ADVERTISEMENT

'ಸಿಗಬೇಕಾದ್ದು ಸಿಕ್ಕೇ ಸಿಗುತ್ತೆ'

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2017, 19:30 IST
Last Updated 12 ಸೆಪ್ಟೆಂಬರ್ 2017, 19:30 IST
'ಸಿಗಬೇಕಾದ್ದು ಸಿಕ್ಕೇ ಸಿಗುತ್ತೆ'
'ಸಿಗಬೇಕಾದ್ದು ಸಿಕ್ಕೇ ಸಿಗುತ್ತೆ'   

ಪ್ರಿಯಾಂಕಾ ಚೋಪ್ರಾ ಇದೀಗ ನ್ಯೂಯಾರ್ಕ್‌ನ ‘ಪೇಪರ್‌’ ಮುಖಪುಟ ದಲ್ಲೂ ರಾರಾಜಿಸುತ್ತಿದ್ದಾರೆ. ವಿಭಿನ್ನ ಗೆಟಪ್ಪಿನ ಮಾದಕ ನೋಟದ ಫೋಟೊ ಮುಖಪುಟದಲ್ಲಿದೆ. ಈ ನಿಯತಕಾಲಿಕೆಯಲ್ಲಿ ಆರು ‘ಸುಂದರ ಜನ‘ರನ್ನು ಪರಿಚಯಿಸಲಾಗುತ್ತಿದೆ. ಅದರಲ್ಲಿ ಪ್ರಿಯಾಂಕಾ ಸ್ಥಾನ ಪಡೆದಿರುವುದು ವಿಶೇಷ. ಮೊದಲ ಆವೃತ್ತಿಯಲ್ಲಿ ರ‍್ಯಾಪರ್‌ ಗುಸ್ಸಿ ಮಾನೆ ಅವರ ಸಂದರ್ಶನ ಮಾಡಲಾಗಿತ್ತು.

ನಟನೆ ಹಾಗೂ ಕಾರ್ಯವೈಖರಿಯಿಂದ ಹೆಸರಾಗಿರುವ ಪ್ರಿಯಾಂಕಾ ‘ಅದೃಷ್ಟದ ಬಗೆಗೆ ನನಗೆ ಸಾಕಷ್ಟು ನಂಬಿಕೆಯಿದೆ. ಸಿನಿಮಾ ಕ್ಷೇತ್ರಕ್ಕೆ ಕಾಲಿರಿಸಿದ್ದೂ ಇದೇ ಅದೃಷ್ಟದಿಂದಲೇ ಎನಿಸುತ್ತದೆ. ನನ್ನ ಪ್ರಕಾರ ಪ್ರತಿಯೊಬ್ಬರ ಬದುಕಿನ ಉತ್ತಮ ಕ್ಷಣಗಳು ಮೊದಲೇ ನಿರ್ಧಾರವಾಗಿರುತ್ತವೆ. ಅದು ಬರುವವರೆಗೆ ಕಾಯಬೇಕಷ್ಟೇ. ನಾವು ಆಸೆ ಪಡುವ ವಸ್ತು ನಮಗೆ ಸಿಗುವುದಿಲ್ಲ. ಆದರೆ ಬದುಕಿನಲ್ಲಿ ನಮ್ಮ ಅವಶ್ಯಕತೆ ಏನಿರುತ್ತದೋ ಅದು ಸಿಕ್ಕೇ ಸಿಗುತ್ತದೆ. ಕೆಲವೊಮ್ಮೆ ಬದುಕಿನಲ್ಲಿ ನಾವು ಅಂದುಕೊಳ್ಳದೇ ಇರುವುದು ಸಿಕ್ಕಿಬಿಡುತ್ತದೆ. ಆದರೆ ನಮ್ಮ ದಾರಿಗೆ ಬರುವ ಅವಕಾಶವನ್ನು ಗುರುತಿಸುವ ಜಾಣ್ಮೆ ನಮ್ಮಲ್ಲಿರಬೇಕು‘ ಎಂದು ಭಾವುಕವಾಗಿ ಮಾತನಾಡಿದ್ದಾರೆ.

ಫೇರ್‌ನೆಸ್‌ ಕ್ರೀಂಗೆ ಸಂಬಂಧಿಸಿದ ಜಾಹೀರಾತೊಂದನ್ನು ನೆನಪಿಸಿಕೊಂಡ ಅವರು ‘ವೃತ್ತಿ ಜೀವನದ ಪ್ರಾರಂಭದಲ್ಲಿ ನಾನೂ ಕೆಲವು ಸೌಂದರ್ಯವರ್ಧಕಗಳಿಗೆ ಸಂಬಂಧಿಸಿದ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದೆ. ಚೆಂದಕಾಣುವ ಆಸೆಯಲ್ಲಿ ನನ್ನಂತೆ ಅದೆಷ್ಟೋ ಹುಡುಗಿಯರು ಸೌಂದರ್ಯವರ್ಧಕಗಳ ಮೊರೆ ಹೋಗಿದ್ದಿದೆ. ನಮ್ಮಲ್ಲಿರುವುದನ್ನೆಲ್ಲಾ ಕಡೆಗಣಿಸಿ, ಇನ್ನೂ ಹೆಚ್ಚಿನದನ್ನು ಬಯಸುವ ಈ ಸೌಂದರ್ಯವರ್ಧಕಗಳ ಬಗ್ಗೆ ಅಸಹ್ಯ ಎನಿಸಲಾರಂಭಿಸಿತು. ಹೀಗಾಗಿ ಆಗಿಂದಾಗಲೇ ಕಾಂಟ್ರಾಕ್ಟ್‌ನಿಂದ ವಿಮುಖಳಾಗಿ ಅಂಥ ಜಾಹಿರಾತಿನಲ್ಲಿ ಮತ್ತೆಂದೂ ನಟಿಸಲಿಲ್ಲ. ತ್ವಚೆಗೆ ಕಾಂತಿ ನೀಡುತ್ತದೆ ಎಂದರೆ ಒಂದು ಮಟ್ಟಕ್ಕೆ ಒಪ್ಪಬಹುದು. ಆದರೆ ತ್ವಚೆ ಬಿಳುಪಾಗುತ್ತದೆ ಎಂದರೆ, ಅಸಹ್ಯ?’ ಎಂದು ಅಣಕಿಸಿದ್ದಾರೆ ಪ್ರಿಯಾಂಕಾ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.