ADVERTISEMENT

ಇನ್ನೊಂದು ಬದಲಾವಣೆಗೆ ಆಲ್ಟೊ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2015, 19:46 IST
Last Updated 2 ಸೆಪ್ಟೆಂಬರ್ 2015, 19:46 IST

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪೆನಿ ಮಾರುತಿ ಸುಜುಕಿ, ತನ್ನ ಅತ್ಯುತ್ತಮ ಮಾರಾಟದ ಮಾದರಿ ಆಲ್ಟೊಗೆ ನೂತನ ಬದಲಾವಣೆಯನ್ನು ತರಲಿದೆ. ಇತ್ತೀಚೆಗಷ್ಟೆ ಆಲ್ಟೊ ಕೆ-10 ಬಿಡುಗಡೆಗೊಳಿಸಿದ್ದ ಸುಜುಕಿ,  ಇನ್ನೊಂದು ಹೊಸ  ತಲೆಮಾರಿನ ಕಾರೊಂದನ್ನು ರಸ್ತೆಗೆ ಬಿಡುವ ಸಿದ್ಧತೆ ನಡೆಸಿದೆ.

ಈಗಾಗಲೇ ಈ ಕಾರಿನ ಕುರಿತ ಸಂಶೋಧನೆ ಮತ್ತು ಅಭಿವೃದ್ಧಿ ನಡೆದಿದೆ. ಜಪಾನ್‌ನಲ್ಲಿ ಈ ಕಾರು ಸಾಕಷ್ಟು ಮಾರಾಟಗೊಂಡಿದ್ದು, ಇದನ್ನು ಭಾರತೀಯ ವಾಹನ ಮಾರುಕಟ್ಟೆಗೆ ತಕ್ಕಂತೆ ಮಾರ್ಪಡಿಸಲಾಗುತ್ತಿದೆ. ಈ ಹೊಸ ತಲೆಮಾರಿನ ಆಲ್ಟೊ 2017ರ ಮಧ್ಯದಲ್ಲಿ ಬಿಡುಗಡೆಗೊಳ್ಳಲಿರುವ ನಿರೀಕ್ಷೆ ಇದೆ.

ಲಭ್ಯ ಮಾಹಿತಿಯ ಪ್ರಕಾರ, ಈ ನೂತನ ಆಲ್ಟೊವನ್ನು ಅತಿ ಹೆಚ್ಚು ಇಂಧನ ಕ್ಷಮತೆ ನೀಡುವಂತೆ ರೂಪಿಸಲಾಗಿದೆಯಂತೆ.  ಆದ್ದರಿಂದ ಈ ಕಾರು ಪರಿಸರಸ್ನೇಹಿಯೂ ಆಗಲಿರುವ ಭರವಸೆ ಇದೆ. ಭಾರತೀಯ ಕಾರ್‌ ಗ್ರಾಹಕರು ಮೈಲೇಜ್‌ಗೆ ಹೆಚ್ಚು ಆದ್ಯತೆ ನೀಡುವುದರಿಂದ ಈ ಕಾರಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ಮಾರುತಿಯದ್ದು.

ಭಾರತೀಯ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡೇ ಆಲ್ಟೊ 800 ಹಾಗೂ ಹೊಸ ಕೆ-10 ಕಾರುಗಳನ್ನು ವಿನ್ಯಾಸಗೊಳಿಸಲಾಗಿದ್ದು, ಆ ಸಾಲಿಗೆ ಹೊಸ ಆಲ್ಟೊ ಕೂಡ ಸೇರಲಿದೆ. ಹೊಸ ತಲೆಮಾರಿನ ಈ ಕಾರನ್ನು ಭಾರತೀಯರ ಅವಶ್ಯಕತೆ, ಅಭಿರುಚಿಗಳಿಗೆ ಹೊಂದುವಂತೆ ಮರುವಿನ್ಯಾಸವನ್ನೂ ಮಾಡಲಿದ್ದು, ಭಾರತೀಯರ ಮೆಚ್ಚುಗೆಯನ್ನು ಪಡೆಯಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ಸುರಕ್ಷೆಗೆ ಒತ್ತು
ಆಲ್ಟೊ ‘ಕ್ರ್ಯಾಷ್ ಟೆಸ್ಟ್’ ಅನ್ನೂ ಎದುರಿಸಲಿದ್ದು, ಸುರಕ್ಷಿತ ಚಾಲನೆಗೆ ಒತ್ತು ನೀಡಲಾಗಿದೆ. ಈ ಆಲ್ಟೊ ಶೇ 45ರಷ್ಟು ಕಠಿಣ ಸ್ಟೀಲ್‌ನಿಂದ ರೂಪುಗೊಂಡಿದ್ದು, ಗಟ್ಟಿಮುಟ್ಟು ಹಾಗೂ ಹಗುರವೂ ಆಗಿರಲಿದೆ.

ಕಡಿಮೆ ತೂಕದ ಜತೆಗೆ ಅತಿ ಹೆಚ್ಚು ವೇಗ ಹೊಂದಿರುವುದು ಇದರ ಪ್ಲಸ್ ಪಾಯಿಂಟ್. ಕೆ-10 ಗಿಂತ ಹೆಚ್ಚು ಇಂಧನ ಕ್ಷಮತೆಯನ್ನು ಇದು ಹೊಂದಿರಲಿದೆ. ಇದು ಎಆರ್‌ಎಐ ಮಾನ್ಯತೆಯ ಇಂಧನ ಕ್ಷಮತೆ ಹೊಂದಿದ್ದು, ಪ್ರತಿ ಲೀಟರ್‌ಗೆ 32 ಕಿ.ಮೀ. ಮೈಲೇಜ್ ನೀಡಲಿದೆ (ಸ್ಟ್ಯಾಂಡರ್ಡ್‌ ಚಾಲನಾ ಮಾನದಂಡಗಳಿಗೆ ಅನುಗುಣವಾಗಿ) ಎಂದು  ಕಂಪೆನಿ ಹೇಳಿಕೊಂಡಿದೆ.

ಇದರಲ್ಲಿ ಎಎಂಟಿ (ಆಟೊಮೇಟೆಡ್ ಮ್ಯಾನ್ಯುಯಲ್ ಟ್ರಾನ್ಸ್‌ಮಿಷನ್) ಕೂಡ ಇರಲಿದೆ. ಈಗಿರುವ ಆಟೋಮೇಡೆಡ್ ಮ್ಯಾನ್ಯುಯಲ್ ಗೇರ್ ಬಾಕ್ಸ್ (ಎಎಂಟಿ) ಮಾದರಿಯನ್ನು ಹಾಗೆಯೇ ಉಳಿಸಿಕೊಳ್ಳಲಾಗುವುದು. ಅಲ್ಲದೆ, ಕಾರಿನ ದೇಹದ ಗಾತ್ರದಲ್ಲಿ (3,395 ಎಂಎಂ ಉದ್ದ) ಯಾವುದೇ ಬದಲಾವಣೆ ಮಾಡಲಾಗಿಲ್ಲ. ಇದರಲ್ಲಿ ವಿವಿಟಿ (ವೇರಿಯಬಲ್ ವಾಲ್ವ್‌ ಟೈಮಿಂಗ್) ಎಂಜಿನ್ ಕೂಡ ಇರಲಿದೆ. ಆದ್ದರಿಂದ ಆಲ್ಟೊ ಕೆ-10 ಎಂಜಿನ್ ಟರ್ಬೊ ಎಂಜಿನ್‌ಗೆ ಬದಲಾಗಲಿದೆ.

ಭಾರತೀಯ ಕಾರು ಖರೀದಿದಾರರ ಅಭಿರುಚಿಗೆ ತಕ್ಕಂತೆ ಕಾರು ರೂಪಿಸಲು ಭಾರತೀಯರ ತಂಡವನ್ನೇ ವಿನ್ಯಾಸಕ್ಕೆ ನಿಯೋಜಿಸಲಾಗುವುದು ಎಂದೂ ಕಂಪೆನಿ ತಿಳಿಸಿದೆ. ಈ ಹೊಸ ತಲೆಮಾರಿನ ಆಲ್ಟೊ ಗುಜರಾತ್‌ನಲ್ಲಿ ತಯಾರಾಗಲಿದೆ. ಈ ಹೊಸ ಆಲ್ಟೊದ ಬೆಲೆ ಮೂರು ಲಕ್ಷದಿಂದ ನಾಲ್ಕೂವರೆ ಲಕ್ಷ ರೂಪಾಯಿ (ಆನ್‌ರೋಡ್) ಇರಲಿದೆ. ಈ ಕಾರು ಬಿಡುಗಡೆಯಾದ ನಂತರ  ಟಾಟಾ ನ್ಯಾನೊ ಟ್ವಿಸ್ಟ್ ಆಕ್ಟಿವ್ ಕಾರಿಗೆ ಭಾರೀ ಪೈಪೋಟಿ ನೀಡಲಿದೆ ಎಂಬ ನಿರೀಕ್ಷೆ ಇದೆ.

ಆಲ್ಟೊ ಕೀ (alto kei)
ಈ ಹ್ಯಾಚ್‌ಬ್ಯಾಕ್ ಕಾರು ‘ಆಲ್ಟೊ ಕೀ’ ತಳಹದಿಯಲ್ಲಿ ರೂಪುಗೊಂಡಿರುವುದು ವಿಶೇಷ. ಇದು, ಎಂಟನೇ ತಲೆಮಾರಿನ ಹ್ಯಾಚ್‌ಬ್ಯಾಕ್ ಆಗಿದ್ದು, ಪ್ರಸ್ತುತ ಇರುವ ಆಲ್ಟೊಗಿಂತ ಕಡಿಮೆ ತೂಕದ್ದಾಗಿರುತ್ತದೆ.


ಈ ಆಲ್ಟೊ, 658 ಸಿಸಿ ಎಂಜಿನ್‌ನ ಶಕ್ತಿ ಹೊಂದಿದ್ದು,  53 ಬಿಎಚ್‌ಪಿ ವೇಗದಲ್ಲಿ ಸಾಗಬಲ್ಲದು. ಇದರ ಟರ್ಬೊ ಮಾದರಿಯ ಎಂಜಿನ್‌ ಗರಿಷ್ಠ 62 ಬಿಎಚ್‌ಪಿ ವೇಗೋತ್ಪಾದನೆ ಮಾಡಬಲ್ಲದು. ಈಗಿರುವ ಕಾರಿಗಿಂತ ಇದು ಹಗುರವಾಗಿದ್ದು, ಅದಕ್ಕೆ ಹೋಲಿಸಿದರೆ ಶೇ 10ರಷ್ಟು ಕಡಿಮೆ ತೂಕವನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT