ADVERTISEMENT

ನವೀಕರಣಗೊಳಿಸುವ ಸುಡು ಬಿಸಿಲು

ಅಕ್ಷತಾ ಟಿ.ವಿ.
Published 4 ಮೇ 2016, 19:30 IST
Last Updated 4 ಮೇ 2016, 19:30 IST
ನವೀಕರಣಗೊಳಿಸುವ ಸುಡು ಬಿಸಿಲು
ನವೀಕರಣಗೊಳಿಸುವ ಸುಡು ಬಿಸಿಲು   

‘ಕೊಠಡಿಯ ಉಷ್ಣಾಂಶಕ್ಕೆ ಸಮನಾದ ಉಷ್ಣಾಂಶವಿರುವ ನೀರನ್ನೇ ನಿಯಮಿತವಾಗಿ ಕುಡಿಯಬೇಕು’, ‘ಹೆಚ್ಚು ಖಾರ ಅಥವಾ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ತಿಂದಮೇಲೆ ಬಿಸಿನೀರು ಕುಡಿಯಬೇಕು’, ‘ಚಳಿಗಾಲದಲ್ಲಿ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವಂತೆ, ಬೇಸಿಗೆಯಲ್ಲಿ ಬಿಸಿನೀರಿನಲ್ಲಿ ಸ್ನಾನ ಮಾಡಬೇಕು’ ಎಂಬಿತ್ಯಾದಿ ಪಥ್ಯಗಳಿಗೆ ಮನಸ್ಸು/ದೇಹ ಬದ್ಧವಾದಾಗ ದೇಹದ ಲವಲವಿಕೆ ಕಾಪಾಡಿಕೊಂಡು ಬರುವುದು ನನಗೆ ಸುಲಭವಾಯ್ತು.

ಇದರಿಂದ, ‘ಆರೋಗ್ಯವಂತ ಶರೀರದಲ್ಲಿ ಆರೋಗ್ಯಕರ ಮನಸ್ಸು’ ಎಂಬಂತೆ ನನ್ನ ಮನಸ್ಸಿಗೆ ತನ್ನನ್ನು ತಾನು ಕ್ರಿಯಾಶೀಲವಾಗಿಟ್ಟುಕೊಳ್ಳಲು ಕಷ್ಟವಾಗಲಿಲ್ಲ.ದಿನಕ್ಕೊಮ್ಮೆಯಾದರೂ  ಬಿಸಿಲಿಗೆ ಮೈಯೊಡ್ಡದಿದ್ದರೆ ಏನೋ ಚಡಪಡಿಕೆ, ಸೂರ್ಯನ ಪ್ರಖರ ಕಿರಣಗಳನ್ನು ಮೈಯೊಳಗಿಳಿಸಿಕೊಳ್ಳುತ್ತಾ ನಡೆದು, ಮರದ ನೆರಳಿನಲ್ಲಿ ತುಸು ನಿಂತು ತಂಗಾಳಿಯನ್ನು ಆಸ್ವಾದಿಸುತ್ತಾ ನೀರನ್ನು ಗುಟುಕರಿಸುವ ಸುಖ... ವರ್ಣನಾತೀತ. ಗಂಟಲಿನೊಳಗೆ ನೀರ ಝರಿ ಹರಿಯುವ ಸದ್ದಿಗೇ ಹಿಮ್ಮೇಳವೇನೋ ಎಂಬಂಥ ವಸಂತ ಮಾಸದ ಹಕ್ಕಿಗಳುಲಿ ಕಿವಿಗೂ ಇಂಪು ದೇಹಕ್ಕೂ ತಂಪು.

ಮನೆಯ ಚಾವಣಿ ಮೇಲೆ ಮಣ್ಣಿನ ಬೋಗುಣಿಯಲ್ಲಿಟ್ಟ ನೀರನ್ನು ಕುಡಿಯಲು ಬರುವ ಹಕ್ಕಿಗಳನ್ನು ನೋಡುವುದೇ ಸಂಭ್ರಮ, ಸಮಾಧಾನ. ಯಾವತ್ತೋ ತರಕಾರಿ ಸಿಪ್ಪೆಗಳನ್ನು ಹೂಕುಂಡಕ್ಕೆ ಹಾಕಿದಾಗ, ಮಣ್ಣಿನೊಡನೆ ಸೇರಿಹೋಗಿದೆ ಅಂದುಕೊಂಡಿದ್ದ ಹಾಗಲಬೀಜ ಮೊಳಕೆಯೊಡೆದು ಈಗ ಚಿಗುರಿದ್ದನ್ನು ಕಂಡಾಗ ಮೈಪುಳಕ. ಎಂಥಾ ಬಿಸಿಲಿನ ಝಳಕ್ಕೂ ಜಗ್ಗದೇ ಗ್ರಿಲ್ ಮೇಲೆ ಸದಾ ಹಸಿರಾಗಿ ಕಂಗೊಳಿಸುವ ಅಮೃತಬಳ್ಳಿ, ಸ್ಫೂರ್ತಿಯ ಚಿಲುಮೆಯೇ ಸರಿ.

ಇನ್ನು, ಬೇಸಿಗೆ ಬಂತೆಂದರೆ ಹಬ್ಬ – ಸಮಾರಂಭಗಳಿಗಂತೂ ಕಡಿಮೆಯಿಲ್ಲ, ಬಗೆ ಬಗೆ ಪಾನಕಗಳು, ಕೋಸಂಬರಿ, ಹಣ್ಣುಗಳು ಮತ್ತು ಭಕ್ಷ್ಯ-ಭೋಜನಗಳು ಕಣ್ಣಿಗೂ ಹಬ್ಬ, ಹೊಟ್ಟೆಗೂ ಹಬ್ಬ.

ಬೇಸಿಗೆ ಶಿಬಿರಗಳು, ಸಂಗೀತ-ನೃತ್ಯ ಕಛೇರಿಗಳು, ನಾಟಕಗಳು ಮೊದಲಾದ ಕಾರ್ಯಕ್ರಮಗಳ ಆಯೋಜನೆ, ಪಾಲ್ಗೊಳ್ಳುವಿಕೆ, ಇವುಗಳಲ್ಲಿ ಹೊಸತನ್ನು ಕಲಿಯುವಿಕೆ-ಕಲಿಸುವಿಕೆ ಇವೆಲ್ಲಾ ನಮ್ಮ ಸೃಜನಶೀಲತೆಯ ಬತ್ತಿಯನ್ನು ಬೆಳಗುವ ಎಣ್ಣೆಯಿದ್ದಂತೆ.

ಹಿಂದಿನ ಹಣಕಾಸು ವರ್ಷದ ಲೆಕ್ಕವನ್ನು ಚುಕ್ತಾ ಮಾಡಿ, ಹೊಸ ವರ್ಷಕ್ಕೆ ಹೊಸ ಹೊಸ ಪರಿಪಾಠಗಳನ್ನು, ವ್ಯವಸ್ಥೆಗಳನ್ನು ಸೃಷ್ಟಿಸಿ, ರೂಢಿಸಿಕೊಳ್ಳುವ, ಹೊಸತನಕ್ಕೆ ನಮ್ಮನ್ನು ನಾವು ತೆರೆದುಕೊಳ್ಳುವ ಕಾತರ, ಸಂಭ್ರಮ. ಕೊನೆಯಲ್ಲಿ ಏನನ್ನೋ ಸಾಧಿಸಿದ ಸಂತೃಪ್ತಿ ಈ ಹೊತ್ತಲ್ಲೇ.

ಮಕ್ಕಳು ಪರೀಕ್ಷೆ ಮುಗಿಸಿ ಮನೆಗೆ ಬಂದಾಗಲಂತೂ, ಬದಲಾವಣೆ ಬೇಡುವ ನೆಪದಲ್ಲಿ ‘ರಜಾ-ಮಜಾ’ ಎಂದು ಬಿಸಿಲನ್ನು ಸ್ವಲ್ಪವೂ ಹಾಳುಮಾಡದೇ ಊರೂರು ತಿರುಗುವುದೆಂದರೆ, ಅದೊಂದು ರೀತಿಯಲ್ಲಿ ಸಂಬಂಧಗಳನ್ನು ನವೀಕರಣಗೊಳಿಸಿಕೊಳ್ಳುವ, ಮನಸ್ಸನ್ನು ಉಲ್ಲಾಸಗೊಳಿಸುವ ಮಹತ್ತರ ಸಾಧನೆಯೂ ಹೌದು. ಇವುಗಳ ಮಧ್ಯೆ, ಮಳೆಗಾಲಕ್ಕೆಂದು ಸ್ವಲ್ಪ ಸಂಡಿಗೆ, ತೊಕ್ಕು ಮಾಡಿಕೊಂಡು, ಜೀರಿಗೆ ಮೆಣಸಿನ ಸಂಗ್ರಹ ಮಾಡಿಕೊಳ್ಳುವುದರಲ್ಲಿ ಅರ್ಧ ಬೇಸಿಗೆ ಕಳೆದದ್ದೇ ತಿಳಿಯಲಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.