ADVERTISEMENT

ಆಟಗಾರರ ಬಸ್‌ನಲ್ಲಿ ಬೆಂಕಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2015, 19:30 IST
Last Updated 30 ಮಾರ್ಚ್ 2015, 19:30 IST

ಢಾಕಾ (ಪಿಟಿಐ/ಐಎಎನ್‌ಎಸ್‌): ಭಾರತದ 23ವರ್ಷದೊಳಗಿನವರ ಫುಟ್‌ಬಾಲ್‌ ತಂಡದ ಆಟಗಾರರು ಪ್ರಯಾಣಿಸುತ್ತಿದ್ದ ಬಸ್‌ಗೆ ಬೆಂಕಿ ಹೊತ್ತಿಕೊಂಡು ಉರಿದಿದೆ.ಆದರೆ ಅದರೊಳಗಿದ್ದವರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ.

ಎಎಫ್‌ಸಿ ಚಾಂಪಿಯನ್‌ಷಿಪ್‌ನಲ್ಲಿ ಆಡಲು ಇಲ್ಲಿಗೆ ಬಂದಿರುವ ಆಟಗಾರರು ಸೋಮವಾರ ಅಭ್ಯಾಸಕ್ಕೆ ತೆರಳುವ ವೇಳೆ ಬಸ್ಸಿನ ಹಿಂಭಾಗದಿಂದ ಸುಟ್ಟ ವಾಸನೆಯ ಜತೆಗೆ ಅತಿಯಾದ ಹೊಗೆ ಕಾಣಿಸಿ ಕೊಂಡಿದೆ. ಇದರಿಂದ ಕ್ಷಣಕಾಲ ವಿಚಲಿತರಾದ ತಂಡದ ಹಿರಿಯ ಕೋಚ್‌ ಸ್ಟೀಫನ್‌ ಕಾನ್‌ಸ್ಟಾಂಟಿನ್‌ ಸೇರಿದಂತೆ ಬಸ್ಸಿನಲ್ಲಿದ್ದ 30 ಮಂದಿಯೂ ತಕ್ಷಣ ಕೆಳ ಗಿಳಿದಿದ್ದಾರೆ. ಆನಂತರ ಬೆಂಕಿ ಹೊತ್ತಿಕೊಂಡಿದೆ.

ಬಸ್ಸಿನಿಂದ ಇಳಿದ ಬಳಿಕ ತಂಡದ ಸದಸ್ಯರೆಲ್ಲರೂ ಕೆಲಕಾಲ ಗಾಬರಿಯಿಂದ ಇದನ್ನು ನೋಡುತ್ತಾ ರಸ್ತೆ ಬದಿಯಲ್ಲೇ ನಿಂತಿದ್ದರು. ನಂತರ  ಅವರನ್ನು ಪೊಲೀಸ್‌ ಬೆಂಗಾವಲು ವಾಹನಗಳ ಸಹಾಯದಿಂದ ತಂಡದ ಹೊಟೇಲ್‌ಗೆ ಕರೆದುಕೊಂಡು ಹೋಗಲಾಗಿದೆ.

‘ಘಟನೆಯಿಂದ ಕೆಲವು ನಿಮಿಷ  ದಿಕ್ಕೇ ತೋಚದಂತಾಗಿತ್ತು. ಬಳಿಕ ಈ ಬಗ್ಗೆ ಆಯೋಜ ಕರು ನಮ್ಮ ಹತ್ತಿರ ಕ್ಷಮೆ ಕೇಳಿದ್ದಾರೆ. ಈ ಅವಘಡದಿಂದ ತೊಂದರೆಯಾಗಿಲ್ಲ. ಎಲ್ಲರನ್ನೂ ಸುರಕ್ಷಿತ ವಾಗಿ ಹೊಟೇಲ್‌ಗೆ ಕರೆದುಕೊಂಡು ಬರಲಾಗಿದೆ’ ಎಂದು  ಮಾಧ್ಯಮ ಅಧಿಕಾರಿ ನಿಲಾಂಜನ್‌ ದತ್ತ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT