ADVERTISEMENT

ಜಗದಂಗಳದಲ್ಲಿ ಚಿತ್ರಗಳ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2017, 19:30 IST
Last Updated 16 ಆಗಸ್ಟ್ 2017, 19:30 IST
ಜಗದಂಗಳದಲ್ಲಿ ಚಿತ್ರಗಳ ಮೆರವಣಿಗೆ
ಜಗದಂಗಳದಲ್ಲಿ ಚಿತ್ರಗಳ ಮೆರವಣಿಗೆ   

ಕ್ಯಾಮೆರಾ ಮೆನ್
ಬ್ರಿಟನ್ನಿನ ಹೆಸರಾಂತ ಛಾಯಾಗ್ರಾಹಕರಲ್ಲಿ ಒಬ್ಬರಾಗಿದ್ದ ರೋಜರ್‌ ಫೆಂಟನ್‌ ಅವರ ಕ್ಯಾಮೆರಾ ವ್ಯಾನ್‌ ಇದು. ಮೊದಲ ಮಹಾಯುದ್ಧದ ರೋಚಕ ಕ್ಷಣಗಳನ್ನು ಚಿತ್ರಗಳಲ್ಲಿ ಸೆರೆ ಹಿಡಿದವರು ಅವರು. ಮಾರ್ಕಸ್‌ ಸ್ಪಾರ್ಲಿಂಗ್‌ ಎಂಬಾತನನ್ನು (ಚಿತ್ರದಲ್ಲಿರುವಾತ) ಅವರು ಸಹಾಯಕರಾಗಿ ಪಡೆದಿದ್ದರು. ಕ್ಯಾಮೆರಾ ಇದ್ದ ವ್ಯಾನ್‌ ಎಳೆಯಲು ಫೆಂಟನ್‌ ಕುದುರೆಗಳನ್ನು ಬಳಸುತ್ತಿದ್ದರಂತೆ.

ರಸ್ತೆ ಏಕೆ ಖಾಲಿಯಾಯ್ತು?
ಪ್ಯಾರಿಸ್‌ನ ಸುಂದರ ರಸ್ತೆಯೊಂದರ ಚಿತ್ರ ಇದು. 1838ರಲ್ಲಿ ತೆಗೆದ ಈ ಚಿತ್ರದಲ್ಲಿ ಇಬ್ಬರು ವ್ಯಕ್ತಿಗಳು ಮಾತನಾಡುತ್ತಾ ನಿಂತಿರುವುದನ್ನು ಸಹ ಕಾಣಬಹುದು. ಒಬ್ಬನ ಬೂಟುಗಳನ್ನು ಮತ್ತೊಬ್ಬ ಪಾಲಿಷ್‌ ಮಾಡುತ್ತಿರುವಂತೆ ತೋರುತ್ತದೆ. ವ್ಯಕ್ತಿಗಳನ್ನು ಸೆರೆಹಿಡಿದ ಅತ್ಯಂತ ಪುರಾತನ ಚಿತ್ರಗಳಲ್ಲಿ ಇದೂ ಒಂದೆನಿಸಿದೆ. ಪ್ಯಾರಿಸ್‌ ತುಂಬಾ ಬ್ಯುಸಿಯಾಗಿದ್ದ ರಸ್ತೆ ಅದಾಗಿತ್ತು. ಆದರೆ, ಛಾಯಾಚಿತ್ರದ ಎಕ್ಸ್‌ಪೋಸರ್‌ ಸಮಯ ಹೆಚ್ಚಾಗಿದ್ದರಿಂದ ರಸ್ತೆಯ ಸಂಚಾರದ ನೋಟಗಳು ಅಳಿಸಿಹೋಗಿದ್ದವು.

ವಿಶ್ರಾಂತದಲ್ಲಿ ಅಶ್ವಪಡೆ
20ನೇ ಶತಮಾನವೆಂದರೆ ಎರಡು ಮಹಾ ಯುದ್ಧಗಳ, ಮಹಾಕ್ರೌರ್ಯಗಳ ಮೆರವಣಿಗೆ ತಾನೆ? ಅಂಥ ಚಿತ್ರಗಳಿಗೆ ಪ್ರಶಸ್ತಿ ಸಿಕ್ಕಿದ್ದೇ ಕಾರಣವಾಗಿ ಚರಿತ್ರೆಯ ದಿಕ್ಕು ಬದಲಾಗಿದ್ದೂ ಇದೆ. ಮೊದಲ ಮಹಾಯುದ್ಧದಲ್ಲಿ ಬ್ರಿಟನ್‌ ಸೈನ್ಯ (ರಾಯಲ್‌ ಸ್ಕಾಟ್ಸ್‌ ಗ್ರೇಯ್ಸ್‌) ಸುಮಾರು 50 ಸಾವಿರ ಕುದುರೆಗಳನ್ನು ಬಳಕೆ ಮಾಡಿತ್ತು. ಯುದ್ಧಭೂಮಿಗೆ ಹೊರಟಿದ್ದ ಈ ಅಶ್ವಪಡೆ ದಾರಿಯಲ್ಲಿ ವಿರಮಿಸುತ್ತಿದ್ದಾಗ ಸಮರ ಛಾಯಾಗ್ರಾಹಕರಿಗೆ ಸೆರೆಸಿಕ್ಕ ನೋಟವಿದು.

ADVERTISEMENT

1972ರಲ್ಲಿ ವಿಯೆಟ್ನಾಮ್‌ನಲ್ಲಿ ನಡೆಸಲಾದ ಬಾಂಬ್‌ ದಾಳಿಯಿಂದ ಮೈಯೆಲ್ಲ ಬೆಂದು ನಗ್ನವಾಗಿ ಓಡಿಬರುತ್ತಿರುವ ಹುಡುಗಿಯ ಈ ಚಿತ್ರ ತೆಗೆದಿದ್ದು ನಿಕ್‌ ಎಂದು ಖ್ಯಾತರಾಗಿರುವ ಹ್ಯುಂಗ್‌ ಕಾಂಗ್‌ ಉಟ್‌. ಆ ಚಿತ್ರವೇ ಯುದ್ಧಕ್ಕೆ ಪೂರ್ಣವಿರಾಮ ಹಾಕಲು ಕೂಡ ನೆರವಾಯಿತು. ನಿಕ್‌ ಉಟ್‌ನ ಖಾತೆಯಲ್ಲಿದ್ದ ಆ ಚಿತ್ರವನ್ನು ‘ಫೇಸ್‌ಬುಕ್’ ಈಚೆಗೆ ತೆಗೆದು ಹಾಕಿತ್ತು. ಝಕರ್‌ಬರ್ಗ್‌ಗೆ ಸಖತ್ ಛೀಮಾರಿ ಬಿತ್ತು. ನಾರ್ವೆ ಪ್ರಧಾನಿಯೇ ಆ ಫೋಟೊವನ್ನು ತನ್ನ ಪುಟದಲ್ಲಿ ಹಾಕಿ ಪ್ರತಿಭಟಿಸಿದ ನಂತರ ಆ ಚಿತ್ರವನ್ನು ‘ಫೇಸ್‌ಬುಕ್’ ಸ್ವಸ್ಥಾನಕ್ಕೆ ಮರಳಿಸಿದ್ದೂ ಆಯಿತು.

ಅತ್ಮೀಯ ಸಂವಾದ
ಅಮೆರಿಕದಲ್ಲಿ ಪೊಲೀಸರಿಂದ ಪರೇಡ್‌ ಹೊರಟಾಗ ದಾರಿಯಲ್ಲಿ ಎರಡು ವರ್ಷದ ಬಾಲಕನೊಬ್ಬ ನಿಂತಿದ್ದ. ಪೊಲೀಸ್‌ ಅಂಕಲ್‌ವೊಬ್ಬರ ಜತೆ ಆತ ನಡೆಸಿದ ಆತ್ಮೀಯ ಸಂವಾದದ ಈ ಹೃದಯಸ್ಪರ್ಶಿ ಚಿತ್ರ ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಈ ಚಿತ್ರ ತೆಗೆದ ವಿಲಿಯಂ ಬೀಲ್‌ ಅವರಿಗೆ ಪುಲಿಟ್ಸರ್‌ ಪ್ರಶಸ್ತಿಯೂ ಬಂತು.

ನಾಲ್ಕು ಮಕ್ಕಳು ಮಾರಾಟಕ್ಕೆ
ಚಿಕ್ಯಾಗೊದ ಬಡ ಕುಟುಂಬವೊಂದರ ಕರುಣಾಜನಕ ಕಥೆ ಹೇಳುವ ಚಿತ್ರ ಇದು. ತಾವು ವಾಸವಾಗಿದ್ದ ಅಪಾರ್ಟ್‌ಮೆಂಟ್‌ನಿಂದ ಹೊರಬೀಳಬೇಕಾದ ಸನ್ನಿವೇಶ ಎದುರಾದಾಗ ರೇ ಕಾಲಿಫಾಕ್ಸ್‌ ದಂಪತಿಗೆ ನಾಲ್ವರು ಮಕ್ಕಳು. ಆಗ ಲೂಸಿಲ್‌ ಕಾಲಿಫಾಕ್ಸ್‌ ಐದನೇ ಮಗುವಿಗೆ ಎದುರು ನೋಡುತ್ತಿದ್ದ ಬಸುರಿ. ಕಲ್ಲಿದ್ದಲು ಟ್ರಕ್‌ ಡ್ರೈವರ್‌ ಆಗಿದ್ದ ರೇ ಕೆಲಸ ಕಳೆದುಕೊಂಡಿದ್ದರು. ಹಸಿದ ಹೊಟ್ಟೆಗಳನ್ನು ತುಂಬಿಸುವುದು ಸವಾಲಿನ ಕೆಲಸವಾಗಿತ್ತು. ಆಗ ಮಕ್ಕಳನ್ನು ಮಾರಲು ನಿರ್ಧರಿಸಿದ್ದು ಅಮ್ಮನೇ. ‘ನಾಲ್ಕು ಮಕ್ಕಳು ಮಾರಾಟಕ್ಕೆ’ ಎಂಬ ಫಲಕ ಇಟ್ಟು ಮಕ್ಕಳ ಚಿತ್ರ ತೆಗೆಸುವಾಗ ಹಿಂದೆ ಲೂಸಿಲ್‌ ಸಹ ಇದ್ದರು. ಆದರೆ, ನಾಚಿಕೆಯಿಂದ ಮುಖ ಮುಚ್ಚಿಕೊಂಡಿದ್ದರು. ಎರಡು ವರ್ಷಗಳಲ್ಲಿ ಎಲ್ಲ ಮಕ್ಕಳು (ಐದನೇ ಮಗುವೂ ಸೇರಿ) ಮಾರಾಟವಾದರು. ಮರು ವಿವಾಹವಾದ ಲೂಸಿಲ್‌ಗೆ ಮತ್ತೆ ನಾಲ್ಕು ಮಕ್ಕಳಾದರು. ಹಿಂದೆ ಮಾರಾಟ ಮಾಡಿದ್ದ ಮಕ್ಕಳು ಮುಂದೆಂದೋ ತಮ್ಮನ್ನು ಸಂಧಿಸಿದಾಗ ಆಕೆ ಪಶ್ಚಾತ್ತಾಪ ಪಟ್ಟಿದ್ದರಂತೆ.

ಆ ಮಗು ಏನಾಯಿತು?
ಹಸಿವಿನಿಂದ ತತ್ತರಿಸಿ, ಎಲುಬಿನ ಹಂದರವಾಗಿದ್ದ ಸುಡಾನ್‌ನ ಈ ಹೆಣ್ಣು ಮಗುವಿನ ಸಾಯುವ ಕ್ಷಣಕ್ಕಾಗಿ ಹದ್ದೊಂದು ಕಾದಿದ್ದ ಈ ಮನ ಕಲಕುವ ನೋಟವನ್ನು 1993ರ ಮಾರ್ಚ್‌ನಲ್ಲಿ ಸೆರೆ ಹಿಡಿದವರು ದಕ್ಷಿಣ ಆಫ್ರಿಕಾದ ಛಾಯಾಗ್ರಾಹಕ ಕೆವಿನ್‌ ಕಾರ್ಟರ್‌. ಅತ್ಯಂತ ವಿವಾದಾತ್ಮಕ ಛಾಯಾಚಿತ್ರ ಎಂಬ ಹಣೆಪಟ್ಟಿಯೊಂದಿಗೆ ಇತಿಹಾಸದಲ್ಲಿ ದಾಖಲಾದ ಚಿತ್ರ ಇದು.

1993ರ ಮಾರ್ಚ್‌ 26ರಂದು ಮೊದಲ ಬಾರಿಗೆ ಈ ಚಿತ್ರ ‘ನ್ಯೂಯಾರ್ಕ್‌ ಟೈಮ್ಸ್‌’ ಪತ್ರಿಕೆಯಲ್ಲಿ ಪ್ರಕಟವಾದಾಗ ಸಾವಿರಾರು ಓದುಗರು ‘ಕೊನೆಗೆ ಆ ಮಗು ಏನಾಯಿತು’ ಎಂದು ಕಳಕಳಿ ತೋರಿದ್ದರು. ಮಗುವೊಂದು ಸಾವಿನ ದವಡೆಯಲ್ಲಿದ್ದಾಗ ಅದರ ರಕ್ಷಣೆಗೆ ಧಾವಿಸುವುದನ್ನು ಬಿಟ್ಟು, ಚಿತ್ರ ತೆಗೆಯಲು ಹಪಾಹಪಿಸುವ ಮೂಲಕ ಮಾನವೀಯತೆ ಮರೆತ ವ್ಯಕ್ತಿ ಎಂಬ ಟೀಕೆಯೂ ಕಾರ್ಟರ್‌ ವಿರುದ್ಧ ಕೇಳಿಬಂತು. ತೀವ್ರ ಖಿನ್ನತೆಗೆ ಒಳಗಾದ ಕಾರ್ಟರ್‌ ಕೆಲವೇ ತಿಂಗಳುಗಳ ಅಂತರದಲ್ಲಿ ಆತ್ಮಹತ್ಯೆ ಮಾಡಿಕೊಂಡರು.

ಭಿನ್ನ ನೋಟಗಳು 
ನ್ಯೂಯಾರ್ಕ್‌ನ ಸೆಂಟ್ರಲ್‌ ಪಾರ್ಕ್‌ ವೆಸ್ಟ್‌ ಪ್ರದೇಶದಲ್ಲಿ ಸೆರೆ ಹಿಡಿಯಲಾದ ಚಿತ್ರವಿದು. ಕಾಂಕ್ರಿಟ್‌ ಕಾಡು ಮತ್ತು ನೈಸರ್ಗಿಕ ಕಾಡಿನ ಮಧ್ಯೆ ರಸ್ತೆಯೊಂದು ಗೆರೆ ಎಳೆದಂತೆ ಹಾದು ಹೋಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.