ADVERTISEMENT

ಬಿಸಿಲ ಹಕ್ಕಿಗಳ ಆಟ...

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 19:30 IST
Last Updated 19 ಏಪ್ರಿಲ್ 2017, 19:30 IST

ನಾವು ರಾಯಚೂರಿನವರು. ನಮ್ಮೂರಿನವರಿಗೆ ಚಳಿಯ ಅನುಭವವೇ ಇಲ್ಲ. ನಾನು ಬಾಣಂತಿ ಆದಮೇಲೆಯೇ ಮೊದಲ ಸ್ವೆಟರ್ ಕಂಡಿದ್ದು. ನಮ್ಮ ದೇಹಗಳಿಗೆ ತಾಗುತ್ತಿದ್ದದು ಬಿಸಿಲು, ಅತಿ ಬಿಸಿಲು. ಆ ದಿನಗಳಲ್ಲಿ ಅದು ನಮಗೆ ಕಷ್ಟ ಎಂದು ಅನ್ನಿಸುತ್ತಲೇ ಇರಲಿಲ್ಲ.

ಶಾಲೆಯ ಒಡನಾಟ ಏಪ್ರಿಲ್ ಹತ್ತಕ್ಕೆ ಮುಗಿಯುತ್ತಿತ್ತು. ಕೈಯಲ್ಲಿ ಪರೀಕ್ಷೆ ಫಲಿತಾಂಶದ ಕಾರ್ಡ್ ಹಿಡಿದು ಓಡೋಡುತ್ತ ಮನೆಗೆ ಬಂದು ಕಾರ್ಡ್ ತೋರಿಸಿದರೆ, ಎಷ್ಟೇ ಅಂಕ ಬಂದಿರಲಿ, ಪಾಸ್ ಆಗಿದ್ದ ಸಂತೋಷ ಅವರಿಗೆ. ದೇವರ ಮುಂದಿಟ್ಟ ಕಲ್ಲುಸಕ್ಕರೆ ಬಾಯಿಗೆ ಹಾಕಿ ಅಕ್ಕಪಕ್ಕದವರಿಗೆ ಹಂಚಿ ಖುಷಿಪಡುತ್ತಿದ್ದರು. ಸಂಜೆ ಅಪ್ಪ ನನಗೆ ಪ್ರಿಯವಾದ ಕಲಾಕಂದ್, ಚಕ್ಕುಲಿ ತರುತ್ತಿದ್ದರು. ಅಂದಿನಿಂದ ನಾವು ಜೂನ್ ಒಂದರವರೆಗೂ ಸ್ವತಂತ್ರ ಹಕ್ಕಿಗಳು.

ಯಾವ ಕೆಲಸವಿಲ್ಲ. ಆಟ, ಆಟ, ಬರೀ ಆಟ. ಬೆಳಗಿನ ತಿಂಡಿಯ ಪರಿಪಾಠ ಇರಲಿಲ್ಲ. ಎಲ್ಲರು ಬೆಳಗಿನ ಕಾಫಿ ಕುಡಿದು ಊಟದ ಹೊತ್ತಿನವರೆಗೂ ಆಡುತ್ತಿದ್ದೆವು. ಮಧ್ಯಾಹ್ನದ ಆಟ ಮನೆಯಲ್ಲಿ. ಭಯಂಕರ ಬಿಸಿಲಿನಲ್ಲೇ ಬೆವರು ಒರೆಸಿಕೊಳ್ಳುತ್ತ ಗೊಂಬೆ ಆಟ, ಚಕ್ಕರ್, ಹಾವು ಏಣಿ, ಹೀಗೆ ಅನೇಕ ಆಟಗಳನ್ನು ಆಡುತ್ತಿದ್ದೆವು. ಸಂಜೆವರೆಗೂ ಗೊಂಬೆ ಮದುವೆ ಮಾಡುತ್ತಿದ್ದೆವು. ಪೌರಾಣಿಕ ಕತೆಗಳನ್ನು ನಾಟಕದಂತೆ ಆಡುತ್ತಿದ್ದೆವು.

ಎಲ್ಲರು ತಮ್ಮ ತಮ್ಮ ಮನೆಯಿಂದ ಪುಠಾಣಿ, ಶೇಂಗಾ, ಕೊಬ್ರಿ, ಚುರುಮುರಿ, ಅವಲಕ್ಕಿ, ಹುಣಸೆಹಣ್ಣು, ಬೆಲ್ಲ, ಉಪ್ಪು, ಹೀಗೆ ಏನೇನೋ ತರುತ್ತಿದ್ದರು. ಅದರಲ್ಲಿ ಅಡುಗೆ ಮಾಡುತ್ತಿದ್ದೆವು, ಜಗಳ ಆಡುತ್ತಿದ್ದೆವು, ಒಂದಾಗುತ್ತಿದ್ದೆವು, ಕತೆ ಹೇಳುತ್ತಿದ್ದೆವು. ರಾತ್ರಿಯ ಊಟದ ಬಳಿಕವೂ ಆಟ. ಒಂದೇ ಎರಡೇ?. ಇಡೀ ಬೇಸಿಗೆ ಹೀಗೆ ಸಾಗಿಹೋಗುತಿತ್ತು.

ಈ ದಿನಗಳಲ್ಲಿ ಅಮ್ಮ ಮಾಡುತ್ತಿದ್ದ ಸಂಡಿಗೆ ಹಿಟ್ಟು, ಅರ್ಧ ಒಣಗಿದ ಸಂಡಿಗೆ ರುಚಿಯೋ ರುಚಿ. ಅಪ್ಪ ತರುತ್ತಿದ್ದ ಖರಬೂಜ, ದ್ರಾಕ್ಷಿ, ಮಾವಿನ ಹಣ್ಣುಗಳ ಭರಪೂರ ಆನಂದ ಸವಿಯುತ್ತಿದ್ದೆವು. ಮಾವಿನ ಸೀಕರಣೆ, ಕಿಸಾನ್ ಕಿತ್ತಳೆ ಹಣ್ಣಿನ ರಸ, ಅಮ್ಮ ಮಾಡುವ ನಿಂಬೆ ಪಾನಕ, ಕೋಸಂಬರಿ, ಮಾವಿನಕಾಯಿ ಉಪ್ಪಿನಕಾಯಿ, ಚಿತ್ರಾನ್ನ ನೆನಸಿಕೊಂಡರೆ, ದೇವರಾಣೆ ಇಂದಿಗೂ ಬಾಯಿ ನೀರೂರುತ್ತದೆ.

ಬಿಸಿಲಿನ ಝಳದ ಶಕೆಯ ನೆನಪು ಇರುತ್ತಿದ್ದಿಲ್ಲ. ತಂಪು ಪ್ರದೇಶವು ಇರುತ್ತದೆ ಎಂಬ ಅರಿವೂ ಇರಲಿಲ್ಲ. ಯಾರೂ ಬಿಸಿಲಿನ ತಾಪಕ್ಕೆ ಬೆಂದವರಲ್ಲ. ನೀರಿನ ಕೊರತೆ ಇರಲಿಲ್ಲ. ಕರೆಂಟಿನ ತಾಪತ್ರಯ ಇರಲಿಲ್ಲ. ಮನೆಯಲ್ಲಿ ಒಂದೇ ಒಂದು ಉಷಾ ಟೇಬಲ್ ಫ್ಯಾನ್. ನೆಲದ ಮೇಲೆ ಮಲಗುತ್ತಿದ್ದೆವು. ಶಹಬಾದಿ ಕಲ್ಲಿನ ತಂಪು. ಬೆಳಗಿನ ಆರಕ್ಕೆ ಧಗೆ ಶುರು. ಆದರೆ, ಯಾವ ಗೊಣಗಾಟ ಇರದ ಜೀವನದ ಜೊತೆಗೆ ಜೀವನೋತ್ಸಾಹ. 
–ಗೀತಾ ನಾಗೇಶ್ ಬೆಂಗಳೂರು

*
ಪ್ರೀತಿಯ ಬಿಸಿಲು
ಏಪ್ರಿಲ್ ಮಾಹೆ ನನ್ನ ಭಾವಭಿತ್ತಿಯಲ್ಲಿ ನನ್ನ ಪ್ರೀತಿಯ ನೆನಪಿನೊಂದಿಗೆ ಕಲೆತು ಹೋಗಿದೆ. ಇದೇ ತಿಂಗಳು ನಮ್ಮಿಬ್ಬರನ್ನು ಒಂದುಗೂಡಿಸಿದ್ದು. ಒಂದೊಮ್ಮೆ ಬಸ್ ಸ್ಟಾಪಿನಲ್ಲಿ ಸಿಟಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ಅವಳನ್ನು ನೋಡಿದ ಮೊದಲ ಸಲಕ್ಕೆ ಅವಳಿಗೆ ಸೋತು, ಅವಳ ವಿಳಾಸ ಪತ್ತೆ ಹಚ್ಚಿ ಪ್ರಪೋಸ್ ಮಾಡಿ ಅವಳನ್ನು ಒಲಿಸಿಕೊಂಡೆ. ಆಮೇಲೆ ಇಬ್ಬರೂ ಆ ರಣಬಿಸಿಲನ್ನು ಲೆಕ್ಕಿಸದೆ ತಿರುಗಿದ ದಿನಗಳಿಗೆ ಲೆಕ್ಕವಿಲ್ಲ.

ಬಿಸಿಲು ಬಹಳಾಯಿತು ಅನ್ನಿಸಿದಾಗ ಪಾರ್ಕಿನಲ್ಲಿ ಬೆನ್ನಿಗೆ ಬೆನ್ನು ಹಚ್ಚಿ ಕುಳಿತು ತಂಪಾದ ಕ್ಷಣಗಳು ಅದೆಷ್ಟೋ. ಆಗಾಗ ಒಂದೇ ಎಳನೀರು ತೆಗೆದುಕೊಂಡು ಅದರಲ್ಲಿ ಎರಡು ಸ್ಟ್ರಾ ಹಾಕಿ ಇಬ್ಬರು ಅದನ್ನು ಒಟ್ಟಿಗೆ ಸಣ್ಣಗೆ ಹೀರಿದ ಮಜದ ಕ್ಷಣಗಳು ಬಹಳ. ಅವಳು ಬಿಸಿಲಿನಲ್ಲಿ ಹೊರಹೋಗುವಾಗ ಇರಲೆಂದು ನಾನವಳಿಗೆ ಒಂದು ನೀಲಿ ಕೊಡೆ ಕೊಡಿಸಿದ್ದೆ.

ಒಮ್ಮೆ ಬಹಳ ಬಿಸಿಲಲ್ಲಿ ಸುತ್ತಾಡಿ ಜ್ವರ ಬಂದು ಬಿಟ್ಟಿದೆ ಹುಷಾರಿಲ್ಲ ಅಂತ ಕಾರಣ ಹೇಳಿ ಮೂರು ದಿನ ಅವಳು ನನ್ನ ಕೈಗೆ ಸಿಗದೇ ಹೋದಾಗ ಈ ಬಿಸಿಲಿನ ಮೇಲೆ ಬಂದ ಕೋಪ ಅಷ್ಟಿಷ್ಟಲ್ಲ. ಆಗ ಬಿಸಿಲಿನ ಮೇಲಿನ ನನ್ನ ಸಿಟ್ಟಿನಲ್ಲಿ ಒಂದು ಕವನವನ್ನೇ ಬರೆದು ಬಿಟ್ಟಿದ್ದೆ. ಅದನ್ನು ಓದಿ ನನ್ನ ಹುಡುಗಿ ಬಿದ್ದು ಬಿದ್ದು ನಕ್ಕಿದ್ದೇ ನಕ್ಕಿದ್ದು. ನನ್ನ ಕೈಯಿಂದ ‘ಬಿಸಿಲೇ ಏನು ನಿನ್ನ ಲೀಲೆ’ ಎಂಬ ಒಂದು ಸುಂದರ ಪ್ರೇಮ ಕವನ ಬರೆಸಿದ್ದಳು. 
-ಮಂಜುನಾಥ ಎಸ್. ಕಟ್ಟಿಮನಿ ವಿಜಯಪುರ

ADVERTISEMENT

*
ಅಜ್ಜಿ ಮನೆಯ ಗುಡ್ಡದ ನೆನಪು
ಏಪ್ರಿಲ್ ಎಂದರೆ ಒಂದೆಡೆ ಭಯ, ಮತ್ತೊಂದೆಡೆ ಸಂತೋಷ. ಏಕೆಂದರೆ ಏಪ್ರಿಲ್ ಹತ್ತನೇ ತಾರೀಖು ನಮ್ಮ ಮುಂದಿನ ತರಗತಿಗೆ ಹೋಗುವ ಫಲಿತಾಂಶ ಪ್ರಕಟಿಸುವ ಕ್ಷಣ. ಸಂತೋಷದ ವಿಷಯವೆಂದರೆ, ಅಜ್ಜಿ ಮನೆ. ಪರೀಕ್ಷೆ ಮುಗಿಯುವುದೇ ತಡ, ಸೀದಾ ಅಜ್ಜಿ ಮನೆಗೆ ಹೋಗಿಬಿಡುತ್ತಿದ್ದೆವು. ಅಜ್ಜಿ ಮನೆಯಲ್ಲಿ ಒಂದೆರಡು ದಿನ ಇದ್ದು, ಮತ್ತೆ ಅಕ್ಕಪಕ್ಕದ ನೆಂಟರ ಮನೆಗೆ ಹೋಗಿ ಸುತ್ತಾಡಿಕೊಂಡು ಬರುತ್ತಿದ್ದೆವು. ಅಲ್ಲಿಂದ ನಮ್ಮ ಚಿಕ್ಕಪ್ಪ ಗುಡ್ಡಗಳಿಗೆ ಕರೆದುಕೊಂಡು ಹೋಗುತ್ತಿದ್ದರು.

ಬೆಳಿಗ್ಗೆ ಒಂಬತ್ತು ಗಂಟೆಗೆ ಎಲ್ಲರೂ ತಿಂಡಿ ತಿಂದು ಬಾಟಲ್‌ಗಳಲ್ಲಿ ನೀರು ತುಂಬಿಸಿಕೊಂಡು ಸಣ್ಣ ಬುತ್ತಿಗಳೇನಾದರೂ ತಿಂಡಿಗಳನ್ನು ಹಿಡಿದುಕೊಂಡು ಗುಡ್ಡಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಗುಡ್ಡದ ತುದಿ ತಲುಪುವಷ್ಟರಲ್ಲಿ ಬಾಟಲ್‌ಗಳಲ್ಲಿ ಇದ್ದ ನೀರು ಖಾಲಿಯಾಗಿಬಿಡುತ್ತಿತ್ತು. ಬಿಸಿಲು ಒಂದೆಡೆ ಆದರೆ, ಬಾಯಾರಿಕೆ ಬೇರೆ. ನೀರಿಗೇನು ತೊಂದರೆಯಾಗುತ್ತಿರಲಿಲ್ಲ. ಸಣ್ಣ ಹಳ್ಳಗಳಲ್ಲಿ ಹರಿದು ಬರುತ್ತಿದ್ದ ತಂಪಾದ ನೀರು ಸಿಗುತ್ತಿತ್ತು. ನಾವು ಹೋಗುವ ದಾರಿ ಮಧ್ಯದಲ್ಲಿ ಸಿಗುವ ಕಾಡು ಹಣ್ಣುಗಳಾದ ನೇರಳೆ ಹಣ್ಣು, ಗೇರುಹಣ್ಣು, ಚಟ್ಟೆಹಣ್ಣು, ಈಚಲು ಹಣ್ಣು, ಪೇರಲೆ ಹಣ್ಣು, ಎಲ್ಲವನ್ನು ಸವಿಯುತ್ತಾ ಸಾಗುತ್ತಿದ್ದೆವು. ಅದರ ಮಜವೇ ಬೇರೆ ಆಗಿತ್ತು.

ಗುಡ್ಡದ ತುದಿಯನ್ನು ತಲುಪಿದಾಗ ತುಂಬಾ ಖುಷಿ. ಸುತ್ತಲೂ ಕಾಣುವ ಅಕ್ಕಪಕ್ಕದ ಗುಡ್ಡಗಳು, ಭದ್ರಾ ನದಿಯು ಅಂಕುಡೊಂಕಾಗಿ ಹೋಗಿರುವುದು. ಕಳಸ, ಬಾಳೆ ಹೊನ್ನೂರು ಮಧ್ಯದಲ್ಲಿ ಸಿಗುವ ಹಳ್ಳುವಳ್ಳಿ ಎಂಬಲ್ಲಿ ಭದ್ರಾನದಿಗೆ ಅಡ್ಡಲಾಗಿ ಕಟ್ಟಿದ ಸೇತುವೆಯು ಗುಡ್ಡದ ಮೇಲಿಂದ ನೋಡಿದಾಗ ಬೆಂಕಿಪೊಟ್ಟಣದ ಹಾಗೆ ಕಾಣುತ್ತಿತ್ತು. ನಾವು ಏನೇ ಕೂಗಿದರು ಪ್ರತಿಧ್ವನಿಯಾಗಿ ಕೇಳಿಸುತ್ತಿತ್ತು. ಒಮ್ಮೊಮ್ಮೆ ಜೇನುನೊಣಗಳು ಗೂಡಿನಿಂದ ಎದ್ದು ಹಾರುತ್ತಿದ್ದವು. ಮಧ್ಯಾಹ್ನಉರಿಬಿಸಿಲು.

ಆದರೂ ಒಮ್ಮೊಮ್ಮೆ ತಂಪಾದ ಗಾಳಿ ಬೀಸುತ್ತಿತ್ತು. ಎಲ್ಲಾ ಕಡೆ ಸುತ್ತಾಡಿಕೊಂಡು ಮರದ ಬುಡದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಾ ತಿಂಡಿ ತಿನ್ನುತ್ತಿದ್ದೆವು. ಸ್ವಲ್ಪ ಹೊತ್ತು ನಿದ್ದೆ ಕೂಡ ಮಾಡುತ್ತಿದ್ದೆವು. ನಾಲ್ಕು ಗಂಟೆ ನಂತರ ಮನೆಯ ಕಡೆಗೆ ಬರುತ್ತಿದ್ದೆವು. ಮರು ದಿನ ಇದೇ ಕೆಲಸ. ಹೀಗೆ ಏಪ್ರಿಲ್ ಮುಗಿಯುವವರೆಗೂ ಅಜ್ಜಿ ಮನೆಯ ಗುಡ್ಡವೇ ನಮ್ಮ ತಾಣ.

ನಾನು, ಅಣ್ಣ, ಅಕ್ಕ, ಚಿಕ್ಕಪ್ಪ ಅವರ ಮಕ್ಕಳು, ಮಾವನ ಮಕ್ಕಳು. ಎಲ್ಲರೂ ಒಟ್ಟುಗೂಡಿಕೊಂಡು ಒಂದು ತಿಂಗಳು ತುಂಬಾ ಖುಷಿಯಿಂದ ಇರುತ್ತಿದ್ದೆವು.  ಈಗ ಏಪ್ರಿಲ್ ಬಂತೆಂದರೆ ‘ಅಜ್ಜಿ ಮನೆಯ ನೆನಪು’ ಮಾತ್ರ ಆಗಿಬಿಟ್ಟಿದೆ. ಅಜ್ಜಿ ಮನೆಗೆ ಈಗಲೂ ಹೋಗುತ್ತೇವೆ. ಆದರೆ ಆಗಿನ ಸಂತೋಷದ ಬಿಸಿಲ ಕ್ಷಣಗಳು ಇನ್ನೆಂದೂ ಸಿಗಲಾರವು. 
–ರಾಘವೇಂದ್ರ ಕಳಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.