಂತದ ಒಲವು
‘ಏಕಾಂತ ಕಲ್ಲನ್ನು ಮಾಡುವುದು ಕವಿಯ...’ ಎನ್ನುವುದು ಸಿನಿಮಾ ಗೀತೆಯ ಸಾಲಷ್ಟೇ ಅಲ್ಲ, ವಾಸ್ತವವೂ ಹೌದು. ಯಶಸ್ವಿ ವ್ಯಕ್ತಿಗಳು ದಿನವೂ ‘ತಮಗಾಗಿ’ ಒಂದಷ್ಟು ಸಮಯ ಮೀಸಲಿಡುತ್ತಾರಂತೆ. ಮನಃಶಾಸ್ತ್ರಜ್ಞರ ಪ್ರಕಾರ, ಮಾನಸಿಕವಾಗಿ ಸದೃಢರಾದ ಜನರು ಏಕಾಂತಕ್ಕೆ ಭಯಪಟ್ಟುಕೊಳ್ಳುವುದಿಲ್ಲ. ಬದಲಾಗಿ, ಅದನ್ನು ತಮ್ಮ ಚೈತನ್ಯ ಹಾಗೂ ಶಕ್ತಿಯನ್ನು ಪ್ರತಿಫಲಿಸುವ ಹಾಗೂ ತುಂಬಿಕೊಳ್ಳುವ ಸದವಕಾಶವೆಂದು ಪರಿಗಣಿಸುತ್ತಾರೆ.
 
ಸ್ವಯಂ ಅರಿವು
ಸಾಹಸೋದ್ಯಮಿ ಡೀನ್‌ ಯಿಯಾಂಗ್‌ ಪ್ರಕಾರ, ಯಶಸ್ವಿ ವ್ಯಕ್ತಿಗಳು ತಮ್ಮ ಸಾಮರ್ಥ್ಯದ ಕುರಿತು ಅರಿವು ಹೊಂದಿರುತ್ತಾರೆ. ‘ನಾನು ಯಾರು? ನನ್ನ ಸಾಮರ್ಥ್ಯ ಏನು?’ ಎಂಬುದರ ಅರಿವು ಅವರಲ್ಲಿ ಇರುತ್ತದೆ. ತಮ್ಮ ಬಲ ಮತ್ತು ದೌರ್ಬಲ್ಯ ಎರಡೂ ಗೊತ್ತಿರುತ್ತದೆ.
 
ಏಕಾಗ್ರತೆ
ಗೆಲುವೆನ್ನುವುದು ಸುಮ್ಮನೆ ಅದೃಷ್ಟಕ್ಕೆ ದಕ್ಕಲಾರದು. ಅದಕ್ಕೆ ತಕ್ಕ ಶ್ರಮ ಹಾಗೂ ಏಕಾಗ್ರತೆ ಬೇಕು. ಏಕಾಗ್ರತೆಯನ್ನು ವೃದ್ಧಿಸಲು ನೆರವಾಗುವ ಕೆಲವು ಅಂಶಗಳನ್ನು ಅವರು ನಿರಂತರವಾಗಿ ಪಾಲಿಸುತ್ತಾರೆ. ಪ್ರಕೃತಿಯ ಮಡಿಲಲ್ಲಿ ವಿಹರಿಸಲು ಸಮಯ ಮೀಸಲಿಡುತ್ತಾರೆ. ಮನಸಿಗೆ ಕಿರಿಕಿರಿ ಉಂಟುಮಾಡದ ವಾತಾವರಣದಲ್ಲಿ ಕೆಲಸ ಮಾಡುವುದು ಇಂಥವರಿಗೆ ಇಷ್ಟವಾಗುತ್ತದೆ. 
 
‘ಇಲ್ಲ’ ಎನ್ನುವರು
‘ಇಲ್ಲ’ ಎನ್ನುವುದು ಒಂದು ಕಲೆ. ಅನೇಕರಿಗೆ ಇದರ ಮಹತ್ವ ಗೊತ್ತಿಲ್ಲ. ಆದರೆ ಯಶಸ್ಸು ಗಳಿಸಿದವರು ‘ಇಲ್ಲ’ವನ್ನು ನಾಜೂಕಿನಿಂದ ನಿಭಾಯಿಸುತ್ತಾರೆ. ‘ನೀವು ಯಾವುದಕ್ಕಾದರೂ ‘ಹೌದು’ ಎನ್ನುವಾಗಲೆಲ್ಲಾ, ಇನ್ನೊಂದು ಯಾವುದೋ ವಿಷಯಕ್ಕೆ ‘ಇಲ್ಲ’ ಎಂದಿರುತ್ತೀರಿ. ಈ ಎರಡೂ ನಿರ್ಧಾರಗಳು ನಮ್ಮ ಭವಿಷ್ಯವನ್ನು ಪ್ರಭಾವಿಸತ್ತವೆ.
 
ಕಚೇರಿಯೇ ಮನೆಯಲ್ಲ
ಯಶಸ್ಸು ಎನ್ನುವುದು ಕಚೇರಿಯಲ್ಲಿ ಹೆಚ್ಚು ಅವಧಿ ಇರುವುದರಿಂದ ಮಾತ್ರವೇ ದೊರಕುವುದಿಲ್ಲ. ಜೀವನದಲ್ಲಿ ಮಹತ್ತರ ಸಾಧನೆ ಮಾಡಿದ ವ್ಯಕ್ತಿಗಳು ಇಡೀ ದಿನವನ್ನು ಕಚೇರಿಯಲ್ಲಿ ಕಳೆಯುವುದಿಲ್ಲ. ಸದಾ ಕ್ರಿಯಾಶೀಲರಾಗಿರುತ್ತಾರೆ. ಕೆಲಸದ ಅವಧಿಯ ಶೇ 80ರಷ್ಟು ಅವಧಿಯನ್ನು ಕಚೇರಿಯಲ್ಲಿ ಕಳೆದರೆ, ಶೇ 20ರಷ್ಟು ಅವಧಿಯನ್ನು ಕಚೇರಿಯಿಂದ ಹೊರಗೆ, ವಿಭಿನ್ನ ಪರಿಸರದಲ್ಲಿ ಕಳೆಯುತ್ತಾರೆ. ಇದು ಕ್ರಿಯಾಶೀಲತೆ ಹೆಚ್ಚಲು ಸಹಕಾರಿ ಎಂಬುದು ಇಂಥವರ ಅನುಭವದ ಮಾತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.