ADVERTISEMENT

ನಮ್ಮ ಗಾಂಧಿಯನ್ನು ಶೋಧಿಸೋಣ

ಬೆಳದಿಂಗಳು

ಸೃಜನಾನಂದ
Published 1 ಅಕ್ಟೋಬರ್ 2014, 19:30 IST
Last Updated 1 ಅಕ್ಟೋಬರ್ 2014, 19:30 IST

ಡರ್ಬಾನಿನ ರೈಲು ನಿಲ್ದಾಣದಲ್ಲಿ ಮೊದಲ ದರ್ಜೆ ಬೋಗಿಯಿಂದ ಪ್ಲಾಟ್ ಫಾರ್ಮ್‌ಗೆ ತಳ್ಳಿಸಿಕೊಂಡ ಯುವ ವಕೀಲ ವಿಧಿಯನ್ನು ಹಳಿದುಕೊಂಡು ಸುಮ್ಮನಿದ್ದಿದ್ದರೆ ಇತಿಹಾಸದ ಗತಿಯೇ ಬದಲಾಗಿಬಿಡುತ್ತಿತ್ತು. ಮೋಹನ್ ದಾಸ್ ಕರಮ್‌ಚಂದ್ ಗಾಂಧಿ ಎಂಬ ಆ ಯುವ ವಕೀಲ ದೂಳು ಕೊಡವಿಕೊಂಡು ಎದ್ದು ನಿಂತದ್ದರಿಂದ ಏನಾಯಿತು ಎಂಬುದನ್ನು ನಾವೆಲ್ಲಾ ಕಂಡಿದ್ದೇವೆ. ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ ವಿರೋಧಿ ಹೋರಾಟ, ಭಾರತದ ಸ್ವಾತಂತ್ರ್ಯ ಸಂಗ್ರಾಮ, ಅಮೆರಿಕದ ಕರಿಯ ಜನಾಂಗದವರ ಹೋರಾಟ ಹೀಗೆ ಎಷ್ಟೆಲ್ಲಾ ಹೋರಾಟಗಳಿಗೆ ಗಾಂಧೀ ಮಾರ್ಗ ಬಳಕೆಯಾಯಿತು ಎಂಬುದೀಗ ಇತಿಹಾಸ.

ಗಾಂಧಿ ಮಾರ್ಗ ಎಂದಾಕ್ಷಣ ಅದೊಂದು ಅಷ್ಟೇನೂ ಪರಿಣಾಮಕಾರಿಯಲ್ಲದ, ಬಹಳ ನಿಧಾನವಾಗಿ ಫಲಿತಾಂಶ ಪಡೆಯಬಹುದಾದ, ಹಾಗೆಯೇ ಸಾಕಷ್ಟು ‘ವೀರ’ವಲ್ಲದ ಮಾರ್ಗ ಎಂದು ಭಾವಿಸಲಾಗುತ್ತದೆ. ವಾಸ್ತವದಲ್ಲಿ ಅತಿ ಹೆಚ್ಚಿನ ಧೈರ್ಯ ಬೇಕಾದದ್ದೇ ಗಾಂಧೀ ಮಾರ್ಗಕ್ಕೆ. ದಂಡಿ ಸತ್ಯಾಗ್ರಹದ ಸಂದರ್ಭದಲ್ಲಿ ಬ್ರಿಟಿಷ್ ಪೊಲೀಸರ ಪೆಟ್ಟಿಗೆ ಒಬ್ಬೊಬ್ಬ ಸತ್ಯಾಗ್ರಹಿ ಕೆಳಗುರುಳುತ್ತಾ ಹೋದಂತೆ ಹೋರಾಟದ ಶಕ್ತಿ ಹೆಚ್ಚುತ್ತಾ ಹೋಯಿತು. ಬ್ರಿಟಿಷ್ ಪೊಲೀಸರ ಈ ವರ್ತನೆಯನ್ನು ಖಂಡಿಸುವ ಮಾತುಗಳನ್ನು ನ್ಯೂಯಾರ್ಕ್ ಟೈಮ್ಸ್ ಬರೆಯಿತು. ಬ್ರಿಟಿಷರು ತಮ್ಮ ಸದ್ಗೃಹಸ್ಥಿಕೆಯ ಕುರಿತು ಹೇಳುವ ಎಲ್ಲಾ ಮಾತುಗಳೂ ಸುಳ್ಳು ಎಂಬರ್ಥದ ಮಾತುಗಳನ್ನು ಅಂದಿನ ನ್ಯೂಯಾರ್ಕ್ ಟೈಮ್ಸ್‌ನ ವರದಿಗಾರರು ಬರೆದಿದ್ದರು.

ಗಾಂಧಿಯ ಶಕ್ತಿ ಇರುವುದು ಇಲ್ಲಿಯೇ. ಎದುರಾಳಿಯನ್ನು ಸೋಲಿಸುವುದು ಅವರ ಗುರಿಯಾಗಿರಲಿಲ್ಲ. ಎದುರಾಳಿಯನ್ನು ಒಲಿಸಿಕೊಳ್ಳುವುದು ಅಥವಾ ತಾನು ವಿಮೋಚಿತನಾಗುವುದರ ಜೊತೆಗೆ ಎದುರಾಳಿಯನ್ನೂ ವಿಮೋಚಿಸುವುದು. ಬಹುಶಃ ಈ ಕಾರಣದಿಂದಾಗಿಯೇ ಗಾಂಧೀ ಮಾರ್ಗ ಯಾವತ್ತೂ ದ್ವೇಷವನ್ನು ಸೃಷ್ಟಿಸಲಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿ ಅಳಿದಾಗ ನೆಲ್ಸನ್ ಮಂಡೇಲಾ ನಡೆದುಕೊಂಡ ಬಗೆಯೇ ಇದಕ್ಕೆ ಅತ್ಯುತ್ತಮ ಉದಾಹರಣೆ. ಶತಮಾನಗಳ ಅವಧಿಯ ವರ್ಣಭೇದ ನೀತಿ ಇಲ್ಲವಾದಾಗ ಅಲ್ಲಿನ ಕರಿಯ ಜನಾಂಗದವರು ಬಿಳಿಯರನ್ನು ದೇಶದಿಂದಲೇ ಹೊರತಳ್ಳಬಹುದಿತ್ತು. ಆದರೆ ನೆಲ್ಸನ್ ಮಂಡೇಲಾ ಅಂಥದ್ದಕ್ಕೆಲ್ಲಾ ತಡೆಯೊಡ್ಡಿ ದಕ್ಷಿಣ ಆಫ್ರಿಕಾದ ಭವಿಷ್ಯ ಎರಡೂ ಜನಾಂಗಗಳು ಒಟ್ಟಾಗಿ ಮುಂದುವರಿಯುವುದರಲ್ಲಿ ಎಂಬುದನ್ನು ಸ್ಪಷ್ಟಪಡಿಸಿದರು.

ಗಾಂಧಿಯ ಹಾದಿಯನ್ನು ಆರಿಸಿಕೊಳ್ಳುವುದಕ್ಕೆ ಅತಿ ಹೆಚ್ಚು ಧೈರ್ಯ ಬೇಕಾಗಿರುವುದು ಇದೇ ಕಾರಣಕ್ಕೆ. ಗಾಂಧಿಯ ಹಾದಿಯಲ್ಲಿ ಎದುರಾಳಿಯ ಮನಃಪರಿವರ್ತನೆಯಾಗುತ್ತಿತ್ತು. ಎಲ್ಲದಕ್ಕಿಂತ ಹೆಚ್ಚಾಗಿ ಹೋರಾಟಗಾರ ಒಂದು ಆತ್ಮಸಂಯಮವನ್ನು ಕಾಪಾಡಿಕೊಳ್ಳಬೇಕಾಗಿತ್ತು. ಈ ದಾರಿಯ ದೊಡ್ಡ ಸವಾಲೇ ಆತ್ಮಸಂಯಮ. ಗಾಂಧಿಯ ರಾಜಕಾರಣ ಮತ್ತು ಬದುಕುಗಳೆರಡೂ ನಾವು ಪ್ರತಿಯೊಬ್ಬರೂ ನಮ್ಮ ಬದುಕನ್ನು ಕಟ್ಟಿಕೊಳ್ಳಲು ಅಗತ್ಯವಿರುವ ಅನೇಕ ಪಾಠಗಳನ್ನು ಹೇಳಿಕೊಡುತ್ತಿದೆ. ಸಮಾಜದ ಬದಲಾವಣೆಯನ್ನು ವೈಯಕ್ತಿಕ ಬದಲಾವಣೆಗಳ ಮೂಲಕ ಕಾಣುವ ಪ್ರಕ್ರಿಯೆಯೇ ನಮ್ಮೆಲ್ಲರನ್ನೂ ಬೆಳೆಸಬಲ್ಲದು. ಎಲ್ಲದಕ್ಕಿಂತ ಹೆಚ್ಚಾಗಿ ನಾವು ಮಾಡುತ್ತಿರುವ ಕೆಲಸಗಳನ್ನು ಹೆಚ್ಚು ಸೃಜನಶೀಲವಾಗಿ ಮಾಡುವುದಕ್ಕೆ ಪ್ರೇರೇಪಿಸಬಹುದು. ಗಾಂಧೀಜಿಯ ತತ್ವಗಳು ಆಧುನಿಕ ಅಧ್ಯಾತ್ಮವನ್ನು ಬೋಧಿಸುವ ಹಲವು ಶ್ರೀಗಳನ್ನಿಟ್ಟುಕೊಂಡಿರುವವರು ನೀಡುವ ಗುಳಿಗೆಗಳಂಥಾ ತತ್ವಗಳಲ್ಲ. ಇದು ಪ್ರತಿಯೊಬ್ಬನೂ ತನ್ನ ಕಾಲ ಮತ್ತು ದೇಶಗಳಲ್ಲಿ ಪ್ರಯೋಗಿಸಿ ನೋಡಿ ಕಂಡುಕೊಳ್ಳಬೇಕಾದುದು. ನೆಲ್ಸನ್ ಮಂಡೇಲಾ ಅನುಸರಿಸಿದ ಗಾಂಧೀವಾದ, ಮೇಧಾ ಪಾಟ್ಕರ್ ಸಾಗುತ್ತಿರುವ ದಾರಿ, ಅಮೆರಿಕದ ಆಕ್ಯುಪೈ ವಾಲ್ ಸ್ಟ್ರೀಟ್ ಹೋರಾಟಗಾರರ ಮಾದರಿಗಳೆಲ್ಲವೂ ಭಿನ್ನವೇ. ಆದರೆ ಎಲ್ಲದರ ಆಳದಲ್ಲಿ ಗಾಂಧಿ ಇದ್ದಾರೆ. 

ಗಾಂಧಿಯಿಂದ ಬಹಳ ಪ್ರಭಾವಿತರಾಗಿದ್ದ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಅವರು ಹೇಳಿದ ಮಾತೊಂದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ‘ನೀವು ಶಿಕ್ಷಕ, ವೈದ್ಯ, ಎಂಜಿನಿಯರ್.... ಹೀಗೆ ಏನು ಬೇಕಾದರೂ ಕೆಲಸ ಮಾಡಿ. ಅದರಲ್ಲಿದ್ದುಕೊಂಡೇ ಒಂದು ಕ್ಷಣ ಮಾನವ ಹಕ್ಕುಗಳ ಬಗ್ಗೆ ಆಲೋಚಿಸಿ’. ಗಾಂಧಿಯನ್ನು ತನ್ನ ಕಾಲದಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಕಂಡದ್ದು ಹೀಗೆ. ನಾವೂ ಅಷ್ಟೇ. ನಮ್ಮ ನಮ್ಮ ಕೆಲಸಗಳಿಗೆ ಇರುವ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಆಲೋಚಿಸುವುದೇ ಈ ಕಾಲದ ಗಾಂಧೀವಾದವಾಗುತ್ತದೆ. ಹಾಗೆ ಆಲೋಚಿಸಿದಾಕ್ಷಣ ನಮ್ಮಲ್ಲೊಂದು ಪರಿವರ್ತನೆ ಸಾಧ್ಯವಾಗುತ್ತದೆ. ಅದೊಂದು ಮಹಾ ಪರಿವರ್ತನೆಗೆ ನಾಂದಿಯಾಗಲೂಬಹುದು. ಎಷ್ಟೋ ಹಳ್ಳಿಗಳಲ್ಲಿರುವ ಶಿಕ್ಷಕರು, ವೈದ್ಯರು ಮಾಡುತ್ತಿರುವ ಕೆಲಸ ಇಂಥದ್ದನ್ನೇ. ಅವರು ತಮ್ಮನ್ನು ಗಾಂಧೀವಾದಿಗಳೆಂದು ಕರೆದು ಕೊಳ್ಳುತ್ತಿಲ್ಲ. ಆದರೆ ಅವರು ಆ ಹಾದಿಯಲ್ಲಿದ್ದಾರೆ ಅಷ್ಟೇ. ನಮಗೆ ಮಾದರಿಯಾಗಬೇಕಾದುದು ತೋರಿಕೆಯಲ್ಲಿ ಕಾಣಿಸುವ ಗಾಂಧೀವಾದವಲ್ಲ. ಕೃತಿಯಲ್ಲಿ ಕಾಣುವ ಗಾಂಧೀವಾದ. ಆ ನಿಟ್ಟಿ ನಲ್ಲಿ ಮುಂದುವರಿದರೆ ನಾವು ಪ್ರತಿಯೊಬ್ಬರೂ ನಮ್ಮ ನಮ್ಮದೇ ಆದ ಗಾಂಧಿಯನ್ನು ಶೋಧಿಸುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.