ADVERTISEMENT

ವಾರದ ಆ್ಯಪ್

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2016, 19:30 IST
Last Updated 28 ಡಿಸೆಂಬರ್ 2016, 19:30 IST
ವಾರದ ಆ್ಯಪ್
ವಾರದ ಆ್ಯಪ್   

ವಿಂಡಿಟಿವಿ
ಮೊನ್ನೆಯಷ್ಟೇ ತಮಿಳುನಾಡಿಗೆ ಚಂಡಮಾರುತ ಅಪ್ಪಳಿಸಿತ್ತು. ಆ ಸಂದರ್ಭದಲ್ಲಿ ಎಲ್ಲರ ಗಮನ ಟಿ.ವಿ.ಯಲ್ಲಿ ತೋರಿಸುತ್ತಿದ್ದ ವಾಯುಭಾರ ಮತ್ತು ಸಂಚಲನದ ನಕ್ಷೆ ಕಡೆಗಿತ್ತು. ಈ ನಕ್ಷೆಯನ್ನು ನೀವು ಯಾವಾಗ ಬೇಕಾದರೂ ನಿಮ್ಮ ಗಣಕ ಅಥವಾ ಸ್ಮಾರ್ಟ್‌ಫೋನಿನಲ್ಲಿ ನೋಡಬಹುದು. ನಿಮ್ಮ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನಿಗೆ ಅಂತಹ ಒಂದು ಕಿರುತಂತ್ರಾಂಶ (ಆ್ಯಪ್) ಬೇಕಿದ್ದಲ್ಲಿ ನೀವು ಗೂಗಲ್‌ ಪ್ಲೇ ಸ್ಟೋರಿನಲ್ಲಿ Windytv / Windyty ಎಂದು ಹುಡುಕಬೇಕು. ಇದನ್ನು bit.ly/gadgetloka259 ಜಾಲತಾಣದ ಮೂಲಕವೂ ಪಡೆಯಬಹುದು. ವಾಯುಸಂಚಾರದ ನಕ್ಷೆಯನ್ನು ಇದು ನಿಜಸಮಯದಲ್ಲಿ ಭೂಪಟದ ಮೇಲೆ ತೋರಿಸುತ್ತದೆ. ಚಂಡಮಾರುತ ಬರುತ್ತಿದ್ದಲ್ಲಿ ಇದು ಸ್ಪಷ್ಟವಾಗಿ ಗೋಚರವಾಗುತ್ತದೆ.

ಜೊತೆಗೆ ತಾಪಮಾನ, ವಾಯುಭಾರ, ತೇವಾಂಶ, ಎಲ್ಲ ತೋರಿಸುತ್ತದೆ. ಫೋನಿನಲ್ಲಿ ನಿಮ್ಮ ಸ್ಥಾನವನ್ನು ಆಯ್ಕೆ ಮಾಡಿಕೊಂಡರೆ ಆ ಸ್ಥಳಕ್ಕೆ ಸರಿಯಾಗಿ ಈ ಎಲ್ಲ ಮಾಹಿತಿಗಳನ್ನು ತೋರಿಸುತ್ತದೆ. ನಿಮ್ಮ ಗಣಕದಲ್ಲೇ ಇವೆಲ್ಲವನ್ನು ನೋಡಬೇಕಿದ್ದಲ್ಲಿ ನೀವು  www.windytv.com ಜಾಲತಾಣಕ್ಕೆ ಭೇಟಿ ನೀಡಬಹುದು.

ಗ್ಯಾಜೆಟ್‌ ಸಲಹೆ
ಪ್ರಶ್ನೆ: ನನ್ನ ಸ್ಮಾರ್ಟ್‌ಫೋನಿನಲ್ಲಿ ಎಫ್‌ಎಂ ರೇಡಿಯೊ ಇಲ್ಲ. ಯಾವ ಆ್ಯಪ್ ಹಾಕಿಕೊಂಡರೆ ರೇಡಿಯೊ ಕೇಂದ್ರಗಳನ್ನು ಆಲಿಸಬಹುದು? 

ಉ: ಎಫ್‌ಎಂ ರೇಡಿಯೊ ಆಲಿಸಬೇಕಿದ್ದಲ್ಲಿ ಫೋನಿನಲ್ಲಿ ಅದಕ್ಕೆ ಸೂಕ್ತ ಯಂತ್ರಾಂಶ (ಚಿಪ್) ಇರತಕ್ಕದ್ದು. ಆ್ಯಪ್ ಹಾಕಿಕೊಳ್ಳುವ ಮೂಲಕ ಅದು ಸಾಧ್ಯವಿಲ್ಲ. ಅಂತರಜಾಲದಲ್ಲಿ ಹಲವು ರೇಡಿಯೊ ಕೇಂದ್ರಗಳಿವೆ. ಈ ಕೇಂದ್ರಗಳನ್ನು ಆ್ಯಪ್ ಮೂಲಕ ಆಲಿಸಬಹುದು.

ಗ್ಯಾಜೆಟ್‌ ತರ್ಲೆ
ಭಾರತೀಯ ರಿಸರ್ವ್ ಬ್ಯಾಂಕ್ ಕಳೆದ 43 ದಿವಸಗಳಲ್ಲಿ ತನ್ನ ನಿಯಮಗಳನ್ನು 126 ಸಲ ಬದಲಾಯಿಸಿದೆ. ಇದು ಅಷ್ಟೇ ಸಮಯದಲ್ಲಿ ಒಂದು ಹುಡುಗಿ ಫೇಸ್‌ಬುಕ್, ವಾಟ್ಸ್‌ಆ್ಯಪ್‌ಗಳಲ್ಲಿ ತನ್ನ ಪ್ರೊಫೈಲ್ ಚಿತ್ರ ಬದಲಾಯಿಸುವ ಸಂಖ್ಯೆಗಿಂತ ಸ್ವಲ್ಪ ಕಡಿಮೆ!

ADVERTISEMENT


ಗ್ಯಾಜೆಟ್‌ ಸುದ್ದಿ
ಮೈಕ್ರೋವೇವ್ ರೈಸ್ ಕುಕ್ಕರ್

ವಿದ್ಯುತ್‌ನಿಂದ ಕೆಲಸ ಮಾಡುವ ರೈಸ್ ಕುಕ್ಕರ್ ಗೊತ್ತು ತಾನೆ? ಅದರಲ್ಲಿ ಅಕ್ಕಿ ಮತ್ತು ನೀರು ಹಾಕಿ ಆನ್ ಮಾಡಿ ಇಟ್ಟರೆ ಸರಿಯಾದ ಸಮಯದ ನಂತರ ಅನ್ನ ಆಗಿರುತ್ತದೆ.

ಮೈಕ್ರೋವೇವ್ ಅವನ್ ಗೊತ್ತು ತಾನೆ? ಅದರಲ್ಲಿ ಎಲ್ಲ ನಮೂನೆಯ ಅಡುಗೆಗಳನ್ನೂ ಮಾಡಬಹುದು. ಈಗ ಎರಡನ್ನೂ ಸೇರಿಸಿದರೆ ಮೈಕ್ರೋವೇವ್ ರೈಸ್ ಕುಕ್ಕರ್ ಆಗುತ್ತದೆ. ಅದೀಗ ಮಾರುಕಟ್ಟೆಗೆ ಬಂದಿದೆ. ಇದು ಮಾಮೂಲಿ ರೈಸ್ ಕುಕ್ಕರ್‌ಗಿಂತ ಸ್ವಲ್ಪ ಚಿಕ್ಕದಾಗಿದೆ. ಒಳಗಿನ ಒಂದು ಪಾತ್ರೆ, ಇನ್ನೊಂದು ಪಾತ್ರೆ, ಮುಚ್ಚಳ, ಅಳತೆ ಕಪ್, ಮರದ ಸೌಟು –ಇವಿಷ್ಟು ಇದರಲ್ಲಿ ಅಡಕವಾಗಿವೆ.

ಜೊತೆಗೆ ದೊರೆಯುವ ಕೈಪಿಡಿಯಲ್ಲಿ, ಎಷ್ಟು ಅಕ್ಕಿಗೆ ಎಷ್ಟು ನೀರು ಹಾಕಬೇಕು, ಎಷ್ಟು ಹೊತ್ತು ಮೈಕ್ರೋವೇವ್ ಒಳಗಿಡಬೇಕು ಎಂಬ ಮಾಹಿತಿ ಇದೆ. ಇದರ ಬೆಲೆ 20 ಅಮೆರಿಕನ್ ಡಾಲರ್‌ಗಳು (ಸುಮಾರು ₹1350).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.