ADVERTISEMENT

ಬೈಕ್‌ಗಳನ್ನೂ ಮಾರಲಿದೆ ಬಿಎಂಡಬ್ಲ್ಯು!

15ಕ್ಕೂ ಹೆಚ್ಚು ಮಾದರಿಗಳನ್ನು ನೀಡಲಿರುವ ಬೈಕ್‌ ದಿಗ್ಗಜ

ನೇಸರ ಕಾಡನಕುಪ್ಪೆ
Published 26 ಏಪ್ರಿಲ್ 2017, 19:30 IST
Last Updated 26 ಏಪ್ರಿಲ್ 2017, 19:30 IST
ಬೈಕ್‌ಗಳನ್ನೂ ಮಾರಲಿದೆ ಬಿಎಂಡಬ್ಲ್ಯು!
ಬೈಕ್‌ಗಳನ್ನೂ ಮಾರಲಿದೆ ಬಿಎಂಡಬ್ಲ್ಯು!   
ಬಿಎಂಡಬ್ಲ್ಯು ಭಾರತದಲ್ಲಿ ಕಾರು ತಯಾರಿಕೆ ಆರಂಭಿಸಿ ಉತ್ತಮ ಮಾರುಕಟ್ಟೆ ಪಾಲನ್ನೇ ಹೊಂದಿದೆ. ಆದರೆ, ಈವರೆಗೂ ಬೈಕ್‌ ಮಾರಾಟವನ್ನು ಇಲ್ಲಿ ಆರಂಭಿಸಿರಲಿಲ್ಲ. ಈ ಬೈಕ್‌ಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಬೇಕಿತ್ತು.

ಬಹುತೇಕ ಐಶಾರಾಮಿ ಬೈಕ್‌ ಕಂಪೆನಿಗಳು ಈಗ ಭಾರತದಲ್ಲೇ ಬೈಕ್ ತಯಾರಿಕೆಯನ್ನು ಆರಂಭಿಸಿವೆ. ಈ ಕಂಪೆನಿಗಳಿಗೆ ಸ್ಪರ್ಧೆ ನೀಡಬೇಕಾದರೆ, ಇಲ್ಲಿ ಉತ್ಪಾದನಾ ಘಟಕ ಆರಂಭಿಸಲೇಬೇಕು ಎಂಬ ತೀರ್ಮಾನಕ್ಕೆ ಬಂದಿರುವ ಬಿಎಂಡಬ್ಲ್ಯು ಇದೀಗ ನೇರವಾಗಿ ಬೈಕ್‌ಗಳನ್ನು ಮಾರಲು ಹೆಜ್ಜೆ ಇಟ್ಟಿದೆ.  
 
ಬಿಎಂಡಬ್ಲ್ಯು ಬೈಕ್‌ಗಳೆಂದರೆ ಜಾಗತಿಕವಾಗಿ ಉತ್ತಮ ಹೆಸರಿದೆ. ‘ಐಶಾರಾಮಿ’ ಮಾತ್ರವಲ್ಲದೇ ಅತ್ಯುತ್ತಮ ಶಕ್ತಿಶಾಲಿ, ಉತ್ತಮ ಮೈಲೇಜ್ ನೀಡುವ ವಿಶ್ವಾಸಾರ್ಹ ಎಂಜಿನ್‌ ಈ ಬೈಕ್‌ಗಳಲ್ಲಿರುವುದು ವಿಶೇಷ ಎನ್ನಿಸಿದೆ.

ಜತೆಗೆ ದೃಢತೆ ಹಾಗೂ ಸ್ಪೋರ್ಟಿ ವಿನ್ಯಾಸ ದೇಹವಿದ್ದು, ಸುರಕ್ಷೆಯ ದೃಷ್ಟಿಯಿಂದಲೂ ಈ ಬೈಕ್‌ಗಳು ಪ್ರಸಿದ್ಧಿ ಪಡೆದಿವೆ. ಇಂತಹ ಬೈಕ್‌ಗಳು ಇದೀಗ ನೇರವಾಗಿ ಭಾರತೀಯ ಮಾರುಕಟ್ಟೆಯಲ್ಲೇ ಲಭ್ಯವಾಗಿರುವುದು ವಾಹನಪ್ರಿಯರಲ್ಲಿ ಸಂತಸ ಮೂಡಿಸಿದೆ.
 
 
ಇದೀಗ ಬೆಂಗಳೂರು, ಮುಂಬೈ, ಪುಣೆ ಹಾಗೂ ಅಹಮದಾಬಾದಿನಲ್ಲಿ ಈ ಕಂಪೆನಿ ಮಾರಾಟ ಶುರು ಮಾಡಲು ಸಿದ್ಧತೆ ನಡೆಸಿದೆ. ಇಲ್ಲೆಲ್ಲಾ ಡೀಲರ್‌ಶಿಪ್‌ಗಳನ್ನು ಬಿಎಂಡಬ್ಲ್ಯು ನೀಡುತ್ತಿದೆ.
 
ಎಲ್ಲ ಸೌಲಭ್ಯಗಳುಳ್ಳ ಸರ್ವಿಸ್‌ ಸೆಂಟರ್‌ಗಳನ್ನು ನೀಡಿ, ಯಾವುದೇ ರೀತಿಯ ನಿರ್ವಹಣೆಗೂ ಅವಕಾಶ ಇರುವಂತೆ ನೋಡಿಕೊಳ್ಳುತ್ತಿರುವುದು ಬಿಎಂಡಬ್ಲ್ಯು ಕಂಪೆನಿಯ ಎಂದಿನ ವಿಶ್ವಾಸಾರ್ಹ ನಡೆಯಾಗಿದೆ.
 
ಯಾವ ಯಾವ ಬೈಕ್‌ಗಳು
ಆರ್‌ 1200, ಎಸ್‌ 1000 ಹಾಗೂ ಆರ್‌–ಟಿ ಸರಣಿಯ ಸಂಪೂರ್ಣ ಬೈಕ್‌ ಮಾದರಿಗಳನ್ನು ಬಿಎಂಡಬ್ಲ್ಯು ಭಾರತದಲ್ಲಿ ಮಾರಲಿದೆ. ಹಾಗೆಂದು ಈ ಬೈಕ್‌ಗಳು ಇಲ್ಲಿ ತಯಾರಿಕೆಯಾಗುತ್ತವೆ ಎಂದುಕೊಳ್ಳುವಂತಿಲ್ಲ.

ಬದಲಿಗೆ ಸಂಪೂರ್ಣವಾಗಿ ಜೋಡಿಸಲ್ಪಟ್ಟ ಬೈಕ್‌ಗಳನ್ನು ಇಲ್ಲಿ ಮಾರಲಾಗುತ್ತದೆ. ಮೊದಲ ಹಂತದಲ್ಲಿ ಬೈಕ್‌ಗಳ ಮಾರಾಟಕ್ಕಷ್ಟೇ ಆದ್ಯತೆ ನೀಡಲಾಗಿದೆ. ನೇರ ಮಾರಾಟವನ್ನು ಸಾಧ್ಯವಾಗಿಸಿ, ನಂತರ ಇಲ್ಲಿಯೇ ತಯಾರಿಕೆಯನ್ನು ಆರಂಭಿಸುವ ಉದ್ದೇಶ ಕಂಪೆನಿಗಿದೆ ಎಂದು ವಾಹನ ತಜ್ಞರು ಅಂದಾಜು ಮಾಡಿದ್ದಾರೆ.
 
ಬಿಎಂಡಬ್ಲ್ಯು ಮೋಟೊರಾಡ್‌
‘ಬಿಎಂಡಬ್ಲ್ಯು ಮೋಟೊರಾಡ್‌’ ಬ್ರ್ಯಾಂಡ್ ಅಡಿಯಲ್ಲಿ ಈ ಬೈಕ್‌ಗಳು ಗ್ರಾಹಕರ ಕೈ ಸೇರಲಿವೆ. ₹15 ರಿಂದ 30 ಲಕ್ಷದವರೆಗಿನ ಬೆಲೆಯುಳ್ಳ ಬೈಕ್‌ಗಳು ಸಿಗಲಿವೆ.
 
ಆದರೆ, ಬಹು ನಿರೀಕ್ಷಿತ ‘ಜಿ 310 ಆರ್‌’ ಬೈಕ್‌ಗಳು ಮಾರಾಟಕ್ಕೆ ಲಭ್ಯವಿಲ್ಲದೇ ಇರುವುದು ಬೈಕ್‌ ಪ್ರಿಯರಲ್ಲಿ ಬೇಸರ ಮೂಡಿಸಿರುವ ಸಂಗತಿ. ಆದರೆ, ಲಭ್ಯವಾಗಲಿರುವ ಬೈಕ್‌ಗಳ ಪಟ್ಟಿ ಸಾಕಷ್ಟು ದೊಡ್ಡದಾಗಿಯೇ ಇದೆ. ಜೊತೆಗೆ ಇವುಗಳ ಬೆಲೆಯೂ ಸ್ಪರ್ಧೆಗೆ ಅನುಗುಣವಾಗಿರಲಿದೆ.
 
ತನ್ನ ಪ್ರೀಮಿಯಂ ಮಾದರಿಗಳನ್ನು ಟೂರ್, ಸ್ಪೋರ್ಟ್ಸ್‌,  ರೋಡ್‌ಸ್ಟರ್, ಹೆರಿಟೇಜ್, ಅಡ್ವೆಂಚರ್ –ಈ ಐದು ವಿಭಾಗಗಳಲ್ಲಿ ಬೈಕ್‌ಗಳನ್ನು ಇಲ್ಲಿ ಪರಿಚಯಿಸುವ ಯೋಜನೆಯನ್ನು ಹಾಕಿಕೊಂಡಿದೆ.
 
ಆರ್‌ 1200 ಜಿಎಸ್‌ (ಸ್ಟ್ಯಾಂಡರ್ಡ್, ಡೈನಾಮಿಕ್‌ ಪ್ಲಸ್‌, ಪ್ರೊ), ಆರ್‌ 1200 ಜಿಎಸ್‌ಎ (ಸ್ಟ್ಯಾಂಡರ್ಡ್, ಡೈನಾಮಿಕ್‌ ಪ್ಲಸ್‌), ಆರ್‌ 1200 ಜಿಎಸ್‌ಎ ಪ್ರೊ, ಎಸ್‌ 1000 ಆರ್‌ಆರ್‌ (ಸ್ಟ್ಯಾಂಡರ್ಡ್), ಎಸ್‌ 1000 ಆರ್‌ಆರ್‌ ಪ್ರೊ, ಎಸ್‌ 1000 ಆರ್‌ (ಸ್ಟ್ಯಾಂಡರ್ಡ್, ಸ್ಪೋರ್ಟ್‌, ಪ್ರೊ), ಆರ್‌ 1200 ಆರ್‌ (ಸ್ಟ್ಯಾಂಡರ್ಡ್, ಎಕ್ಸ್‌ಕ್ಲೂಸಿವ್‌), ಆರ್‌ 1200 ಆರ್‌ ಸ್ಟೈಲ್‌, ಆರ್‌ ನಿನೆ ಟಿ, ಆರ್‌ ನಿನೆ ಟಿ ಸ್ಕ್ರ್ಯಾಂಬ್ಲರ್‌, ಆರ್‌ 1200 ಆರ್‌ಎಸ್‌ ಸ್ಟ್ಯಾಂಡರ್ಡ್, ಎಸ್‌ 1000 ಎಕ್ಸ್ಆರ್‌ (ಸ್ಟ್ಯಾಂಡರ್ಡ್), ಎಸ್‌ 1000 ಎಕ್ಸ್ಆರ್‌ ಪ್ರೊ, ಕೆ 1600 ಜಿಟಿಎಲ್‌ ಬೈಕ್‌ಗಳು ಮಾರಾಟಕ್ಕೆ ಲಭ್ಯವಿವೆ. ‘ಬಿಎಂಡಬ್ಲ್ಯು ಮೋಟೊರಾಡ್‌, ಈ ಬ್ರ್ಯಾಂಡ್‌ನ ಅತಿ ಮುಖ್ಯ ಹೆಜ್ಜೆಯಾಗಿದೆ.

ನಮ್ಮ ಉತ್ಪನ್ನಗಳು ಎಂದಿಗೂ ಹೊಸತನ, ಸುರಕ್ಷತೆ ಹಾಗೂ ವಿನ್ಯಾಸಕ್ಕೆ ಹೆಸರುವಾಸಿ. ಇದಕ್ಕೆ ಒಂದಿಷ್ಟೂ ಚ್ಯುತಿ ಬರದಂತೆ ನಮ್ಮ ಗ್ರಾಹಕರ ವಿಶ್ವಾಸಾರ್ಹತೆಯನ್ನು ಗಳಿಸಿದ್ದೇವೆ.
 
ಅವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಒಂದು ದೊಡ್ಡ ಹೆಜ್ಜೆಯಾಗಿ ಡೀಲರ್‌ಶಿಪ್‌ಗಳನ್ನು ಆರಂಭಿಸಿದ್ದೇವೆ. ಈ ಮೂಲಕ ನಮ್ಮದೇ ಅಸ್ಮಿತೆಯನ್ನು ಇಲ್ಲಿ ವಿಸ್ತರಿಸಿಕೊಳ್ಳಲಿದ್ದೇವೆ’ ಎಂದು ಹೇಳಿಕೊಂಡಿದ್ದಾರೆ ಬಿಎಂಡಬ್ಲ್ಯು ಗ್ರೂಪ್ ಇಂಡಿಯಾದ ಅಧ್ಯಕ್ಷ ವಿಕ್ರಮ್ ಪವಾ.
 
ಡೀಲರ್‌ಶಿಪ್‌ನೊಂದಿಗೆ, ಈ ಹಿಂದೆ ಭಾರತದ ಟಿವಿಎಸ್ ಮೋಟಾರ್ ಕಂಪೆನಿ ಲಿಮಿಟೆಡ್‌ ಜೊತೆಗೂಡಿ ಬಿಎಂಡಬ್ಲ್ಯುಜಿ 310 ಆರ್ ಮತ್ತು ಜಿ310ಜಿಎಸ್‌ ಅನ್ನು ತಯಾರಿಸಿ ಮಾರಾಟ ಮಾಡುವ ಒಪ್ಪಂದವನ್ನೂ ಮುಂದುವರೆಸಲಿದೆ.

ಸಾಕಷ್ಟು ಶ್ರೇಣಿಯ ಮಾದರಿಗಳನ್ನು ಮಾರಾಟ ಮಾಡಲು ಸಿದ್ಧತೆ ನಡೆದಿರುವುದು ಕಂಪೆನಿಯ ಸದ್ಯದ ನಡೆ. ಹಾರ್ಲಿ ಡೇವಿಡ್‌ಸನ್‌, ಟ್ರಿಂಫ್‌ ಬೈಕ್‌ಗಳ ಪೈಕಿ ಇಷ್ಟು ಹೆಚ್ಚಿನ ಸಂಖ್ಯೆಯ ಮಾದರಿಗಳಿಲ್ಲ. ಬಿಎಂಡಬ್ಲ್ಯು ಈ ಮೂಲಕ ಮಾರಾಟಕ್ಕೆ ಮುಂಚೆಯೇ ಉಳಿದ ಐಶಾರಾಮಿ ಬೈಕ್‌ಗಳಿಗಿಂತ ಹೆಚ್ಚಿನ ಸದ್ದು ಮಾಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.