ADVERTISEMENT

ಹಳತಾದರೂ ಚೆನ್ನ

ಥಂಡರ್‌ಬರ್ಡ್ 500

ಜಯಸಿಂಹ ಆರ್.
Published 14 ಡಿಸೆಂಬರ್ 2016, 19:30 IST
Last Updated 14 ಡಿಸೆಂಬರ್ 2016, 19:30 IST
ಹಳತಾದರೂ ಚೆನ್ನ
ಹಳತಾದರೂ ಚೆನ್ನ   

ರಾಯಲ್‌ ಎನ್‌ಫೀಲ್ಡ್‌ ಬತ್ತಳಿಕೆಯಲ್ಲೀಗ ಬಿಸಿ ದೋಸೆಯಂತೆ ಖರ್ಚಾಗುತ್ತಿರುವ ಹಲವು ಬೈಕ್‌ಗಳಿವೆ. ಕ್ಲಾಸಿಕ್‌ 350ಯಿಂದ ಆರಂಭವಾಗಿ ಹಿಮಾಲಯನ್‌ವರೆಗೂ ‘ವೇಯ್ಟಿಂಗ್ ಪಿರಿಯಡ್‌’ ಹೆಚ್ಚಾಗಿದೆ. ಅಂದರೆ ಬೇಡಿಕೆಗಳನ್ನು ಪೂರೈಸಲು ಕಂಪೆನಿ ಸಾಹಸ ಪಡುತ್ತಿದೆ ಎಂದೇ ಅರ್ಥ.

ಕಂಪೆನಿಯ ಥಂಡರ್‌ಬರ್ಡ್ 500 ತನ್ನದೇ ವರ್ಗದಲ್ಲಿ ಹೆಚ್ಚು ಜನಪ್ರಿಯತೆ ಪಡೆದ ಬೈಕ್‌. ಇತ್ತ ಕ್ರೂಸರ್‌ ಅಲ್ಲದ, ಅತ್ತ ಕಫೆ ರೇಸರ್‌ ಅಲ್ಲದ ವಿಚಿತ್ರ ವಿನ್ಯಾಸದ ಬೈಕ್‌ ಇದು. ಕಂಪೆನಿಯ ಆಹ್ವಾನದ ಮೇರೆಗೆ ಬೈಕ್‌ ಅನ್ನು 500 ಕಿ.ಮೀ ಚಲಾಯಿಸುವ ಅವಕಾಶ ‘ಪ್ರಜಾವಾಣಿ’ಗೆ ದೊರಕಿತ್ತು. ಈ ಬೈಕ್‌ ಮಾರುಕಟ್ಟೆಗೆ ಬಂದು ಎರಡು ವರ್ಷಗಳೇ ಕಳೆದಿವೆ. ಆದರೆ ಈ ಬಾರಿ ಟೆಸ್ಟ್‌ ಡ್ರೈವ್‌ಗೆ ದೊರಕಿದ್ದು ಬಳಸಿದ್ದ, ಈಗಾಗಲೇ ಹತ್ತಾರು ಸಾವಿರ ಕಿ.ಮೀ ಓಡಿರುವ ಬೈಕ್‌.

ದೀರ್ಘಕಾಲದ ಬಳಕೆಯ ನಂತರವೂ ಬೈಕ್‌ ಸುಸ್ಥಿತಿಯಲ್ಲಿ ಇರುತ್ತದೆಯೇ ಎಂಬುದನ್ನು ಪರೀಕ್ಷಿಸುವುದು ಈ ಟೆಸ್ಟ್‌ರೈಡ್‌ನ ಮುಖ್ಯ ಉದ್ದೇಶವಾಗಿತ್ತು. ಅಂದಹಾಗೆ ನಿಯಮಿತ ಸರ್ವಿಸ್‌ ಮತ್ತು ಆಯಿಲ್‌ ಬದಲಾವಣೆ ಹೊರತುಪಡಿಸಿ ಬೈಕ್‌ಗೆ ಯಾವ ರೀತಿಯ ರಿಪೇರಿಯೂ ನಡೆದಿಲ್ಲ ಎಂದು ಕಂಪೆನಿ ಹೇಳಿತ್ತು.

ಈ ಬೈಕ್‌ ಮೊದಲ ಕ್ರಾಂಕ್‌ನಲ್ಲೇ ಸ್ಟಾರ್ಟ್‌ ಆಯಿತು. ಸ್ಟಾರ್ಟರ್‌, ಬ್ಯಾಟರಿ ಮತ್ತು ಫ್ಯುಯೆಲ್‌ ಇಂಜೆಕ್ಷನ್ ಸರಿಯಾಗಿದೆ ಎಂಬುದರ ಸೂಚನೆ ಇದೆ. ದೀರ್ಘಕಾಲದ ಬಳಕೆಯ ನಂತರ ಮೊದಲು ಕೈಕೊಡುವ ಮತ್ತು ದುಬಾರಿ ಮೊತ್ತದ ಬಿಡಿಭಾಗಗಳಿವು. ಮೊದಲ ಕ್ರಾಂಕ್‌ನಲ್ಲೇ ಎಂಜಿನ್‌ ಸ್ಟಾರ್ಟ್‌ ಆದರೆ ಈ ಬಿಡಿಭಾಗಗಳು ಸುಸ್ಥಿತಿಯಲ್ಲಿ ಇವೆ ಎಂದರ್ಥ. ಇನ್ನು, ಇದು ಬಳಸಿದ ಬೈಕ್‌ ಆದ್ದರಿಂದ ಗಿಯರ್ ಬದಲಾವಣೆ ನಯವಾಗಿತ್ತು.

ಥಂಡರ್‌ಬರ್ಡ್‌ 500ನಲ್ಲಿ ಎರಡನೇ ಗಿಯರ್‌ನಿಂದ ನೇರವಾಗಿ ನ್ಯೂಟ್ರಲ್‌ಗೆ ಹೋಗುವುದು ತುಸು ಕಷ್ಟ. ನ್ಯೂಟ್ರಲ್‌ ಬದಲಿಗೆ ಮೊದಲ ಗಿಯರ್‌ ಎಂಗೇಜ್‌ ಆಗುತ್ತದೆ. ಬೈಕ್‌ ನಿಲ್ಲಿಸುವಾಗ ಮೊದಲ ಗಿಯರ್‌ಗೆ ಹೋಗಿಯೇ ನ್ಯೂಟ್ರಲ್‌ಗೆ ಬರಬೇಕಾದದ್ದು ಹೆಚ್ಚು ಸುರಕ್ಷಿತ. ಏಕೆಂದರೆ ಆಗ ಎಂಜಿನ್‌ ಬ್ರೇಕಿಂಗ್‌ ನೆರವಿಗೆ ಬರುತ್ತದೆ. ಆದರೆ ನ್ಯೂಟ್ರಲ್‌ಗೆ ನೇರವಾಗಿ ಹೋಗುವುದೂ ಸರಳವಾಗೇ ಇರಬೇಕು.

ADVERTISEMENT

ಒಂದೊಮ್ಮೆ ಬೈಕ್‌ ತಳ್ಳಬೇಕೆಂದರೆ ಎರಡನೇ ಗಿಯರ್‌ನಿಂದ ಮೊದಲ ಗಿಯರ್‌ಗೆ ಶಿಫ್ಟ್‌ ಆಗಿ ನಂತರ ನ್ಯೂಟ್ರಲ್‌ಗೆ ಹಿಂತಿರುಗುವುದು ಕಿರಿಕಿರಿಯೇ ಸರಿ. ಅಲ್ಲದೆ ಎಂಜಿನ್‌ ಆಫ್‌ ಆಗಿದ್ದಾಗ ಈ ಬದಲಾವಣೆ ತುಸು ಕಷ್ಟ. ಆದರೆ ಇದು ಬಳಸಿದ ಬೈಕ್‌ ಆದ್ದರಿಂದ ಹಾಗೂ ಕಂಪೆನಿಯ ನುರಿತ ರೈಡರ್‌ಗಳೇ ಇದನ್ನು ಚಲಾಯಿಸಿದ್ದರಿಂದ ಗಿಯರ್‌ ಬದಲಾವಣೆ ರೈಡರ್‌ ಹೇಳಿದಂತೆ ಕೇಳುವಂತಿತ್ತು.

ಬುಲೆಟ್‌ ಇರಲಿ, ಕ್ಲಾಸಿಕ್ ಇರಲಿ ಅಥವಾ ಮಾಷಿಮೊ ಇರಲಿ, 500 ಸಿಸಿ ಸಾಮರ್ಥ್ಯದ ಬೈಕ್‌ಗಳ ಸೊಗಸು ಇರುವುದು ಅವುಗಳ ನಿಧಾನ ಗತಿಯ ಚಾಲನೆಯಲ್ಲಿ. ಈ ಎಂಜಿನ್‌ಗಳ ಬಿಎಚ್‌ಪಿ ಕಡಿಮೆ ಇರುತ್ತದೆ. ಅಂದರೆ ಅವುಗಳ ಗರಿಷ್ಠ ವೇಗ ಕಡಿಮೆ. ಜತೆಗೆ ವೇಗ ವರ್ಧನೆಯೂ ತುಸು ನಿಧಾನ. ಆದರೆ 35 ಕಿ.ಮೀ ವೇಗದಲ್ಲಿದ್ದಾಗಲೂ ಟಾಪ್‌ ಗಿಯರ್‌ನಲ್ಲೇ ಇವನ್ನು ಚಲಾಯಿಸಬಹುದು. 350 ಸಿ.ಸಿ ಎಂಜಿನ್‌ನಲ್ಲಿ ಇದು ಸಾಧ್ಯವಿಲ್ಲ.

ಎಂಜಿನ್‌ ಜರ್ಕ್‌ ಬರಲು ಆರಂಭಿಸುತ್ತದೆ. ಕಡಿಮೆ ವೇಗದಲ್ಲಿ ನಿಧಾನವಾಗಿ ಚಲಾಯಿಸಲು ಸಣ್ಣ ಬೈಕ್‌ಗಳಲ್ಲೂ ಸಾಧ್ಯವಿದೆ. ಆದರೆ ರಾಯಲ್‌ ಎನ್‌ಫೀಲ್ಡ್‌ನ 500 ಸಿಸಿ ಎಂಜಿನ್‌ಗಳು ಟಾಪ್‌ ಗಿಯರ್‌ನಲ್ಲೇ 35 ಕಿ.ಮೀ/ಗಂಟೆ ವೇಗದಿಂದ ವೇಗವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಸಮರ್ಥವಾಗಿವೆ, ಅದು ಒಂದಿನಿತೂ ಎಂಜಿನ್ ಜರ್ಕ್‌ ಇಲ್ಲದೆ. ಟೆಸ್ಟ್‌ ರೈಡ್‌ ಮಾಡಿದ ಬೈಕ್‌ನಲ್ಲಂತೂ ಈ ಅನುಭವ ಚೆನ್ನಾಗಿತ್ತು. ನಗರದೊಳಗಿನ ಚಾಲನೆಯಲ್ಲಿ ಗಿಯರ್‌ ಬದಲಿಸದೆಯೇ ಬೈಕ್ ಚಲಾಯಿಸುವ ಅನುಭವ ಆರಾಮದಾಯಕ. ಈ ನಿಟ್ಟಿನಲ್ಲಿ ಥಂಡರ್‌ಬರ್ಡ್‌ 500ಗೆ ಹೆಚ್ಚಿನ ಅಂಕ ಕೊಡಬಹುದು.

ಆದರೆ ತುಸು ಕಿರಿಕಿರಿ ಆಗಿದ್ದು, ಹೆದ್ದಾರಿ ಚಾಲನೆ. ಬೈಕ್ 60-70 ಕಿ.ಮೀ ವೇಗದಲ್ಲಿ ಚಾಲನೆ ಆರಾಮದಾಯಕವಾಗಿದೆ. ಅದರಾಚೆಗಿನ ವೇಗದಲ್ಲೂ ಬೈಕ್‌ ಚಲಾಯಿಸಬಹುದು, ಆದರೆ ಬೈಕ್‌ನ ನಡುಕ ಹೆಚ್ಚುತ್ತದೆ. ಬರೋಬ್ಬರಿ 190 ಕೆ.ಜಿ. ತೂಗಿದರೂ ಬೈಕ್‌ ಹೆಚ್ಚಿನ ವೇಗದಲ್ಲಿ ಕುಣಿಯಲು ಆರಂಭಿಸುತ್ತದೆ. ಹೀಗಾಗಿ 100 ಕಿ.ಮೀ/ಗಂಟೆ ದಾಟಿದ ವೇಗದಲ್ಲಿ ಆತ್ಮವಿಶ್ವಾಸದಿಂದ ಬೈಕ್‌ ಅನ್ನು ಚಲಾಯಿಸಲು ಸಾಧ್ಯವಿಲ್ಲ. ಇದರ ಹೊರತಾಗಿಯೂ ಬೈಕ್‌ ಸುಲಭವಾಗಿ 130 ಕಿ.ಮೀ/ಗಂಟೆ ವೇಗ ಮುಟ್ಟುತ್ತದೆ.

ಸ್ಪೀಡೊ ಮೀಟರ್‌ನಲ್ಲಿ ಈ ವೇಗ ಇನ್ನೂ ಹೆಚ್ಚು ತೋರಿಸುತ್ತದೆಯಾದರೂ, ಜಿಪಿಎಸ್‌ ಮೀಟರ್‌ನಲ್ಲಿ ದಾಖಲಾದ ವೇಗ 130 ಕಿ.ಮೀ/ಗಂಟೆ. 130 ಕಿ.ಮೀ. ವೇಗದ ನಂತರ ಮತ್ತಷ್ಟು ವೇಗ ಪಡೆಯಲು ಥಂಡರ್‌ಬರ್ಡ್‌ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಈ ಬೈಕ್‌ನಲ್ಲಿ 148 ಕಿ.ಮೀ/ಗಂಟೆ ವೇಗ (ಜಿಪಿಎಸ್‌ ಮೀಟರ್‌ನಲ್ಲಿ ದಾಖಲಾದಂತೆ) ಮುಟ್ಟಲಷ್ಟೇ ಸಾಧ್ಯವಾಯಿತು. ಆದರೆ ಆ ವೇಗದಲ್ಲಿ ಥಂಡರ್‌ ಬರ್ಡ್‌ ಬೈಕ್‌ ಚಲಾಯಿಸುವುದು ಸುರಕ್ಷಿತ ಅಲ್ಲ. ನಿಜಕ್ಕೂ ಮಜ ಕೊಡುವ ಸಂಗತಿ ಎಂದರೆ, 120/130 ಕಿ.ಮೀ/ಗಂಟೆ ವೇಗದಲ್ಲಿ ಓಡುತ್ತಿರುವ ಕಾರ್‌ಗಳನ್ನು ಸುಲಭವಾಗಿ ಹಿಂದಿಕ್ಕುವುದು.

ಆ ವೇಗದಲ್ಲಿ ಓಡುತ್ತಿರುವ ಕಾರ್‌ಗಳನ್ನು ಹಿಂದಿಕ್ಕಿದಾಗ, ಕಾರ್‌ನಲ್ಲಿದ್ದವರು ಬೈಕ್‌ನತ್ತ ತಿರುಗಿ ನೋಡುವಾಗ ರೈಡರ್‌ಗೆ ಕೊಡುವ ಗತ್ತಿನ ಗಮ್ಮತ್ತೇ ಬೇರೆ. ಬೇರೆ ಬೈಕ್‌ಗಳಲ್ಲೂ ಈ ವೇಗ ಸಾಧ್ಯವಾದರೂ ಅವು ಥಂಡರ್‌ ಬರ್ಡ್‌ನಂತೆ ಆರ್ಭಟಿಸದಿರುವುದು ಅವುಗಳ ಕೊರತೆ. ಬಹುಶಃ ಈ ಗತ್ತಿನ ಕಾರಣದಿಂದಲೇ ರಾಯಲ್‌ ಎನ್‌ಫೀಲ್ಡ್‌ ಕೊಳ್ಳುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ.

ಆದರೆ ರಾಯಲ್‌ ಎನ್‌ಫೀಲ್ಡ್‌ ಕಂಪೆನಿ ಗಮನ ಹರಿಸಬೇಕಿರುವ ಸಂಗತಿ ಮತ್ತಷ್ಟಿದೆ. ಬೈಕ್‌ನ ವೈಬ್ರೇಷನ್‌ ಅನ್ನು ಇಳಿಸಲೇಬೇಕಿದೆ. ಪೂರ್ಣ ಸಿಂಥೆಟಿಕ್‌ ಆಯಿಲ್‌ ಬಳಸಿ ಇದನ್ನು ಮಾಲೀಕರೇ ಸ್ವಲ್ಪ ಸುಧಾರಿಸಿಕೊಳ್ಳಬಹುದು. ಜತೆಗೆ ಬೈಕ್‌ನ ಏರೊ ಡೈನಮಿಕ್‌ ಬದಲಾಗಬೇಕಿದೆ. ಬೈಕ್‌ ಗಾಳಿಯನ್ನು ಸೀಳಿಕೊಂಡು ಮುನ್ನುಗ್ಗುವುದಿಲ್ಲ.

ಬದಲಿಗೆ ಗಾಳಿಯೊಂದಿಗೆ ಘರ್ಷಣೆ ಮಾಡುತ್ತದೆ. ರೈಡರ್‌ನ ಮುಖ, ಮುಷ್ಟಿ ಮತ್ತು ಮೊಣಕಾಲುಗಳಿಗೆ ಗಾಳಿ ಅಪ್ಪಳಿಸುತ್ತದೆ. ಈ ವಿಚಾರದಲ್ಲಿ ಬೈಕ್‌ನ ವಿನ್ಯಾಸ ಬದಲಿಸಲು ಕಂಪೆನಿ ಮುಂದಾದರೆ ರೈಡರ್‌ಗಳು ಮತ್ತಷ್ಟು ಖುಷಿಪಡುವುದರಲ್ಲಿ ಸಂದೇಹವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.