ADVERTISEMENT

ಛಡಿ ಚಂಚಂ ವಿದ್ಯೆ ಘಂಘಂ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2017, 19:30 IST
Last Updated 20 ಸೆಪ್ಟೆಂಬರ್ 2017, 19:30 IST

ದಡ್ಡನನ್ನು ದಾರಿಗೆ ಹಚ್ಚಿದ ಗುರುಗಳು

‘ನೀ ಹಿಂಗ್ ಅಕ್ಕಿಯಂತ ನಮಗ ಅನಿಸಿದ್ದೇಯಿಲ್ಲ’ ಎಂದು ನನಗೆ ಬಾಲ್ಯದಲ್ಲಿ ಪಾಠ ಮಾಡಿದ ಗುರುಗಳು ನನ್ನನ್ನು ಕಂಡಾಗಲೆಲ್ಲ ಹೇಳುತ್ತಾರೆ. ಅದು ಅಭಿಮಾನವೋ ಅಥವಾ ನಾನು ಬಾಲ್ಯದಲ್ಲಿ ಭಾಳ ಹಲ್ಕಟ್ ಇದ್ಯಾ ಎಂಬುದನ್ನು ಮತ್ತೆ ನೆನಪಿಸಲೋ ತಿಳಿಯದು! ಆದರೆ ನಾನು ಶಾಲೆ ಕಲಿಯುವಾಗ ಮಾಸ್ತರ ಕಡೆಯಿಂದ ಹೊಡೆಸಿಕೊಳ್ಳುತ್ತಿದ್ದ ಬಗ್ಗೆ ನಾಲ್ಕು ಮಾತುಗಳನ್ನು ಹೇಳಲೇಬೇಕು; ನೀ ಹೊಡ್ಸಕೊಳ್ಳಾಕಂಥ ಸಾಲಿಗೆ ಬರ‍್ತಿಯೇನಲೇ. ಒಂದೀಟರ ನಾಚ್ಗಿ! ಸಣ್ಣದೊಂದ ಲೆಕ್ಕಾ ಮಾಡಾಕ ಬರೂದಿಲ್ಲಂದ್ರ ಸಾಲೀಗ್ಯರ ಯಾಕ ಬರ‍್ತೀ? ದನಾಗಿನಾ ಕಾಯಾಕ ಹೋಗ ಎಂದು ಗಣಿತ ಮಾಸ್ತರ ಮೈಯಾಗಿನ ಶಕ್ತಿಯಲ್ಲಾ ಕೈಯಾಗ ತೊಗೊಂಡ ನನ್ನನ್ನು ಬಡಿಯುತ್ತಿದ್ದರು. ಅವರು ತರಗತಿ ಒಳಗೆ ಬಂದರೆಂದರೆ ಸಾಕು ನನ್ನ ಮೈಯಿ ಉಬ್ಬಲು ಶುರುಮಾಡುತ್ತಿತ್ತು. ಅವರು ಮಾಡೋ ಪಾಠಕ್ಕಿಂತ ಅವರ ಕೈಯಾಗಿನ ದೊಣ್ಣೆ ಮ್ಯಾಲ ನನ್ನ ಕಣ್ಣು ಇರುತ್ತಿತ್ತು. ಅದು ಯಾವಾಗ ಬಂದು ರಪ್ಪಂಥ ನನ್ನ ಬೆನ್ನಿನ ಮೇಲೆ ಬೀಳುತ್ತದೆಯೋ ಏನೋ ಎಂದು ಗಾಬರಿಯಿಂದ ಕಾಯುತ್ತಿದ್ದೆ. ಹೀಗೆ ಓದಲು ಬರೆಯಲು ಬರದೆ ದಿನಾ ಮಾಸ್ತರ ಕಡೆಯಿಂದ ಬಡಿಸಿಕೊಳ್ಳುತ್ತ ಪ್ರಾಥಮಿಕ ಶಿಕ್ಷಣ ಮುಗಿಸಿದೆ. ಮುಗಿಸಿದೆ ಅನ್ನುವುದಕ್ಕಿಂತ ಅವರೇ ಮುಂದಿನ ತರಗತಿಗೆ ಎತ್ತಿಹಾಕಿದರು ಎನ್ನುವುದು ಸೂಕ್ತ.

ಅಂತೂ ಹೈಸ್ಕೂಲಿಗೆ ಬಂದೆ. ಇಲ್ಲಿಯೂ ಹಳೆಯ ಕಥೆಯ ಎರಡನೆಯ ಭಾಗ ಮುಂದುವರಿಯಿತು. ಅದೇ ಹೊಡೆಸಿಕೊಳ್ಳುವ ಕಥೆ! ಆದರೆ ಹೊಡೆಯುವ ಪಾತ್ರಧಾರಿ ಮಾತ್ರ ಬೇರೆ. ಅಲ್ಲಿ ಗಣಿತ ಮಾಸ್ತರ ಬಡಿಯುತ್ತಿದ್ದರು. ಇಲ್ಲಿ ಇಂಗೀಷ್ ಮೇಷ್ಟ್ರು ಆ ಚಾರ್ಜ್ ತೆಗೆದುಕೊಂಡರು. ಕೆಲವು ದಿನಗಳ ನಂತರ ಅವರೂ ಹೊಡೆಯುವುದನ್ನು ನಿಲ್ಲಿಸಿದರು. ನನಗೆ ಬಹಳ ಆರಾಮವಾಯಿತು. ಆದರೆ ನಮ್ಮ ಸಹಪಾಠಿ ಹುಡುಗಿಯರ ಕಡೆಯಿಂದ ಹೊಡೆಸಲು ಶುರುಮಾಡಿದರು. ಹುಡುಗಿಯರು ಮುಖ ಕೆಳಗೆ ಮಾಡಿಕೊಂಡು ನನ್ನ ಮೂಗು ಹಿಡಿದು ಕಪಾಳಕ್ಕೆ ಹೊಡೆಯುತ್ತಿದ್ದರು. ಒಂದೊಂದು ಸಲ ಹೊಡೆತಕ್ಕೆ ನನ್ನ ಮೂಗಿನಲ್ಲಿಯ ಶಿಂಬಳ ಜಿಗಿದು ಪಕ್ಕದಲ್ಲಿ ಕುಳಿತವರ ಮೇಲೆ ಬೀಳುತ್ತಿತ್ತು. ಎಲ್ಲರೂ ನಗುತ್ತಿದ್ದರು. ಇದರಿಂದ ನನಗೆ ಬಹಳ ಅವಮಾನವಾಗುತ್ತಿತ್ತು.

ADVERTISEMENT

ಈ ಹೊಡೆತ, ಅವಮಾನ ತಾಳಲಾರದೆ ನಾನು ಹಗಲು ರಾತ್ರಿ ಓದಿ ಪಠ್ಯವನ್ನು ಬಾಯಿಪಾಠ ಮಾಡತೊಡಗಿದೆ. ದಿನದಿಂದ ದಿನಕ್ಕೆ ನನ್ನ ಕಲಿಕೆ ಸುಧಾರಣೆಯಾಗತೊಡಗಿತು. ಪ್ರತಿಷ್ಠಿತ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಿದೆ. ಪ್ರಥಮ ದರ್ಜೆಯಲ್ಲಿ ತೇರ್ಗಡೆಯೂ ಆದೆ. ಒಂದಾದಮೇಲೆ ಒಂದರಂತೆ ನೌಕರಿಗಳು ಸಿಕ್ಕವು. ಓದು ನಿರಂತರವಾಯಿತು. ನಾನು ಕಲಿತ ಶಿಕ್ಷಣ ಸಂಸ್ಥೆಗಳು, ನನ್ನನ್ನು ಹೊಡೆದು ಶಿಕ್ಷಣ ನೀಡಿದ ಗುರುಗಳೇ ನನ್ನನ್ನು ಕಾರ್ಯಕ್ರಮಗಳಿಗೆ ಮುಖ್ಯ ಅತಿಥಿಯಾಗಿ ಆಹ್ವಾನಿಸುತ್ತಾರೆ! ಗುರು ಶಿಷ್ಯನ ಗೆಲುವನ್ನು ಸಂಭ್ರಮಿಸುತ್ತಾನೆ ಎಂದು ನನಗೆ ಈಗ ಅನ್ನಿಸುತ್ತದೆ.

ಛಡಿ ಚಂಚಂ ವಿದ್ಯಾ ಘಮ್ ಘಮ್ ಎಂದು ಛಡಿ ಏಟು ತಿಂದು ನಾವೆಲ್ಲ ಶಾಲೆ ಕಲಿತವರು. ಮನೆಯಲ್ಲಿ ಉಡಾಳತನ ಮಾಡಿದರೆ ನಿಮ್ಮ ಮಾಸ್ತರಗೆ ಹೇಳತೇನಿ ಎಂದು ಪಾಲಕರು ಹೆದರಿಸುತ್ತಿದ್ದರು. ಮಾಸ್ತರ ಕಡೆಯಿಂದ ಹೊಡೆಸುತ್ತಿದ್ದರು. ಏಟುಗಳು ಅಂದ ತಕ್ಷಣ ಈ ಎಲ್ಲಾ ನೆನಪುಗಳೂ ಒಮ್ಮೆಲೇ ಒತ್ತರಿಸಿಕೊಂಡು ಬಂದವು.

⇒-ಡಾ. ಮಲ್ಲಿಕಾರ್ಜುನ ಗುಮ್ಮಗೋಳ ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.