ಕಬ್ಬನ್ ಪಾರ್ಕ್‌ನಲ್ಲಿ ನೆರಳನ್ನು ಸೀಳಿ ಬಂದ ಬಿಸಿಲಿನ ಚಿತ್ರ ನೋಡಿದಾಗ ನಮಗೂ ಆ ಫೊಟೋ ಕ್ಲಿಕ್ಕಿಸಬೇಕು ಎಂದೆನಿಸುತ್ತದೆ. ಮರುದಿನ ಬೆಳಿಗ್ಗೆ ಅಲ್ಲಿ ಕ್ಯಾಮೆರಾ ಹಿಡಿದು ಹಾಜರಾದರೆ, ನೆರಳನ್ನು ಸೀಳಿ ಬರುವ ಬೆಳಕು ಕಾಣುವುದೇ ಇಲ್ಲ. ಅರೆ ಇದೇನಿದು ನಾಳೆ ನೋಡೋಣ ಎಂದು ಹೋದರೆ, ಮತ್ತದೇ ಅನುಭವ. ಕ್ಲಿಷ್ಟಕರವೆನಿಸುವ ಈ ರೀತಿಯ ಸಮಸ್ಯೆಗಳೆದುರಾದಾಗ, ಕೇವಲ ಬಿಸಿ ನೀರಿನ ಸ್ನಾನದ ಅನುಭವದಲ್ಲಿ ಇವತ್ತು ಯಾವ ಫೊಟೋಗ್ರಫಿ ಮಾಡಲು ಸೂಕ್ತ ವಾತಾವರಣ ಇದೆ ಎನ್ನುವ ಪಾಠ ಹೇಳಿಕೊಡುವ ಪುಸ್ತಕ ‘ಫೊಟೋ ಕ್ಲಿಕ್ಕಿಸುವ ಮುನ್ನ...’
ಪಿಕ್ಟೋರಿಯಲ್, ನೇಚರ್, ಮ್ಯಾಕ್ರೋ, ಕ್ಯಾಂಡಿಡ್, ವೈಲ್ಡ್‌ಲೈಫ್ ಸೇರಿದಂತೆ ಅಂತರರಾಷ್ಟ್ರೀಯ ಫೊಟೋಗ್ರಫಿಯ ವಿವಿಧ ಮಜಲುಗಳನ್ನು ಓದುಗರ ಮುಂದೆ ತೆರೆದಿಡುವ, ಕನ್ನಡದಲ್ಲೇ ವಿಶಿಷ್ಟವೆನಿಸುವ ಪುಸಕ್ತಕವನ್ನು ಶಿವು ಕೆ. ಹೊರತಂದಿದ್ದಾರೆ. ಹದಿನೈದು ವರ್ಷಗಳ ಹಿಂದೆ ಭಾರತದ ಪ್ರಖ್ಯಾತ ಛಾಯಾಗ್ರಾಹಕ ಸಿ. ರಾಜಗೋಪಾಲ್ ಅವರಿಂದ ನೀನು ತೆಗೆದ ಫೊಟೋ ಚೆನ್ನಾಗಿಲ್ಲ, ಎಂದು ಹೇಳಿಸಿಕೊಂಡಿದ್ದ ಶಿವು, ಮುಂದೆ ಫೊಟೋಗ್ರಫಿ ಕ್ಷೇತ್ರದಲ್ಲಿ ‘ಪರ್ವಾಗಿಲ್ಲ ಕಣೋ ಕೀಪ್ ಇಟ್ ಅಪ್...’ ಎನ್ನುವ ಮಟ್ಟಿಗೆ ಬೆಳೆದರು.
ಕಲಿಕೆಯ ದಿನಗಳಲ್ಲಿ ಕಾಡಿದ ಫೊಟೋಗ್ರಫಿ ಕುರಿತಾದ ಪುಸ್ತಕದ ಸಮಸ್ಯೆಯನ್ನು ನೀಗಿಸಲು, ಮೂರು ವರ್ಷಗಳ ಸತತ ಪ್ರಯತ್ನದಿಂದ ಈ ಪುಸ್ತಕ ಹೊರತಂದಿದ್ದಾರೆ. ಪುಸ್ತಕ ಬರೆದು ಪ್ರಕಾಶಕರನ್ನು ಹುಡುಕ ಹೊರಟಾಗ, ಇಂದು ಬನ್ನಿ ನಾಳೆ ಬನ್ನಿ ಎಂದು ಸತಾಯಿಸತೊಡಗಿದ್ದರಿಂದ ಬೇಸತ್ತು ‘ಶಿವು ಕೆ. ಪ್ರಕಾಶನ’ಕ್ಕೆ ಅಡಿಗಲ್ಲು ಹಾಕಿದ್ದಾರೆ.
ಫೊಟೋಗ್ರಫಿ ಎಂದರೆ ಮ್ಯಾಜಿಕ್ ಎನ್ನುವಂಥಹ ದಿನಗಳಲ್ಲಿ, ತನಗೆ ತಾನೇ ಗುರುವಾದ ಬೆಂಕಿಯಲ್ಲಿ ಅರಳಿದ ಹೂವು ಶಿವು. ಪದವಿ ಪಡೆದಿದ್ದರೂ, ಬೇರೆ ಉದ್ಯೋಗಕ್ಕೆ ಸೇರಿದರೆ ಫೊಟೋಗ್ರಫಿ ಜಗತ್ತಿನಿಂದ ಕಳಚಿಕೊಳ್ಳುವೆನೋ ಎನ್ನುವ ಭಯದಿಂದ ನ್ಯೂಸ್ ಪೇಪರ್ ವೆಂಡರ್ ವೃತ್ತಿಯನ್ನು ಆರಿಸಿಕೊಂಡು, ಶ್ರದ್ಧೆಯಿಂದ ಫೊಟೋಗ್ರಫಿ ಕಲಿತ ಏಕಲವ್ಯ ಇವರು.
ವೃತ್ತಿಯಲ್ಲಿ ದಿನಪತ್ರಿಕೆ ಹಾಕುವ ‘ವೆಂಡರ್’ ಆಗಿರುವ ಶಿವು, ಪ್ರವೃತ್ತಿಯಲ್ಲಿ ಛಾಯಾಗ್ರಾಹಕ. ‘ಪ್ರಜಾವಾಣಿ’ ಕಚೇರಿಗೆ ಪೇಪರ್ ಬಿಲ್ ಕಟ್ಟಲು ಹೋದಾಗ ಎದುರಾದ ಪತ್ರಕರ್ತ ನಾಗೇಶ್ ಹೆಗಡೆಯವರು ‘ಬರೆಯುವವರಿಗೆ ಮಾತ್ರ ಇಲ್ಲಿಗೆ ಎಂಟ್ರಿ’ ಎಂದಿದ್ದು ಶಿವು ಬದುಕನ್ನೇ ಬದಲಾಯಿಸಿತು. ಪಿಕ್ಟೋರಿಯಲ್ ಫೋಟೊಗ್ರಫಿಯಲ್ಲಿ ‘ಲೈಟ್ ಅಂಡ್ ಶ್ಯಾಡೊ ಆರ್ಟಿಸ್ಟ್’ ಎಂದೇ ಹೆಸರುವಾಸಿಯಾಗಿರುವ ಶಿವು, ಬ್ಲಾಗ್ ಅಂಗಳದಿಂದ ಅಕ್ಷರ ಬರೆದವರು.
ತಮ್ಮ ಜಗತ್ತಿನ ಸುತ್ತ ನಡೆಯುವ ಬದಲಾವಣೆಗಳಿಗೆ ಬರವಣಿಗೆಯ ಮೂಲಕ ಪ್ರತಿಕ್ರಿಯೆ ನೀಡಿದವರು. ‘ವೆಂಡರ್ ಕಣ್ಣು’, ‘ಗುಬ್ಬಿ ಎಂಜಲು’ ಇವರ ಮೊದಲೆರಡು ಕೃತಿಗಳು. ಲಂಡನ್‌ನ ರಾಯಲ್ ಫೋಟೊಗ್ರಫಿ ಸೊಸೈಟಿಯ ಮನ್ನಣೆ (ARPS), ಫ್ರಾನ್ಸ್ ದೇಶದ FIAP ಫೋಟೊಗ್ರಫಿ ಸಂಸ್ಥೆಯಿಂದ Excellence Federationale De La Art Photographic (EFIAP) ಗೌರವಕ್ಕೆ ಪಾತ್ರವಾಗಿರುವ ಶಿವು ಅವರ ಚಿತ್ರಗಳು 1200ಕ್ಕೂ ಹೆಚ್ಚು ಬಾರಿ ವಿವಿಧ ದೇಶಗಳಲ್ಲಿ ಪ್ರದರ್ಶಿತವಾಗಿವೆ ಮತ್ತು 100ಕ್ಕೂ ಪ್ರಶಸ್ತಿಗಳನ್ನು ಗಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.