ADVERTISEMENT

ವಿದ್ಯಾರ್ಥಿಯಿಂದಾದ ಜ್ಞಾನೋದಯ

ಒಡಲಾಳ

​ಪ್ರಜಾವಾಣಿ ವಾರ್ತೆ
Published 4 ಜನವರಿ 2017, 19:30 IST
Last Updated 4 ಜನವರಿ 2017, 19:30 IST

ವಿದ್ಯಾರ್ಥಿಗಳ ಪಾಲಿನ ಎಕ್ಸಾಮ್ ಮತ್ತು ಉಪನ್ಯಾಸಕರಾದ ನಮ್ಮ ಪಾಲಿನ ಡ್ಯೂಟಿಗೆ ಚಾಲನೆ ದೊರೆತು ಇನ್ನೇನು ಅರ್ಧ ಗಂಟೆಯಾಗುವುದರಲ್ಲಿತ್ತು. ಹುಡುಗನೊಬ್ಬ ತರಾತುರಿಯಿಂದ ಎಕ್ಸಾಮ್ ಹಾಲ್‌ಗೆ ಎಂಟ್ರಿ ಕೊಟ್ಟ. ಅವನ ರೋಲ್ ನಂಬರ್ ನೋಡಿ ಬುಕ್‌ಲೆಟ್ಟು ಮತ್ತು ಪ್ರಶ್ನೆ ಪತ್ರಿಕೆ ನೀಡಿದೆ. ಅವನೂ ಲೇಟಾಗಿ ಬಂದಿರುವುದರಿಂದ ಸಾಧ್ಯವಾದಷ್ಟು ವೇಗವಾಗಿ ಬರೆಯಲು ಆರಂಭಿಸಿದ.

ಇಷ್ಟೆಲ್ಲ ಅವಸರ ಅವನನ್ನು ಆವರಿಸಿರುವುದನ್ನು ಕಣ್ತುಂಬಿಕೊಳ್ಳುವ ಉಮೇದಿನಲ್ಲಿದ್ದ ನನಗೆ, ಅವನ ಅಡ್ಮಿಷನ್ ಟಿಕೆಟ್‌ ಪರಿಶೀಲಿಸುವ ಸಮಯ ಮತ್ತು ಕರ್ತವ್ಯ ಪ್ರಜ್ಞೆಗಳೆರಡೂ ಆ ಕ್ಷಣಕ್ಕೆ ಕೈಕೊಟ್ಟಿದ್ದು ಆನಂತರ ಮನದಟ್ಟಾಯಿತು. ಕೂಡಲೇ ಆ ಲೇಟ್ ಆಸಾಮಿಯ ಬಳಿ ಹೋಗಿ ಅಡ್ಮಿಷನ್ ಟಿಕೆಟ್ ತೋರ್ಸಪ್ಪ ಅಂದೆ. ಅವನು ಮತ್ತಷ್ಟು ಗಲಿಬಿಲಿಗೊಂಡವನಂತೆ ಒದ್ದಾಡಿ ತನ್ನ ಪ್ಯಾಂಟು ಜೇಬಿಗೆ ಕೈ ಹಾಕಿ ಯಾವುದೋ ಚೀಟಿ ತೆಗೆದ. ನೋಡಿದರೆ ಅದು ಸಿನಿಮಾ ಟಿಕೆಟ್.

ನೋಡಿ ನಕ್ಕು, ‘ಫಿಲಂ ಟಿಕೆಟ್‌ನಲ್ಲ ನಾನು ಕೇಳ್ತಿರೋದು, ಅಡ್ಮಿಷನ್ ಟಿಕೆಟ್ ತೋರ್ಸಪ್ಪ’ ಅಂತ ಆಗ್ರಹಿಸಿದೆ. ಪ್ಯಾಂಟಿನ ನಾಲ್ಕೂ ಜೇಬುಗಳನ್ನು ತಡಕಾಡಿದವನು, ‘ಸಾರ್, ಅಡ್ಮಿಷನ್ ಟಿಕೆಟ್‌ನ ರೂಮಲ್ಲೇ ಬಿಟ್ಟು ಬಂದಿದ್ದೀನಿ’ ಅಂದ. ಅಡ್ಮಿಷನ್ ಟಿಕೆಟ್ ತಾರದೆ ಬಂದ ಅವನ ತಪ್ಪಿನೊಂದಿಗೆ, ಹಾಗೆ ಬಂದವನನ್ನು ಎಕ್ಸಾಮ್ ಬರೆಯಲು ಬಿಟ್ಟ ನನ್ನ ತಪ್ಪೂ ಸೇರಿಕೊಂಡು ಸಮಸ್ಯೆ ಮತ್ತಷ್ಟು ಜಟಿಲವಾಯಿತು.

ಈಗಾಗಲೇ ಪರೀಕ್ಷೆ ಬರೆಯಲಾರಂಭಿಸಿರುವವನನ್ನು ಹೊರಗೆ ಕಳುಹಿಸುವಂತಿರಲಿಲ್ಲ. ಕಳುಹಿಸಿದರೆ ಮತ್ತಷ್ಟು ನಿಯಮಗಳ ಉಲ್ಲಂಘನೆಯಾಗಿ ಹೊಸ ಸಮಸ್ಯೆಗಳನ್ನು ನಾನೇ ಕೈಯಾರೆ ಮೈಮೇಲೆ ಎಳೆದುಕೊಂಡಂತೆ ಆಗಿಬಿಡುತ್ತಿತ್ತು. ಕೊನೆಗೆ ಭಂಡ ಧೈರ್ಯ ಮಾಡಿ, ಇವನ ಬಳಿ ಫೈನ್ ಕಟ್ಟಿಸಿಕೊಂಡು ಡೂಪ್ಲಿಕೇಟ್ ಅಡ್ಮಿಷನ್ ಟಿಕೆಟ್ ತರಿಸಿದರೆ ಸಮಸ್ಯೆ ಬಗೆಹರಿಯುತ್ತದೆ ಎಂದು ನಿಟ್ಟುಸಿರುಬಿಟ್ಟೆ.

ಸಂಬಂಧಪಟ್ಟವರಿಗೆ ವಿಷಯ ಮುಟ್ಟಿಸಿ, ಇಲ್ಲೊಬ್ಬ ಅಡ್ಮಿಷನ್ ಟಿಕೆಟ್ ಮರೆತು ಬಂದಿದ್ದಾನೆ. ಡೂಪ್ಲಿಕೇಟ್ ಅಡ್ಮಿಷನ್ ಟಿಕೆಟ್‌ಗೆ ವ್ಯವಸ್ಥೆ ಮಾಡಿ ಅಂತ ತಿಳಿಸಿದೆ. ಆಗ ಹೊರಬಿದ್ದ ಅಸಲಿ ಸಂಗತಿ ನನ್ನನ್ನು ದಂಗು ಬಡಿಸಿತು. ಅದುವರೆಗೂ ತಾನು ರೂಮಿನಲ್ಲಿ ಬಿಟ್ಟು ಬಂದಿದ್ದೇನೆ ಅಂತ ನನ್ನ ಬಳಿ ಕತೆ ಹೇಳಿ ಜೇಬಿನಿಂದ ಸಿನಿಮಾ ಟಿಕೆಟ್ ತೆಗೆದು ನನ್ನನ್ನು ನಗಿಸಿದ್ದವನು, ಅಸಲಿಗೆ ಕಟ್ಟಬೇಕಿದ್ದ ಒಂದಷ್ಟು ಫೀಸುಗಳನ್ನು ಕಟ್ಟದೇ ಅಡ್ಮಿಷನ್ ಟಿಕೆಟ್ ತೆಗೆದುಕೊಳ್ಳುವ ಉಸಾಬರಿಗೆ ಹೋಗಿರಲಿಲ್ಲ.

ಹೀಗೆ ಕಾಲೇಜಿನ ರೂಲ್ಸುಗಳನ್ನು ಮೊದಲೇ ಬ್ರೇಕ್ ಮಾಡಿದ್ದವನಿಗೆ ಬೆಂಡೆತ್ತಲು ಮುಂದಾಗಬೇಕಿದ್ದ ನಾನು, ನನಗರಿವಿಲ್ಲದೆ ಅವನೊಂದಿಗೆ ಸೇರಿ ಮತ್ತೊಂದು ರೂಲ್ಸು ಬ್ರೇಕ್ ಮಾಡಿದ್ದು ಅರಿವಾಗಿ ಗಲಿಬಿಲಿಗೊಂಡೆ. ಎಕ್ಸಾಮ್ ಬರೆಯೋಕೆ ಇವನನ್ನು ಯಾಕೆ ಬಿಟ್ರಿ, ನಮ್ ಹತ್ರ ಕಳುಹಿಸಬೇಕಿತ್ತು ಎನ್ನುವ ಒಕ್ಕೊರಲ ದನಿ ಕಾಲೇಜಿನ ಪರೀಕ್ಷಾ ವಿಭಾಗದಿಂದ ಹೊರಹೊಮ್ಮಲಾರಂಭಿಸಿತು. ಹೇಗಿದ್ದರೂ ತಪ್ಪಾಗಿದೆ. ಇನ್ನು ಹೆಚ್ಚು ಚಿಂತಿಸಿ ಪ್ರಯೋಜನವಿಲ್ಲವೆಂದು ಮನಸ್ಸಿಗೆ ಸಮಾಧಾನ ಹೇಳಿ, ಅವನಿಗೆ ಪರೀಕ್ಷೆ ಬರೆಯಲು ಬಿಟ್ಟು ನಾನು ಡ್ಯೂಟಿ ಮುಂದುವರೆಸಿದೆ.

ಈ ನಡುವೆ ನಾನು ಬಲಿಪಶುವಾಗಿರುವುದಕ್ಕೆ ದುಃಖಿಸುವುದೋ ಅಥವಾ ರೂಲ್ಸ್ ಬ್ರೇಕ್ ಮಾಡುವ ಕಳ್ಳಾಟದಲ್ಲಿ ನನ್ನನ್ನೂ ಆಟಗಾರನಾಗಿಸಿದ ಅವನನ್ನು ಮೆಚ್ಚುವುದೋ ತಿಳಿಯದೆ ಗೊಂದಲವಾಯಿತು. ಅವನ ಬಳಿ ಹೋಗಿ ಯಾಕೋ ಹೀಗೆ ಮಾಡ್ದೆ ಅಂತ ಪ್ರಶ್ನಿಸಿದೆ. ಸಾರಿ ಸಾರ್, ನಿಜ ಹೇಳಿದ್ರೆ ನೀವು ಎಕ್ಸಾಮ್ ಬರೆಯೋಕೆ ಬಿಡ್ತಿರ್ಲಿಲ್ಲ. ನೀವೇನೂ ಯೋಚ್ನೆ ಮಾಡ್ಬೇಡಿ, ನಾನು ಎಲ್ಲ ನೋಡ್ಕೊತೀನಿ ಅಂತ ಅಳಲು ತೋಡಿಕೊಳ್ಳುವ ಜೊತೆಗೆ ಅಭಯ ನೀಡಿದ. ಇವ್ನು ಸಾಮಾನ್ಯದವನಲ್ಲ ಅಂತ ಒಳಗೊಳಗೆ ಗೊಣಗಿಕೊಂಡೆ.

ಪರೀಕ್ಷೆ ಮುಗಿದ ಮೇಲೆ ಮೇಲಿನವರು ಇಬ್ಬರಿಗೂ ಪ್ರತ್ಯೇಕಮಂಗಳಾರತಿ ಎತ್ತಿ ಕಳುಹಿಸಿದರು. ಆ ನಂತರವೂ ಇವನು ಸಿಕ್ಕಾಗಲೆಲ್ಲ ಸಾರಿ ಕೇಳುವುದೂ, ನಾನು ಹೋಗ್ಲಿ ಬಿಡಪ್ಪ ಅಂತ ನಗುವುದೂ ನಡೆದೇ ಇತ್ತು. ಮೊದಲೆಲ್ಲ ವಿದ್ಯಾರ್ಥಿಗಳ ಪಾಲಿಗೆ ಮಾತ್ರ ಎಕ್ಸಾಮು, ನಮ್ಮ ಪಾಲಿಗೆ ಡ್ಯೂಟಿ ಎಂದುಕೊಂಡಿದ್ದವನು ಈಗೀಗ ಇದು ನಮ್ಮ ಪಾಲಿಗೂ ಎಕ್ಸಾಮೇ ಎನ್ನುವ ಎಚ್ಚರದೊಂದಿಗೆ ಡ್ಯೂಟಿ ನಿರ್ವಹಿಸುವ ಜ್ಞಾನೋದಯದೊಂದಿಗೆ ಜೀವಿಸುತ್ತಿದ್ದೇನೆ.
-ಎಚ್.ಕೆ.ಶರತ್, ಹಾಸನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.