ADVERTISEMENT

ಈ ಬದುಕಿಗಿಷ್ಟು ಸಾಕು!

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2017, 19:30 IST
Last Updated 22 ಫೆಬ್ರುವರಿ 2017, 19:30 IST
ಈ ಬದುಕಿಗಿಷ್ಟು ಸಾಕು!
ಹೆಚ್ಚೇನಲ್ಲ... ಕೇವಲ ನಾಲ್ಕು ವರ್ಷಗಳ ನಂತರ ಮತ್ತೆ ಬಂದಿರುವೆ ನೀ ಶಾಶ್ವತ ನಿದ್ರೆ ಹೋದ ಜಾಗಕ್ಕೆ! ನಿನ್ನ ದೇಹದ ಉದ್ದಗಲಕ್ಕೆ ತಕ್ಕ ಹಾಗೆ ನೆಲ ಅಗೆದು ಅಂದು ನಿನ್ನ ಮಲಗಿಸಿ ಮಣ್ಣು ಮುಚ್ಚಿ ಮತ್ತೆ ಸಮತಟ್ಟು ಮಾಡಿದ್ರಾ? ಇಲ್ಲಾ ಸ್ವಲ್ಪ ಉಬ್ಬು ಇಟ್ಟು ಆರಿ ಹೋಗೋ ದೀಪದ ಹಣತೆಯ ಅದರ ಮೇಲಿಟ್ಟು ಕೈಮುಗಿದ್ರಾ...?
 
ವಸಂತಗಳುರುಳಿದವು... ನೀ ಸತ್ತ ಹೊಸತರಲ್ಲಿ (ಇದೆಂಥಾ ವಾಕ್ಯ?!!) ಚಿತೆಯ ಸುತ್ತಾ ಇದ್ದಿದ್ದ ಹೆಜ್ಜೆ ಗುರುತುಗಳೂ ಅಳಿದವು... ಹೆಸರ ಹಂಗಿಲ್ಲದ ಗಿರಿವಿರಿಯಂಥಾ ಹುಲ್ಲುಗಳೂ, ನಾಚಿಕೆ ಮುಳ್ಳುಗಳೂ ಯಥೇಚ್ಛವಾಗಿ ಬೆಳೆದವು... ಪಕ್ಕದಲ್ಲಿದ್ದ ಚಿಕ್ಕ ಕಾಲುದಾರಿಯೂ ಮುಚ್ಚಿ ಮತ್ತೆಲ್ಲೋ ಹುಟ್ಟಿ ಮುಂದುವರಿದವು...
 
ಅಸ್ಥಿಪಂಜರವೂ ಕರಗಿತೇನೋ... ಆದರೆ ಆವತ್ತು ಮಕ್ಕಳಾಟಿಕೆಯಲ್ಲಿ ಹೂತಿಟ್ಟ ವೆಲ್ವೆಟ್ ಕನಸುಗಳ ಕಥೆ ಏನಾಯ್ತು ನಿಂಗೊತ್ತಾ? ಕರಗದ ಪ್ಲಾಸ್ಟಿಕ್‌ಗಳಿಗೆ ಹಾಗೂ ಮರೆಯದ ನೆನಪುಗಳಿಗೆಲ್ಲಿದೆ ಸಾವು! ಅಲ್ವಾ?!
 
ಮೂರೇ ಮೂರು ಡಬ್ಬಿ ಪೆಟ್ಟಿಗೆ ಅಷ್ಟೇ... ಒಂದರಲ್ಲಿ ನಿಂಗೆ ಇರಿಸುಮುರಿಸಾಗುತ್ತಿದ್ದ ಹಾಗೂ ನಾನು ಬೇಕೆಂದೇ ಧರಿಸುತ್ತಿದ್ದ ಸ್ಕರ್ಟ್ ಹಾಗೂ ಬೊಂಬೆ ಬೊಂಬೆಯ ಟಾಪ್. ಬೊಂಬೆ ಇನ್ನೂ ಉಸಿರಾಡುತ್ತಿತ್ತಾ ಅಂತ ಕೇಳಲೇಬೇಡ, ಪ್ಲೀಸ್! 
 
ಇನ್ನೊಂದರಲ್ಲಿ ಕಾಲೇಜಿನಲ್ಲಿ ಎಲ್ಲರ ಆಸೆಗೆ ಈಡಾಗಿದ್ದ ನಿನ್ನ ಕುತ್ತಿಗೆಯಲ್ಲಿ ನೇತಾಡುತ್ತಿದ್ದ ಬೆಳ್ಳಿಯಂಚಿನ ಹುಲಿಯುಗುರಿದ್ದ ಲಾಕೆಟ್...ಟ್ರೆಕಿಂಗ್‌ನ ಪೀಕಲ್ಲಿ ಅದೆಲ್ಲೋ ಬಿದ್ದುಹೋಗಿರಲಿಲ್ಲ. ಅರ್ಧ ಮುಗಿದ ಕನಸು ಪೂರ್ತಿಯಾದ ದಿನ ನಾನೇ ಕೊಡೋಳಿದ್ದೆ. ಖುಷಿ, ಅಚ್ಚರಿಯಲ್ಲರಳಿದ ಕಣ್ಣುಗಳ ನೋಡುತ್ತಾ... ಆದರೆ ನಿಂಗೆ ಇಂಥಾ ಅವಸರವಿತ್ತು ಹೋಗಲು ಅಂತ ಖಂಡಿತವಾಗಿಯೂ ತಿಳಿದಿರಲಿಲ್ಲ...!
 
ಮೂರನೇದು ಟೆರೇಸ್ ತುದಿಯ ಕುಂಡದಲ್ಲಿ ಊರಿನ ಕೆಂಪು ಮಣ್ಣು ತುಂಬಿಸಿ ನೀ ನೆಟ್ಟ ಗುಲಾಬಿ ಗಿಡ... ಅವತ್ತೂ ಬರೆದಿದ್ದೆ... ಇವತ್ತೂ ಬರೆದು ಬರಿದಾಗಿರುವೆ... ಗಿಡ ಹೂ ಬಿಟ್ಟಿದೆ... ಬುಡಸಮೇತ ಕಿತ್ತು ತಂದಿರುವೆ. ಸಮಾಧಿ ಮೇಲಿಟ್ಟಿರುವೆ. ಇದನ್ನೊಮ್ಮೆ ಒಪ್ಪಿಸಿಕೊಂಡು ಬಿಡು. ಋಣಮುಕ್ತಳಾದೆ ಅಂದುಬಿಡು... ಈ ಬದುಕಿಗಿಷ್ಟು ಸಾಕು!
–ವಾಣಿ ಶೆಟ್ಟಿ
 
ಮತ್ತೆ ಮತ್ತೆ ಬಾಲ್ಯವೆಂಬುದು ನೆನಪಿನೊಳಗಷ್ಟೇ ದಕ್ಕುವ ಸಂಜೀವಿನಿ
ವ್ಯವಸ್ಥಿತ ಜೀವನ ಕ್ರಮವೊಂದು ರೂಪುಗೊಂಡು, ಅದು ರೊಟೀನ್ ಆಗುತ್ತಿದ್ದಂತೆ ಸುತ್ತಲಿನ ಸಮಾಜ ಜೀವನ ಸ್ಥಿರಗೊಂಡಿತೆಂಬ ಮೊಹರೊತ್ತಿ ಅಹಂಗೊಂದು ಮೆಟ್ಟಿಲು ಬಡ್ತಿ ನೀಡಿಬಿಡುತ್ತದೆ. ಎತ್ತರ ಎತ್ತರಕ್ಕೆ ಹಂಬಲಿಸುವಂತೆ ಮಾಡುವ, ಎತ್ತರಕ್ಕೆ ಹೋದಂತೆ ಒಬ್ಬಂಟಿಯಾಗಿಸಿಬಿಡುವ ಈ ಬಿಸಿಲು ಕುದುರೆಯಂಥ ಬದುಕು. 
 
ಯಾವುದೋ ಎತ್ತರದ ಆಳದಲ್ಲಿ ಅಲೆಯುವಾಗ ಪಕ್ಕನೆ ಬಾಲ್ಯದ ಬೇರುಗಳತ್ತ ಸಳಸಳನೆ ಇಳಿಯತೊಡಗಿಬಿಡುತ್ತದೆ. ದಪ್ಪ ಲೆಡ್ಜರ್‌ಗಳ ಲೆಕ್ಕಾಚಾರದ ಪಟಾಪಟ್ ಕಾಯಕದ ತಿಂಗಳ ಕೊನೆಗೆ ಮುಟ್ಟಬೇಕಾದ ಟಾರ್ಗೆಟ್‌ಗಳೆಂಬ ಕಬಂಧ ಬಾಹುಗಳಿಂದ, ಕರಾರುವಾಕ್ಕಾಗಿ ಗೆರೆ ಎಳೆದಂತೆ ಯಾವ ಅನೂಹ್ಯತೆಗೂ ಆಸ್ಪದವಿಲ್ಲದಂತೆ ಒಂದೇ ಸಿನಿಮಾವನ್ನು ನೂರು ಸಲ ನೋಡಿದಂತೆ ತೆರೆದುಕೊಳ್ಳುವ ಮುಂಜಾನೆಗಳಿಂದ, ಹತ್ತು ನಿಮಿಷ ಪಾಯಖಾನೆ, ಹದಿನೈದು ನಿಮಿಷದ ಜಳಕ, ಹತ್ತು ನಿಮಿಷದ ಉಪಾಹಾರ, ಒಳಗೆ ನೂರಾರು ತಳಮಳಗಳಿದ್ದರೂ ಮುಚ್ಚಿಹಾಕುವಂಥ ಸೂಟು ಬೂಟು.
 
ಗಂಟಲಿಂದ ಮೇಲೇಳುವ ಮಾತುಗಳಿಗೆ ಷರತ್ತುಗಳು ಅನ್ವಯಿಸುತ್ತವೆಂದು ನೆನಪಿಸುವ ಟೈ, ಎಂಥ ಸಂದಿಗ್ಧತೆಯಲ್ಲೂ ಸಿಟ್ಟು ತೋರಗೊಡದೆ ಕಾಯುವ ಮುಗುಳ್ನಗೆಯ ಮುಖವಾಡದಿಂದ ಕಾಪಾಡುವ ಏಕೈಕ ನೆಮ್ಮದಿಯ ನಿಲ್ದಾಣವೆಂದರೆ ಅದೊಂದೇ ಬಾಲ್ಯದ ಬೇರುಗಳು. ಮತ್ತದೇ ಬೇರುಗಳಿಂದ ಇವತ್ತಿನ ರೆಂಬೆಕೊಂಬೆಗಳಲ್ಲಿ ಹೊಸ ಚಿಗುರ ಪಡೆದು ಒಂದಿಷ್ಟಾದರೂ ನಮ್ಮತನಕ್ಕೆ ನ್ಯಾಯ ಒದಗಿಸಿಕೊಳ್ಳೋದು ಎಷ್ಟೊಂದು ಜರೂರತ್ತಿನ ಮತ್ತು ಅಗತ್ಯದ ಹಾದಿಯಲ್ಲವಾ. 
 
ಹುಟ್ಟಿದೂರಿನಿಂದ ದೂರಾಗಿ ಕಾಯಕದ ಮಹಾ ನಗರಗಳಿಗೆ ಬಂದು, ರೇಷ್ಮೆ ಹುಳುವಿನಂತೆ ಜಗತ್ತಿಗೂ ತನಗೂ ಬಾಗಿಲೇ ಇಲ್ಲದ ಗೂಡೊಂದನ್ನು ನೇಯುವುದೇ ಬದುಕಿನ ಪರಮ ಗುರಿಯಾಗಿಸಿಕೊಂಡು, ಒಳಗೊಳಗೇ ಬಿಟ್ಟು ಬಂದ ಊರಿಗಾಗಿ ಹಂಬಲಿಸುತ್ತಾ ನವೆದು ಹೋಗತ್ತಾ, ಕೊನೆಗೆ ಹಂಬಲಿಸಿದ ನೆಲದ ಮಣ್ಣಲ್ಲಿ ಮಣ್ಣಾಗಲಷ್ಟೇ ಬದುಕಿದವರಂತೆ ಇದ್ದು ಬಿಡುವ ಅದೆಷ್ಟೋ ನೆಮ್ಮದಿಹೀನ, ಕಳಾಹೀನ, ತಳಮಳದ ಜೀವಗಳಿಗೆ ಉಸಿರು ಚೆಲ್ಲುವ ಮೊದಲೇ ಮನಸಾರೆ ತಮ್ಮ ತಮ್ಮ ಊರುಗಳಿಗೆ, ಆತ್ಮಕ್ಕಂಟಿದ ಬೀದಿಗಳಿಗೆ, ಆತ್ಮವೇ ಆಗಿಹೋದ ತಮ್ಮ ಬಾಲ್ಯದ ಜ್ವಲಂತ ಸಾಕ್ಷಿಯಾಗಿ ಯಾವ ಬದಲಾವಣೆಗಳನ್ನು ಕಾಣದ ಹಳೆಯ ಮನೆಗಳಿಗೆ ನಿರಾತಂಕವಾಗಿ ಹೋಗಿಬರುವ ಮನಸು ಅವಕಾಶ ಎರಡೂ ದೊರಕಲಿ. ನಿತ್ಯದ ಮಹಾ ನಗರದ ಕಾಯಕದ ಮಗ್ಗ ಸಾವಿರಾರು ಮನಸುಗಳಲ್ಲಿ ನೇಯುವ ಕನಸುಗಳಲ್ಲಿ ನೆಮ್ಮದಿಯ ನಿಲ್ದಾಣವೊಂದು ಕೈಬೀಸಿ ಕರೆಯಲಿ, ನಗುವೊಂದು ಬದುಕನ್ನು ಕೈ ಹಿಡಿದು ನಡೆಸುತ್ತ ಅಭಯ ತುಂಬಲಿ.
-ಜೀವ ಮುಳ್ಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.