ADVERTISEMENT

ಮಹೀಂದ್ರಾ ಥಾರ್ ಸಾಹಸಿಗರಿಗೆ ಹೇಳಿ ಮಾಡಿಸಿದ್ದು

ಪ್ರಜಾವಾಣಿ ಚಿತ್ರ
Published 29 ಜುಲೈ 2015, 19:30 IST
Last Updated 29 ಜುಲೈ 2015, 19:30 IST

ಮುಂಬೈನಲ್ಲಿ ಕುಂಭದ್ರೋಣ ಮಳೆ. ಅಲ್ಲಿಂದ ಇನ್ನೂರು ಕಿ.ಮೀ. ದೂರದಲ್ಲಿರುವ ನಾಸಿಕ್‌ನಲ್ಲೂ ಸುರಿಯುತ್ತಿದ್ದ ಮುಸಲಧಾರೆಗೆ ಎತ್ತರದ ಪರ್ವತ ಶ್ರೇಣಿಗಳು, ರಸ್ತೆಯ ಇಕ್ಕೆಲಗಳು ಹಸಿರು ಹೊದ್ದಿದ್ದವು. ಮಾರು ದೂರಕ್ಕೂ ಎದುರಾಗುತ್ತಿದ್ದ ಒಂದೊಂದು ಜಲಪಾತ ಹಾಗೂ ಅದು ಸಾಗಿ ಬರುತ್ತಿದ್ದ ಕಡಿದಾದ ಬೆಟ್ಟ ಚಾರಣವನ್ನು ನೆನಪಿಸುವಂತಿತ್ತು.

ನಾಸಿಕ್‌ನಿಂದ 20ಕಿ.ಮೀ. ದೂರದಲ್ಲಿರುವ ಇಘತ್‌ಪುರಿಯಲ್ಲಿರುವ ಅಂಥದ್ದೊಂದು ತಾಣದಲ್ಲಿ ಮಹೀಂದ್ರಾ ಅಡ್ವೆಂಚರ್‌ ಡ್ರೈವಿಂಗ್ ಅಕಾಡೆಮಿಯಿಂದ ಕಡಿದಾದ ಬೆಟ್ಟದಲ್ಲಿ, ಅರ್ಧ ಮುಳುಗುವಷ್ಟು ಆಳದ ಕೊಳ್ಳದಲ್ಲಿ ವಾಹನ ಓಡಿಸುವ ಅವಕಾಶವೂ ಚಾರಣದ ಮೋಜನ್ನು ಮೀರಿಸುವಂತಿತ್ತು. ಇಂಥ ಕಡಿದಾದ ಬೆಟ್ಟ, ಇಳಿಜಾರಿನಲ್ಲಿ ವಾಹನ ಚಲಾಯಿಸಲು ಮಹೀಂದ್ರಾ ಥಾರ್‌ ಯುಟಿಲಿಟಿ ವಾಹನ ಸಜ್ಜಾಗಿತ್ತು.

‘ಥಾರ್‌’ ಎಂಬ ಕಚ್ಚಾ ರಸ್ತೆಯ (ಆಫ್‌ ರೋಡ್‌) ಯುಟಿಲಿಟಿ ವಾಹನಕ್ಕೆ ಹೊಸ ರೂಪ ನೀಡಲಾಗಿತ್ತು. ಅದರ ಸಾಮರ್ಥ್ಯ ಹೆಚ್ಚಿಸಲಾಗಿತ್ತು. ಇದನ್ನು ಪರೀಕ್ಷಿಸುವ ಸರದಿ ಪತ್ರಕರ್ತರದ್ದಾಗಿತ್ತು. ಸುರಿಯುತ್ತಿದ್ದ ಮಳೆಯಲ್ಲೇ ಎಂಟು ಹೊಸ ಥಾರ್‌ ಸಿದ್ಧಗೊಂಡಿದ್ದವು. ಕಂಪೆನಿಯ ಹಿರಿಯ ಅಧಿಕಾರಿಗಳು ಫ್ಲಾಗ್‌ಆಫ್‌ ಮಾಡಿದರು.

ಎಂಟು ಹೊಸ ಥಾರ್‌ಗಳಲ್ಲಿ ಅರ್ಧದಷ್ಟು ಹಾರ್ಡ್‌ ಟಾಪ್‌, ಉಳಿದವು ಸಾಫ್ಟ್‌ ಟಾಪ್‌ ಹೊಂದಿದ್ದವು ಇದ್ದವು. ಥಾರ್ ಒಳಗೆ ಹೋದೊಡನೆ ಹೊಸ ಅನುಭವ ನೀಡುವಷ್ಟರ ಮಟ್ಟಿಗೆ ಡ್ಯಾಶ್‌ ಬೋರ್ಡ್‌ ಬದಲಾಗಿತ್ತು. ಕಪ್ಪು ಮತ್ತು ಬೇಜ್‌ ಬಣ್ಣದ ಡ್ಯಾಶ್‌ ಬೋರ್ಡ್‌ ಹೊಸ ಬಗೆಯ ಎಸಿ ವೆಂಟ್ಸ್‌ ಜತೆಗೆ ಆಧುನಿಕ ಶೈಲಿಯ ಕನ್ಸೋಲ್‌ ಗಮನ ಸೆಳೆಯುವಂತಿತ್ತು. ವೇಗ, ಆರ್‌ಪಿಎಂ ಹಾಗೂ ಇಂಧನದ ಮಾಹಿತಿ ನೀಡುವ 3 ಪಾಡ್‌ ಇನ್‌ಸ್ಟ್ರುಮೆಂಟ್‌ ಕ್ಲಸ್ಟರ್‌ ಎಕ್ಸ್‌ಯುವಿ 500ನದ್ದೇ ಎಂದೆನಿಸುವಂತಿದೆ. ಉಳಿದಂತೆ ಸ್ಟಿಯರಿಂಗ್‌ಗೂ ಹೊಸ ಕಳೆ ಹಾಗೂ ಗೇರ್‌ನಾಬ್‌ ಕೂಡಾ ಬದಲಿಸಲಾಗಿತ್ತು.

ಸಿಆರ್‌ಡಿಇ ಎಂಜಿನ್ ಆಗಿದ್ದರಿಂದ ಇಗ್ನೀಷನ್‌ ಕೂಡಾ ಮೃದುವಾಗಿತ್ತು. ಕುಟ್ಟಿ ಗೇರ್‌ ಎಂದೇ ಪರಿಚಿತವಾಗಿರುವ ಫೋರ್ ವೀಲ್‌, ಟು ವೀಲ್‌ ಶಿಫ್ಟ್‌ ಗೇರ್‌ ಬದಲಿಸಿ ಥಾರ್‌ ತನ್ನ ಮುಂದಿರುವ ಸವಾಲನ್ನು ಎದುರಿಸಲು ಸಜ್ಜಾಯಿತು. ಕೆಂಪು ಮಣ್ಣಿನ ಕಡಿದಾದ ಗುಡ್ಡ, ಅಲ್ಲಲ್ಲಿ ಭಾರೀ ತಿರುವುಗಳು, ಕಲ್ಲುಗಳಿಂದ ಕೂಡಿದ ಹೊಂಡದಲ್ಲಿ ಇಳಿದೇಳಬೇಕಾದ್ದು ಅನಿವಾರ್ಯವಾಗಿತ್ತು. ಪವರ್‌ ಸ್ಟಿಯರಿಂಗ್‌ನಿಂದಾಗಿ ತಿರುವುಗಳಲ್ಲಿ ಅನಾಯಾಸವಾಗಿ ವಾಹನವನ್ನು ತಿರುಗಿಸಬಹುದಾಗಿತ್ತು. ಮುಂದಿನದ್ದು ನಾಲ್ಕು ಅಡಿ ಆಳದ ನೀರಿನ ಝರಿಯನ್ನು ದಾಟುವ ಸವಾಲು. ಅಲ್ಲು ಸಹ ಥಾರ್‌ ಸಲೀಸಾಗಿ ಮುಳುಗೆದ್ದು, ಅತ್ತ ಇತ್ತ ವಾಲುತ್ತ ಎತ್ತರದ ದಿಬ್ಬವನ್ನು ಏರಿತು.

ಬೇಡಿಕೆ ಪೂರೈಕೆ
ಮಹೀಂದ್ರಾ ತನ್ನ ಸಿಎಲ್‌340 ಹಾಗೂ ಎಂಎಂ540 ವಾಹನಗಳನ್ನೇ ಆಧಾರವಾಗಿಟ್ಟುಕೊಂಡು ಹೊಸ ಥಾರ್‌ ರೂಪ ಪಡೆದಿದೆ. ಎತ್ತರದ ದಾರಿಯಲ್ಲಿ ಮತ್ತೆ ಒಂದಷ್ಟು ಗುಂಡಿಗಳನ್ನು ಮಾಡಲಾಗಿತ್ತು. ಅದರಲ್ಲಿ ಇಳಿದೇಳುವಾಗ ಯಾವುದಾದರೂ ಒಂದು ಚಕ್ರ ಸಿಕ್ಕಿ ಹಾಕಿಕೊಳ್ಳದೇ ಇರದು. ಅಲ್ಲಿ ಹಾಗೆಯೇ ಆಯಿತು. ಹಿಂಬದಿಯ ಚಕ್ರ ನಿಂತ ಜಾಗದಿಂದ ಕದಲದಂತಾಯಿತು. ಆಗ ನೆರವಾಗಿದ್ದು ‘ಡಿಫ್‌ ಲಾಕ್‌’. ಈವರೆಗೂ ಹಲವು ಆವೃತ್ತಿಗಳಲ್ಲಿ ಬಿಡುಗಡೆಯಾಗಿರುವ ಥಾರ್‌ನ ಈ ಬಾರಿಯ ವಿಶೇಷ ಮೆಕ್ಯಾನಿಕಲ್‌ ಲಾಕಿಂಗ್ ರೇರ್‌ ಡಿಫೆರೆನ್ಷಿಯಲ್‌ ಟೆಕ್ನಾಲಜಿ. ಹಿಂಬದಿಯ ಒಂದು ಚಕ್ರ ಮುಂದೆ ಸಾಗದೆ ನಿಂತಾಗ, ಪಕ್ಕದ ಚಕ್ರ ಅದನ್ನು ತಳ್ಳುತ್ತಾ ತಿರುಗಲಾರಂಭಿಸುತ್ತದೆ. ಪಕ್ಕಕ್ಕೆ ಸರಿಯುತ್ತ ಗಟ್ಟಿ ಜಾಗ ಸಿಕ್ಕೊಡನೆ ಆ ಚಕ್ರವೂ ತಿರುಗಿ ಮುಂದಕ್ಕೆ ಸಾಗಿತು.

‘ಡಿಫ್‌ ಲಾಕ್‌’ ಥಾರ್‌ಗೆ ಬಹುದಿನಗಳ ಕೊರತೆಯಾಗಿತ್ತು. ಎಂಥದ್ದೇ ಕಡಿದಾದ ರಸ್ತೆಯಲ್ಲಿ ಸಾಗುವ ಸಾಮರ್ಥ್ಯವಿದ್ದರೂ, ಕೆಲವೊಮ್ಮೆ ಸಿಕ್ಕಿ ಹಾಕಿಕೊಳ್ಳುವ ಆ ಒಂದು ಚಕ್ರದಿಂದ ಚಾಲಕ ಹೈರಾಣಾಗಿ ಹೋಗುತ್ತಾರೆ. ಈಗ ಡಿಫೆರೆನ್ಷಿಯಲ್‌ ಲಾಕ್‌ನಿಂದಾಗಿ ಕಡಿದಾದ ಬೆಟ್ಟವನ್ನು ಹತ್ತುವ ಧೈರ್ಯ ಮಾಡಬಹುದು. ಅದರಲ್ಲೂ ಕೊಡಗು, ಚಿಕ್ಕಮಗಳೂರು ಮುಂತಾದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಡಿಫ್‌ಲಾಕ್‌ನ ಅಗತ್ಯ ಇದ್ದೇ ಇದೆ. ಈ ಕೊರಗನ್ನು ಮಹೀಂದ್ರಾ ಹೊಸ ಥಾರ್‌ನಲ್ಲಿ ಪರಿಹರಿಸಿದೆ.

ಉಳಿದಂತೆ ಹೊಸ ಥಾರ್‌ ಸಾಕಷ್ಟು ಹೊಸತನ ಹೊಂದಿದೆ. ಕಂಪೆನಿಯ ಅಧಿಕಾರಿಗಳೇ ಹೇಳುವಂತೆ, ಯುವ ಜನತೆ ಈಗ ಸಾಕಷ್ಟು ಸಾಹಸಮಯ ಪ್ರವಾಸದತ್ತ ಮುಖ ಮಾಡುತ್ತಿದ್ದಾರೆ. ಥಾರ್‌ ಅದಕ್ಕೆ ಹೇಳಿ ಮಾಡಿಸಿದ್ದು. ಕೇವಲ ಗುಡ್ಡಗಾಡು ಪ್ರದೇಶದವರಿಗಷ್ಟೇ ಸೀಮಿತಗೊಳಿಸದೆ, ಮೆಟ್ರೊದಂಥ ಮಹಾನಗರಗಳಲ್ಲೂ ಎಲ್ಲರ ಆಕರ್ಷಣೆ ಗಳಿಸಲು ಹೊರ ನೋಟವನ್ನು ಬದಲಿಸಲಾಗಿದೆ. ಲೋಹದ ದೇಹದ ಹೊರ ಭಾಗದಲ್ಲಿ ಚಕ್ರಗಳ ಮೇಲೆ ಹಾರ್ಡ್‌ ಪ್ಲಾಸ್ಟಿಕ್‌ನ ಆರ್ಚ್‌ ಅಳವಡಿಸಲಾಗಿದೆ. ಹೆಡ್‌ಲ್ಯಾಂಪ್‌ ಮತ್ತಷ್ಟು ಹೊರ ಭಾಗಕ್ಕೆ ಬಂದು ಹೆಚ್ಚು ಪಾರದರ್ಶಕವಾಗಿದೆ. ಎರಡೂ ಬದಿಯ ಫುಟ್‌ಸ್ಟೆಪ್‌ಗೆ ಹೊಸ ಸ್ಪರ್ಶ ನೀಡಲಾಗಿದೆ.

ಇನ್ನು ಒಳಭಾಗದಲ್ಲಿ ಆಧುನಿಕ ಕಾರುಗಳಲ್ಲಿ ಇರುವಂತೆ ಕಪ್‌ ಹೋಲ್ಡರ್‌, ಫ್ಲೋರ್ ಕನ್ಸೋಲ್‌, ಹೊಸ ವಿಂಡ್‌ಶೀಲ್ಡ್‌ ಡೆಮಿಸ್ಟರ್‌, 12ವೋಲ್ಟ್‌ ಚಾರ್ಜಿಂಗ್ ಪಾಯಿಂಟ್‌, 2 ಡಿನ್‌ ಮ್ಯೂಸಿಕ್‌ ಸಿಸ್ಟಂ ನೀಡಲಾಗಿದೆ. ಹೀಗಾಗಿ ಹೊಸ ಥಾರ್‌ ಕಚ್ಚಾ ರಸ್ತೆಯಲ್ಲಿ ತನ್ನ ಕರಾಮತ್ತು ತೋರಿಸುವಂತೆ, ನಗರದ ರಸ್ತೆಗಳಲ್ಲಿ ತನ್ನ ಬಾಹ್ಯ ನೋಟದಿಂದ ವಾಹನ ಪ್ರಿಯರನ್ನು ಸೆಳೆಯುವಂತಿದೆ.

ಬೆಟ್ಟ ಗುಡ್ಡ ಹತ್ತಿ ಇಳಿದು ಬಂದಾಗ ಕ್ಲಚ್‌ ಪ್ಲೇಟ್‌ ಹೆಚ್ಚು ಉಜ್ಜಿದ್ದರಿಂದ ಅದರ ವಾಸನೆ ಮೂಗಿಗೆ ಬಡಿಯುವಂತಿತ್ತು. ಇರುವ ಬಹಳಷ್ಟು ಥಾರ್‌ಗಳಿಗೆ ವಿಶೇಷವಾದ ಹೆಚ್ಚು ಗ್ರಿಪ್‌ ಇರುವ ಟೈರ್‌ ಬಳಸಿದ್ದರಿಂದ ಪ್ರಯಾಣ ಸಲೀಸಾಗಿ ನಡೆಯಿತು. ಆದರೆ ಸಾಮಾನ್ಯ ವಾಹನದೊಂದಿಗೆ ಬರುವ ಸಾಮಾನ್ಯ ಟೈರ್‌ನಿಂದ ಇಂಥ ಬೆಟ್ಟ ಹತ್ತುವುದು ಅಸಾಧ್ಯ ಎಂಬುದು ಅಲ್ಲೇ ಸಾಬೀತಾಯಿತು.

 ವಾರ್ಷಿಕ ಹತ್ತು ಸಾವಿರದಷ್ಟು ಥಾರ್‌ ಮಾರಾಟವಾಗುತ್ತದೆ. ಅದರಲ್ಲಿ ಡಿಇ ಹಾಗೂ ಸಿಆರ್‌ಡಿಇ ಎರಡು ಮಾದರಿಗಳಿವೆ. ಡಿಇ ಮಾರಾಟ ಶೇ 70ರಷ್ಟಿದ್ದರೂ, ಇತ್ತೀಚಿನ ದಿನಗಳಲ್ಲಿ ಸಿಆರ್‌ಡಿಇಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಕಂಪೆನಿ ಹೊಸ ಥಾರ್‌ ಹಾಗೂ ಅದಕ್ಕೆ ಅಳವಡಿಸಬಹುದಾದ ಬಗೆಬಗೆಯ ಆಕ್ಸಸರಿಗಳತ್ತ ಗಮನ ಹರಿಸಿರುವುದು ಈ ವಾಹನಗಳಿಂದ ಸ್ಪಷ್ಟ. ಪುಟ್ಟ ಯುಟಿಲಿಟಿ ವಾಹನಗಳತ್ತ ಮನಸ್ಸು ಮಾಡಿರುವ ವಾಹನ ಪ್ರಿಯರಿಗೆ, ₹8.03ಲಕ್ಷದಲ್ಲಿ ಅದೇ ಐಷಾರಾಮದ ಜತೆಗೆ ಪರಿಪೂರ್ಣ ಯುಟಿಲಿಟಿಯ ಅನುಭವ ನೀಡುವ ಥಾರ್‌ ನೀಡುವುದು ಕಂಪೆನಿಯ ಉದ್ದೇಶ.

***
ಮಹೀಂದ್ರಾ ಥಾರ್‌
ಎಂಜಿನ್‌:
2500ಸಿಸಿ ಸಿಆರ್‌ಡಿಇ ಎಂಜಿನ್‌.
ಸಾಮರ್ಥ್ಯ: 44 ಡಿಗ್ರಿ ಕೋನದಷ್ಟು ಎತ್ತರದ ರಸ್ತೆ  ಹಾಗೂ 27ಡಿಗ್ರಿ ಕೋನದಷ್ಟು ಡಿಪಾರ್ಚರ್‌ ಆ್ಯಂಗಲ್‌ನಲ್ಲಿ ಚಲಿಸಬಲ್ಲದು.
ಗೇರ್‌: 4ವೀಲ್‌ ಗರಿಷ್ಠ ಮತ್ತು ಕನಿಷ್ಠ ಅನುಪಾತ.
ಬಣ್ಣ:  ಫೇರಿ ಬ್ಲಾಕ್‌, ರೆಡ್‌ ರೇಜ್‌, ಮಿಸ್ಟ್ ಸಿಲ್ವರ್‌, ರಾಕಿ ಬೇಜ್‌, ಡೈಮಂಡ್‌ ವೈಟ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.