ADVERTISEMENT

ರಿಯಾಲಿಟಿ ಷೋದಿಂದ ಸಿನಿಮಾವರೆಗೆ

ಪ್ರಜಾವಾಣಿ ವಿಶೇಷ
Published 24 ನವೆಂಬರ್ 2015, 19:34 IST
Last Updated 24 ನವೆಂಬರ್ 2015, 19:34 IST

ರಿಯಾಲಿಟಿ ಷೋದಿಂದ ಕಿರುತೆರೆಗೆ ಪದಾರ್ಪಣೆ ಮಾಡಿದ ಈ ನಟಿ ಓದಿದ್ದು ಡಿಪ್ಲೊಮಾ ಇನ್‌ ಕಂಪ್ಯೂಟರ್‌ ಸೈನ್ಸ್‌. ‘ಆಪ್ತಮಿತ್ರ’ ಚಿತ್ರದ ಮೂಲಕ ಸಿನಿಮಾ ರಂಗಪ್ರವೇಶ ಮಾಡಿದ ನಟಿ ಭೂಮಿಕಾ ಸದ್ಯ ‘ಅಹಂ’ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ಭೂಮಿಕಾ ತಮ್ಮ ಸಿನಿಮಾ ಪ್ರೀತಿಯನ್ನು ಇಲ್ಲಿ ಹಂಚಿಕೊಂಡಿದ್ದಾರೆ.

* ನಿಮ್ಮ ಸಿನಿಮಾಗಳ ಬಗ್ಗೆ ಹೇಳಿ?
‘ಮಳೆ ನಿಲ್ಲುವವರೆಗೆ’, ‘ಬಿಡಲಾರೆ ಎಂದೂ ನಿನ್ನ’ ಈಗಾಗಲೇ ಬಿಡುಗಡೆಯಾದ ಸಿನಿಮಾಗಳು. ‘ಅಹಂ’ ಚಿತ್ರೀಕರಣ ಮುಗಿದಿದೆ. ‘ಅಹಂ’ನಲ್ಲಿ ನವೀನ್‌ ಕೃಷ್ಣ ಅವರೊಂದಿಗೆ ನಟಿಸುತ್ತಿದ್ದೇನೆ. ನವೀನ್‌ ಅವರೊಂದಿಗೆ ನಟಿಸುತ್ತಿರುವ ಎರಡನೇ ಚಿತ್ರವಿದು. ‘ಅಹಂ’ನಲ್ಲಿ ನವೀನ್‌ ಅವರ ಹೆಂಡತಿ, ಒಂದು ಮಗುವಿನ ತಾಯಿ ಪಾತ್ರ ಮಾಡಿದ್ದೇನೆ. ಗಂಡನ ಅನೈತಿಕ ಸಂಬಂಧವನ್ನು ಬಯಲಿಗೆಳೆಯುವ ಕೆಲಸ. ಸಮಾಜಕ್ಕೆ ಸಂದೇಶ ನೀಡುವಂಥ ಸಿನಿಮಾ ಇದಾಗಿದ್ದು, ಇದುವರೆಗೆ ಬಂದ ಇಂಥ ಕಥಾ ವಸ್ತುವುಳ್ಳ ಸಿನಿಮಾಗಳಿಗಿಂತ ಭಿನ್ನವಾದ, ಸಂಭಾಷಣೆಯೂ ವಿಭಿನ್ನವಾಗಿರುವ ಚಿತ್ರ. ಜಯಗಜ ವೆಂಕಟೇಶ್‌ ನಿರ್ದೇಶನ ಮಾಡಿದ್ದಾರೆ.

* ಸಿನಿಮಾಗೆ ಬಂದಿದ್ದು ಅನಿರೀಕ್ಷಿತವಾ?
ಸಿನಿಮಾ ಪ್ರವೇಶ ಅನಿರೀಕ್ಷಿತವೇ. ನಾನು ಡಿಪ್ಲೊಮಾ ಇನ್‌ ಕಂಪ್ಯೂಟರ್‌ ಸೈನ್ಸ್ ಮಾಡಿದ್ದು, ಕಾಲೇಜು ದಿನಗಳಲ್ಲಿ ಡಾನ್ಸಿಂಗ್‌ ಸ್ಟಾರ್‌ ರಿಯಾಲಿಟಿ ಷೋದಲ್ಲಿ ಪಾಲ್ಗೊಂಡಿದ್ದೆ, ಕಲ್ಯಾಣಿ ಧಾರಾವಾಹಿಯಲ್ಲೂ ನಟಿಸಿದ್ದೆ. ‘ಆಪ್ತಮಿತ್ರ’ದಲ್ಲಿ ಒಂದು ಸಣ್ಣ ಪಾತ್ರಕ್ಕೆ ಬಣ್ಣ ಹಚ್ಚಬೇಕಾಯಿತು. ಅಲ್ಲಿಂದ ಅವಕಾಶಗಳು ಒದಗಿಬಂದವು. ವಿಶಾಲ್‌ ಹೆಗಡೆ ಜೊತೆ ತಮಿಳಿನ ‘ಕರಗಟ್ಟಕಾರಿ’ ಚಿತ್ರ ಹಾಗೂ ವಿಜಯ್‌ ರಾಘವೇಂದ್ರ ಅವರೊಂದಿಗೆ ‘ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ’ ತುಳು ಸಿನಿಮಾದಲ್ಲಿ ಅಭಿನಯಿಸಿದ್ದೇನೆ. ‘ಹೊಸಪೇಟೆಯಲ್ಲಿ’ ಚಿತ್ರಕ್ಕೆ ಸಹಿ ಮಾಡಿದ್ದೇನೆ.

* ನಿಮ್ಮನ್ನು ಬಹಳ ಕಾಡುವ ಹಾಡು ಯಾವುದು?
ನನಗೆ ಡಾ. ರಾಜ್‌ ಕುಮಾರ್ ಚಿತ್ರಗಳ ಬಹುತೇಕ ಹಾಡುಗಳು ಇಷ್ಟವಾಗುತ್ತವೆ. ಅದರಲ್ಲಿ ‘ಬಾಡಿ ಹೋದ ಬಳ್ಳಿಯಿಂದ’ ಗೀತೆ ಮಾತ್ರ ಬಹಳ ಕಾಡುತ್ತದೆ.

* ನಿಮ್ಮ ಜೀವನದಲ್ಲಿ ಬಹಳ ಸಂತೋಷವಾದ ಗಳಿಗೆ?
ಕುಟುಂಬದವರೊಂದಿಗೆ ಕಾಲ ಕಳೆಯುವುದೇ ನನಗೆ ಸಂತೋಷದ ಗಳಿಗೆ. ಆದರೆ ಬಹಳ ದುಃಖವಾದ ಸನ್ನಿವೇಶವೂ ಇದೆ. ಕೆಲಸಕ್ಕಾಗಿ ದುಬೈಗೆ ಹೋದಾಗ ತಂದೆ ತೀರಿಕೊಂಡರು. ಅಲ್ಲಿಗೆ ತಲುಪಿದ ತಕ್ಷಣ ವಿಷಯ ತಿಳಿಯಿತು, ವಾಪಸ್‌ ಬರಲಾಗಲಿಲ್ಲ, ಕೊನೆಯದಾಗಿ ಅಪ್ಪನ ಮುಖ ನೋಡದ ಆ ದಿನ ನೆನಪಿಸಿಕೊಂಡರೆ ದುಃಖ ಮರುಕಳಿಸುತ್ತದೆ.

* ಚಿತ್ರೀಕರಣದ ವೇಳೆ ಕಷ್ಟವೆನಿಸುವ ಸಂದರ್ಭ?
ಧಾರಾವಾಹಿಯಲ್ಲಿ ಪುಟಗಟ್ಟಲೇ ಡೈಲಾಗ್‌ ಹೇಳುವ ನನಗೆ ಸಿನಿಮಾ ಸ್ಕ್ರಿಪ್ಟ್‌ ಕಷ್ಟವೆನಿಸುವುದಿಲ್ಲ ಜೊತೆಗೆ ಕ್ಯಾಮೆರಾ ಎದುರು ನಟಿಸುವುದು ಕಷ್ಟವೆನಿಸದು. ರಾತ್ರಿ ಚಿತ್ರೀಕರಣ ಇದ್ದರೆ ಬೇಜಾರಾಗುತ್ತದೆ ಅಷ್ಟೇ.

* ಬಿಡುವಿನ ವೇಳೆಯಲ್ಲಿ ಏನು ಮಾಡ್ತೀರಾ?
ಬಿಡುವು ಸಿಕ್ಕರೆ  ಮನೆಯಲ್ಲೇ ಕಾಲ ಕಳೆಯುತ್ತೇನೆ. ಬಿಟ್ಟರೆ ಒಬ್ಬಳೆ ಶಾಪಿಂಗ್‌ ಮಾಡಲು ಹೋಗುತ್ತೇನೆ, ಕಾದಂಬರಿಗಳನ್ನು ಓದುತ್ತೇನೆ.

* ಬೈಕ್‌, ಕಾರು ಇವುಗಳಲ್ಲಿ ಯಾವುದು ಇಷ್ಟ?
ತಮ್ಮನ ಪಲ್ಸರ್‌ ಬೈಕ್‌ ಓಡಿಸುತ್ತೇನೆ. ಜೊತೆಗೆ ಸ್ಕೂಟಿಯೂ ಇಷ್ಟವಾಗುತ್ತದೆ.

* ಯಾವ ಔಟ್‌ಫಿಟ್‌ನಲ್ಲಿ ಕಂಫರ್ಟ್‌ ಆಗಿ ಫೀಲ್‌ ಮಾಡ್ತೀರಾ?
ಜೀನ್ಸ್‌ ಪ್ಯಾಂಟ್‌, ಟೀ ಶರ್ಟ್‌ ತುಂಬಾ ಕಂಫರ್ಟ್‌ ಆಗಿರುತ್ತದೆ. ಹಬ್ಬಗಳ ಸಂದರ್ಭದಲ್ಲಿ ಸೀರೆ ಉಡುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.