ADVERTISEMENT

‘ನನ್‌’ ಆಸೆಯವಳು ನಟಿಯಾದಾಗ...

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2015, 19:53 IST
Last Updated 26 ಅಕ್ಟೋಬರ್ 2015, 19:53 IST

‘ದೇವರು ಕೆಲವೇ ವಿಷಯಗಳಿಗೆ ನಗುವುದಂತೆ. ಭವಿಷ್ಯದಲ್ಲಿ ನಾವು ಹೀಗೇ ಆಗಬೇಕು ಎಂದು ಅಂದುಕೊಳ್ಳುವುದೂ ಇದರಲ್ಲಿ ಒಂದಂತೆ. ನನ್ನ ವಿಷಯದಲ್ಲೂ ಹಾಗೇ ಆಗಿದೆ...’ ಎನ್ನುತ್ತಿದ್ದಾರೆ ಶ್ರೀಲಂಕಾದ ಮಾದಕ ಚೆಲುವೆ ಬಾಲಿವುಡ್‌ ನಟಿ ಜಾಕ್ವಲಿನ್ ಫರ್ನಾಂಡಿಸ್! ತನ್ನ ಪಾತ್ರಕ್ಕೆ ಕಳೆ ಬರಬೇಕೆಂದರೆ ಎಂಥ ಪಾತ್ರ ಮಾಡಲೂ ಸಿದ್ಧ ಎನ್ನುತ್ತಾ ಮೈ ಚಳಿ ಬಿಟ್ಟು ನಟಿಸುವ ಈಕೆ ಹೀಗೆಲ್ಲಾ ಹೇಳಲು ಕಾರಣ ಏನೆಂದರೆ ಈಕೆಗೆ ಬಾಲ್ಯದಿಂದಲೂ ‘ನನ್‌’ ಆಗುವ ಆಸೆಯಿತ್ತಂತೆ.

ಸಂದರ್ಶನವೊಂದರಲ್ಲಿ ತಮ್ಮ ಬದುಕಿನ ಇನ್ನೊಂದು ಮಗ್ಗಲನ್ನು ಬಿಚ್ಚಿಡುತ್ತಾ ಜಾಕ್ವಲಿನ್ ಈ ವಿಷಯ ತಿಳಿಸಿದ್ದಾರೆ. ‘ನನಗೆ 12ನೇ ವಯಸ್ಸಿನಿಂದಲೇ ನನ್‌ ಆಗುವ ಆಸೆ ಇತ್ತು. ಇದಕ್ಕೆ ಮಾನಸಿಕ ಹಾಗೂ ದೈಹಿಕವಾಗಿ ಸಿದ್ಧಳಾಗಿದ್ದೆ. ಆದರೆ ನಾವೊಂದು ಬಗೆದರೆ, ದೈವವೊಂದು ಬಗೆಯುತ್ತದೆ ಎನ್ನುವ ಹಾಗೆ ಚಿತ್ರರಂಗಕ್ಕೆ ಬಂದೆ’ ಎಂದಿದ್ದಾರೆ.

2009ರಲ್ಲಿ ಬಿಡುಗಡೆಯಾದ ‘ಅಲಾದೀನ್‌’ ಹಿಂದಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಪಡೆದ ಜಾಕ್ವಲಿನ್ ನಂತರ ಸಲ್ಮಾನ್‌ ಖಾನ್‌ ಜೊತೆ ನಟಿಸಿರುವ ‘ಕಿಕ್‌’ ಚಿತ್ರದ ಮೂಲಕ ಅಭಿಮಾನಿಗಳಲ್ಲಿ ಕಿಕ್ಕೇರಿಸಿದವರು. 2014ರಲ್ಲಿ ಈ ಚಿತ್ರ ಬಿಡುಗಡೆಯಾಗಿದ್ದು, ಆ ನಂತರ ಆಕೆಗೆ ಭಾರಿ ಬೇಡಿಕೆ ಬರುತ್ತಿದೆ.

ಕಳೆದ ಮೇ ತಿಂಗಳಿನಲ್ಲಿ ಲಂಡನ್‌ನಲ್ಲಿ ನಡೆದ ಅನಿವಾಸಿ ಭಾರತೀಯರೊಬ್ಬರ ಮದುವೆ ಸಮಾರಂಭದಲ್ಲಿ ಡಾನ್ಸ್ ಮಾಡಲು ಬರೋಬ್ಬರಿ ನಾಲ್ಕು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ! ಅಂದಹಾಗೆ, ಈಕೆಗೂ ಗಾಸಿಪ್‌ಗೂ ಬಿಡಿಸಲಾಗದ ನಂಟು. ಏಕೆಂದರೆ ಈಕೆಯ ಹೆಸರು ಯಾವಾಗಲೂ ಯಾವುದಾದರೂ ನಟನ ಸುತ್ತಮುತ್ತ ಹರಿದಾಡುತ್ತಲೇ ಇರುತ್ತದೆ.

ಆದ್ದರಿಂದ ಆಕೆ ಎಲ್ಲಿಗೆ ಹೋದರೂ ಈ ಬಗ್ಗೆ ಪ್ರಶ್ನೆಗಳು ಸುರಿಮಳೆ. ಇದರಿಂದ ಜಾಕ್ವಲಿನ್ಗೆ ತೀವ್ರ ನೋವಿದೆಯಂತೆ. ಆದರೆ ಈಚೆಗೆ ಬೋನಿ ಕಪೂರ್‌ ಮಗ ಅರ್ಜುನ್‌ ಕಪೂರ್‌ ತಮ್ಮ ಟ್ವಿಟರ್‌ನಲ್ಲಿ ಈಕೆಯನ್ನು ಹಾಡಿ ಹೊಗಳಿದ್ದರಿಂದ ಜಾಕ್ವಲಿನ್ ಕುಣಿದಾಡುತ್ತಿದ್ದಾರೆ. ‘ಜಾಕ್ವಲಿನ್ ಉತ್ತಮ ನಟಿ ಮಾತ್ರವಲ್ಲ, ಒಳ್ಳೆಯ ವ್ಯಕ್ತಿ ಕೂಡ. ಈಕೆಯನ್ನು ಮೀರಿದ ಉತ್ತಮ ಹೃದಯವಂತಳು ಜಗತ್ತಿನಲ್ಲಿ ಬೇರೆಲ್ಲೂ ಇಲ್ಲ’ ಎನ್ನುವುದು ಆ ಕಮೆಂಟ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.