ADVERTISEMENT

e–ಪುಸ್ತಕ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2017, 19:30 IST
Last Updated 1 ಮಾರ್ಚ್ 2017, 19:30 IST
e–ಪುಸ್ತಕ
e–ಪುಸ್ತಕ   

ಕಾಮದ ಗುಟ್ಟು: ‘ಲೈಂಗಿಕ ಸಾಹಿತ್ಯ’ದ ಹೆಸರಿನಲ್ಲಿ ಪ್ರಕಟಗೊಳ್ಳುವ ಬಹುತೇಕ ಕೃತಿಗಳು ಓದುಗರನ್ನು ರೋಚಕಗೊಳಿಸುವಂತೆ ಇರುತ್ತವೆ; ಇಲ್ಲವೇ ದಿಗಿಲುಗೊಳಿಸುತ್ತವೆ. ಬಳ್ಳಾರಿ ಜಿಲ್ಲೆಯ ‘ಪ್ರೇಮ ಸಾಹಿತ್ಯ ಸಂಘ’ ಪ್ರಕಟಿಸಿರುವ ಗೋಪಾಲಕೃಷ್ಣರ ‘ಕಾಮದ ಗುಟ್ಟು’ ಕೃತಿ ಈ ಎರಡು ರೀತಿಯಿಂದಲೂ ಹೊರತಾದುದು.

‘ಲೈಂಗಿಕ ವಿಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳು ಗೊಂದಲಗಳನ್ನು ತಿಳಿಗೊಳಿಸುವ ಬದಲು ಮೂಢನಂಬಿಕೆ ಹೆಚ್ಚಿಸುತ್ತವೆ’ ಎನ್ನುವ ಅರಿವಿನೊಂದಿಗೆ– ಲೈಂಗಿಕ ಶಿಕ್ಷಣಕ್ಕೆ ಸಂಬಂಧಿಸಿದ ಸಂಗತಿಗಳನ್ನು ಬೋಧಪ್ರದವಾಗಿ, ವೈಜ್ಞಾನಿಕ ನೆಲೆಗಟ್ಟಿನಲ್ಲಿ ಲೇಖಕರು ವಿವರಿಸಿದ್ದಾರೆ. ಪ್ರಶ್ನೋತ್ತರ ರೂಪದಲ್ಲಿ, ಸುಮಾರು ಐವತ್ತು ಪುಟಗಳ ಚೌಕಟ್ಟಿನಲ್ಲಿ ಇರುವ ಅವರ ನಿರೂಪಣೆ, ತರುಣ ತರುಣಿಯರಲ್ಲಿ ಸಾಮಾನ್ಯವಾಗಿ ಉಂಟಾಗುವ ಗೊಂದಲಗಳಿಗೆ ಉತ್ತರದಂತಿದೆ ಹಾಗೂ ಲೈಂಗಿಕತೆಯ ಕುರಿತು ಜನಸಾಮಾನ್ಯರಲ್ಲಿ ಇರಬಹುದಾದ ಮೂಢನಂಬಿಕೆಗಳನ್ನು ಪರಿಹರಿಸುವಂತಿದೆ. ‘ಇದನ್ನು ಬರೆದವರು ಕನ್ನಡಿಗರಿಗೊಂದು ದೊಡ್ಡ ಉಪಕಾರವನ್ನು ಮಾಡಿರುತ್ತಾರೆ. ಇಂಗ್ಲಿಷ್‌ ಭಾಷೆಯಲ್ಲಿಯೂ ಈ ರೀತಿಯಿಂದ ಬರೆದ ಪುಸ್ತಕಗಳು ಅಪರೂಪವೇ ಎಂದೆನ್ನಬಹುದು’ ಎಂದು ಮುನ್ನುಡಿಯಲ್ಲಿ ತಾರಾನಾಥರು ಹೇಳಿರುವ ಮಾತಿನಲ್ಲಿ ಉತ್ಪ್ರೇಕ್ಷೆಯೇನೂ ಇಲ್ಲ.

ಮಾಹಿತಿಗೆ ತಕ್ಕಂತೆ ಪುಸ್ತಕದ ಅಲ್ಲಲ್ಲಿ ಪೂರಕ ಚಿತ್ರಗಳನ್ನು ಬಳಸಲಾಗಿದೆ. ಕನ್ನಡ ಶಬ್ದಗಳಿಗೆ ಆವರಣದಲ್ಲಿ ನೀಡಿರುವ ಇಂಗ್ಲಿಷ್‌ ಶಬ್ದಗಳು ಸಂವಹನವನ್ನು ಸುಲಭಗೊಳಿಸುವಂತಿವೆ. ಪುಸ್ತಕದ ಕೊನೆಯಲ್ಲಿ ‘ಚಿಕಿತ್ಸಾಭಾಗ’ ಎನ್ನುವ ಅಧ್ಯಾಯವಿದ್ದು – ಅದರಲ್ಲಿ, ವೀರ್ಯದೋಷ, ಮಲಬದ್ಧತೆ, ಮೂಲವ್ಯಾಧಿ, ಋತುಸ್ರಾವದ ಸಂದರ್ಭದ ಹೊಟ್ಟೆ ನೋವು ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ನಾವೇ ಮಾಡಿಕೊಳ್ಳಬಹುದಾದ ಸುಲಭ ಚಿಕಿತ್ಸೆಗಳನ್ನು ಸೂಚಿಸಲಾಗಿದೆ. ಈ ಪುಸ್ತಕದ ಪ್ರಕಟಣೆಯ ಅವಧಿ ಹಾಗೂ ಬೆಲೆಗೆ ಸಂಬಂಧಿಸಿದ ಮಾಹಿತಿ ಪ್ರಸಕ್ತ ಪ್ರತಿಯಲ್ಲಿ ಲಭ್ಯವಿಲ್ಲ. goo.gl/am7cn7 ಕೊಂಡಿ ಬಳಸಿ ‘ಕಾಮದ ಗುಟ್ಟು’ ಕೃತಿಯನ್ನು ಓದಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.