ADVERTISEMENT

ಡ್ಯಾಶಿಂಗ್‌ ಡ್ಯೂಕ್‌250

ರಾಕೇಶ ವಿ.ತಾಳಿಕೋಟಿ
Published 8 ಮಾರ್ಚ್ 2017, 19:30 IST
Last Updated 8 ಮಾರ್ಚ್ 2017, 19:30 IST
ಡ್ಯಾಶಿಂಗ್‌ ಡ್ಯೂಕ್‌250
ಡ್ಯಾಶಿಂಗ್‌ ಡ್ಯೂಕ್‌250   

‘ಹೊಸ ವರ್ಷಕ್ಕೆ ಹೊಸ ರೂಪದಲ್ಲಿ ಭಾರತಕ್ಕೆ ಬರಲಿದ್ದೇವೆ’ ಎಂದು ಕೆಟಿಎಮ್‌  ಕಂಪೆನಿ ಘೋಷಿಸಿತ್ತು. ಆ ಮಾತಿನಂತೆಯೇ ಇದೇ ಫೆಬ್ರುವರಿ 23 ರಂದು ಭಾರತದಲ್ಲಿ ಬೈಕ್‌ ಬಿಡುಗಡೆಗೊಳಿಸಿ, ಹೊಸ ಕೆಟಿಎಮ್‌ 250ಸಿಸಿ ಸೆಗ್ಮೆಂಟ್‌ ಬೈಕ್‌ ಅನ್ನು  ಮಾರುಕಟ್ಟೆಗೆ ಪರಿಚಯಿಸಿದೆ.

ಹೊಸತನಗಳ ಅಳವಡಿಕೆಯೊಂದಿಗೆ ಅಂತರರಾಷ್ಟ್ರೀಯ ವಿನ್ಯಾಸಗಳ ಮೂಲಕ ರೇಸಿಂಗ್‌ ಪ್ರಿಯರ ಅಚ್ಚುಮೆಚ್ಚಿನ ವಾಹನವಾಗಿರುವ ಡ್ಯೂಕ್, ಡ್ಯೂಕ್‌ 200 ಮತ್ತು ಡ್ಯೂಕ್‌ 390 ಮಾದರಿಗಳ ಮೂಲಕ ಭಾರತದಲ್ಲಿ ಸದ್ದು ಮಾಡಿತ್ತು. ಕಂಪೆನಿ ಇದೀಗ 250ಸಿಸಿ ಪವರ್‌ನ ನೆಕೆಡ್‌ ಬೈಕ್‌ ಹೊರತಂದಿದೆ.

ಇದೇ ಮೇ ಅಥವಾ ಜೂನ್‌ ತಿಂಗಳಲ್ಲಿ ಈ ಬೈಕ್‌ ಪರಿಚಯಿಸುವ ಚಿಂತನೆಯಲ್ಲಿದ್ದ ಕೆಟಿಎಮ್‌ ಬಳಗ, ಕಳೆದ ತಿಂಗಳು ಯಮಾಹಾ ಬಿಡುಗಡೆಗೊಳಿಸಿದ ಎಫ್‌ಝಡ್‌250 ಬೈಕಿಗೆ ಭಾರತದ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದ್ದನ್ನು ಮನಗಂಡು, ಇದೀಗ ಸದ್ದು ಮಾಡದೆ ಮೂರು ತಿಂಗಳು ಮೊದಲೇ ಮಾರುಕಟ್ಟೆ ಪ್ರವೇಶಿಸಿದೆ.

ಡ್ಯೂಕ್‌ 250 ವಿನ್ಯಾಸ
ದುಬಾರಿ ಆರ್‌ 1 ಮತ್ತು ಆರ್‌ 6 ಸ್ಪೋರ್ಟ್ಸ್ ಬೈಕ್‌ಗಳ ಮೂಲರೂಪವನ್ನು ಡ್ಯೂಕ್‌ ಭಾಗಶಃ ಉಳಿಸಿಕೊಂಡಿದೆ. ಜತೆಗೆ ಭಾರತದ ರಸ್ತೆಗಳಿಗೆ ತಕ್ಕಂತೆ ಕೆಲವೊಂದು ಸಣ್ಣಪುಟ್ಟ ಬದಲಾವಣೆಗಳನ್ನು ಮಾಡುವ ಮೂಲಕ ಡ್ಯೂಕ್‌ 250 ಹೊರತಂದಿದೆ. ಗಾಳಿಯನ್ನು ಸೀಳಿ ಸರಾಗವಾಗಿ ಮುನ್ನುಗ್ಗಲು ಮುಂಬದಿಯ ವಿನ್ಯಾಸದಲ್ಲಿ ಸ್ವಲ್ಪ ಮಟ್ಟಿನ ಬದಲಾವಣೆ ಮಾಡಲಾಗಿದೆ (ಶಾರ್ಪ್‌ ಎಡ್ಜ್‌ ಹೆಡ್‌ಲ್ಯಾಂಪ್‌).

ಬೈಕ್‌ ವಿಶೇಷತೆಗಳು: 248.8 ಸಿಸಿ ಎಂಜಿನ್‌, ಸಿಂಗಲ್‌ ಸಿಲಿಂಡರ್‌ ವಾಟರ್‌ ಕೂಲ್ಡ್‌ ಎಂಜಿನ್‌, 31 ಬಿಎಚ್‌ಪಿ ಸಾಮರ್ಥ್ಯ, 9 ಸಾವಿರ ಆರ್‌ಪಿಎಂ (ನಿಮಿಷದ ರೊಟೇಷನ್‌), 24 ಎನ್‌ಎಮ್‌ ಟಾರ್ಕ್‌, 6 ಸ್ಪೀಡ್‌ ಗೇರ್‌ಬಾಕ್ಸ್‌, ಕ್ಲಚ್‌ (ಸ್ಲಿಪ್ಪರ್‌ ಕ್ಲಚ್‌) ಗೆ ಬಳಕೆ ಮಾಡಿರುವ ತಂತ್ರಜ್ಞಾನ ಎಂಜಿನ್ ಮೇಲೆ ಒತ್ತಡ ಕಡಿಮೆಗೊಳಿಸುತ್ತದೆ, ನೇರ ರಸ್ತೆಗಳಲ್ಲಿ 150 ಕಿ.ಮೀ. ವೇಗ ತಲುಪಬಹುದು.

ಯುರೋ–4 ಎಮಿಷನ್‌ ನಾರ್ಮ್ಸ್‌ ಸಹಿತ ಅಗಲವಾದ ಮೊನೊಶಾಕ್ಸ್‌ ಮತ್ತು ಡಬ್ಲ್ಯೂಪಿ ಅಪ್‌ಸೈಡ್‌ ಡೌನ್‌ ಶಾಕ್ಸ್‌ ಮುಂಭಾಗದಲ್ಲಿ, 330 ಎಂಎಂ ಡಿಸ್ಕ್‌ ಬ್ರೆಕ್‌ ಹಿಂಭಾಗ (2 ಪಿಸ್ಟನ್‌ ಸಹಿತ) ಮತ್ತು 300 ಎಂಎಂ ಅಗಲದ ಡಿಸ್ಕ್‌ ಮುಂಭಾಗ (4 ಪಿಸ್ಟನ್‌ ಸಮೇತ), ಹ್ಯಾಲೊಜೆನ್‌ ಹೆಡ್‌ಲ್ಯಾಂಪ್‌, ಎರಡು ವಿಧದ ಎಬಿಎಸ್‌ (ಆ್ಯಂಟಿ ಲಾಕ್‌ ಬ್ರೇಕಿಂಗ್‌ ಸಿಸ್ಟಮ್‌). ಬೈಕು ಶರವೇಗದಲ್ಲಿ ಮುನ್ನುಗ್ಗುತ್ತಿದ್ದರು 5–6 ಸೆಕೆಂಡುಗಳಲ್ಲಿ ನಿಯಂತ್ರಣಕ್ಕೆ ತರಬಹುದು. ಈ ಬೈಕಿನಲ್ಲಿರುವ ಹಲವು ಹೊಸತನಗಳನ್ನು 2010ರ ದಶಕದ ದುಬಾರಿ ಬೈಕುಗಳಲ್ಲಿ ಕಾಣಬಹುದಾಗಿತ್ತು.

ಇವುಗಳನ್ನು ಹೊರತುಪಡಿಸಿ ಬೈಕಿನ ಬಾಹ್ಯವಿನ್ಯಾಸದಲ್ಲಿ ಮೊನಚಾದ (ಶಾರ್ಪ್ ಎಡ್ಜ್) ಫಿನಿಶಿಂಗ್‌ಗಳ ಮೂಲಕ ಆಕರ್ಷಿಸುವಲ್ಲಿ ಎರಡು ಮಾತಿಲ್ಲ. ಬೈಕಿನ ಮೈಲೇಜ್‌ ಕುರಿತು ಕಂಪೆನಿಯು ಯಾವುದೇ ಮಾಹಿತಿ ಹೊರಹಾಕಿಲ್ಲ. ಆದಾಗ್ಯೂ ಕೆಟಿಎಮ್‌ 200 ಮತ್ತು 390 ಬೈಕುಗಳಿಗೆ ಹೋಲಿಸಿದರೆ, ಲೀಟರಿಗೆ 35ಕಿಲೋ ಮೀಟರ್‌ ಮೈಲೇಜಿಗೆ ಮೋಸವಿಲ್ಲ ಎಂಬ ಅಭಿಪ್ರಾಯ ಕೇಳಿಬಂದಿದೆ.

ಆದರೆ, ಸ್ಪರ್ಧೆಯಲ್ಲಿರುವ ಕೆಲವು ಬೈಕ್‌ಗಳನ್ನು ಹೋಲಿಸಿದರೆ, ಬೆಲೆ ತುಸು ಹೆಚ್ಚೇ ಎನ್ನಬಹುದು. ಉದಾಹರಣೆಗೆ, ಕಳೆದ ತಿಂಗಳು ಬಿಡುಗಡೆಗೊಂಡಿರುವ ಎಫ್‌ಝಡ್‌25ನ ಬೆಲೆ ₹1.30 ಲಕ್ಷಕ್ಕೆ ನಿಗದಿಯಾಗಿದೆ. ಈ ಹೋಲಿಕೆಯಲ್ಲಿ ಕೆಟಿಎಮ್ ಬೆಲೆ ₹1.73 ಲಕ್ಷ ಇರಿಸಿರುವುದು ತುಸು ಹೆಚ್ಚು ಎಂದು ಅಂದಾಜಿಸಲಾಗಿದೆ.

ಡ್ಯೂಕ್‌ 250ಸಿಸಿ ಬೈಕಿನ ಜತೆಗೆ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಡ್ಯೂಕ್‌ 200 ಮತ್ತು ಡ್ಯೂಕ್‌ 390 ಮಾದರಿಗಳನ್ನು ನವರೂಪದಲ್ಲಿ ಬಿಡುಗಡೆ ಮಾಡಿದೆ.

ಬೆಲೆ ಮತ್ತು ಗ್ರಾಹಕರ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಕೆಟಿಎಮ್‌ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಇತ್ತೀಚೆಗೆ ನಡೆದ ಬೈಕ್‌ ಬಿಡುಗಡೆ ಸಮಾರಂಭದಲ್ಲಿ ಮಾರುಕಟ್ಟೆ ವಿಭಾಗದ ಅಧಿಕಾರಿಗಳು ಹೇಳಿದ್ದಾರೆ.

ಕೆಟಿಎಮ್‌ ಡ್ಯೂಕ್‌ 390 ಬೆಲೆ ₹ 2,25,166 ಮತ್ತು ಡ್ಯೂಕ್‌ 200 ಬೆಲೆ ₹1,56,775 (ಎಕ್ಸ್‌ ಶೋರೂಂ ಬೆಲೆ, ದೆಹಲಿ) ನಿಗದಿಗೊಳಿಸಲಾಗಿದೆ. ಹೊಸ ಗ್ರಾಫಿಕ್ಸ್‌ ಮತ್ತು ಲುಕ್‌ನಿಂದಾಗಿ ಇವು ಯುವಕರನ್ನು ಸೆಳೆಯಲಿವೆ.

200, 250, 390 ಸಿಸಿ ಬೈಕುಗಳನ್ನು ನವರೂಪದಲ್ಲಿ ಕಂಪೆನಿ ಹೊರತಂದಿದೆ. ಬೈಕು ಖರೀದಿಸಲು ಆಗಮಿಸುವವರಿಗೆ ಅವರವರ ಅನುಕೂಲಕ್ಕೆ ತಕ್ಕಂತೆ ಆಯ್ಕೆ ಮಾಡಲು ಸಹಾಯವಾಗಲಿದೆ.

ಅಂತರರಾಷ್ಟ್ರೀಯ ಆಟೋಮೊಬೈಲ್ಸ್‌ ಮಾರುಕಟ್ಟೆಯಲ್ಲಿ ಪ್ರಗತಿ ಸಾಧಿಸಿರುವ ದಕ್ಷಿಣ ಅಮೆರಿಕ, ಏಷ್ಯಾ, ಯುಎಇ (ಯುನೈಟೆಡ್‌ ಅರಬ್‌ ಎಮಿರೇಟ್ಸ್‌), ಜಪಾನ್‌ಗಳಲ್ಲಿ 2017ರ ಹೊಸ ಸರಣಿಯ ಬೈಕುಗಳ ಕುರಿತು ಕೆಟಿಎಮ್‌ ವ್ಯಾಪಕ ಪ್ರಚಾರ ಮಾಡಿತ್ತು. ಬಿಎಂಡಬ್ಲೂ ಜಿ 310 ಆರ್‌, ಬೆನೆಲ್ಲಿ ಟಿಎನ್‌ಟಿ 300, ಮಹಿಂದ್ರಾ ಮೊಜೊ, ಯಮಾಹಾ ಎಫ್‌ಝಡ್‌25 ಬೈಕುಗಳಿಗೆ ಭಾರತದಲ್ಲಿ ನೇರ ಸ್ಪರ್ಧೆ ನೀಡಲು ಕೆಟಿಎಮ್‌ ಸಿದ್ಧವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.