ADVERTISEMENT

ಪ್ರಜಾವಾಣಿ ಕ್ವಿಜ್‌: ಸುಷ್ಮಿತಾ, ವೈಷ್ಣವಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2015, 12:58 IST
Last Updated 16 ಜನವರಿ 2015, 12:58 IST
‘ಪ್ರಜಾವಾಣಿ’ ಆಯೋಜಿಸಿದ್ದ ‘ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಶಿಪ್‌ 2014–15’ ನಲ್ಲಿ ಮೈಸೂರಿನ ಮರಿಮಲ್ಲಪ್ಪ ಪ್ರೌಢಶಾಲೆಯ ವೈಷ್ಣವಿ ಸಿ. ಹಾಗೂ ಸುಷ್ಮಿತಾ ಎಸ್ (ಬಲ) ಪ್ರಶಸ್ತಿಯೊಂದಿಗೆ... -ಪ್ರಜಾವಾಣಿ ಚಿತ್ರ; ಎಂ.ಎಸ್. ಮಂಜುನಾಥ್
‘ಪ್ರಜಾವಾಣಿ’ ಆಯೋಜಿಸಿದ್ದ ‘ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಶಿಪ್‌ 2014–15’ ನಲ್ಲಿ ಮೈಸೂರಿನ ಮರಿಮಲ್ಲಪ್ಪ ಪ್ರೌಢಶಾಲೆಯ ವೈಷ್ಣವಿ ಸಿ. ಹಾಗೂ ಸುಷ್ಮಿತಾ ಎಸ್ (ಬಲ) ಪ್ರಶಸ್ತಿಯೊಂದಿಗೆ... -ಪ್ರಜಾವಾಣಿ ಚಿತ್ರ; ಎಂ.ಎಸ್. ಮಂಜುನಾಥ್   

ಬೆಂಗಳೂರು: ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ‘ಪ್ರಜಾವಾಣಿ’ ಆಯೋಜಿಸಿದ್ದ ‘ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಶಿಪ್‌ 2014–15’ ನಲ್ಲಿ ಮೈಸೂರಿನ ಮರಿಮಲ್ಲಪ್ಪ ಪ್ರೌಢಶಾಲೆ ಚಾಂಪಿಯನ್ ಆಗಿ ಹೊರಹೊಮ್ಮಿತು. ಮಂಗಳೂರಿನ ಶಾರದಾ ವಿದ್ಯಾಲಯ ದ್ವಿತೀಯ ಸ್ಥಾನ ಗಳಿಸಿತು.

ನಗರದ ಕೆ.ಆರ್‌.ರಸ್ತೆಯ ಕುವೆಂಪು ಕಲಾಕ್ಷೇತ್ರದಲ್ಲಿ ಶುಕ್ರವಾರ ನಡೆದ ಫೈನಲ್‌ ಸ್ಪರ್ಧೆಯಲ್ಲಿ ಆರು ತಂಡಗಳು ಭಾಗವಹಿಸಿದ್ದವು. ಚಿತ್ರನಟ, ನಿರ್ದೇಶಕ ರಮೇಶ್‌ ಅರವಿಂದ್ ಕ್ವಿಜ್‌ ಮಾಸ್ಟರ್‌ ಆಗಿ ಫೈನಲ್‌ ಸ್ಪರ್ಧೆ ನಡೆಸಿಕೊಟ್ಟರು.  ಪ್ರಶಸ್ತಿ ಹಂತದಲ್ಲಿ ಐದು ಸುತ್ತುಗಳ ಪ್ರಶ್ನೆ ಕೇಳಲಾಯಿತು.

ಈ ಸುತ್ತಿನಲ್ಲಿ ಮರಿಮಲ್ಲಪ್ಪ ಹಾಗೂ ಶಾರದಾ ವಿದ್ಯಾಲಯದ ನಡುವೆ ತುರುಸಿನ ಪೈಪೋಟಿ ಕಂಡು ಬಂತು. ಫೈನಲ್‌ನಲ್ಲಿ ಮರಿಮಲ್ಲಪ್ಪ ಪ್ರೌಢಶಾಲೆ ಹಾಗೂ ಶಾರದಾ ವಿದ್ಯಾಲಯ ತಂಡಗಳು ತಲಾ 70 ಅಂಕಗಳನ್ನು ಗಳಿಸಿದವು. ವಿಜೇತರನ್ನು ನಿರ್ಣಯಿಸಲು ಟೈಬ್ರೇಕರ್‌ ಮೊರೆ ಹೋಗಲಾಯಿತು. ಟೈಬ್ರೇಕರ್‌ನಲ್ಲಿ ಮರಿಮಲ್ಲಪ್ಪ ಪ್ರೌಢಶಾಲೆ ಚಾಂಪಿಯನ್‌ ಆಗಿ ಹೊರಹೊಮ್ಮಿತು. 35 ಅಂಕ ಗಳಿಸಿದ ಶಿವಮೊಗ್ಗದ ಆದಿಚುಂಚನಗಿರಿ ಸಂಯುಕ್ತ ಪ್ರೌಢಶಾಲೆಯ ಬಿ ತಂಡ ಮೂರನೇ ಸ್ಥಾನ ಗಳಿಸಿತು.

ADVERTISEMENT

ಮೊದಲನೇ ಸ್ಥಾನ ಗಳಿಸಿದ ಮರಿಮಲ್ಲಪ್ಪ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ಸುಷ್ಮಿತಾ ಎಸ್, ವೈಷ್ಣವಿ ಸಿ. ಅವರಿಗೆ ಲ್ಯಾಪ್‌ಟಾಪ್‌, ದ್ವಿತೀಯ ಸ್ಥಾನ ಗಳಿಸಿದ ಮಂಗಳೂರಿನ ಶಾರದಾ ವಿದ್ಯಾಲಯದ ವಿದ್ಯಾರ್ಥಿಗಳಾದ ಪ್ರಜ್ಞಾ ಎನ್‌.ಹೆಬ್ಬಾರ್‌, ರಕ್ಷಿತ್‌ ಕುಮಾರ್‌ ಜೆ. ಅವರಿಗೆ ಕ್ಯಾಮೆರಾ ಹಾಗೂ ಮೂರನೇ ಸ್ಥಾನ ಗಳಿಸಿದ ಆದಿಚುಂಚನಗಿರಿ ಶಾಲೆಯ ವಿದ್ಯಾರ್ಥಿಗಳಾದ ಭರತ್‌ ಎಚ್.ಎನ್‌ ಹಾಗೂ ಕಿಶೋರ್ ಭಟ್ ಅವರಿಗೆ  ಟ್ಯಾಬ್‌ ನೀಡಲಾಯಿತು.

ಇದಕ್ಕೂ ಮೊದಲು ಸೆಮಿಫೈನಲ್‌ ಸ್ಪರ್ಧೆಗಳು ನಡೆದವು. ಆರು ವಲಯಗಳ 12 ತಂಡಗಳು ಸೆಮಿಫೈನಲ್‌ನಲ್ಲಿ ಸ್ಪರ್ಧಿಸಿದ್ದವು.

ವಿಜೇತರಿಗೆ ನಟ ರಮೇಶ್ ಅರವಿಂದ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಮೊಹಮ್ಮದ್ ಮೊಹಿಸಿನ್‌ ಬಹುಮಾನ ವಿತರಿಸಿದರು. ‘ಪ್ರಜಾವಾಣಿ’ ಸಂಪಾದಕ ಕೆ.ಎನ್‌.ಶಾಂತಕುಮಾರ್‌, ಕಾರ್ಯನಿರ್ವಾಹಕ ಸಂಪಾದಕ ಪದ್ಮರಾಜ ದಂಡಾವತಿ, ದೀಕ್ಷಾ ನೆಟ್‌ವರ್ಕ್‌ ಸಂಸ್ಥೆಯ ಸಂಸ್ಥಾಪಕ ಡಾ.ಜಿ.ಶ್ರೀಧರ್‌, ಲಲಿತಾ ಶ್ರೀಧರ್‌ ಮತ್ತಿತರರು ಉಪಸ್ಥಿತರಿದ್ದರು. ಸ್ಪರ್ಧೆಗೆ ದೀಕ್ಷಾ ನೆಟ್‌ವರ್ಕ್ ಪ್ರಾಯೋಜಕತ್ವ ವಹಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.