ADVERTISEMENT

ದೂಳೆಬ್ಬಿಸಿದ ಬಿಎಂಡಬ್ಲು

ಯತೀಶ್ ಕುಮಾರ್ ಜಿ.ಡಿ
Published 29 ಅಕ್ಟೋಬರ್ 2014, 19:30 IST
Last Updated 29 ಅಕ್ಟೋಬರ್ 2014, 19:30 IST

ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆಯ ಅಂಚಿನ ಜಾಲ ಹೋಬಳಿಯ ಎಂಬಸಿ ಇಂಟರ್‌ನ್ಯಾಷನಲ್‌ ರೈಡಿಂಗ್‌ ಸ್ಕೂಲ್‌ನ ಮೈದಾನದಲ್ಲಿ ಬಿಎಂಡಬ್ಲು ಎಂಜಿನ್‌ ಗುಯ್‌ಗುಡುತ್ತಿತ್ತು. ಸೆಡಾನ್‌ಗಳು ಮೈದಾನದಲ್ಲಿ ದೂಳು ಎಬ್ಬಿಸುತ್ತಾ ಇಂಧನ ದಹಿಸುತ್ತಿದ್ದರೆ, ಕ್ರೀಡಾ ಉದ್ದೇಶದ ವಾಹನ (ಎಸ್‌ಎವಿ)ಗಳು ಬೆಟ್ಟ ಗುಡ್ಡ ಏರುವ ತನ್ನ ತಾಕತ್ತನ್ನು ಪ್ರದರ್ಶಿಸುತ್ತಿದ್ದವು.

ಇದೇ ಕಂಪೆನಿಗೆ ಸೇರಿದ ಮಿನಿ ಕಾರುಗಳ ಸಾಮರ್ಥ್ಯವನ್ನು ಸಹ ಗ್ರಾಹಕರಿಗೆ ಪರಿಚಯಿಸುವ ಉದ್ದೇಶದಿಂದ ದೇಶದ ವಿವಿಧ ಭಾಗಗಳಲ್ಲಿ ಕಾರ್ಯಕ್ರಮ ನಡೆದು, ಬೆಂಗಳೂರಿನ ಗ್ರಾಹಕರತ್ತ ಕಂಪೆನಿಯ ಚಿತ್ತ ಹರಿದಿತ್ತು. ಈ ಸಂದರ್ಭದಲ್ಲಿ ಎಸ್‌ಎವಿ ಮತ್ತು ಸೆಡಾನ್‌ ಚಾಲನೆ ಮಾಡುವ ಅವಕಾಶವನ್ನು ಕೆಲ ಪತ್ರಕರ್ತರಿಗೆ ನೀಡಲಾಗಿತ್ತು.

ಐಶಾರಾಮಿ ರೋಲ್ಸ್‌ರಾಯ್‌ ಸೇರಿದಂತೆ ಮೂರು ಬ್ರ್ಯಾಂಡ್‌ಗಳ ತಯಾರಿಕೆಯನ್ನು ಬಿಎಂಡಬ್ಲು ಸಮೂಹ ಮಾಡುತ್ತಿದೆ. ಚೆನ್ನೈನಲ್ಲಿ ಉತ್ಪಾದನಾ ಕೇಂದ್ರಕ್ಕೆ ಸಂಸ್ಥೆಯು 3.9 ದಶಲಕ್ಷ ರೂಪಾಯಿ ಬಂಡವಾಳ ತೊಡಗಿಸಿದೆ. ಇದರಲ್ಲಿ ಬಿಎಂಡಬ್ಲು 1 ಮತ್ತು 3 ಸಿರೀಸ್‌, 3 ಸಿರೀಸ್ ಗ್ರಾನ್‌ ಟುರಿಸ್ಮೊ, 5 ಮತ್ತು 7 ಸಿರೀಸ್‌, ಬಿಎಂಡಬ್ಲು ಎಕ್ಸ್‌ 1, ಎಕ್ಸ್‌ 3 ಮತ್ತು ಎಕ್ಸ್‌ 5 ಉತ್ಪಾದಿಸುತ್ತಿದೆ.

ಭಾರತದ ಮಾರುಕಟ್ಟೆಯಿಂದ  ಬರುತ್ತಿರುವ ಉತ್ತಮ ಸ್ಪಂದನೆಯಿಂದ ಉತ್ತೇಜಿತರಾಗಿ ಇದೇ ವರ್ಷದಲ್ಲಿ ಐ8 ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ. ಮಾರಾಟಕ್ಕೆ ಮತ್ತಷ್ಟು ಚೇತರಿಕೆ ನೀಡಲು ಈಗಾಗಲೇ 12 ಕಡೆ ಈ ರೀತಿಯ ಕಾರ್ಯಕ್ರಮ ನಡೆಸಲಾಗಿತ್ತು ಎಂದು ಕಂಪೆನಿಯ ಭಾರತದ ಅಧ್ಯಕ್ಷ ಫಿಲಿಪ್‌ ವೋನ್‌ ಸಹರ್‌ ತಿಳಿಸಿದರು.

ಬಿಎಂಡಬ್ಲು ವಾಹನಗಳು ಗಟ್ಟಿಮುಟ್ಟು, ಅತ್ಯುತ್ತಮ ಎಂಜಿನ್‌, ತಂತ್ರಜ್ಞಾನ, ಬ್ರೇಕಿಂಗ್‌ಗೆ ಹೆಸರುವಾಸಿ. ವೇಗವಾಗಿ ಚಲಿಸುವಾಗ ಬ್ರೇಕ್‌ ಹಾಕಿದರೂ ಕಿಂಚಿತ್ತು ಅಲ್ಲಾಡದು. 7 ಸಿರೀಸ್‌ ವಾಹನಗಳಲ್ಲಿ ತಂತ್ರಜ್ಞಾನ ಮೇಲ್ದರ್ಜೆಯಲ್ಲಿದೆ. ಹೆದ್ದಾರಿಯಲ್ಲಿ ಕಣ್ಣುಕುಕ್ಕುವ ಪ್ರಖರ ಬೆಳಕನ್ನು ಹಾಕಿದ್ದರೂ ಎದುರಿನಿಂದ ವಾಹನ ಬಂದಾಗ ಬೆಳಕಿನ ಪ್ರಖರತೆ ಕಡಿಮೆಯಾಗುವ ಸೆನ್ಸರ್‌ ಅಳವಡಿಸಲಾಗಿದೆ. ಎಸ್‌ಎವಿ ಮತ್ತು ಸೆಡಾನ್‌ ಈ ಎರಡೂ ಶ್ರೇಣಿಗಳಲ್ಲಿ   ಸ್ವಯಂಚಾಲಿತ ಗೇರ್‌ ವ್ಯವಸ್ಥೆ ಯಿದೆ. ಇದರಿಂದಾಗಿ ವಾಹನ ಚಾಲನೆ ಅತ್ಯಂತ ಸುಲಭ.

ಬಿಎಂಡಬ್ಲುನ ‘ಆಲ್‌ ವೀಲ್‌ ಡ್ರೈವ್‌’ ವಾಹನಗಳಲ್ಲಿ ಎಲ್ಲಾ ಚಕ್ರಗಳಿಗೂ ಎಂಜಿನ್‌ನ ಶಕ್ತಿ ಸಮನಾಗಿ ಪೂರೈಕೆಯಾಗುತ್ತದೆ. ಈ ಸೌಲಭ್ಯ ಇದರ ಪ್ರತಿಸ್ಪರ್ಧಿಯಾದ ಆಡಿ ಎಸ್‌ಯುವಿಗಳಲ್ಲಿಯೂ ಇದೆ. ಜೌಗು ನೆಲದಲ್ಲಿ ಹೋಗುವಾಗ ಚಕ್ರ ನೆಲಕ್ಕೆ ಕಚ್ಚಿಕೊಂಡರೆ ಆ ಚಕ್ರಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುವ ತಂತ್ರಜ್ಞಾನವಿದೆ.  ಒಂದು ಚಕ್ರ ಹಳ್ಳದಲ್ಲಿದ್ದು, ಮತ್ತೊಂದು ಚಕ್ರ ಗಾಳಿಯಲ್ಲಿದ್ದರೆ, ಹಳ್ಳದಲ್ಲಿರುವ ಚಕ್ರಕ್ಕೆ ಬೇಕಾದ ಚಾಲನಾ ಶಕ್ತಿಯನ್ನು ನೀಡುತ್ತದೆ.

ಎಸ್‌ಎವಿಗಳ ಮುನ್ನುಗ್ಗುವ ಶಕ್ತಿ, ಏರುವ ತಾಕತ್ತು, ಎಡ ಅಥವಾ ಬಲ ಬದಿಯ ಎರಡು ಚಕ್ರಗಳು 60 ಡಿಗ್ರಿ ಕೋನದಲ್ಲಿದ್ದರೂ ವಾಹನ ಮಗುಚುವುದಿಲ್ಲ. ವಾಹನದ ಎತ್ತರ ಕಡಿಮೆಯಿದ್ದು, ಎಂಜಿನ್‌ ಭಾರ ಭೂಮಿಗೆ ಹತ್ತಿರವಿದ್ದರೆ ವಾಹನ ಮಗುಚದು. ಇದೇ ಸೌಲಭ್ಯ ಆಡಿ ಎಸ್‌ಯುವಿಗಳಲ್ಲಿಯೂ ಇದೆ.

ಮಾರಾಟಕ್ಕೆ ಭಾರತದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತ ಹಿನ್ನೆಲೆಯಲ್ಲಿ 2015ರೊಳಗೆ ಹೊಸದಾಗಿ 50 ಮಾರಾಟ ಕೇಂದ್ರವನ್ನು ಕಂಪೆನಿ ಆರಂಭಿಸಲಿದೆ.

ಹೆಚ್ಚಿನ ಸೌಲಭ್ಯ ಬೇಕು ಎಂದರೆ ಹಾಗೇ ಹಣ ನೀಡಬೇಕು. ಐಶಾರಾಮಿ ವರ್ಗಕ್ಕೆ ಸೇರುವ ಈ ಕಾರುಗಳ ಬೆಲೆ ₨ 22 ಲಕ್ಷ ದಿಂದ ಆರಂಭಿಸಿ ₨ 1.75 ಕೋಟಿವರೆಗೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT