ADVERTISEMENT

ಅಟ್ಲೆಟಿಕೊ ಕೋಲ್ಕತ್ತ ಗೆಲುವಿನ ಓಟಕ್ಕೆ ತಡೆ

ಐಎಸ್‌ಎಲ್‌ ಫುಟ್‌ಬಾಲ್‌: ಡ್ರಾ ಸಾಧಿಸಿದ ಡೆಲ್ಲಿ ಡೈನಾಮೋಸ್‌

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2014, 19:30 IST
Last Updated 19 ಅಕ್ಟೋಬರ್ 2014, 19:30 IST

ಕೋಲ್ಕತ್ತ (ಪಿಟಿಐ): ಡೆಲ್ಲಿ ಡೈನಾಮೋಸ್‌ ತಂಡದವರು ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ಅಟ್ಲೆಟಿಕೊ ಡಿ ಕೋಲ್ಕತ್ತ ತಂಡದ ಗೆಲುವಿನ ಓಟಕ್ಕೆ ತಡೆಯೊಡ್ಡಲು ಯಶಸ್ವಿಯಾಗಿದ್ದಾರೆ.

ಸಾಲ್ಟ್‌ ಲೇಕ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಡೈನಾಮೋಸ್‌ ತಂಡ ಪ್ರಬಲ ಕೋಲ್ಕತ್ತ ಜೊತೆ 1–1 ಗೋಲಿನ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಯಿತು. ಆಡಿದ ಮೊದಲ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದ್ದ ಕೋಲ್ಕತ್ತ ತಂಡದವರು ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದರು. ಆದರೆ ಡೈನಾಮೋಸ್‌ ಅದಕ್ಕೆ ಅವಕಾಶ ನೀಡಲಿಲ್ಲ.

ಪ್ರಬಲ ಪೈಪೋಟಿ ಕಂಡುಬಂದ ಪಂದ್ಯದ 49ನೇ ನಿಮಿಷದಲ್ಲಿ ಜೊಫ್ರೆ ಮ್ಯಾಥ್ಯು ಗೋಲು ಗಳಿಸಿ ಕೋಲ್ಕತ್ತ ತಂಡಕ್ಕೆ ಮುನ್ನಡೆ ತಂದಿತ್ತರು. ಆದರೆ 73ನೇ ನಿಮಿಷದಲ್ಲಿ ಡೈನಾಮೋಸ್‌ ತಂಡದ ಮಿಡ್‌ಫೀಲ್ಡರ್‌ ಪಾವೆಲ್‌ ಎಲಿಯಾಸ್‌ ಅಮೋಘ ರೀತಿಯಲ್ಲಿ ಚೆಂಡನ್ನು ಗುರಿ ಸೇರಿಸಿ ಪಂದ್ಯದಲ್ಲಿ ಸಮಬಲಕ್ಕೆ ಕಾರಣರಾದರು.

ಉಭಯ ತಂಡಗಳು ಆ ಬಳಿಕ ಗೆಲುವಿನ ಗೋಲಿಗಾಗಿ ಮೇಲಿಂದ ಮೇಲೆ ಪ್ರಯತ್ನ ನಡೆಸಿತಾದರೂ ಯಶಸ್ಸು ಲಭಿಸಲಿಲ್ಲ.

ನಾರ್ತ್‌ಈಸ್ಟ್‌– ಗೋವಾ ಪಂದ್ಯ ಡ್ರಾ
ಗುವಾಹಟಿ: ನಾರ್ತ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ ಮತ್ತು ಎಫ್‌ಸಿ ಗೋವಾ ತಂಡಗಳ ನಡುವಿನ ದಿನದ ಮತ್ತೊಂದು ಪಂದ್ಯ ಕೂಡಾ 1–1 ಗೋಲಿನ ಡ್ರಾದಲ್ಲಿ ಕೊನೆಗೊಂಡಿತು.

ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ 17ನೇ ನಿಮಿಷದಲ್ಲಿ ಗೋವಾ ತಂಡ ಮುನ್ನಡೆ ಗಳಿಸಿತು. ಆತಿಥೇಯ ತಂಡದ ಗೋಲ್‌ ಕೀಪರ್‌ ಟಿ.ಪಿ. ರೆಹೆನೆಶ್‌ ಮಾಡಿದ ತಪ್ಪು ಈ ಗೋಲಿಗೆ ಕಾರಣ.
ಆಂಡ್ರೆ ಸಂಟೋಸ್‌ ಫ್ರೀ ಕಿಕ್‌ನಲ್ಲಿ ಗುರಿಯತ್ತ ಒದ್ದ ಚೆಂಡನ್ನು ರೆಹೆನೆಶ್‌ಗೆ ಸುಲಭವಾಗಿ ಹಿಡಿತಕ್ಕೆ ಪಡೆಯಬಹುದಿತ್ತು. ಆದರೆ ಚೆಂಡು ಅವರ ಕೈಯಿಂದ ಜಾರಿ ಹೋಯಿತು. ನಾರ್ತ್‌ಈಸ್ಟ್‌ ತಂಡದ ರಕ್ಷಣಾ ಆಟಗಾರರು ಚೆಂಡನ್ನು ದೂರ ಅಟ್ಟಲು ಪ್ರಯತ್ನಿಸಿದರು. ಆದರೆ ಅಲ್ಲೇ ಇದ್ದ ಗ್ರೆಗೊರಿ ಅರ್ನೊಲಿನ್‌ ಗುರಿ ಸೇರಿಸುವಲ್ಲಿ ಯಶ ಕಂಡರು.

ಹಿನ್ನಡೆ ಅನುಭವಿಸಿದ ನಾರ್ತ್‌ಈಸ್ಟ್‌ ಯುನೈಟೆಡ್‌ ಒತ್ತಡಕ್ಕೆ ಒಳಗಾದರೂ ಬಳಿಕ ಚೇತರಿಸಿಕೊಂಡಿತು. ಮಾತ್ರವಲ್ಲ 36ನೇ ನಿಮಿಷದಲ್ಲಿ ಸಮಬಲದ ಗೋಲು ಗಳಿಸಿತು. ತಂಡಕ್ಕೆ ಲಭಿಸಿದ ಪೆನಾಲ್ಟಿ ಕಿಕ್‌ ಅವಕಾಶದಲ್ಲಿ ಸೆರ್ಜಿಯೊ ಕಾಂಟ್ರೆರಾಸ್‌ ಪರ್ಡೊ (ಕೊಕೆ) ಚೆಂಡನ್ನು ಗುರಿ ಸೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.