ADVERTISEMENT

‘ಪ್ರಜಾವಾಣಿ’ ಕ್ವಿಜ್‌ ಅಂತಿಮ ಸುತ್ತು ಇಂದು

​ಪ್ರಜಾವಾಣಿ ವಾರ್ತೆ
Published 15 ಜನವರಿ 2015, 19:30 IST
Last Updated 15 ಜನವರಿ 2015, 19:30 IST
‘ಪ್ರಜಾವಾಣಿ’ ಕ್ವಿಜ್‌ ಅಂತಿಮ ಸುತ್ತು ಇಂದು
‘ಪ್ರಜಾವಾಣಿ’ ಕ್ವಿಜ್‌ ಅಂತಿಮ ಸುತ್ತು ಇಂದು   

ಬೆಂಗಳೂರು: ಪ್ರೌಢಶಾಲಾ ವಿದ್ಯಾರ್ಥಿ­ಗಳಿಗಾಗಿ ನಡೆಸಲಾಗುತ್ತಿರುವ ‘ಪ್ರಜಾ­ವಾಣಿ ಕ್ವಿಜ್‌ ಚಾಂಪಿಯನ್‌ಶಿಪ್‌ 2014–15’ ಕುತೂಹಲದ ಘಟ್ಟ ತಲುಪಿದ್ದು, ಅಂತಿಮ ಸುತ್ತಿನ ಸ್ಪರ್ಧೆಗಳು ಶುಕ್ರವಾರ (ಜ. 16) ನಡೆಯಲಿವೆ.

ವಿದ್ಯಾರ್ಥಿಗಳ ಮಿದುಳಿಗೊಂದಿಷ್ಟು ಕಚಗುಳಿ ಇಡುವ ಉದ್ದೇಶದಿಂದ ‘ಪ್ರಜಾವಾಣಿ’ ಈ ರಸಪ್ರಶ್ನೆ ಸ್ಪರ್ಧೆ ಆಯೋಜಿಸಿದ್ದು, ದೀಕ್ಷಾ ನೆಟ್‌ವರ್ಕ್ ಪ್ರಾಯೋಜಕತ್ವ ವಹಿಸಿದೆ. ಆರು ವಲಯಗಳಲ್ಲಿ ನಡೆದ ಸ್ಪರ್ಧೆಯಲ್ಲಿ 1 ಸಾವಿರಕ್ಕೂ ಅಧಿಕ ತಂಡಗಳು ಪಾಲ್ಗೊಂಡಿದ್ದವು. ಅಂತಿಮ ಸುತ್ತಿನ ಹಣಾಹಣಿಗೆ ವೇದಿಕೆ ಸಜ್ಜಾಗಿದೆ.

ನಗರದ ಕೆ.ಆರ್.ರಸ್ತೆಯ ಒಕ್ಕಲಿಗರ ಸಂಘದ ಆವರಣದಲ್ಲಿರುವ ಕುವೆಂಪು ಕಲಾಕ್ಷೇತ್ರದಲ್ಲಿ ಸೆಮಿಫೈನಲ್‌ ಹಾಗೂ ಫೈನಲ್ ಸ್ಪರ್ಧೆಗಳು ನಡೆಯಲಿವೆ. ಬೆಳಿಗ್ಗೆ 9.30ಕ್ಕೆ ಸೆಮಿಫೈನಲ್‌ ಸ್ಪರ್ಧೆಗಳು ಆರಂಭವಾಗಲಿವೆ.  ಆರು ವಲಯಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದ 12 ತಂಡಗಳು (24 ವಿದ್ಯಾರ್ಥಿಗಳು) ಇದರಲ್ಲಿ ಭಾಗ­ವಹಿಸಲಿವೆ. ವಾಲ್‌ನಟ್ ನಾಲೆಡ್ಜ್ ಸಲ್ಯೂಷನ್ ಸಂಸ್ಥೆಯ ರಾಘವ ಚಕ್ರವರ್ತಿ ಎನ್.ಸಿ. ಹಾಗೂ ಸಚಿನ್‌ ರವಿ ರಸಪ್ರಶ್ನೆಯನ್ನು ನಡೆಸಿಕೊಡುವರು.

ಮಧ್ಯಾಹ್ನ 1 ಗಂಟೆಗೆ ಫೈನಲ್‌ ಸ್ಪರ್ಧೆ ನಡೆಯಲಿದೆ. ಅಂತಿಮ ಹಣಾಹಣಿಗೆ ಚಿತ್ರ ನಟ, ನಿರ್ದೇಶಕ ರಮೇಶ್‌ ಅರ­ವಿಂದ್ ಕ್ವಿಜ್‌ ಮಾಸ್ಟರ್‌ ಆಗಿ ಪಾಲ್ಗೊಳ್ಳ­ಲಿದ್ದಾರೆ. ಫೈನಲ್‌ನಲ್ಲಿ ಆರು ತಂಡಗಳು (12 ವಿದ್ಯಾರ್ಥಿಗಳು) ಭಾಗವಹಿಸಲಿವೆ. ರಸಪ್ರಶ್ನೆ ಸ್ಪರ್ಧೆಯಲ್ಲಿ ಪಾಲ್ಗೊಂಡಿ­ರುವ ಎಲ್ಲ ವಿದ್ಯಾರ್ಥಿಗಳಿಗೆ ನಟ ರಮೇಶ್ ಅರವಿಂದ್ ಅಭಿನಂದನೆ­ ಸಲ್ಲಿಸಿದ್ದಾರೆ.

ಬಹುಮಾನ ಏನು?
ಮೊದಲನೇ ಬಹುಮಾನ: ತಂಡದ ಇಬ್ಬರಿಗೂ ಲ್ಯಾಪ್‌ಟಾಪ್.
ಎರಡನೇ ಬಹುಮಾನ: ತಂಡದ ಇಬ್ಬರಿಗೂ ಕ್ಯಾಮೆರಾ
ಮೂರನೇ ಬಹುಮಾನ: ತಂಡದ ಇಬ್ಬರಿಗೂ ಟ್ಯಾಬ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.