ADVERTISEMENT

ಶ್ರಮವೇ ಸಾಧನೆಯ ಮೂಲ...

ಪೃಥ್ವಿರಾಜ್ ಎಂ ಎಚ್
Published 1 ಜುಲೈ 2015, 19:30 IST
Last Updated 1 ಜುಲೈ 2015, 19:30 IST
ಪಲ್ಲವಿ ಮೊಹಿಡ್ಕರ್‌
ಪಲ್ಲವಿ ಮೊಹಿಡ್ಕರ್‌   

ಪಲ್ಲವಿ ಮೊಹಿಡ್ಕರ್‌
ಎಂಜಿನಿಯರಿಂಗ್ ಅಭ್ಯಾಸ ಮಾಡುವ ದಿನಗಳು ಅವು. ಅದ್ಯಾಕೋ ಅಪ್ಪ ಮತ್ತು ಅಜ್ಜ ಪದೇ ಪದೇ ನೆನಪಾಗುತ್ತಿದ್ದರು. ಅವರು ನೇಯುತ್ತಿದ್ದ ಬಿಳಿ ಬಣ್ಣದ ಸೀರೆ ಅಥವಾ ಬಟ್ಟೆ, ಮನಸಿನ ಪರದೆಯ ಮೇಲೆ ಕಣ್ಣಿಗೆ ಕಟ್ಟಿದಂತಿತ್ತು. ನೇಯ್ಗೆಯ ಸದ್ದು, ಅವರು ಚಾಕಚಕ್ಯತೆಯಿಂದ ಕೈಗಳನ್ನು ಆಡಿಸುವ ಪರಿ ಮತ್ತೆ ಮತ್ತೆ ಕಾಡುತ್ತಿತ್ತು.

ಹೀಗೆ ನೇಯ್ಗೆಯ ಸೀರೆಗಳು ನೆನಪಾದಾಗಲೆಲ್ಲ ಊರಿಗೆ ಹೋಗುತ್ತಿದ್ದೆ. ನನಗೆ ಮನೆಯವರ ಜೊತೆ ಕಾಲ ಕಳೆಯುವುದೆಂದರೆ ತುಂಬಾ ಇಷ್ಟ. ಪದವಿ ಮುಗಿದ ಬಳಿಕ ಐಟಿ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿದೆ. ಅಲ್ಲಿ ಕಷ್ಟಪಟ್ಟು ಎರಡು ವರ್ಷ ದುಡಿದೆ. ಆ ಕೆಲಸ ಇಷ್ಟವಾಗಲಿಲ್ಲ. ಅದನ್ನು ಬಿಟ್ಟು ಎಂಬಿಎ ಪದವಿಗೆ ಸೇರಿದೆ. ಇಲ್ಲಿ ಮಾರುಕಟ್ಟೆ ಕುರಿತು ವಿಸ್ತೃತವಾಗಿ ಅಧ್ಯಯನ ಮಾಡಿದೆ. ಇದರ ಜೊತೆಗೆ ಸೀರೆ ನೇಯ್ಗೆಯ ನೆನಪುಗಳು ಸೇರಿ ‘ಇಂಡೊಫ್ಯಾಶ್‌’ ಎಂಬ ಇ–ಕಾಮರ್ಸ್‌ ಕಂಪೆನಿ ಹುಟ್ಟಿಗೆ ಕಾರಣವಾಯಿತು ಎನ್ನುತ್ತಾರೆ ಪಲ್ಲವಿ ಮೊಹಿಡ್ಕರ್‌.

ಪಲ್ಲವಿ ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದವರು. ಎಂಬಿಎ ಮುಗಿಸಿದ ಬಳಿಕ ಕಡಿಮೆ ಬಂಡವಾಳದಲ್ಲಿ ‘ಇಂಡೊಫ್ಯಾಶ್‌’ ಕಂಪೆನಿ ಆರಂಭಿಸಿದರು. ಬಿಳಿ ಅಥವಾ ಸಾದಾ ಸೀರೆಗಳಿಗೆ ಚಿತ್ತಾರ ಬಿಡಿಸಲು ಕಲಾವಿದರನ್ನು ನೇಮಿಸಿಕೊಂಡು ಉದ್ಯಮಕ್ಕೆ ಮುಂದಡಿ ಇಟ್ಟರು.  ನೇಕಾರರಿಂದ ಸೀರೆಗಳನ್ನು ಖರೀದಿಸಿ ಅವುಗಳಿಗೆ ಕಲಾವಿದರಿಂದ ಆಕರ್ಷಕ ಚಿತ್ರಗಳ ಸ್ಪರ್ಶ ನೀಡಿ ಆನ್‌ಲೈನ್‌ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ.

ಸೀರೆ ಮಾತ್ರವಲ್ಲ ಚೂಡಿದಾರ್‌, ಲಂಗ ದಾವಣಿ, ಕಿಟಕಿಯ ಪರದೆಗಳು, ಟೇಬಲ್‌ ಕ್ಲಾತ್‌ ಸೇರಿದಂತೆ ಹಲವು ನಮೂನೆಯ ಉಡುಪುಗಳು ಇಲ್ಲಿ ಲಭ್ಯ. ನೇಕಾರರ ಬಟ್ಟೆಗಳಿಗೆ ಮಾತ್ರ ಆದ್ಯತೆ ನೀಡುವುದು ಇಂಡೊಫ್ಯಾಶ್‌ನ ವಿಶೇಷ. ನೇಕಾರರ ಉತ್ಪನ್ನಗಳಿಗೆ ಮಾರುಕಟ್ಟೆ ಲಭ್ಯವಾಗಬೇಕು ಮತ್ತು ಅವರ ಜೀವನಮಟ್ಟ ಸುಧಾರಣೆಯಾಗಬೇಕು ಎಂಬುದು ಪಲ್ಲವಿ ಅವರ ಆಶಯ. ಕರ್ನಾಟಕ, ಉತ್ತರಪ್ರದೇಶ, ರಾಜಸ್ತಾನ, ತಮಿಳುನಾಡು ಮತ್ತು ಆಂಧ್ರಪ್ರದೇಶದ ಸಾಂಪ್ರದಾಯಿಕ ನೇಯ್ಗೆ ಉತ್ಪನ್ನಗಳಿಗೂ ಇಂಡೊಫ್ಯಾಶ್‌ನಲ್ಲಿ ಅವಕಾಶ ಕಲ್ಪಿಸಿದ್ದಾರೆ.
http://www.indofash.com/

ADVERTISEMENT

ವೇದಾಂಗ್‌ ಪಟೇಲ್‌ ಮತ್ತು ತಂಡ
ಒಂದು ಕಾಲದಲ್ಲಿ ಕಲಾವಿದರನ್ನು ಚಿತ್ರ ಬಿಡಿಸುವುದು ಮತ್ತು ಕಲಾಕೃತಿ ರಚಿಸುವುದಕ್ಕೆ ಮಾತ್ರ ಸೀಮಿತಗೊಳಿಸಲಾಗಿತ್ತು.

ಈ ಆಧುನಿಕ ಕಾಲದಲ್ಲಿ ಪ್ರತಿಯೊಂದು ಉತ್ಪನ್ನದ ಹಿಂದೆಯೂ ಕಲಾವಿದರ ಶ್ರಮ ಮತ್ತು ಪರಿಕಲ್ಪನೆ ಅನಾವರಣ
ಗೊಳ್ಳುತ್ತಿರುವುದು ಸುಳ್ಳಲ್ಲ. ಕಲಾವಿದರ ನೆರವಿನೊಂದಿಗೆ ನಾಲ್ವರು ಎಂಜಿನಿಯರಿಂಗ್‌ ಹುಡುಗರು ಆನ್‌ಲೈನ್‌ ಕಂಪೆನಿ ಕಟ್ಟಿದ ಕಥೆ ಇದು.

ಮುಂಬೈನ ವೇದಾಂಗ್‌ ಪಟೇಲ್‌, ರೋಹಿತ್‌ ಮತ್ತು ಆದಿತ್ಯ ಒಂದೇ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಅಭ್ಯಾಸ ಮಾಡಿದವರು. ಅವರ ಅದೃಷ್ಟಕ್ಕೆ ಸ್ವಾಸ್‌ ಐಟಿ ಕಂಪೆನಿಯಲ್ಲಿ ಮೂವರಿಗೆ ಕೆಲಸ ಸಿಕ್ಕಿತು. ಅಲ್ಲಿ ಕಲಾವಿದರು ವಿನ್ಯಾಸ ಮಾಡುತ್ತಿದ್ದ ಉತ್ಪನ್ನಗಳ ಮಾದರಿ ಇವರನ್ನು ಆಕರ್ಷಿಸಿತು. ಈ ಆಕರ್ಷಣೆ ‘ಸೋಲ್ಡ್‌ ಸ್ಟೋರ್‌’ ಕಂಪೆನಿ ಹುಟ್ಟಿಗೆ ಕಾರಣವಾಯಿತು.

ಮೂರು ವರ್ಷ ಕೆಲಸ ಮಾಡಿ ಕಂಪೆನಿಯಿಂದ ಹೊರ ಬಂದರು. ಈ ವೇಳೆ ಉಳಿತಾಯ ಮಾಡಿದ್ದ 1.5 ಲಕ್ಷ ರೂಪಾಯಿ ತೊಡಗಿಸಿ ಸಣ್ಣದಾಗಿ ಕಂಪೆನಿ ಆರಂಭಿಸಿದರು. ಮೊದಲು 200 ಟಿ–ಶರ್ಟ್‌ ಖರೀದಿಸಿದರು. ಆ ಟಿ–ಶರ್ಟ್‌ಗಳಿಗೆ ಕಲಾವಿದರ ಕುಂಚದಿಂದ ಹೊಸ ರೂಪ ನೀಡಿ ಆನ್‌ಲೈನ್‌ ವೆಬ್‌ನಲ್ಲಿ ಮಾರಾಟಕ್ಕೆ ಬಿಟ್ಟರು. ಹೀಗೆ ಸಾಗಿದ ಇವರ ವ್ಯಾಪಾರದ ಹಾದಿಯಲ್ಲಿ ಇಂದು  20,000 ಟಿ–ಶರ್ಟ್‌ಗಳ ಮಾರಾಟವಾಗುತ್ತಿವೆ.

ಈ ಟಿ– ಶರ್ಟ್‌ಗಳನ್ನು ವಾರಾಂತ್ಯದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಏಜೆಂಟರನ್ನು ನೇಮಿಸಿ ಮಾರಾಟ ಮಾಡುವ ಮೂಲಕ ವಹಿವಾಟನ್ನು ಹೆಚ್ಚಿಸಿಕೊಂಡಿದ್ದಾರೆ.  2017ರ ವೇಳೆಗೆ ತಮ್ಮ ಸ್ಟೋರ್‌ನ ಉತ್ಪನ್ನಗಳನ್ನು ವಿದೇಶಗಳಿಗೂ ರಫ್ತು ಮಾಡುವ ಯೋಜನೆ ರೂಪಿಸಿದ್ದಾರೆ. ವಾರ್ಷಿಕ 40 ರಿಂದ 50 ಲಕ್ಷ ರೂಪಾಯಿ ವಹಿವಾಟು ನಡೆಯುತ್ತಿದೆ ಎನ್ನುತ್ತಾರೆ ವೇದಾಂಗ್‌ ಪಟೇಲ್‌. http://www.thesouledstore.com/

ವಿಕಾಸ್‌ ಪಾಂಡೆ ಮತ್ತು ತಂಡ
ಕಾಯಕದ ಪರಿಕಲ್ಪನೆ ಪ್ರವರ್ಧಮಾನಕ್ಕೆ ಬಂದಿದ್ದು 12ನೇ ಶತಮಾನದಲ್ಲಿ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಬಸವಣ್ಣನವರ ‘ಕಾಯಕವೇ ಕೈಲಾಸ’ ಉಕ್ತಿಯಿಂದ ಪ್ರಭಾವಿತಗೊಂಡ ವಿಕಾಸ್‌ ಪಾಂಡೆ ಸಾಧನೆಯ ಹಾದಿಯಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾರೆ.

ದೆಹಲಿ ಮೂಲದ ವಿಕಾಸ್‌ ಪಾಂಡೆ ಎಂಜಿನಿಯರಿಂಗ್‌ ಪದವೀಧರ. ಬಿಡುವಿನ ಸಮಯದಲ್ಲಿ ಗ್ರಂಥಾಲಯಕ್ಕೆ ಹೋಗಿ ಓದುವುದು ವಿಕಾಸ್‌ ಅವರ ಹವ್ಯಾಸ. ಒಮ್ಮೆ  ಬಸವಣ್ಣನವರ ವಚನಗಳಿರುವ ಪುಸ್ತಕವನ್ನು ಇಂಗ್ಲಿಷ್‌ನಲ್ಲಿ ಓದಿ ಪ್ರಭಾವಿತಗೊಂಡರು. ವಿಕಾಸ್‌ಗೆ ಇಷ್ಟವಾಗಿದ್ದು ಕಾಯಕ ತತ್ವದ ಪರಿಕಲ್ಪನೆ.

ಪದವಿ ಮುಗಿದ ಬಳಿಕ ಖಾಸಗಿ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದರು. ಅಲ್ಲಿ ಪ್ರತಿ ದಿನ ಮಧ್ಯಾಹ್ನ ಹೊಟೇಲ್‌ಗೆ ಫೋನ್‌ ಮಾಡಿ ಊಟ ತರಿಸುತ್ತಿದ್ದರು. ಹೊಟೇಲ್‌ ಮತ್ತು ರೆಸ್ಟೊರೆಂಟ್‌ನವರೇ ಆಹಾರ ಸರಬರಾಜು ಮಾಡುವುದು ಸಾಮಾನ್ಯ.  ಇದನ್ನು ಕಂಡು ಮುಂದೆ ಆಹಾರ ಸರಬರಾಜು ಮಾಡುವ ಕಂಪೆನಿ ಕಟ್ಟುವ ಯೋಜನೆ ರೂಪಿಸಿದರು. ನಂತರ ರೂಪ ತಾಳಿದ್ದೇ ‘ವೈ ಹಂಗ್ರಿ‘ ಕಂಪೆನಿ.

ವೈ ಹಂಗ್ರಿ ಆ್ಯಪ್‌ ಅಥವಾ ವೆಬ್‌ಸೈಟ್‌ಗೆ ಲಾಗಿನ್‌ ಆಗಿ ಗ್ರಾಹಕರು ತಾವು ಇಷ್ಟಪಡುವ ಹೊಟೇಲ್‌ ಅಥವಾ ರೆಸ್ಟೊರೆಂಟ್‌ನಿಂದಲೇ ಊಟ ತರಿಸಿಕೊಳ್ಳುವ ವ್ಯವಸ್ಥೆಯನ್ನು ವೈ ಹಂಗ್ರಿ ಕಲ್ಪಿಸಿದೆ. ಆರ್ಡರ್‌ ಮಾಡಿ 30 ನಿಮಿಷಗಳಲ್ಲಿ ಊಟ ತಲುಪಿಸುವುದು ವೈ ಹಂಗ್ರಿಯ ವಿಶೇಷ.

ವಿಕಾಸ್‌ ಕಡಿಮೆ ಬಂಡವಾಳದಲ್ಲಿ ಈ ಕಂಪೆನಿ ಆರಂಭಿಸಿದ್ದಾರೆ. ಸ್ಕೂಟರ್‌ಗಳೇ ನಮ್ಮ ಕಂಪೆನಿಗೆ ಬಂಡವಾಳ ಎನ್ನುತ್ತಾರೆ. ‘ಪ್ರತಿನಿತ್ಯ 10,000 ಊಟಗಳನ್ನು ಸರಬರಾಜು ಮಾಡುತ್ತಿದ್ದೇವೆ. ತಿಂಗಳಿಗೆ ಒಂದು ಕೋಟಿ ರೂಪಾಯಿ ವಹಿವಾಟು ನಡೆಯುತ್ತಿದೆ. ಇದೀಗ ದೆಹಲಿಯಲ್ಲಿ ಮಾತ್ರ ಈ ಸೇವೆ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ದೇಶದ ಇತರ ಮಹಾನಗರಗಳಾದ ಮುಂಬೈ, ಕೋಲ್ಕತ್ತ, ಚೆನ್ನೈ ಮತ್ತು ಬೆಂಗಳೂರಿಗೆ ವಿಸ್ತರಿಸುವ ಗುರಿ ಹೊಂದಲಾಗಿದೆ’ ಎನ್ನುತ್ತಾರೆ ವಿಕಾಸ್‌. http://www.yhungry.com/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.