ADVERTISEMENT

ಮತ್ತಷ್ಟು ಮೆರುಗು ತುಂಬಿದ ಬೆಂಜ್ ಸಿ–ಕ್ಲಾಸ್‌

ಅಮಿತ್ ಎಂ.ಎಸ್.
Published 19 ನವೆಂಬರ್ 2014, 19:30 IST
Last Updated 19 ನವೆಂಬರ್ 2014, 19:30 IST

ಕಾರುಗಳಲ್ಲಿ ಐಷಾರಾಮದ ಸೌಲಭ್ಯಗಳನ್ನು ಅಳವಡಿಸುವು ದರಲ್ಲಿ ಮರ್ಸಿಡಿಸ್‌ ಬೆಂಜ್‌ ಸದಾ ಮುಂದು. ಬೆಂಜ್‌ನ ಐಷಾರಾಮಿ ಕಾರುಗಳು ಭಾರತದ ರಸ್ತೆಗಳಿಗಲ್ಲ ಎಂಬ ಅಪವಾದವನ್ನು ತೊಡೆದುಹಾಕುವ ಉತ್ಸಾಹದಲ್ಲಿದೆ ಈ ಕಂಪೆನಿ. ಆಟೊಮೊಬೈಲ್‌ ಕ್ಷೇತ್ರದಲ್ಲಿ ವ್ಯಾಪಾರ ವಹಿವಾಟು ಕುಸಿದಿದೆ ಎಂಬ ಸನ್ನಿವೇಶದಲ್ಲಿ ತನ್ನ ಎಸ್‌–ಕ್ಲಾಸ್‌ ಮಾದರಿ ಕಾರುಗಳನ್ನು ಸಂಪೂರ್ಣವಾಗಿ ಮಾರಾಟ ಮಾಡಿದ ಹೆಗ್ಗಳಿಕೆ ಅದರದು. ಅದೇ ಉತ್ಸಾಹದೊಂದಿಗೆ ಭಾರತೀಯ ಮಾರುಕಟ್ಟೆಗೆ ವಿನೂತನ ಸಿ–ಕ್ಲಾಸ್‌ ಮಾದರಿ ಕಾರನ್ನು ಪರಿಚಯಿಸುತ್ತಿದೆ. ಅದೂ ಐಟಿ ಜಗತ್ತಿನ ಸಹಯೋಗದೊಂದಿಗೆ.

ಹೊಸ ಸಿ–ಕ್ಲಾಸ್‌ನ ಬಾಹ್ಯ ನೋಟ ಮತ್ತಷ್ಟು ಆಕರ್ಷಕವಾಗಿದೆ. ಗುಣಮಟ್ಟ ಮತ್ತು ಸೌಲಭ್ಯಗಳ ವಿಚಾರದಲ್ಲಿಯೂ ಹೆಚ್ಚು ಆಕರ್ಷಕ ಎಂದು ಕಂಪೆನಿ ಹೇಳಿಕೊಂಡಿದೆ. ಹೊರ ಮತ್ತು ಒಳ ವಿನ್ಯಾಸಗಳಲ್ಲಿ ತುಂಬಾ ಬದಲಾವಣೆಗಳನ್ನು ಮಾಡಿರದಿದ್ದರೂ, ಆಧುನಿಕ ತಾಂತ್ರಿಕತೆಯ ಸ್ಪರ್ಶ ಆಟೊಮೊಬೈಲ್‌ ಕ್ಷೇತ್ರದಲ್ಲಿ ಸಂಚಲನ ಉಂಟುಮಾಡಲಿದೆ ಎನ್ನುವುದು ಕಂಪೆನಿ ಹೇಳಿಕೆ. ಮರ್ಸಿಡಿಸ್‌ ಬೆಂಜ್‌ ಸಿ–ಕ್ಲಾಸ್‌ನ ಒಳಹೊಕ್ಕರೆ ಭವ್ಯವಾದ ಲೋಕದೊಳಗೆ ಪ್ರವೇಶಿಸಿದ ಅನುಭವವಾಗುತ್ತದೆ. ಐಷಾರಾಮ ಎಂಬ ಪದ ಇಲ್ಲಿ ಮತ್ತಷ್ಟು ಐಷಾರಾಮಗೊಂಡಿದೆ. ಆಂತರಿಕ ವಿನ್ಯಾಸ ಮರ್ಸಿಡಿಸ್‌ ಸುಂದರಿಯ ಮೆರುಗನ್ನು ದ್ವಿಗುಣಗೊಳಿಸಿದೆ.

ಐಟಿ–ಆಟೊಮೊಬೈಲ್‌ ಜಂಟಿ ಸಾಹಸ
ಮರ್ಸಿಡಿಸ್‌ನ ಸಿ–ಕ್ಲಾಸ್‌ ಗಮನ ಸೆಳೆದಿರುವುದು ಮಾಹಿತಿ ತಂತ್ರಜ್ಞಾನದ ಅಳವಡಿಕೆಯ ಕಾರಣಕ್ಕೆ. ಕಾರ್‌ನ ಆಂತರಿಕ ಕಾರ್ಯಾಚರಣೆಯ ನಿರ್ವಹಣೆಗೆ ಐಟಿ ತಂತ್ರಜ್ಞಾನ ನೆರವಾಗಿದೆ. ಮೀಟರ್‌ ರೀಡಿಂಗ್‌, ಲೈಟ್‌, ಮ್ಯೂಸಿಕ್‌, ಡೋರ್‌ ಲಾಕ್‌, ಅನ್‌ಲಾಕ್‌ ಹೀಗೆ ವಿವಿಧ ಸೌಲಭ್ಯಗಳಿಗೆ ಹಲವು ಅಪ್ಲಿಕೇಷನ್‌ಗಳನ್ನು ಅಳವಡಿಸಲಾಗಿದೆ.

ನಮ್ಮೂರಿನ ರಸ್ತೆಗಳಲ್ಲೂ ಸೈ
ವಿದೇಶಿ ರಸ್ತೆಗಳಿಗೆ ಅನುಗುಣವಾಗಿ ವಿನ್ಯಾಸಗೊಂಡ ಕಾರುಗಳ ಬಗ್ಗೆ ಭಾರತೀಯ ಗ್ರಾಹಕರಿಂದ ದೂರುಗಳು ಕೇಳಿಬರುತ್ತಲೇ ಇದ್ದವು. ಎತ್ತರದ ಹಂಪ್‌ಗಳನ್ನು ದಾಟಿಸುವಾಗ, ಗುಂಡಿಗಳನ್ನು ತಪ್ಪಿಸುವ ಸಾಹಸದಲ್ಲಿ ಮುಂಭಾಗಕ್ಕೆ ಹಾನಿಯಾಗುತ್ತಿದೆ ಎನ್ನುವುದು ಸಾಮಾನ್ಯ ಆರೋಪ. ಹೀಗಾಗಿ ಭಾರತೀಯ ರಸ್ತೆಗಳಿಗೆಂದೇ ಮುಂಭಾಗವನ್ನು ಸ್ವಲ್‍ಪ ಎತ್ತರಿಸಿ ವಿನ್ಯಾಸಗೊಳಿಸಲಾಗಿದೆ. ಎಸ್‌–ಕ್ಲಾಸ್‌ಗಿಂತ ಗಾತ್ರದಲ್ಲಿ ತುಸು ದೊಡ್ಡದೂ ಹೌದು.

ADVERTISEMENT

ಹಗುರ ಕಮ್ಮಿ, ಸಾಮರ್ಥ್ಯ ಜಾಸ್ತಿ
ಇದುವರೆಗೂ ಕಾರುಗಳ ವಿನ್ಯಾಸ, ಸ್ವರೂಪದಲ್ಲಿ ಬದಲಾವಣೆಗಳಾದರೂ ತೂಕದಲ್ಲಿ ಏಕರೂಪತೆ ಕಾಯ್ದುಕೊಂಡಿತ್ತು ಮರ್ಸಿಡಿಸ್‌. ವಿವಿಧ ಲೋಹಗಳನ್ನು ಬಳಸುತ್ತಿದ್ದ ಕಂಪೆನಿ, ಕಳೆದ ವರ್ಷ ಬಿಡುಗಡೆಯಾದ ಎಸ್‌–ಕ್ಲಾಸ್‌ನಲ್ಲಿ ಅಲ್ಯುಮಿನಿಯಂ ಲೋಹವನ್ನು ಹೈಬ್ರಿಡ್‌ ತಂತ್ರಜ್ಞಾನದೊಂದಿಗೆ ಬಳಸಿತ್ತು. ಇದರಿಂದ ಕೊಂಚವೂ ತೂಕದಲ್ಲಿ ವ್ಯತ್ಯಾಸವಾಗದಂತೆ ಅಷ್ಟೇ ಸದೃಢ ದೇಹ ರಚನೆ ಮಾಡಲಾಗಿದೆ ಎಂದು ಕಂಪೆನಿ ಹೇಳಿಕೊಂಡಿತ್ತು. ಆದರೆ ಹೊಸ ಸಿ–ಕ್ಲಾಸ್‌ನಲ್ಲಿ ಬರೋಬ್ಬರಿ 50 ಕೆ.ಜಿಯಷ್ಟು ತೂಕ ಇಳಿಕೆ ಮಾಡಲಾಗಿದೆ. ಇದೂ ಭಾರತೀಯ ರಸ್ತೆಗಳಿಗೆ ಪೂರಕವಾಗಿ ಮಾಡಲಾದ ಬದಲಾವಣೆ. ಸೂಕ್ಷ್ಮ ಭಾಗಗಳನ್ನು ಹೊರತುಪಡಿಸಿ ಉಳಿದೆಡೆ ಹಗುರ ಲೋಹಗಳನ್ನು ಬಳಸಲಾಗಿದೆ.

ಬೆಳಕು– ಹಲವು ಬಗೆ
ಹೆಡ್‌ಲೈಟ್‌ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳಿವೆ. ಹೆಚ್ಚು ಸಮರ್ಥ ಎಲ್‌ಇಡಿ ಬಲ್ಬ್‌ಗಳಿರುವ ಇದರ ಬೆಳಕು ಹೊಮ್ಮಿಸುವ ಗೆರೆಗಳು ವಿಶಿಷ್ಟ. ಎದುರಿನ ವಾಹನಗಳಿಗೆ ಕಿರಿಕಿರಿ ಉಂಟುಮಾಡದಂತೆ, ಪ್ರಖರತೆಯೂ ಕಡಿಮೆ ಇಲ್ಲದಂತೆ ಹೆಡ್‌ಲೈಟ್‌ ಅನ್ನು ವಿನ್ಯಾಸಗೊಳಿಸಲಾಗಿದೆ. ಎಲ್‌ಇಡಿ ಇಂಟೆಲಿಜೆಂಟ್‌ ಸಿಸ್ಟಮ್‌ ಮತ್ತಷ್ಟು ಚುರುಕುಗೊಂಡಿದೆ. ಪ್ರಮುಖ ಲೈಟ್‌, ಅಂಚಿನಲ್ಲಿರುವ ಲೈಟ್‌ ಮತ್ತು ಹೆಚ್ಚುವರಿ ಆಯ್ಕೆಯ ಹೈಬೀಮ್‌ ಲೈಟ್‌ಗಳು ರಾತ್ರಿ ಪಯಣದಲ್ಲಿ ಹೊಸ ಅನುಭವ ನೀಡುತ್ತವೆ. ಕಣ್ಣಿಗೆ ಹಿತವನ್ನುಂಟು ಮಾಡುವ ಬಿಳಿ ಬೆಳಕು ಹೆಚ್ಚು ಸುರಕ್ಷಿತ ಕೂಡ. ಜತೆಗೆ ಪ್ರಿ ಸೇಫ್‌, ಬ್ರೇಕ್‌ ಅಸಿಸ್ಟ್‌ ಸಿಸ್ಟಮ್‌, ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ, ಟ್ರ್ಯಾಕ್ಷನ್‌ ಕಂಟ್ರೋಲ್‌ ಸಿಸ್ಟಮ್‌, 7 ಏರ್‌ಬ್ಯಾಗ್‌ಗಳು, ಎಲೆಕ್ರ್ಟಿಕ್ ಪಾರ್ಕಿಂಗ್ ಬ್ರೇಕ್, ಹಿಲ್ ಸ್ಟಾರ್ಟ್‌ ಅಸಿಸ್ಟ್‌ ಮತ್ತಿತರ ಸೌಲಭ್ಯಗಳು ರಸ್ತೆಯಲ್ಲಿನ ಸುರಕ್ಷತೆಗೆ ಮಹತ್ವ ನೀಡುತ್ತವೆ.

   ಕಾರು ಎಂದ ಮೇಲೆ ಸಂಗೀತ ಸಾಧನ ಇರಲೇಬೇಕಲ್ಲವೇ? ಕಾರಿನ ಒಳ ಇಣುಕುತ್ತಿದ್ದಂತೆಯೇ ನಿಮ್ಮ ಕಣ್ಣುಕುಕ್ಕುವುದು ಫಳಫಳ ಹೊಳೆಯುವ ಅಂದದ ಸಂಗೀತಗಾರ! ಸ್ಪರ್ಶಸಂವೇದಿ ಐಪ್ಯಾಡ್‌ ಹೆಚ್ಚು ಸರಳವೂ ಹೌದು. ಚಾಲಕನ ಕಣ್ಣಿಗೆ ನೇರವಾಗಿ ಗೋಚರಿಸುವಂತೆ ಅದರ ಪರದೆ ಇದೆ. ಹೀಗಾಗಿ ಹಾಡುಗಳ ಆಯ್ಕೆ, ಶಬ್ದದ ಏರಿಳಿತ ಇತ್ಯಾದಿಗಳ ಬದಲಾವಣೆ ಬೆರಳಿನಂಚಿಗೇ ಲಭ್ಯ! ಹೊಸ ತಂತ್ರಜ್ಞಾನದ ಟಚ್‌ಪ್ಯಾಡ್‌ನಲ್ಲಿ ವಿವಿಧ ಇಂಟರ್‌ ಫೇಸ್‌ಗಳು, ಮಲ್ಟಿ ಮೀಡಿಯಾ, ಇನ್ಫೊಟೈನ್‌ಮೆಂಟ್‌ ವ್ಯವಸ್ಥೆಯನ್ನು ಸುಲಭವಾಗಿ ಆಪರೇಟ್‌ ಮಾಡಬಹುದು.

ಐಟಿ ಮಹಿಮೆ!
ಇದರ ವಾಯುಬಲ ವಿನ್ಯಾಸ ಸ್ವಯಂಚಾಲಿತವಾಗಿ ಗಾಳಿಯನ್ನು ನಿಯಂತ್ರಿಸುವ ಕೌಶಲ ಹೊಂದಿದೆ. ಹೆಚ್ಚು ಶಕ್ತಿಶಾಲಿ ಮತ್ತು ದಕ್ಷ ಎಂಜಿನ್‌ ಇದರದ್ದು. ಹೆಚ್ಚು ಚುರುಕು ಮತ್ತು ಹೊಗೆಯಲ್ಲಿ ಮಾಲಿನ್ಯದ ಅಂಶ ಕಡಿಮೆ. ಕಾರಿನ ಕುರಿತು ನೀವು ಗಮನ ಕೊಡುವುದು ಬೇಕಿಲ್ಲ; ಅದೇ ನಿಮ್ಮ ಗಮನ ಸೆಳೆಯುತ್ತದೆ ಎನ್ನುತ್ತದೆ ಕಂಪೆನಿ. ಅತ್ಯಾಧುನಿಕ ಮತ್ತು ವಿಶಿಷ್ಟ ತಂತ್ರಜ್ಞಾನ ಸಿ–ಕ್ಲಾಸ್‌ನ ಹೆಗ್ಗಳಿಕೆಗಳಲ್ಲಿ ಒಂದು. ಚಾಲನೆಯಲ್ಲಿರುವಾಗ ಕಾರಿನ ಗತಿಯಲ್ಲಿ ಏರುಪೇರಾದರೆ, ಸಮರ್ಪಕವಾಗಿ ಕಾರು ಸಾಗುತ್ತಿಲ್ಲವೆಂದಾದಾಗ ಈ ವ್ಯವಸ್ಥೆ ನಿಮ್ಮನ್ನು ಎಚ್ಚರಿಸುತ್ತದೆ. ಈ ತಂತ್ರಜ್ಞಾನ ಹೊರಡಿಸುವ ಸಂದೇಶ ನಿಮ್ಮ ತಾಳ್ಮೆಗೆಡದಂತೆ ಎಚ್ಚರಿಸುತ್ತದೆಯೇ ವಿನಾ ಗೊಂದಲ ಉಂಟುಮಾಡುವುದಿಲ್ಲ.

ಇದರ ಸಸ್ಪೆನ್ಷನ್‌ ಸಂಪೂರ್ಣ ಸ್ವಯಂಚಾಲಿತ ಮತ್ತು ಹೆಚ್ಚು ದಕ್ಷವಾಗಿ ಕಾರ್ಯನಿರ್ಹವಣೆ ಮಾಡುತ್ತದೆ. ಪ್ರತಿ ಚಕ್ರ ಬಾಗಿರುವ ಕೋನದ ಪ್ರಮಾಣವನ್ನು ಮೀಟರ್‌ ತೋರಿಸುತ್ತದೆ. ಹೆಚ್ಚು ಆರಾಮದಾಯಕವಾಗಿ ಅಥವಾ ರೇಸ್‌ ವಾಹನದಂತೆ ನಿಮ್ಮ ಇಚ್ಛೆಗೆ ಅನುಗುಣವಾಗಿ ಚಾಲನೆ ಮಾದರಿಯನ್ನು ಬದಲಾಯಿಸಿಕೊಳ್ಳುವುದೂ ಸಲೀಸು. ಇದೆಲ್ಲಾ ಐಟಿ ತಂತ್ರಜ್ಞಾನದ ಅಳವಡಿಕೆಯ ಲಾಭಗಳು. ಸಿ–ಕ್ಲಾಸ್‌ನ ಪ್ರಾಥಮಿಕ ಉಪಕರಣಗಳು ಭಾರತದ್ದೇ ಆದರೂ ಮುಖ್ಯ ಭಾಗಗಳು ಜರ್ಮನಿಯಿಂದ ಆಮದಾಗುತ್ತದೆ. ಅಂದಹಾಗೆ ಇದರಲ್ಲಿ ಬಳಸಲಾಗುವ ತಂತ್ರಜ್ಞಾನ ಮಾತ್ರ ಸಂಪೂರ್ಣ ಭಾರತದ್ದು. ಸಿ–ಕ್ಲಾಸ್‌ ಮಾದರಿಯನ್ನು ಮುಂದಿನ ವರ್ಷ ನಿಧಾನವಾಗಿ ತರುವ ಆಲೋಚನೆ ಹೊಂದಿದ್ದ ಕಂಪೆನಿ ಎಸ್‌–ಕ್ಲಾಸ್‌ ಸಂಪೂರ್ಣವಾಗಿ ಮಾರಾಟವಾದದ್ದನ್ನು ಕಂಡು ಈ ತಿಂಗಳಿನಲ್ಲಿಯೇ ಮಾರುಕಟ್ಟೆಗೆ ತರು ತ್ತಿದೆ. ಮರ್ಸಿಡಿಸ್‌ ಬೆಲೆ 38–42 ಲಕ್ಷ ರೂಪಾಯಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.