ADVERTISEMENT

ಮತ್ತೆ ಬಾಲ್ಯಕ್ಕೆ ಜಾರೋಣ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2017, 19:30 IST
Last Updated 8 ನವೆಂಬರ್ 2017, 19:30 IST
ಮತ್ತೆ ಬಾಲ್ಯಕ್ಕೆ ಜಾರೋಣ
ಮತ್ತೆ ಬಾಲ್ಯಕ್ಕೆ ಜಾರೋಣ   

ಪಣತದಲ್ಲಿನ ಅಜ್ಞಾತವಾಸ

ಆಗಿನ್ನು ನನಗೆ 5-6 ವರ್ಷ ವಯಸ್ಸು. ನಮ್ಮ ಮನೆಯಲ್ಲಿ ನನ್ನ ಅಣ್ಣಂದಿರು, ಅಕ್ಕಂದಿರಷ್ಟೇ ಅಲ್ಲದೇ, ಹೈಸ್ಕೂಲು ಓದಲು ಅನುಕೂಲವಿಲ್ಲದ ಸಂಬಂಧಿಕರ ಮಕ್ಕಳನ್ನು ಕರೆತಂದು ನಮ್ಮ ಮನೆಯಲ್ಲಿಟ್ಟುಕೊಂಡು ನಮ್ಮ ತಂದೆ ಓದಿಸುತ್ತಿದ್ದರು. ದೂರದ ಊರುಗಳಿಂದ ಬಂದು, ನಮ್ಮ ಮನೆಯಲ್ಲಿದ್ದುಕೊಂಡು ಓದುತ್ತಿದ್ದ ಸಂಬಂಧಿಕರ ಮಕ್ಕಳೆಲ್ಲಾ ಸೇರಿ, ಮನೆ ತುಂಬಾ ಮಕ್ಕಳಿದ್ದೆವು.

ಸಂಸಾರದಲ್ಲಿ ಸಾಕಷ್ಟು ಸಂತೃಪ್ತಿ, ಸಮೃದ್ಧಿ ಇದ್ದ ಕಾಲ. ಹಾಗಾಗಿ ದವಸ-ಧಾನ್ಯ ತುಂಬಿಸಿಡಲು ಪಣತಗಳನ್ನು ಕಟ್ಟಿಸಿದ್ದರು. ಅದು ಹೇಗಿತ್ತು ಅಂದರೆ, ಕಿಟಕಿಗಳಿಲ್ಲದ ಒಂದು ಕತ್ತಲೆ ಕೋಣೆ, ಅದರಲ್ಲಿ ಎರಡು ಪಣತ, ಅದನ್ನು ಹತ್ತಿ ಇಳಿಯಲು ಮತ್ತು ಅಲ್ಲಿ ಓಡಾಡಲೊಂದಿಷ್ಟು ಓಣಿ. ಹಗಲು ಹೊತ್ತಿನಲ್ಲಿ ಬೆಳಕು ಬರಲು ಬೆಳಕಿನ ಹೆಂಚನ್ನು ಹಾಕಿದ್ದರು.

ADVERTISEMENT

ದೂರದ ಬೆಂಗಳೂರಲ್ಲಿ ನನ್ನ ಸೋದರಮಾವ ಎಂಜಿನಿಯರ್ ಆಗಿದ್ದರು. ಅತ್ಯಂತ ಶಿಸ್ತಿನ ಸಿಪಾಯಿಯಂತಿದ್ದ ಅವರು ಮಕ್ಕಳ ಓದಿನ ವಿಷಯದಲ್ಲಿ ತುಂಬಾ ಸ್ಟ್ರಿಕ್ಟ್. ಯಾರೇ ತಪ್ಪು ಮಾಡಿದರೂ ಶಿಕ್ಷೆ ಕಟ್ಟಿಟ್ಟ ಬುತ್ತಿ. ಖಡಕ್ ಆಗಿರುತ್ತಿದ್ದ ಅವರನ್ನು ನೆನೆದರೆ ನಮಗೆಲ್ಲಾ ಚಳಿ-ಜ್ವರ ಒಟ್ಟಿಗೇ ಬಂದಂತಾಗುತ್ತಿತ್ತು. ಅಪರೂಪಕ್ಕೊಮ್ಮೆ ನಮ್ಮೂರಿಗೆ ಬಂದು ಹೋಗುತ್ತಿದ್ದರು. ಅವರೆದುರಿಗೆ ಯಾವ ಮಕ್ಕಳೂ ಬಂದು ನಿಲ್ಲುತ್ತಿರಲಿಲ್ಲ. ಅವರು ವಾಪಸ್ಸಾಗುವವರೆಗೂ ಭಯದಲ್ಲಿಯೇ ಇರುತ್ತಿದ್ದೆವು. ಹೀಗೆ ಒಮ್ಮೆ ಅವರು ಒಂದು ಸಂಜೆ ನಮ್ಮ ಮನೆಗೆ ಬರುತ್ತಾರೆ ಅನ್ನುವ ವಿಚಾರ ಗೊತ್ತಾಗಿದ್ದೆ ತಡ ಮಕ್ಕಳೆಲ್ಲಾ ಸೇರಿ ಮೀಟಿಂಗ್ ನಡೆಸಿದ್ದೆವು. ಬೆಳಿಗ್ಗೆ ಸಮಯದಲ್ಲಿಯಾಗಿದ್ದರೆ ಶಾಲೆಗೆ ಹೋಗುವುದರಿಂದಾಗಿ ತಪ್ಪಿಸಿಕೊಳ್ಳಬಹುದಿತ್ತು. ಆದರೆ ಅವರು ಬರುತ್ತಿರುವುದು ಸಾಯಂಕಾಲದ ಹೊತ್ತು, ಅಲ್ಲದೇ ಅದೇ ರಾತ್ರಿಯೇ ಹೊರಡುವವರಿದ್ದರು. ಹೀಗಾಗಿ ಅವರಿರುವ ಒಂದೆರಡು ಗಂಟೆಗಳ ಕಾಲ ಎಲ್ಲಿಯಾದರೂ ಅಡಗಿಕೊಳ್ಳುವ ಆಲೋಚನೆ ಮಾಡಿದಾಗ ಹೊಳೆದದ್ದೇ ಪಣತದ ಪ್ರಶಸ್ಥ ಸ್ಥಳ.

ಅಂದು ಸಂಜೆ ಮನೆಯಲ್ಲಿ ದೊಡ್ಡವರೆಲ್ಲಾ ಸೇರಿ, ನಮ್ಮ ಸೋದರ ಮಾವನವರ ಆತಿಥ್ಯಕ್ಕಾಗಿ ಹೋಳಿಗೆ ಅಡುಗೆ ಸಿದ್ಧತೆಯಲ್ಲಿ ತೊಡಗಿದ್ದರೆ, ಮಕ್ಕಳೆಲ್ಲಾ ದೊಡ್ಡವರಿಗೆ ಯಾವ ಸುಳಿವನ್ನೂ ಕೊಡದೇ ಪಣತದಲ್ಲಿ ಅಡಗುವ ಸಾಹಸದಲ್ಲಿ ತಲ್ಲೀನರಾಗಿದ್ದೆವು. ಏಳೆಂಟು ಅಡಿ ಎತ್ತರದ ಪಣತದ ಗೋಡೆ ಏರಲು ಏಣಿ ಹಾಕಿಕೊಂಡು ಒಬ್ಬರಾದ ಮೇಲೊಬ್ಬರು ಏಣಿ ಹತ್ತಿ, ಮುಕ್ಕಾಲು ಪಾಲು ದವಸ ತುಂಬಿದ್ದ ಪಣತದ ಒಳಗೆ ಹಾರಿಕೊಳ್ಳುವ ಕೆಲಸ ನಡೆದಿತ್ತು. ಮೂರ್ನಾಲ್ಕು ಜನ ಪಣತದಲ್ಲಿ ಇಳಿದ ಮೇಲೆ ಚಿಕ್ಕವಳಾದ ನನ್ನನ್ನೂ ಕೆಳಗಿನಿಂದ ಒಬ್ಬರು ಆಸರೆಯಾಗಿ ಹಿಡಿದುಕೊಂಡು ಏಣಿ ಹತ್ತಿಸಿದರು. ಪಣತದಲ್ಲಿ ಆಗಲೇ ಇಳಿದಿದ್ದ ಇತರರು ನನ್ನನ್ನು ಇಳಿಸಿಕೊಳ್ಳುವಾಗ ನನ್ನ ಅಕ್ಕ ಹೊಲಿದಿದ್ದ ನನ್ನ ಹೊಸ ಫ್ರಾಕ್‌ ಆಕಸ್ಮಿಕವಾಗಿ ಏಣಿಗೆ ಸಿಕ್ಕಿ ಪರ್‍ರನೆ ಹರಿಯಿತು. ನನ್ನ ಹೊಚ್ಚ ಹೊಸ ಫ್ರಾಕ್‌ ಹರಿದಿದ್ದರಿಂದ ನನ್ನ ದುಃಖದ ಕಟ್ಟೆ ಒಡೆಯಿತು.

ಅಷ್ಟರಲ್ಲಿ ನನ್ನ ಹಿಂದಿದ್ದವರೆಲ್ಲಾ ಪಣತ ಹತ್ತಿ, ಒಳಗೆ ಧುಮುಕಿ, ಆಚೆಯಿಂದ ಯಾರೂ ಹತ್ತದಿರಲೆಂದು ಏಣಿಯನ್ನೂ ಮೇಲಕ್ಕೆತ್ತಿಕೊಂಡಿದ್ದರು. ಈಗ ಎಲ್ಲರಿಗೂ ಮಾವನವರಿಂದ ತಪ್ಪಿಸಿಕೊಳ್ಳುವ ಸಾಹಸದಲ್ಲಿ ಯಶಸ್ವಿಯಾದ ಖುಷಿಯಾದರೆ, ನನಗೆ ನನ್ನ ಹೊಸ ಫ್ರಾಕ್‌ ಹರಿದ ದುಃಖ. ಆದರೆ ಶಬ್ದ ಬರುವಂತಿರಲಿಲ್ಲ, ದೊಡ್ಡವರಿಗೆ ಗೊತ್ತಾದರೆ ಎಲ್ಲರೂ ಮಾವನವರ ಕೈಗೆ ಸಿಕ್ಕಿಕೊಳ್ಳುವ ಭಯದಲ್ಲಿ ಅಳು ನಿಲ್ಲಿಸಿದೆ.

ಇತ್ತ ನನ್ನ ಮಾವ ಊಟ ಮುಗಿಸಿ, ಹೊರಡುವ ವೇಳೆಗೆ ‘ಮಕ್ಕಳೆಲ್ಲಾ ಎಲ್ಲಿ? ಯಾರೂ ಕಾಣಿಸುತ್ತಿಲ್ಲ’ ಎಂದಾಗಲೇ ಮನೆಯವರಿಗೆಲ್ಲಾ ನಮ್ಮ ನೆನಪಾಗಿದ್ದು. ಎಲ್ಲಿ ಹುಡುಕಿದರೂ ನಮ್ಮ ಸುಳಿವಿಲ್ಲ. ಅಷ್ಟೊತ್ತಿಗಾಗಲೇ ಪಣತದಲ್ಲಿ ಅಡಗಿದ್ದ ನಮಗೆಲ್ಲಾ ಅಲ್ಲಿಯ ಸೆಕೆ ತಡೆಯದಾಗಿ, ಉಸಿರು ಕಟ್ಟಿದಂತಾಗಿ ಯಾರಿಗೋ ಕೆಮ್ಮು ಶುರುವಾಯಿತು. ಕೆಮ್ಮಿನ ಸದ್ದು ಕೇಳಿ ಹುಡುಕಿಕೊಂಡು ಬಂದವರಿಗೆ ನಮ್ಮ ಸುಳಿವು ಸಿಕ್ಕಿತ್ತು. ಅಂತೂ ಕೊನೆಗೆ ನಮ್ಮ ಪಣತದಲ್ಲಿನ ಅಜ್ಞಾತವಾಸಕ್ಕೆ ಭಂಗವಾಯಿತು.

ನಮ್ಮನ್ನೆಲ್ಲಾ ಅಲ್ಲಿಂದ ಇಳಿಸಿದರು. ಆಗ ನನ್ನ ಮಾವನವರು ಮಕ್ಕಳನ್ನೆಲ್ಲಾ ಪ್ರೀತಿಯಿಂದ ಮಾತನಾಡಿಸಿ, ‘ನನಗೆ ಹೆದರಿಕೊಂಡು ಯಾಕೆ ನೀವೆಲ್ಲಾ ಪಣತ ಹತ್ತಿದಿರಿ, ನಾನೇನೂ ಮಾಡುವುದಿಲ್ಲ ಬನ್ರೋ’ ಅಂತ ಮನಸ್ಸಾರೆ ನಕ್ಕರು, ನಮಗೆಲ್ಲಾ ದೊಡ್ಡ ಗಂಡಾಂತರ ತಪ್ಪಿದಂತಾಯಿತು. ಮುಂದೆ ನಾನು ಅವರ ಕಿರಿ ಮಗನನ್ನೇ ಮದುವೆಯಾಗಿ ಅವರ ಮನೆಗೇ ಕಿರಿಸೊಸೆಯಾಗಿ ಬಂದೆ.

– ಕೆ.ಸಿ.ರತ್ನಶ್ರೀ ಶ್ರೀಧರ್ ಬೆಂಗಳೂರು

**

ಬಾಲ್ಯದ ನೆನಪಿನ ಓಣಿಯಲ್ಲಿ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯಕ್ಕೆ ಸೇರಿದ ಜಾಲ್ಸೂರು ನಮ್ಮೂರು. ದಕ್ಷಿಣ ಕನ್ನಡ ಜಿಲ್ಲೆಯೆಂದ ಮೇಲೆ ಕೇಳಬೇಕೆ? ಬೇಸಿಗೆಯಲ್ಲಿ ಬೆವರಿನಲ್ಲೇ ಸ್ನಾನವಾಗುತ್ತದೆ. ಆದರೆ ರಜೆಯ ದಿನಗಳಲ್ಲಿ ಮಕ್ಕಳೆಲ್ಲ ಒಟ್ಟಿಗೆ ಪಕ್ಕದಲ್ಲೇ ಹರಿಯುತ್ತಿದ್ದ ಪಯಸ್ವಿನಿ ನದಿಯಲ್ಲಿ ಸ್ನಾನಕ್ಕೆ ಹೋದೆವು ಎಂದರೆ ಅದು ಹಬ್ಬ. ಹೋಗುವ ಮುನ್ನ ಹಿರಿಯರಿಂದ ಅನುಮತಿ ಪಡೆಯುವ ಪ್ರಯಾಸ, ‘ಬೇಗ ಬನ್ನಿ’ಎಂಬ ಎಚ್ಚರಿಕೆ, ಬೇಸಿಗೆಯ ಆ ಧಗೆ ಎಲ್ಲವೂ ನೀರಿಗೆ ಬಿದ್ದ ಕೂಡಲೇ ಮರೆತು ಹೋಗುತ್ತಿದ್ದವು. ಬಂಡೆಗಲ್ಲಿಂದ ನೀರಿಗೆ ನೆಗೆಯುವುದು, ಮುಳುಗು ಹಾಕಿ ಏಳುವುದು, ಕ್ರಮಬದ್ಧವಾಗಿ ಕಲಿಯದಿದ್ದರೂ ಕೈಕಾಲು ಬಡಿಯುತ್ತ ಮನಬಂದಂತೆ ಈಜುವುದರಲ್ಲಿ ನಮಗೆ ಹೊತ್ತು ಹೋದುದೇ ತಿಳಿಯುತ್ತಿರಲಿಲ್ಲ. ಮತ್ತೆ ಹೊಟ್ಟೆ ಚುರುಗುಟ್ಟತೊಡಗಿದಾಗ ಮನೆಯ ನೆನಪಾಗಿ ಬಂದು ಬೈಸಿಕೊಂಡು ಒಳಹೋಗುತ್ತಿದ್ದೆವು. ಫ್ಯಾನ್‌ಯಿಲ್ಲದ ನಮ್ಮ ಬಾಲ್ಯದ ದಿನಗಳಲ್ಲಿ ಸ್ನಾನದ ಬಳಿಕ ಮಧ್ಯಾಹ್ನದ ಕುಚ್ಚಿಲಕ್ಕಿ ಗಂಜಿಯೂಟ ಮಾಡುವಾಗಲಂತೂ ಎರಡನೇ ಸಲ ಸ್ನಾನವಾಗುತ್ತಿತ್ತು ಎನ್ನಿ. ಊಟದ ಮಧ್ಯೆ ಅಡಿಕೆ ಹಾಳೆಯನ್ನು ತುಂಡರಿಸಿ ತಯಾರಿಸಿದ ಹಳ್ಳಿಯ ಅಗ್ಗದ ಬೀಸಣಿಗೆಯನ್ನು ಎಡಗೈಯಿಂದ ಬೀಸುತ್ತಿದ್ದರೆ ಹಾಯೆಂದು ಸ್ವರ್ಗ ಸುಖವೆಂದರೆ ಇದೇ ಇರಬಹುದೇ ಎನಿಸುತ್ತಿತ್ತು.

ಊಟದ ನಂತರ ಬೇಸಿಗೆಯ ಬಳಲಿಕೆಗೆ ಅಜ್ಜನ ಭಗವದ್ಗೀತೆ ಪಾರಾಯಣ ಕೇಳುತ್ತಾ ಕೇಳುತ್ತಾ ಬರುವ ಸೊಗಸಾದ ನಿದ್ದೆಯ ಸುಖಕ್ಕೆ ಎಣೆಯೇ ಇಲ್ಲ. ಬಿಸಿಲು ಇಳಿಯತೊಡಗುವ ಹೊತ್ತಿಗೆ ಮನೆ ಹಿಂಬದಿಯ ಮಾವಿನ ಮರದಿಂದ ಗಾಳಿ ಬೀಸಿ ಉದುರುವ ತಾಜಾ ಹಣ್ಣುಗಳನ್ನು ಹೆಕ್ಕಿ ತಿನ್ನುವುದು ಮತ್ತೊಂದು ರಸಾನುಭವ.

ಹಾಗೊಂದು ವೇಳೆ ಗಾಳಿ ಬೀಸದಿದ್ದರೆ ‘ಗಾಳಿ ಗಾಳಿ ಗಂಗಾಳಿ, ನನಗೊಂದು ಹಣ್ಣು, ನಿನಗೊಂದು ಹಣ್ಣು, ಸೂರ್ಯಾ ದೇವರಿಗೆ ಇಪ್ಪತ್ತು ಹಣ್ಣು, ಡಾಂ ಡೀಂ ಡಬ್’ ಎಂಬ ಹರಕೆ ಹಾಡನ್ನು ಮಕ್ಕಳೆಲ್ಲ ಒಕ್ಕೊರಳಿನಿಂದ ಹಾಡಿದ ಮೇಲೆ ಗಾಳಿ ಬೀಸಿ ಹಣ್ಣುಗಳು ಡಬ ಡಬ ಬಿದ್ದರೆ. ದೇವರೇ ನಮ್ಮ ಕರೆಗೆ ಓಗೊಟ್ಟು ಬೀಳಿಸಿದ್ದೆಂದು ಭಾವಿಸಿ ಮೇರೆಯಿಲ್ಲದ ಸಂತಸದಿಂದ ತಿನ್ನುವ ಆ ಪರಮ ಸುಖಕ್ಕೆ ಯಾವುದು ಸಾಟಿ? ಇಲ್ಲದಿದ್ದರೆ ಮನೆಯ ಮೂರು ದಿಕ್ಕಿಗೂ ಸುತ್ತುವರಿದಿದ್ದ ಗುಡ್ಡಗಳನ್ನು ಹತ್ತುತ್ತಾ ಹುಲುಸಾಗಿ ಬೆಳೆದ ಬೆಟ್ಟದ ನೆಲ್ಲಿಕಾಯಿ ಅಥವಾ ಇತರ ಕಾಡು ಹಣ್ಣುಗಳನ್ನು ಕೊಯ್ದು ಗುಡ್ಡದ ತುದಿಗೇರಿ ಅವನ್ನು ಗುಡ್ಡೆ ಹಾಕಿ ಬೀಸುವ ತಂಗಾಳಿಗೆ ಮೈಯೊಡ್ಡಿ ಕುಳಿತು ತಿನ್ನುತ್ತಾ ಸುತ್ತಲಿನ ರಮ್ಯ ಪ್ರಕೃತಿ ಸೌಂದರ್ಯವನ್ನು ನೋಡುತ್ತಾ ಮೈಮರೆಯುತ್ತಿದ್ದೆವು. ಈಗಿನ ಮಕ್ಕಳಿಗೆಲ್ಲಿದೆ ಇಂಥ ಅವಿಸ್ಮರಣೀಯ ಅನುಭವಗಳ ಭಾಗ್ಯ?.

- ಎಂ. ಎಸ್. ರಮೇಶ್‌ ‍‍‍ಪ‍ಡೀಲು

**

ಪೆಟ್ಟಿಗೆಯೊಳಗಿನ ಗರ್ದಿ ಗಮ್ಮತ್

‘ನನಗss ಇಪ್ಪತ್ತು ಪೈಸೆ ಬೇಕಾಗ್ಯದ...ಕೊಡ್ರಿ’ ಅಂದೆ. ‘ಎದಕ್ಕ ಬೇಕು ರೊಕ್ಕ?’ ಅಂತ ಕೇಳಿದರು ಮನ್ಯಾನವರು. ‘ಗರ್ದಿ ಗಮ್ಮತ್ ಪೆಟಿಗಿಯಾಂವ ಬಂದಾನ’ ಪ್ರತಿಯಾಗಿ ಉತ್ತರಿಸಿದೆ. ದುಡ್ಡು ಕೊಡಲು ಹಿಂದೆ ಮುಂದೆ ನೋಡ್ತಿದ್ದವರು ಏನೂ ಚೌಕಾಸಿ ಮಾಡದೇ ಕೈಯಲ್ಲಿ ಇಪ್ಪತ್ತು ಪೈಸೆ ಇಟ್ಟರು. ತೆಗೆದುಕೊಂಡ ಮರುಕ್ಷಣವೇ ಗರ್ದಿ ಗಮ್ಮತ್ತಿನ ಪೆಟ್ಟಿಗೆ ಮುಂದೆ ನಿಂತಿದ್ದೆ. ಮೂರು ಕೋಲುಗಳ ಮೇಲೆ ಪೆಟ್ಟಿಗೆ ಇಟ್ಟುಗೊಂಡು, ತಲೆಗೊಂದು ರುಮಾಲು ಸುತ್ತಿಕೊಂಡು ಕಪ್ಪನೆಯ ಕೋಟೊಂದನ್ನು ಧರಿಸಿ ಗರ್ದಿ ಗಮ್ಮತ್ತಿನ ಪೆಟಿಗಿಯಾಂವ ನಿಂತಿದ್ದ. ನಾನು ಓಡಿ ಬಂದಂತೆ ಓಣ್ಯಾಗಿನ ಎಲ್ಲಾ ನನ್ನ ವಾರಿಗೆಯ ಹುಡುಗರು ಬಂದು ಸೇರಿದರು. ಮೊದಲಿಗೆ ಮೂರು ಹುಡುಗರು ನಾವು ಮನೆಯಿಂದ ತಂದಿದ್ದ ಇಪ್ಪತ್ತು ಪೈಸೆಯನ್ನು ಅವನ ಕೈಯಲ್ಲಿ ಇಟ್ಟೆವು. ಪೆಟ್ಟಿಗೆಯ ಮುಂದೆ ಕೊಳವೆಯಂಥವುಗಳ ಮುಂದಿದ್ದ ಮುಚ್ಚಳಿಕೆ ತೆಗೆದು ನಮಗೆ ಕೊಳವೆಯಲ್ಲಿ ನೋಡಲು ಹೇಳಿದ. ಒಳಗೆ ಅರಮನೆಯ ಚಿತ್ರ, ಬಣ್ಣ ಬಣ್ಣದ್ದು. ಹಾ... ಮೈಸೂರು ಅರಮನಿ ನೋಡ್ರಿ, ಕನ್ನಂಬಾಡಿ ಕಟ್ಟೆಯ ಕಾಣ್ರಿ...

ಹೀಗೆ ಗರ್ದಿ ಗಮ್ಮತ್ತಿನ ಪೆಟ್ಟಿಗೆಯವನು ರಾಗಬದ್ಧವಾಗಿ ಹಾಡು ಹಾಡಿ ಚಿತ್ರದ ಹಿನ್ನೆಲೆ ಹೇಳುತ್ತಿದ್ದ. 15–20 ನಿಮಿಷದೊಳಗೆ ಮೈಸೂರು, ಬೆಂಗಳೂರು, ದೆಹಲಿಯ ಕುತುಬ್ ಮಿನಾರ್ ಇವುಗಳ ಸುತ್ತ ಓಡಾಡಿಸಿಕೊಂಡು ಬಂದ ಅನುಭವವನ್ನು ನೀಡುತ್ತಿದ್ದ. ನಾವು ಮೂರು ಹುಡುಗರು ನೋಡಿದ ಮೇಲೆ ಮತ್ತೆ ಮೂವರಿಗೆ ಅವಕಾಶ.

ನಾವು ನೋಡಿದ ಮೇಲೆ ಮನೆಗೆ ಜಪ್ಪೆಂದರೂ ಹೋಗ್ತಿರಲಿಲ್ಲ. ಇನ್ನು ಮೂರು ಹುಡುಗರು ನೋಡ್ತಿದ್ದಾಗ ನಾವು ಗರ್ದಿ ಗಮ್ಮತ್ತಿನ ಪೆಟ್ಟಿಗೆಯವನು ಹಾಡ್ತಿದ್ದ ಹಾಡನ್ನು ಕೇಳುತ್ತಾ ನಿಲ್ಲುತ್ತಿದ್ದೆವು. ಹಾಡಿಗೆ ತಕ್ಕಂತೆ ಅವನು ಚಳ್ಳಮ್ಮನ್ನು ಬಾರಿಸುತ್ತಿದ್ದ. ಪೆಟ್ಟಿಗೆ ಮೇಲೆ ಗೊಂಬೆಯೊಂದು ಇರುತ್ತಿತ್ತು. ಚಳ್ಳಮ್ಮ್ (ತಾಳುಗಳು) ಬಾರಿಸುತ್ತಿದ್ದಂತೆ ಆ ಗೊಂಬೆ ಕುಣಿಯುತ್ತಿತ್ತು. ಚಳ್ಳಮ್ಮಿನ ದಾರಕ್ಕೂ ಗೊಂಬೆಗೂ ಜೋಡಣೆ ಇರುತ್ತಿತ್ತೇನೋ? ಗೊಂಬೆ ಕುಣಿತ, ಗರ್ದಿ ಗಮ್ಮತ್ತಿನ ಪೆಟ್ಟಿಗೆಯೊಳಗಿನ ಜಗತ್ತು, ಚಳ್ಳಮ್ಮಿನ ಸಂಗೀತ, ಹಾಡು... ಹಾಡಿನ ಜೊತೆಗೆ ಚಿತ್ರಗಳನ್ನು ಪೆಟ್ಟಿಗೆಯ ಒಳಗೆ ಬಿಡುತ್ತಿದ್ದ ಅವನ ಚಲನವಲನಗಳು ಇವೆಲ್ಲ ನಮ್ಮಲ್ಲಿ ಹೊಸ ಅನುಭೂತಿ ನೀಡುತ್ತಿದ್ದವು.

ನಮ್ಮ ಓಣಿಯ ಹುಡುಗರೆಲ್ಲಾ ನೋಡಿದ ಮೇಲೆ ಪೆಟ್ಟಿಗೆಯನ್ನು ಮಡಚಿ ಹೆಗಲ ಮೇಲೆ ಹೊತ್ತುಕೊಂಡು ಅವನು ಮುಂದಿನ ಓಣಿಯವರೆಗೆ ಹೋಗುವವರೆಗೂ ನಾವು ಅವನನ್ನು ಹಿಂಬಾಲಿಸಿಕೊಂಡು ಹೋಗುತಿದ್ದೆವು. ಮುಂದಿನ ಓಣಿಯಲ್ಲಿ ಪೆಟ್ಟಿಗೆ ಸ್ಥಾಪನೆಗೊಂಡ ಮೇಲೆಯೇ ನಾವು ಅಲ್ಲಿಂದ ಮರಳಿ ನಮ್ಮ ಓಣಿಗೆ ಮರಳುತ್ತಿದ್ದದ್ದು.

ನಾನು ಹೈಸ್ಕೂಲಿಗೆ ಬರುವುದರೊಳಗೆ ನಿಧಾನವಾಗಿ ಗರ್ದಿ ಗಮ್ಮತ್ತಿನ ಪೆಟ್ಟಿಗೆ ಬರುವುದು ನಿಂತಿತು. ಅಷ್ಟರಲ್ಲಿ ದೂರದರ್ಶನ ವೆಂಬ ಮಾಯಾಪೆಟ್ಟಿಗೆಯ ಮಾಯಾಲೋಕ ಆವರಿಸಿಕೊಂಡುಬಿಟ್ಟಿತು. ನನಗೆ ಮೊಟ್ಟಮೊದಲಿಗೆ ಮೈಸೂರು ಅರಮನೆಯನ್ನು ತೋರಿಸಿದ ಗರ್ದಿ ಗಮ್ಮತ್ತಿನ ಪೆಟ್ಟಿಗೆಯನ್ನು, ಆ ಬಾಲ್ಯವನ್ನು ಮರೆಯಲಿ ಹೆಂಗ?
-ನಾರಾಯಣ ಬಾಬಾನಗರ ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.