ADVERTISEMENT

ಸಿನಿಮಾ ಮೋಹ ಒದೆಗೆ ಕಾರಣವಾಯ್ತು

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2017, 19:30 IST
Last Updated 20 ಸೆಪ್ಟೆಂಬರ್ 2017, 19:30 IST

ನನಗೆ ತಿಳಿವಳಿಕೆ ಬಂದಾಗಿನಿಂದ ಸಿನಿಮಾ ಅಂದ್ರೆ ಬಹಳ ಇಷ್ಟ. ನನ್ನ ಅಜ್ಜ, ಅಜ್ಜಿ, ಮನೆಯವರೆಲ್ಲ ಸೇರಿ ವಾರಕ್ಕೆ ಒಂದು ಸಾರಿ ಸಿನಿಮಾಗೆ ಹೋಗುವುದು ರೂಢಿಯಾಗಿತ್ತು. ಶಾಲೆಯಲ್ಲೂ ಅದೇ ರೀತಿ ಸಿನಿಮಾ ಬಗ್ಗೆ ಪ್ರೀತಿ ಇರೋ ಸ್ನೇಹಿತರನ್ನು ಮಾಡಿಕೊಂಡು ಸಾಯಂಕಾಲ ಕ್ಲಾಸ್‌ಗೆ ಚಕ್ಕರ್‌ ಹಾಕಿ, ಥಿಯೇಟರ್‌ಗೆ ಕದ್ದು ಸಿನಿಮಾ ನೋಡಲು ಹೋಗುತ್ತಿದ್ದೆವು.

ನಾವು ಮೂರ್ನಾಲ್ಕು ಹುಡುಗರು ಓದಿನಲ್ಲಿ ಸದಾ ಹಿಂದೆ. ಸರಿಯಾಗಿ ನೋಟ್ಸ್‌ ಕೂಡ ಬರೆಯುತ್ತಿರಲಿಲ್ಲ. ಪ್ರತಿದಿನ ನಾಲ್ಕು ಜನ, ಸಾಯಂಕಾಲ ಕೊನೇ ಕ್ಲಾಸ್‌ಗೆ ಚಕ್ಕರ್‌ ಹಾಕಿ, ಸಿನಿಮಾ ಥಿಯೇಟರ್‌ ಗೋಡೆ ಎಗರಿ ಅಥವಾ ಹಿಂಬದಿಯಲ್ಲಿರುವ ಚಿಕ್ಕ ಗೇಟ್‌ನಿಂದ ಎಗರಿ ಸಿನಿಮಾ ನೋಡಲು ಹೋಗುತ್ತಿದ್ದೆವು.

ಹೀಗೇ ಒಂದು ದಿನ, ಥಿಯೇಟರ್‌ವೊಂದರಲ್ಲಿ ಸಿಕ್ಕಿಹಾಕಿಕೊಂಡುಬಿಟ್ಟೆವು. ಮಾಲೀಕ ನಮ್ಮನ್ನೆಲ್ಲಾ ಕರೆದು ಚೆನ್ನಾಗಿ ಬೈಯ್ದರು. ಸದ್ಯ ಅವರು ನಮ್ಮನ್ನು ಹೊಡೆಯಲಿಲ್ಲ, ಕಾರಣ ನಾವಿನ್ನೂ ತುಂಬಾ ಚಿಕ್ಕವರಾಗಿದ್ದೆವು.

ADVERTISEMENT

ಮರುದಿನ ಶಾಲೆಯಲ್ಲಿ ಮೊದಲ ಪಿರಿಯಡ್‌ಗೆ ಬಂದ ಮೇಷ್ಟ್ರು ಹಾಜರಿ ಹಾಕಿ ನಮ್ಮನ್ನು ನಿಲ್ಲಲು ಹೇಳಿದರು. ಹಸಿಜುಳ್ಳಿ (ಎಳೆಯ ಹಸಿರಿನ ಕಟ್ಟಿಗೆ) ಯಿಂದ ಎಲ್ಲರಿಗೂ ಚೆನ್ನಾಗಿ ಬಾರಿಸಿದರು.

ನಂತರ ಎರಡನೇ, ಮೂರನೇ ಪಿರಿಯಡ್‌... ಹೀಗೆ ಪ್ರತಿ ಪಿರಿಯಡ್‌ಗೆ ಬಂದ ಮೇಷ್ಟ್ರು ಬಾರಿಸಿದ್ದೇ ಬಾರಿಸಿದ್ದು. ಆದರೆ ಯಾಕೆ, ಏನು ಅಂತ ಯಾರೂ ಹೇಳಲಿಲ್ಲ. ತರಗತಿಯಲ್ಲಿದ್ದವರಿಗೂ ಆಶ್ಚರ್ಯ. ಅವರಿಗೂ ಕಾರಣ ಗೊತ್ತಾಗುತ್ತಿಲ್ಲ!

ಅದರಲ್ಲಿ ಒಬ್ಬರು ಕನ್ನಡ ಮೇಷ್ಟ್ರು ಹೊಡೆಯುವುದಕ್ಕೆ ಮೊದಲು– ‘ವಾರಕ್ಕೆ ಒಂದು ಸಲ ಮನೆಯವರೆಲ್ಲ ಸಿನಿಮಾಕ್ಕೆ ಹೋಗ್ತೀರಿ... ಮತ್ಯಾಕೆ ಕಳ್ಳರ ಥರ ಗೋಡೆ ಎಗರಿ ಸಿನಿಮಾ ನೋಡಲು ಹೋಗ್ತೀರಿ’ ಅಂದಾಗಲೇ ನಮಗೆ ಕಾರಣ ಗೊತ್ತಾಯ್ತು. ಅಲ್ಲಿವರೆಗೂ ನೋಟ್ಸ್‌ ಬರೆದಿಲ್ಲ ಅನ್ನುವ ಕಾರಣಕ್ಕೆ ಶಿಕ್ಷೆ ಕೊಡುತ್ತಿದ್ದಾರೇನೋ ಅಂದುಕೊಂಡಿದ್ವಿ.

ಆಮೇಲಿನಿಂದ ಕದ್ದು ಸಿನಿಮಾ ನೋಡೋದು ಬಿಟ್ಟುಬಿಟ್ಟೆವು. ಆದರೆ ಸಿನಿಮಾ ನೋಡುವ ಅಭ್ಯಾಸ ಮಾತ್ರ ಕಡಿಮೆಯಾಗಲಿಲ್ಲ.

ನಂತರ ಆ ಗುಂಗು ಯಾವ ಮಟ್ಟಕ್ಕೆ ಹೋಯ್ತು ಅಂದರೆ, ನಟನೆಯಲ್ಲಿ ತರಬೇತಿ ಪಡೆದು ಅನೇಕ ಕಡೆ ನಾಟಕಗಳ ಪ್ರದರ್ಶನ ಮಾಡಿದೆನು. ಸಿನಿಮಾ ಕಾರಣವಾಗಿ ಒದೆ ತಿಂದ ಸಂಗತಿ ಇಂದಿಗೂ ಆಗಾಗ್ಗೆ ನೆನಪಿನಲ್ಲಿ ಇಣುಕುತ್ತಿರುತ್ತದೆ.

⇒–ಮಂಜು. ಜಿ. ಹಗರಿಬೊಮ್ಮನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.