ADVERTISEMENT

ಅಂತ್ಯಕಂಡ ಸಿಂಧು ಹೋರಾಟ

ಪಿಟಿಐ
Published 17 ಡಿಸೆಂಬರ್ 2016, 19:30 IST
Last Updated 17 ಡಿಸೆಂಬರ್ 2016, 19:30 IST

ದುಬೈ: ಭಾರತದ ಪಿ.ವಿ ಸಿಂಧು ಬಿಡ್ಲ್ಯುಎಫ್‌ ವಿಶ್ವ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಶನಿವಾರ ಕೊರಿಯಾದ ಆಟಗಾರ್ತಿ ಎದುರು ಸೋಲು ಕಂಡಿದ್ದಾರೆ.

ಮಹಿಳೆಯರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ ಹಣಾಹಣಿಯಲ್ಲಿ ಭಾರತದ ಆಟಗಾರ್ತಿ 15–21,  21–18, 16–21ರಲ್ಲಿ ಕೊರಿಯಾದ ಸಂಗ್‌ ಜಿ ಹುಯಾನ್ ಎದುರು ನಿರಾಸೆ ಅನುಭವಿಸಿದರು.

ಒಲಿಂಪಿಕ್ಸ್‌ ಚಾಂಪಿಯನ್‌ ಕ್ಯಾರೊಲಿನಾ ಮರಿನ್‌ ಎದುರು ಗೆದ್ದು ಸೆಮಿಫೈನಲ್‌ ತಲುಪಿದ್ದ ಸಿಂಧು ಮೊದಲ ಗೇಮ್‌ನ ಆರಂಭದಲ್ಲೇ 6–3ರಲ್ಲಿ ಮುನ್ನಡೆ ಗಿಟ್ಟಿಸಿದರು. ಆರು ವರ್ಷಗಳಿಂದ ಸತತವಾಗಿ ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರ 10ರೊಳಗಿನ ಸ್ಥಾನ ಗಳಿಸಿರುವ ಕೊರಿಯಾದ ಆಟಗಾರ್ತಿ ಸಿಂಧುಗೆ ಪ್ರಬಲ ಪೈಪೋಟಿ ನೀಡಿದರು.
ಬ್ಯಾಡ್ಮಿಂಟನ್ ಕೋರ್ಟ್‌ನ ನಾಲ್ಕೂ ದಿಕ್ಕುಗಳಲ್ಲೂ ಓಡಾಡಿದ ಭಾರತದ ಆಟಗಾರ್ತಿ 14–15ರಲ್ಲಿ ಪೈಪೋಟಿ ನೀಡಿದರಾದರೂ ಅಂತಿಮ ಹಂತದಲ್ಲಿ ಗೇಮ್‌ ಬಿಟ್ಟುಕೊಟ್ಟರು.

ADVERTISEMENT

ಎರಡನೇ ಗೇಮ್‌ನಲ್ಲಿಯೂ ಸಂಗ್‌ ಆರಂಭದ ಮುನ್ನಡೆ ಪಡೆದಿದ್ದರು. ಆದರೆ ಸಿಂಧು ಈ ಗೇಮ್‌ನಲ್ಲಿ ಅಭೂತಪೂರ್ವವಾಗಿ ಆಡಿದರು. ಸ್ಮ್ಯಾಷ್ ಮತ್ತು ರಿಟರ್ನ್ಸ್‌ಗಳಲ್ಲಿ ಚುರುಕುತನ ತೋರಿದರು.

ಮೂರನೇ ಹಾಗೂ ನಿರ್ಣಾಯಕ ಗೇಮ್‌ ಕುತೂಹಲ ಮೂಡಿತ್ತು. ದೀರ್ಘ ರ್‍ಯಾಲಿಗಳಲ್ಲಿ ಸಿಂಧು 11–10ರಲ್ಲಿ ಮುಂದಿದ್ದರು. ಬಳಿಕ 11–11, 17–17ರಲ್ಲಿ ಸಮಬಲದ ಪೈಪೋಟಿ ನೀಡಿದರು. ಸಿಂಧು ರಾಕೆಟ್‌ನಿಂದ ಹೊರಹೊಮ್ಮಿದ ದುರ್ಬಲ ಶಾಟ್‌, ಅನಗತ್ಯ ತಪ್ಪುಗಳು ಮುಳುವಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.