ADVERTISEMENT

ಮತ್ತೆ ಬರಲಿದೆ ಅಂಬಾಸಿಡರ್‌!

ನೇಸರ ಕಾಡನಕುಪ್ಪೆ
Published 22 ಫೆಬ್ರುವರಿ 2017, 19:30 IST
Last Updated 22 ಫೆಬ್ರುವರಿ 2017, 19:30 IST
ಮತ್ತೆ ಬರಲಿದೆ ಅಂಬಾಸಿಡರ್‌!
ಮತ್ತೆ ಬರಲಿದೆ ಅಂಬಾಸಿಡರ್‌!   
ಹಿಂದೂಸ್ತಾನ್ ಮೋಟಾರ್ಸ್‌ 1958ರಲ್ಲಿ ತಯಾರಿಸಲು ಆರಂಭಿಸಿದ ಅಂಬಾಸಿಡರ್‌ ಕಾರು ಅದೆಷ್ಟು ಪ್ರಸಿದ್ಧಿ ಪಡೆಯಿತು ಎಂದರೆ, ಮಾರುತಿ ಸುಜುಕಿ ತನ್ನ 800 ಕಾರ್‌ ಅನ್ನು ಹೊರಬಿಡುವವರೆಗೂ ಅದಕ್ಕೆ ವೈರಿಯೇ ಇರಲಿಲ್ಲ. ಈ ನಡುವೆ ಫಿಯೆಟ್‌ನ ಪದ್ಮಿನಿ ಕಾರ್‌ ಇತ್ತಾದರೂ ಅದು ಅಂಬಾಸಿಡರ್‌ಗೆ ತಕ್ಕ ಸ್ಪರ್ಧಿಯೇನಲ್ಲ. ಅಂಬಾಸಿಡರ್, ‘ಕಿಂಗ್ ಆಫ್ ಇಂಡಿಯನ್ ರೋಡ್ಸ್‌’ ಎಂದೇ ಹೆಸರು ಗಳಿಸಿತ್ತು.
 
ಮಾರುತಿ ಸುಜುಕಿಯ ನಂತರ ದೇಶ ವಿದೇಶಗಳ ಕಾರ್‌ ಕಂಪೆನಿಗಳು ಹೊಸ ಹೊಸ ಆಧುನಿಕ ಕಾರ್‌ಗಳನ್ನು ಹೊರಬಿಡುತ್ತಾ ಹೋದಂತೆ ಅಂಬಾಸಿಡರ್‌ಗೆ ಇದ್ದ ಬೇಡಿಕೆ ದಿನೇ ದಿನೇ ಕಡಿಮೆಯಾಗಿ, ಮಾರಾಟ ಕುಸಿತವಾಯಿತು. ನಷ್ಟದಿಂದ 2014ರಲ್ಲಿ ತಯಾರಿಕೆಯನ್ನು ನಿಲ್ಲಿಸಬೇಕಾಯಿತು.
 
ಹೀಗಾದರೂ, ಅಂಬಾಸಿಡರ್‌ಗೆ ಅದರದ್ದೇ ಆದ ಅಭಿಮಾನಿಗಳು ಇದ್ದಾರೆ. ಮೋಟಾರ್‌ ಸೈಕಲ್‌ನಲ್ಲಿ ರಾಯಲ್‌ ಎನ್‌ಫೀಲ್ಡ್‌ ಇದ್ದಂತೆ, ಕಾರುಗಳಲ್ಲಿ ಅಂಬಾಸಿಡರ್‍ ಲೆಜೆಂಡ್ ಸ್ಥಾನ ಗಳಿಸಿಕೊಂಡುಬಿಟ್ಟಿದೆ. ಅದರ ವಿನ್ಯಾಸ, ಗಟ್ಟಿ ಮುಟ್ಟಾದ ದೇಹಕ್ಕೆ ಮಾರುಹೋಗಿರುವ ಅಭಿಮಾನಿಗಳು ಇಂದಿಗೂ ತಮ್ಮ ಬಳಿ ಇರುವ ಕಾರ್‌ ಅನ್ನು ಮಾರದೇ ಇನ್ನೂ ಬಳಸುತ್ತಿದ್ದಾರೆ.
 
ಇನ್ನು ಟ್ಯಾಕ್ಸಿಯಲ್ಲಿ ಅಂಬಾಸಿಡರ್‌ದು ದೊಡ್ಡ ಪಾತ್ರ. ಅದರ ಗಟ್ಟಿಮುಟ್ಟಾದ ದೇಹ, ಸುರಕ್ಷಾ ಭಾವನೆಯನ್ನು ಗ್ರಾಹಕರಲ್ಲಿ ಮೂಡಿಸಿದೆ. ಎಂತಹ ಕೆಟ್ಟ ಅಪಘಾತದಲ್ಲೂ ಅಂಬಾಸಿಡರ್‌ ಒಳಗೆ ಕುಳಿತವರು ಸುರಕ್ಷಿತರು ಎಂಬ ಭಾವನೆ  ಇರುವ ಕಾರಣ, ಟ್ಯಾಕ್ಸಿ ಕ್ಷೇತ್ರದಲ್ಲಿ ಅಂಬಾಸಿಡರ್‌ಗೆ ದೊಡ್ಡ ಹೆಸರಿದೆ. 
 
ಅಂಬಾಸಿಡರ್‌ ಕಾರ್‍ ತಯಾರಿಕೆ ನಿಂತು ಹೋದ ಮೇಲೆಯೂ ಕಂಪೆನಿ ಮತ್ತೆ ಅದೇ ಕಾರನ್ನು ತಯಾರಿಸುತ್ತದೆ ಎಂಬ ಆಶಾಭಾವನೆ ಕಾರುಪ್ರಿಯರಲ್ಲಿ ಇದ್ದೇ ಇತ್ತು. ಹೊಸ ಸ್ವರೂಪದಲ್ಲಿ ಈ ಕಾರು ಹೊರಬರುತ್ತದೆ, ಆಧುನಿಕ ಸೌಲಭ್ಯಗಳನ್ನು ಹೊಂದಿರುತ್ತದೆ, ಮತ್ತಷ್ಟು ಆಕರ್ಷಕವಾಗಿ ಹೊರಬರುತ್ತದೆ ಎಂಬೆಲ್ಲಾ ಸುದ್ದಿಗಳು ಹರಿದಾಡುತ್ತಿದ್ದವು.
 
ಅದು ಕೊಂಚ ನಿಜವೂ ಆಗಿತ್ತು. ಹೇಗೆಂದರೆ, ಅಂತರರಾಷ್ಟ್ರೀಯ ಕಾರು ಪ್ರದರ್ಶನಗಳಲ್ಲಿ ಹೊಸ ವಿನ್ಯಾಸದ ಅಂಬಾಸಿಡರ್‌ ಕಾರಿನ ಕಾನ್ಸೆಪ್ಟ್‌ ಮಾದರಿಗಳು ಪ್ರದರ್ಶನ ಕಂಡಿದ್ದವು. ಆದರೂ, ಅಂಬಾಸಿಡರ್‌ ಮತ್ತೆ ಉತ್ಪಾದನೆ ಕಾಣಲೇ ಇಲ್ಲ. ನಿಧಾನವಾಗಿ ಜನಮನದಿಂದ ಕಾರು ದೂರವಾಗುತ್ತಾ ಹೋಯಿತು. 
 
ಮತ್ತೆ ಸುದ್ದಿಯಲ್ಲಿ ಲೆಜೆಂಡ್‌...
ಈಗ ಅಂಬಾಸಿಡರ್‌ ಮತ್ತೆ ಸದ್ದು ಮಾಡಿದೆ. ಹಿಂದೂಸ್ತಾನ್‌ ಮೋಟಾರ್ಸ್‌ ತನ್ನ ಅಂಬಾಸಿಡರ್‌ನ ಮೇಲಿದ್ದ ಎಲ್ಲ ಹಕ್ಕುಗಳನ್ನೂ ಫ್ರಾನ್ಸ್‌ ಮೂಲದ ಬಹುರಾಷ್ಟ್ರೀಯ ವಾಹನ ಕಂಪೆನಿಯಾದ ‘ಪಿಎಸ್‌ಎ ಗ್ರೂಪ್‌’ಗೆ ಮಾರಿದೆ. ಅದೂ ಅಲ್ಲದೇ, ಕೇವಲ 80 ಕೋಟಿ ರೂಪಾಯಿಗೆ ಹಕ್ಕುಗಳನ್ನು ಮಾರಿದೆ. ಕಾರಿನ ಎಲ್ಲ ಮಾದರಿಗಳು, ಟ್ರೇಡ್‌ ಮಾರ್ಕ್‌ಗಳು, ಲೋಗೊಗಳೂ ಸೇರಿಕೊಳ್ಳುತ್ತವೆ. 
 
ಹಿಂದೂಸ್ತಾನ್‌ ಮೋಟಾರ್ಸ್‌ ತನ್ನ ಸಾಲ ತೀರಿಸಿಕೊಳ್ಳಲು ಈ ಹಣವನ್ನು ಬಳಸಿಕೊಳ್ಳುವುದಾಗಿ ತಿಳಿಸಿದೆ. ‘ಪಿಎಸ್‌ಎ ಗ್ರೂಪ್‌’ ಕಾರ್‌ ಅನ್ನು ಯಾವ ರೀತಿ ಉತ್ಪಾದಿಸಲಿದೆ ಎಂಬ ಮಾಹಿತಿ ಸದ್ಯಕ್ಕಂತೂ ಇಲ್ಲ. ಕಾರು ಈಗ ಇರುವಂತೆಯೇ ಅದರ ವಿನ್ಯಾಸವನ್ನು ಉಳಿಸಿಕೊಳ್ಳುವುದೋ, ಹೊಸ ವಿನ್ಯಾಸ ಪಡೆಯುವುದೋ ಕಾದು ನೋಡಬೇಕಿದೆಯಷ್ಟೇ. ಆದರೆ, ಅಂತರರಾಷ್ಟ್ರೀಯ ವಾಹನ ಕಂಪೆನಿಯಾಗಿರುವ ಕಾರಣ, ಕೆಲವು ಅಂತರರಾಷ್ಟ್ರೀಯ ಮಾನದಂಡಗಳನ್ನು ಹೊಸ ಅಂಬಾಸಿಡರ್‌ ಕಾರಿಗೆ ಅನ್ವಯಿಸುವಂತೆ ನಿರ್ಮಿಸುವುದಾಗಿ ಮೂಲಗಳು ತಿಳಿಸಿವೆ.
 
ಬಿರ್ಲಾ ಕಂಪೆನಿಯು 1957ರಲ್ಲಿ ಮಾರಿಸ್‌ ಆಕ್ಸ್‌ಫರ್ಡ್‌ 3 ಮಾದರಿ ಕೊಂಡುಕೊಂಡು ಭಾರತದಲ್ಲಿ ಅಂಬಾಸಿಡರ್‌ ಕಾರನ್ನು ಪರಿಚಯಿಸಿತ್ತು. ಅಂಬಾಸಿಡರ್‌, ಹಿಂದೆ ಬರುತ್ತಿದ್ದಂತೆ ಪೆಟ್ರೋಲ್‌, ಡೀಸೆಲ್ ಅವತರಣಿಕೆಗಳಲ್ಲಿ ಸಿಗಲಿದೆ. ಅಲ್ಲದೇ, ಅಂಬಾಸಿಡರ್‌ನ ಮಾರ್ಕ್‌ಸಿರೀಸ್ ಕಾರ್‌ಗಳನ್ನು ಸಹ ‘ಪಿಎಸ್‌ಎ ಗ್ರೂಪ್‌’ ನೀಡಲಿದೆ. ನೋವಾ, ಐಎಸ್‌ಜೆಡ್‌ (ಇಸುಜು), ಗ್ರಾಂಡ್ ಹಾಗೂ ಅವಿಗೊ ಕಾರುಗಳ ಹಕ್ಕುಗಳನ್ನು ಸಹ ಕೊಂಡುಕೊಂಡಿದ್ದು, ಕಾರುಗಳು ಹೊಸ ವಿನ್ಯಾಸದಲ್ಲಿ ರೂಪುಗೊಳ್ಳಲಿವೆ.
 
ಕಳೆದ ವರ್ಷ ‘ಪಿಎಸ್‌ಎ ಗ್ರೂಪ್‌’ ಕಂಪೆನಿ ಭಾರತದಲ್ಲಿ ಸಿಕೆ ಬಿರ್ಲಾ ಗ್ರೂಪ್‌ ಜತೆಗೆ ಒಡಂಬಡಿಕೆ ಮಾಡಿಕೊಂಡು ಉದ್ಯಮ ಆರಂಭಿಸುವುದಾಗಿ ತಿಳಿಸಿತ್ತು. ಅದರಂತೆ, ಒಡಂಬಡಿಕೆ ಪೂರ್ಣಗೊಂಡಿದ್ದು, ಮೊದಲ ಹೆಜ್ಜೆಯಾಗಿ ಅಂಬಾಸಿಡರ್‌ ಕಾರುಗಳ ಹಕ್ಕುಗಳನ್ನು ಕೊಂಡುಕೊಂಡಿದೆ. ಪ್ಯೂಗಾಟ್ ಹಾಗೂ ಸಿಟ್ರಾನ್‌ ಕಾರು ಕಂಪೆನಿಗಳು ‘ಪಿಎಸ್‌ಎ ಗ್ರೂಪ್‌’ನ ಮಾಲೀಕರು. ಇವರು ಭಾರತದಲ್ಲಿ ಈವರೆಗೂ ಉದ್ಯಮ ಶುರುಮಾಡಿರಲಿಲ್ಲ.
 
ವಾಹನ ತಯಾರಿಕೆ ಮಾತ್ರವೇ ಅಲ್ಲದೇ, ವಿದ್ಯುತ್‌ ಉತ್ಪಾದನಾ ಕಾರ್ಯದಲ್ಲಿ ತೊಡಗಿಕೊಳ್ಳುವುದಾಗಿ ಮಾಹಿತಿ ನೀಡಿದೆ. ಈಚೆಗಷ್ಟೇ ಪ್ರಕಟಣೆ ನೀಡಿರುವ ‘ಪಿಎಸ್‌ಎ ಗ್ರೂಪ್‌’, 2021ಕ್ಕೆ ಸಂಪೂರ್ಣವಾಗಿ ವಾಹನ ಉತ್ಪಾದನೆ ಆರಂಭಿಸುವುದಾಗಿ ತಿಳಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.