ADVERTISEMENT

ಏಷ್ಯಾ ಕಪ್ ಹಾಕಿ ಟೂರ್ನಿ: ಭಾರತಕ್ಕೆ ಮಣಿದ ಮಲೇಷ್ಯಾ

ಪಿಟಿಐ
Published 19 ಅಕ್ಟೋಬರ್ 2017, 19:30 IST
Last Updated 19 ಅಕ್ಟೋಬರ್ 2017, 19:30 IST
ಮಲೇಷ್ಯಾ ವಿರುದ್ಧದ ಪಂದ್ಯದಲ್ಲಿ ಗೋಲು ಗಳಿಸಿದಾಗ ಭಾರತದ ಆಟಗಾರರು ಸಂಭ್ರಮಿಸಿದರು ಪಿಟಿಐ ಚಿತ್ರ
ಮಲೇಷ್ಯಾ ವಿರುದ್ಧದ ಪಂದ್ಯದಲ್ಲಿ ಗೋಲು ಗಳಿಸಿದಾಗ ಭಾರತದ ಆಟಗಾರರು ಸಂಭ್ರಮಿಸಿದರು ಪಿಟಿಐ ಚಿತ್ರ   

ಢಾಕಾ (ಪಿಟಿಐ): ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಅಜೇಯ ಓಟ ಮುಂದುವರಿಸಿರುವ ಭಾರತ ತಂಡದವರು ಸೂಪರ್‌ ಫೋರ್‌ ಹಂತದ ಎರಡನೇ ಪಂದ್ಯದಲ್ಲಿ ಮಲೇಷ್ಯಾವನ್ನು 6–2 ಗೋಲುಗಳಿಂದ ಮಣಿಸಿದರು.

ಗುರುವಾರ ರಾತ್ರಿ ಇಲ್ಲಿ ನಡೆದ ಪಂದ್ಯದಲ್ಲಿ ಆಕ್ರಮಣಕಾರಿ ಆಟವಾಡಿದ ಭಾರತದವರು ಮಲೇಷ್ಯಾದ ರಕ್ಷಣಾ ಕೋಟೆಯನ್ನು ಭೇದಿಸಿ ಗೋಲುಗಳನ್ನು ಗಳಿಸಿದರು. ಮನಮೋಹಕ ಪಾಸ್‌ಗಳ ಮೂಲಕ ಮುದ ನೀಡಿದ ಮನ್‌ಪ್ರೀತ್ ಸಿಂಗ್ ಬಳಗ ಐದು ಫೀಲ್ಡ್ ಗೋಲುಗಳನ್ನು ಗಳಿಸಿ ಮಿಂಚಿದರು. ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿಯೂ ತಂಡ ಸಫಲವಾಯಿತು.

ಭಾರತದ ಪರವಾಗಿ ಆಕಾಶ್‌ದೀಪ್‌ ಸಿಂಗ್‌ (15ನೇ ನಿಮಿಷ), ಎಸ್‌.ಕೆ.ಉತ್ತಪ್ಪ (24ನೇ ನಿ), ಗುರ್ಜಂತ್ ಸಿಂಗ್‌ (33ನೇ ನಿ), ಎಸ್‌.ವಿ.ಸುನಿಲ್‌ (40ನೇ ನಿ) ಮತ್ತು ಸರ್ದಾರ್‌ ಸಿಂಗ್‌ (60ನೇ ನಿ) ಗೋಲು ಗಳಿಸಿದರು. 19ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಹರ್ಮನ್‌ಪ್ರೀತ್‌ ಸಿಂಗ್‌ ಗೋಲಾಗಿ ಪರಿವರ್ತಿಸಿದರು. ಮಲೇಷ್ಯಾಗೆ ಸಮಾಧಾನಕರ ಗೋಲುಗಳನ್ನು ರಜೀ ರಹೀಮ್‌ (50ನೇ ನಿ) ಮತ್ತು ರಮದಾನ್‌ ರೊಸ್ಲಿ (60ನೇ ನಿ) ಗೋಲು ತಂದುಕೊಟ್ಟರು.

ADVERTISEMENT

ಟೂರ್ನಿಯಲ್ಲಿ ಎಲ್ಲ ಪಂದ್ಯಗಳನ್ನು ಗೆದ್ದು ಬೀಗುತ್ತಿದ್ದ ಮಲೇಷ್ಯಾ ಭಾರತದ ಆಕ್ರಮಣಕ್ಕೆ ಉತ್ತರ ನೀಡಲು ವಿಫಲವಾಯಿತು. ಬುಧವಾರ ದಕ್ಷಿಣ ಕೊರಿಯಾ ವಿರುದ್ಧ 1–1ರಿಂದ ಡ್ರಾ ಮಾಡಿಕೊಂಡ ಭಾರತ ಗುರುವಾರದ ಜಯದೊಂದಿಗೆ ಸೂಪರ್ ಫೋರ್‌ ಹಂತದ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನ ಗಳಿಸಿತು. ದಿನದ ಮತ್ತೊಂದು ಪಂದ್ಯದಲ್ಲಿ ಕೊರಿಯಾ ಮತ್ತು ಪಾಕಿಸ್ತಾನ ತಂಡಗಳು 1–1ರಿಂದ ಡ್ರಾ ಸಾಧಿಸಿದ್ದವು.

ಆರಂಭದಲ್ಲಿ ಪೆನಾಲ್ಟಿ ಕಾರ್ನರ್‌ ಅವಕಾಶ ಕೈಚೆಲ್ಲಿದ ನಂತರ ರಮಣ್‌ದೀಪ್ ಸಿಂಗ್ ನೀಡಿದ ಪಾಸ್‌ನಲ್ಲಿ ಗೋಲು ಗಳಿಸಲು ಲಲಿತ್ ಉಪಾಧ್ಯಾಯ ನಡೆಸಿದ ಶ್ರಮವನ್ನು ಮಲೇಷ್ಯಾದ ಗೋಲ್‌ಕೀಪರ್‌ ಕುಮಾರ ಸುಬ್ರಹ್ಮಣ್ಯಂ ವಿಫಲಗೊಳಿಸಿದರು. ಆದರೆ ಮನ್‌ಪ್ರೀತ್ ಸಿಂಗ್‌ ನೀಡಿದ ನಿಖರ ಪಾಸ್‌ ಕೈಚೆಲ್ಲಲು ಆಕಾಶ್‌ದೀಪ್ ಸಿಂಗ್ ತಯಾರಿರಲಿಲ್ಲ. ಅವರ ಶಕ್ತಿಶಾಲಿ ಹೊಡೆತ ವಾಯುವೇಗದಲ್ಲಿ ಗೋಲು ಪೆಟ್ಟಿಗೆಯೊಳಗೆ ಸೇರಿದಾಗ ಭಾರತ ಪಾಳಯದಲ್ಲಿ ಸಂಭ್ರಮ ಮನೆ ಮಾಡಿತು.

ಇದರ ಬೆನ್ನಲ್ಲೇ ಮಲೇಷ್ಯಾಗೆ ಉತ್ತಮ ಅವಕಾಶ ಲಭಿಸಿತ್ತು. ಆದರೆ ತೆಂಕು ತಾಜುದ್ದೀನ್ ಅವರಿಗೆ ಗೋಲು ಗಳಿಸಲು ಆಗಲಿಲ್ಲ. ಮರು ಹೋರಾಟ ನಡೆಸಲು ಮಲೇಷ್ಯಾ ಪ್ರಯತ್ನಿಸುತ್ತಿರುವಾಗಲೇ ಹರ್ಮನ್‌ಪ್ರೀತ್ ಗೋಲು ಗಳಿಸಿ ಪೆಟ್ಟು ನೀಡಿದರು.

ಮೋಡಿ ಮಾಡಿದ ಕರ್ನಾಟಕ ಜೋಡಿ

ಕರ್ನಾಟಕದ ಜೋಡಿಗಳಾದ ಎಸ್.ಕೆ.ಉತ್ತಪ್ಪ ಮತ್ತು ಎಸ್‌.ವಿ.ಸುನಿಲ್‌ 24ನೇ ನಿಮಿಷದಲ್ಲಿ ಮೋಡಿ ಮಾಡಿದರು. ಸುನಿಲ್ ನೀಡಿದ ಪಾಸ್‌ನಲ್ಲಿ ಉತ್ತಪ್ಪ ಗೋಲು ಗಳಿಸಿ ಸಂಭ್ರಮಿಸಿದರು. ಗುರ್ಜಂತ್ ಗಳಿಸಿದ ಗೋಲಿಗೂ ಉತ್ತಪ್ಪ ಅವರ ಅತ್ಯುತ್ತಮ ಪಾಸ್ ನೆರವಾಯಿತು. ನಂತರ ಗುರ್ಜಂತ್‌ ಅವರು ರಿವರ್ಸ್ ಹಿಟ್‌ ಮೂಲಕ ನೀಡಿದ ಚೆಂಡನ್ನು ಸುರಕ್ಷಿತವಾಗಿ ಪಡೆದುಕೊಂಡ ಎಸ್‌.ವಿ.ಸುನಿಲ್ ಗೋಲು ಗಳಿಸಿದರು. ಕೊನೆಯಲ್ಲಿ ಆಕಾಶ್‌ದೀಪ್ ಸಿಂಗ್ ನೀಡಿದ ಪಾಸ್‌ನಲ್ಲಿ ಸರ್ದಾರ್ ಸಿಂಗ್‌ ಭಾರತಕ್ಕೆ ಆರನೇ ಗೋಲು ತಂದಿತ್ತರು. ಮಲೇಷ್ಯಾ ತಂಡಕ್ಕೆ ಒಟ್ಟು ಎಂಟು ಪೆನಾಲ್ಟಿ ಕಾರ್ನರ್‌ಗಳು ಲಭಿಸಿದ್ದವು. ಆದರೆ ಒಂದನ್ನು ಮಾತ್ರ ಸದುಪಯೋಗ ಮಾಡಿಕೊಂಡಿತು. ಶನಿವಾರ ನಡೆಯಲಿರುವ ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.