ADVERTISEMENT

ಟಾಟಾದಿಂದ ಬರುತ್ತಿದೆ ಅಚ್ಚರಿಯ ನೆಕ್ಸಾನ್‌

ಯತೀಶ್ ಕುಮಾರ್ ಜಿ.ಡಿ
Published 9 ಆಗಸ್ಟ್ 2017, 19:30 IST
Last Updated 9 ಆಗಸ್ಟ್ 2017, 19:30 IST
ಟಾಟಾದಿಂದ ಬರುತ್ತಿದೆ ಅಚ್ಚರಿಯ ನೆಕ್ಸಾನ್‌
ಟಾಟಾದಿಂದ ಬರುತ್ತಿದೆ ಅಚ್ಚರಿಯ ನೆಕ್ಸಾನ್‌   

ವಿಶ್ವವಿಖ್ಯಾತ ಮೈಸೂರು ದಸರಾ ವೇಳೆಗೆ ಟಾಟಾ ಮೋಟಾರ್ಸ್‌ನಿಂದ ಗ್ರಾಹಕರಿಗೆ ಅಚ್ಚರಿ ಕಾದಿದೆ. ಮೂರು ವರ್ಷಗಳಿಂದ ನಿರಂತರವಾಗಿ ಅಭಿವೃದ್ಧಿಪಡಿಸಿದ ಮಿನಿ ಎಸ್‌ಯುವಿ ನೆಕ್ಸಾನ್‌ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.’

ಇದು ಕಂಪೆನಿಯ ಪ್ಯಾಸೆಂಜರ್‌ ಕಾರುಗಳ ವಿಭಾಗದ ಮುಖ್ಯಸ್ಥ ಮಯಾಂಕ್‌ ಪಾರಿಕ್‌ ಹೇಳಿದ ಮಾತು.

ಆಯ್ದ ಪತ್ರಕರ್ತರಿಗೆ ಕೊಚ್ಚಿಯಲ್ಲಿ ಟೆಸ್ಟ್‌ಡ್ರೈವ್‌ ನೀಡುವ ಸಂದರ್ಭದಲ್ಲಿ ಮಾತನಾಡುತ್ತಾ, ಕಂಪೆನಿಯು ಶ್ರಮವಹಿಸಿ ಅಭಿವೃದ್ಧಿಪಡಿಸಿದ ಎಸ್‌ಯುವಿ ಪತ್ರಕರ್ತರಿಗೆ ಇಷ್ಟವಾಗಬಹುದು ಎನ್ನುತ್ತಾ, ಇದನ್ನು ಅಭಿವೃದ್ಧಿಪಡಿಸುವಾಗ ಎದುರಾದ ಸವಾಲುಗಳನ್ನು ನಮ್ಮ ಮುಂದಿಟ್ಟರು.

ADVERTISEMENT

ಭಾರತದ ವಾಹನ ಮಾರುಕಟ್ಟೆಯಲ್ಲಿ ಶೇ 12ರಷ್ಟು ಪುಟ್ಟ ಎಸ್‌ಯುವಿ ಪಾಲಿದೆ. ಐದು ವರ್ಷದ ಹಿಂದೆ ಈ ವರ್ಗವೇ ಇರಲಿಲ್ಲ. ನೆಕ್ಸಾನ್‌ ಮೂಲಕ ಮಾರುಕಟ್ಟೆ ಪಾಲನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನು ಮಾಡಲಿದೆ.

ಮೊದಲ ನೋಟಕ್ಕೇ ಸೆಳೆಯುವಂತೆ ವಿನ್ಯಾಸ ಮಾಡಲಾಗಿದೆ. ಎದ್ದು ಕಾಣುವ ಹೆಡ್‌ಲೈಟ್‌, ಫಾಗ್‌ಲೈಟ್‌, ಗ್ರಿಲ್‌ ಮಧ್ಯದಲ್ಲಿ ಅಂದವಾಗಿ ವಿನ್ಯಾಸ ಮಾಡಿದ ಕಂಪೆನಿಯ ಲೋಗೋ, ಅಗಲ ಮತ್ತು ಎತ್ತರವಾದ 16 ಇಂಚಿನ ಅಲಾಯ್‌ ಚಕ್ರಗಳು, ಹಿಂಬದಿಯಿಂದ ಹಿಗ್ಗಿದ ಎಕ್ಸ್‌ ಆಕಾರದಲ್ಲಿರುವ ಸ್ಟೀಲ್‌ ಗ್ರಿಲ್‌ ಮತ್ತು ಅದರ ಎರಡು ತುದಿಯಲ್ಲಿ ಹಿಂಬದಿಯ ಲೈಟ್‌ಗಳನ್ನು ಅಳವಡಿಸಲಾಗಿದೆ. ಎಕ್ಸ್‌ ಗ್ರಿಲ್‌ಗಳು ರಸ್ತೆಯಲ್ಲಿ ವಾಹನಕ್ಕೆ ಮೆರುಗು ನೀಡುತ್ತವೆ.

1.2 ಲೀಟರ್‌ನ 117 ಟಾರ್ಕ್‌ ಇರುವ ಟರ್ಬೋ ಚಾರ್ಜ್‌ ಪೆಟ್ರೋಲ್‌ ಎಂಜಿನ್‌ ಮತ್ತು 1.5 ಲೀಟರ್‌ನ 260 ಟಾರ್ಕ್‌ ಶಕ್ತಿ ನೀಡುವ ಹೊಸ ರೆವೊಟ್ರಾನ್‌ ಡೀಸೆಲ್‌ ಎಂಜಿನ್‌ ವಾಹನದಲ್ಲಿದೆ. ಎರಡು ಬಗೆಯ ವಾಹನದಲ್ಲೂ ಇಕೊ, ಸಿಟಿ ಮತ್ತು ಸ್ಪೋರ್ಟ್ಸ್ ಆಯ್ಕೆ ಮತ್ತು ಆರು ಗೇರ್‌ಗಳನ್ನು ಅಳವಡಿಸಲಾಗಿದೆ.

ಒಳಾಂಗಣ ವಿನ್ಯಾಸದಲ್ಲೂ ಟಾಟಾ ಸಿಬ್ಬಂದಿ ಅಚ್ಚರಿ ಮೂಡಿಸುವ ಮಟ್ಟಿಗೆ ತನ್ಮಯತೆಯನ್ನು ತೋರಿಸಿದ್ದಾರೆ. 32 ಉಪಯುಕ್ತ ಜಾಗಗಳನ್ನು ಸೃಷ್ಟಿ ಮಾಡಲಾಗಿದೆ. ಮಳೆಗಾಲದಲ್ಲಿ ಛತ್ರಿ ಇಡುವುದಕ್ಕೂ ಬಾಗಿಲ ಸಂದಿಯಲ್ಲಿ ಜಾಗ ಮಾಡಿದ್ದಾರೆ. ಗೇರ್‌ ಮತ್ತು ಸೀಟಿನ ಮಧ್ಯದ ಜಾಗವನ್ನು ನೀರಿನ ಬಾಟಲಿ ಮತ್ತು ಫೋನ್‌ ಇರಿಸಲು ಅಂದವಾಗಿ ವಿನ್ಯಾಸ ಮಾಡಲಾಗಿದೆ. ಡ್ಯಾಶ್‌ಬೋರ್ಡ್‌ನಲ್ಲಿ ಲ್ಯಾಪ್‌ಟಾಪ್‌ ಇರಿಸಲು ಹಾಗೂ ನೀರನ್ನು ತಂಪಾಗಿಸಲು ವ್ಯವಸ್ಥೆ ಮಾಡಲಾಗಿದೆ. ಮುಖ್ಯವಾಗಿ ಗುಣಮಟ್ಟದ ಪ್ಲಾಸ್ಟಿಕ್‌ ಬಳಸಲಾಗಿದೆ.

ಸಾಮಾನ್ಯವಾಗಿ ಡ್ಯಾಶ್‌ಬೋರ್ಡ್‌ನ ಮಧ್ಯದಲ್ಲಿ ಇರುವ ಇನ್ಫೋ ಸ್ಕ್ರೀನ್‌ ಅನ್ನು ಮೇಲ್ಭಾಗಕ್ಕೆ ಸ್ಥಳಾಂತರಿಸಲಾಗಿದೆ. ಇದು ಡ್ರೈವ್‌ ಮಾಡುವಾಗ ಕಣ್ಣಿಗೆ ಕಷ್ಟವನ್ನು ನೀಡುವುದಿಲ್ಲ. ಎಲೆಕ್ಟ್ರಿಕ್‌ ಪವರ್‌ ಸ್ಟೀರಿಂಗ್‌ ಬಹಳ ಹಗುರವಾಗಿದ್ದು, ವಾಹನ ಓಡಿಸುವಾಗ ಹೊಸ ಅನುಭವವನ್ನೇ ನೀಡುತ್ತದೆ. ಕೊಚ್ಚಿಯಿಂದ ಗಿರಿಧಾಮವಾದ ಇಡುಕ್ಕಿವರೆಗಿನ ಅಂಕುಡೊಂಕಿನ ವಾಹನ ದಟ್ಟಣೆಯ ರಸ್ತೆಗಳಲ್ಲೂ ಸುಲಭವಾಗಿ ಚಾಲನೆ ಮಾಡಿದೆ. ಪವರ್‌ ಸ್ಟ್ರೀರಿಂಗ್‌ನಿಂದ ಸಂದಿಗಳಲ್ಲೂ ಆರಾಮವಾಗಿ ಚಾಲನೆ ಮಾಡಬಹುದು.

ಆರು ಗೇರ್‌ಗಳಿಂದ ಆಯಾ ವೇಗಕ್ಕೆ ಅಗತ್ಯ ಶಕ್ತಿ ದೊರಕಿದರೂ ಎರಡನೇ ಗೇರ್‌ನಲ್ಲಿ ಪಿಕ್‌ಅಪ್‌ ಸ್ವಲ್ಪ ಕಡಿಮೆ. ಈ ಸಮಸ್ಯೆ ಡೀಸೆಲ್‌ ವಾಹನಕ್ಕಿಂತ ಪೆಟ್ರೋಲ್‌ ವಾಹನದಲ್ಲಿ ಹೆಚ್ಚು ಅನುಭವಕ್ಕೆ ಬರುತ್ತದೆ.

ಎರಡು ಏರ್‌ಬ್ಯಾಗ್‌, ರಿವರ್ಸ್ ಕ್ಯಾಮೆರಾ, ಕ್ಲೈಮೇಟ್‌ ಕಂಟ್ರೋಲ್‌ ಏರ್‌ಕಂಡೀಷನ್‌, ಹಿಂಬದಿ ಪ್ರಯಾಣಿಕರಿಗೂ ಏರ್‌ಕಂಡೀಷನ್‌, ಯಾಂತ್ರಿಕೃತ ಸೈಡ್‌ ಮಿರರ್‌, 6.5 ಇಂಚಿನ ಹರ್ಮನ್‌ ಕಂಪೆನಿಯ ಇನ್ಫೊಟೇನ್‌ಮೆಂಟ್‌ ವ್ಯವಸ್ಥೆಯನ್ನು ಕಾರಿನಲ್ಲಿ ಅಳವಡಿಸಲಾಗಿದೆ. ಇಷ್ಟೊಂದು ವ್ಯವಸ್ಥೆಯನ್ನು ಟಾಟಾ ಇದೇ ಮೊದಲ ಬಾರಿಗೆ ಗ್ರಾಹಕರಿಗಾಗಿ ನೀಡುತ್ತಿದೆ.

ಟಿಯಾಗೋ ಎಕ್ಸ್‌–1 ಪ್ಲಾಟ್‌ಫಾರಂ ಮೇಲೆ ಅಭಿವೃದ್ಧಿಪಡಿಸಿದ ನೆಕ್ಸಾನ್‌ನಲ್ಲಿ ತನ್ನದೇ ಆದ ಐಶಾರಾಮಿ ವಾಹನ ಜಾಗ್ವಾರ್‌ ಮತ್ತು ಲ್ಯಾಂಡ್‌ರೋವರ್‌ನ ಅನೇಕ ತಂತ್ರಜ್ಞಾನವನ್ನು ಬಳಸಿದೆ. ಮುಂದೆ ಮಾರುಕಟ್ಟೆ ಪ್ರವೇಶಿಸುವ ಹೊಸ ವಾಹನಗಳಲ್ಲೂ ಆಧುನಿಕ ತಂತ್ರಜ್ಞಾನ ಬಳಸುತ್ತೇವೆ ಎಂದು ಪಾರಿಕ್ ಹೇಳಿದರು. ಆದರೆ ಹೊಸ ವಾಹನಗಳ ಬಗ್ಗೆ ಯಾವುದೇ ಗುಟ್ಟನ್ನು ಬಿಡಲಿಲ್ಲ.

ಪೆಟ್ರೋಲ್‌ ಮತ್ತು ಡೀಸೆಲ್‌ ವಾಹನಗಳಲ್ಲಿ ಆಟೋ ಗೇರ್‌ ಬಿಡುಗಡೆ ಮಾಡುವುದಿಲ್ಲ. ಮಾರುಕಟ್ಟೆ ಬೇಡಿಕೆಯನ್ನು ಆಧರಿಸಿ ತೀರ್ಮಾನ ತೆಗೆದುಕೊಳ್ಳುವ ತಂತ್ರವನ್ನು ಟಾಟಾ ಅನುಸರಿಸಲಿದೆ. ಭಾರತದ ಮಾರುಕಟ್ಟೆಯ ಮೇಲೆ ಕಣ್ಣಿಟ್ಟಿರುವ ಕಂಪೆನಿ ಮುಂದಿನ ದಿನಗಳಲ್ಲಿ ರಫ್ತು ಅವಕಾಶವನ್ನು ಕಾದಿರಿಸಿದೆ. ಬೆಲೆ ಮತ್ತು ಬಿಡುಗಡೆಯ ನಿಗದಿತ ದಿನಾಂಕ ನಿಗದಿಯಾಗಿಲ್ಲ. ವಿನ್ಯಾಸ, ಬಳಸಿರುವ ತಂತ್ರಜ್ಞಾನವನ್ನು ಗಮನಿಸಿದರೆ ನೆಕ್ಸಾನ್‌ ನವ ಶ್ರೀಮಂತ ಯುವಕರನ್ನು ಸೆಳೆಯುವ ಸಾಧ್ಯತೆಯಿದೆ.
⇒(ಚಿತ್ರ ಲೇಖಕರದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.