ADVERTISEMENT

ಸ್ಟಾರ್ಮ್‌ ಎಡ್ಜ್‌ನ ಮಿನಿ ಎಸ್‌ಯುವಿ

ಇ.ಎಸ್.ಸುಧೀಂದ್ರ ಪ್ರಸಾದ್
Published 23 ಏಪ್ರಿಲ್ 2014, 19:30 IST
Last Updated 23 ಏಪ್ರಿಲ್ 2014, 19:30 IST

ದುಬಾರಿ ಎಸ್‌ಯುವಿ ಕೊಳ್ಳಲಾಗದ ಮೇಲ್ಮಧ್ಯಮ ವರ್ಗದವರಿಗೆ ಇದೀಗ ಮಿನಿ ಎಸ್‌ಯುವಿ ಕೊಳ್ಳುವಾಸೆ. ಹೀಗಾಗಿ ಫೋರ್ಡ್‌ ಎಕೋಸ್ಪೋರ್ಟ್ಸ್‌ ಭಾರೀ ಜನಪ್ರಿಯತೆ ಗಳಿಸಿ ಮಾರಾಟವಾಗುತ್ತಿದೆ. ಈ ಜನಪ್ರಿಯತೆಯನ್ನೇ ಬೆನ್ನು ಹತ್ತಿದ ಕೆಲವು ಕಾರು ತಯಾರಿಕಾ ಕಂಪೆನಿಗಳು ಅದೇ ಮಾದರಿಯ ಪುಟ್ಟ ಎಸ್‌ಯುವಿಗಳ ಅಭಿವೃದ್ಧಿಯತ್ತ ತಮ್ಮ ಗಮನ ಕೇಂದ್ರೀಕರಿಸಿವೆ.

ಇತ್ತೀಚೆಗೆ ಬೀಜಿಂಗ್‌ನಲ್ಲಿ ನಡೆದ ಆಟೊ ಎಕ್ಸ್‌ಪೊದಲ್ಲಿ ಹ್ಯುಂಡೈ ಐಎಕ್‌25 ಎಂಬ ಕಾಲ್ಪನಿಕ ಮಿನಿ ಎಸ್‌ಯುವಿಯನ್ನು ಅನಾವರಣಗೊಳಿಸಿತು. ಭಾರತದ ವಾಹನ ಪ್ರಪಂಚಕ್ಕಿಂತ ಬಹಳ ಮುಂದಿರುವ ಚೀನಾದ ಮಾರುಕಟ್ಟೆಯಲ್ಲಿ ಅನಾವರಣಗೊಂಡ ಕಾರು ತಕ್ಷಣ ಭಾರತಕ್ಕೆ ಬರುತ್ತದೆ ಎಂದು ಹೇಳಲಾಗದಿದ್ದರೂ ಮುಂದಿನ ದಿನಗಳಲ್ಲಿ ಇಂಥದ್ದೊಂದು ಮಿನಿ ಎಸ್‌ಯುವಿ ಭಾರತದ ವಾಹನ ಪ್ರಪಂಚಕ್ಕೆ ಕಾಲಿಡಲಿದೆ.

ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಕಂಪೆನಿ ಬಿಡುಗಡೆ ಮಾಡುತ್ತಿರುವ ಎರಡನೇ ಮಿನಿ ಎಸ್‌ಯುವಿ ಇದು. ಮೊದಲನೆಯದು ಎಚ್‌ಬಿ20. ಈಗಾಗಲೇ ಬ್ರೆಜಿಲ್‌ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದೆ. ಇದೀಗ ಚೀನಾ ಮಾರುಕಟ್ಟೆಯಲ್ಲಿ ಐಎಕ್ಸ್‌25 ಪರಿಚಯಿಸಿದೆ.

ಹ್ಯುಂಡೈ ಸ್ಯಾಂಟಾಫೆ ಎಸ್‌ಯುವಿಯ ಮಿನಿ ಮಾದರಿ ಈ ಐಎಕ್ಸ್‌25 ಎಂದರೆ ತಪ್ಪಾಗಲಾರದು. ಎಂದಿನಂತೆ ತನ್ನದೇ ಫ್ಲ್ಯೂಡಿಕ್‌ ವಿನ್ಯಾಸವನ್ನು ಇದಕ್ಕೂ ಅಳವಡಿಸಲಾಗಿದೆ. 4270ಮಿ.ಮೀ. ಉದ್ದ ಹಾಗೂ 1780ಮಿ.ಮೀ. ಅಗಲವಿರುವ ಈ ಕಾರು 1630 ಮಿ.ಮೀ. ಎತ್ತರವಿದೆ. ಐ20 ಮಾದರಿಯನ್ನು ಆಧಾರವಾಗಿಟ್ಟುಕೊಂಡು ಅಭಿವೃದ್ಧಿಪಡಿಸಲಾದ ಐಎಕ್ಸ್‌25 ಈ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಬಿಡುಗಡೆಯಾಗಲಿದೆಯಂತೆ.

ಒಳಾಂಗಣ ವಿನ್ಯಾಸದಲ್ಲಿ ಏನೇನು ಬದಲಾವಣೆ ಮಾಡಿದೆ ಎಂಬ ಯಾವ ಸುಳಿವನ್ನೂ ನೀಡದ ಹ್ಯುಂಡೈ, ಹೊರಮೈಗೆ ಸಾಕಷ್ಟು ಹೊಸತನವನ್ನು ತುಂಬಿದೆ. ಇದರ ವಿನ್ಯಾಸಕ್ಕೆ ‘ಸ್ಟಾರ್ಮ್‌ ಎಡ್ಜ್‌’ ವಿನ್ಯಾಸ ಎಂದು ಕರೆದಿದೆ. ಹೆಚ್ಚು ಅಗಲವಲ್ಲದ ಗ್ರಿಲ್‌, ಅಲ್ಯುಮಿನಿಯಂ ಬಣ್ಣದ ಸ್ಕಿಡ್‌ ಪ್ಲೇಟ್‌, ಅಲಾಯ್‌ ವೀಲ್ಸ್‌, ಹಿಂಬದಿಯಲ್ಲಿ ದೊಡ್ಡದಾದ ದೀಪಗಳು ಹಾಗೂ ಬಝೂಕಾ ಸೈಲೆನ್ಸರ್‌ ಹಾಗೂ ಸ್ಕಿಡ್‌ ಪ್ಲೇಟ್‌ ಅಳವಡಿಸಲಾಗಿದೆ.

ಚೀನಾದಲ್ಲಿ ಪೆಟ್ರೋಲ್‌ ಮಾದರಿಯಲ್ಲಿ ಬಿಡುಗಡೆಯಾಗುತ್ತಿರುವ ಐಎಕ್ಸ್‌25 ಭಾರತದ ಮಾರುಕಟ್ಟೆಯಲ್ಲಿ ಸದ್ಯಕ್ಕೆ ಸದ್ದು ಮಾಡದು. ಡೀಸೆಲ್‌ ಎಂಜಿನ್‌ಗೆ ಹೆಚ್ಚು ಬೇಡಿಕೆ ಇರುವ ಭಾರತದ ವಾಹನ ಮಾರುಕಟ್ಟೆಗೆ ಹಲವಾರು ಮಾರ್ಪಾಡುಗಳು ಅಗತ್ಯ. ಅವುಗಳನ್ನು ಅಳವಡಿಸಿಕೊಂಡು ಇಲ್ಲಿನ ಮಾರುಕಟ್ಟೆಗೆ ಪರಿಚಯಿಸಲು ಸಾಕಷ್ಟು ಕಾಲವಕಾಶವೇ ಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.