ADVERTISEMENT

ಕೊನೆಗೂ ಜಯಕ್ಕೆ ಮುತ್ತಿಕ್ಕಿದ ಮುಂಬೈ

ಚಿನ್ನಸ್ವಾಮಿ ಅಂಗಳದಲ್ಲಿ ರನ್ ಹೊಳೆ, ಸೋಲಿನಲ್ಲೂ ಮನಗೆದ್ದ ಡಿವಿಲಿಯರ್ಸ್ ಆಟ

ಪ್ರಮೋದ ಜಿ.ಕೆ
Published 20 ಏಪ್ರಿಲ್ 2015, 9:00 IST
Last Updated 20 ಏಪ್ರಿಲ್ 2015, 9:00 IST

ಬೆಂಗಳೂರು: ಸತತ ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದ್ದ ಮುಂಬೈ ಇಂಡಿಯನ್ಸ್‌ ತಂಡದ ಬೇಸರವೆಲ್ಲಾ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರನ್‌ ಹೊಳೆಯಾಗಿ ಹರಿಯಿತು. ಆರ್‌ಸಿಬಿ ತಂಡವನ್ನು 18 ರನ್‌ಗಳಿಂದ ಮಣಿಸಿದ ಮುಂಬೈ ತಂಡ ಐಪಿಎಲ್‌ ಎಂಟನೇ ಆವೃತ್ತಿಯಲ್ಲಿ ಚೊಚ್ಚಲ ಗೆಲುವು ಪಡೆಯಿತು.

2013ರ ಚಾಂಪಿಯನ್‌ ಮುಂಬೈ ಶ್ರೇಷ್ಠ ಆಟಗಾರರನ್ನು ಒಳಗೊಂಡಿದೆ. ಆದರೂ, ಈ ತಂಡಕ್ಕೆ ಒಂದೂ ಗೆಲುವು ಪಡೆಯಲು ಸಾಧ್ಯವಾಗಿರಲಿಲ್ಲ.

ಆರ್‌ಸಿಬಿ ತಂಡದ ನಾಯಕ ವಿರಾಟ್‌ ಕೊಹ್ಲಿ ಟಾಸ್‌ ಗೆದ್ದು ಎದುರಾಳಿ ತಂಡಕ್ಕೆ ಬ್ಯಾಟಿಂಗ್‌ ಮಾಡಲು ಆಹ್ವಾನ ಕೊಟ್ಟರು. ಈ ಅವಕಾಶ ಚೆನ್ನಾಗಿ ಬಳಸಿಕೊಂಡ ಮುಂಬೈ 20 ಓವರ್‌ಗಳಲ್ಲಿ ಏಳು ವಿಕೆಟ್‌ ಕಳೆದುಕೊಂಡು 209 ರನ್‌ ಕಲೆ ಹಾಕಿತು.

ಸವಾಲಿನ ಗುರಿಯನ್ನು ಛಲದಿಂದಲೇ ಬೆನ್ನು ಹತ್ತಿದ ಆರ್‌ಸಿಬಿ ಗೆಲುವಿನ ಸನಿಹ ಮುಗ್ಗರಿಸಿತು. ಡಿವಿಲಿಯರ್ಸ್‌ ಮತ್ತು ಡೇವಿಡ್‌ ವೈಸಿ ಆಟದ ಬಲದಿಂದ ತಂಡ 20 ಓವರ್‌ಗಳಲ್ಲಿ 191 ರನ್‌ ಗಳಿಸಿತು.

ಭಾನುವಾರ ರಜೆಯ ದಿನವಾಗಿದ್ದ ಕಾರಣ ಕ್ರೀಡಾಂಗಣ ಕಿಕ್ಕಿರಿದು ತುಂಬಿತ್ತು. ತವರಿನ ತಂಡಕ್ಕೆ ಬೆಂಬಲ ನೀಡುವ ಹುಮ್ಮಸ್ಸಿನಿಂದ ಕೆಂಪು ಬಣ್ಣದ ಬಟ್ಟೆ ತೊಟ್ಟ ಅಭಿಮಾನಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆತಿಥೇಯ ತಂಡದ ಕ್ರಿಕೆಟ್‌ ಪ್ರೇಮಿಗಳನ್ನು ನಿರಾಸೆಯ ಕಡಲಲ್ಲಿ ಮುಳುಗಿಸಿದ ಮುಂಬೈ ಸವಾಲಿನ ಮೊತ್ತ ಕಲೆ ಹಾಕಿತು.

ಈ ಸಲದ ಐಪಿಎಲ್‌ನಲ್ಲಿ ಚೊಚ್ಚಲ ಜಯದ ನಿರೀಕ್ಷೆಯಲ್ಲಿದ್ದ ಮುಂಬೈ ಆರಂಭದಲ್ಲಿ ತಾಳ್ಮೆಯ ಆಟಕ್ಕೆ ಮೊರೆ ಹೋಯಿತು. ಮೊದಲ ಓವರ್‌ನಲ್ಲಿ ಎರಡು ರನ್‌ಗಳಷ್ಟೇ ಬಂದವು. ಮೂರು ಓವರ್‌ಗಳು ಪೂರ್ಣಗೊಂಡ ಬಳಿಕ ಮುಂಬೈ ಬ್ಯಾಟ್ಸ್‌ಮನ್‌ಗಳಿಂದ ಬೌಂಡರಿ ಹಾಗೂ ಸಿಕ್ಸರ್‌ಗಳು ಸಿಡಿದವು.

ಆರಂಭಿಕ ಜೋಡಿ ಲಿಂಡ್ಲ್‌ ಸಿಮನ್ಸ್‌ (59, 44ಎಸೆತ, 9 ಬೌಂಡರಿ, 2 ಸಿಕ್ಸರ್‌) ಅಬ್ಬರಿಸಿದರು. ಪಾರ್ಥೀವ್‌ ಪಟೇಲ್‌ (12) ಔಟಾದ ಬಳಿಕ ಕ್ರೀಸ್‌ಗೆ ಬಂದ ಉನ್ಮುಕ್ತ್‌ ಚಾಂದ್‌ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದರು.

ಉನ್ಮುಕ್ತ್‌ ಮತ್ತು ಸಿಮನ್ಸ್‌ ಒಂದುಗೂಡಿದ ಮೇಲೆ ಮುಂಬೈ ತಂಡದ ರನ್‌ ವೇಗ ಹೆಚ್ಚಾಯಿತು. ಅಂಬಾನಿ ಒಡೆತನದ ತಂಡ ಮೊದಲ ಹತ್ತು ಓವರ್‌ಗಳು ಪೂರ್ಣಗೊಂಡಾಗ 83 ರನ್‌ ಗಳಿಸಿತ್ತು. ಕೊನೆಯ 60 ಎಸೆತಗಳಲ್ಲಿ 126 ರನ್‌ಗಳು ಬಂದವು!

37 ಎಸೆತಗಳನ್ನು ಎದುರಿಸಿದ ಉನ್ಮುಕ್ತ್‌ ಎಂಟು ಬೌಂಡರಿ ಮತ್ತು ಎರಡು ಸಿಕ್ಸರ್‌ ಸೇರಿದಂತೆ 58 ರನ್‌ ಗಳಿಸಿದರು. 14ನೇ ಓವರ್‌ನಲ್ಲಿ ಕ್ರೀಸ್‌ಗೆ ಬಂದ ರೋಹಿತ್ ರನ್ ವೇಗವನ್ನು ಮಿಂಚಿನಂತೆ ಹೆಚ್ಚಿಸಿದರು.  15 ಎಸೆತ ಗಳಲ್ಲಿ 42 ರನ್‌ ಸಿಡಿಸಿದ್ದು ಇದಕ್ಕೆ ಸಾಕ್ಷಿ.

ದಿಟ್ಟ ಹೋರಾಟ: ಸವಾಲಿನ ಗುರಿಯ ಎದುರು ಆರ್‌ಸಿಬಿ ದಿಟ್ಟ ಹೋರಾಟ ನಡೆಸಿತು. ಭಾರಿ ನಿರೀಕ್ಷೆ ಮೂಡಿಸಿದ್ದ ಕ್ರಿಸ್‌ ಗೇಲ್‌ (10), ವಿರಾಟ್‌ ಕೊಹ್ಲಿ (18) ಮತ್ತು ದಿನೇಶ್‌ ಕಾರ್ತಿಕ್‌ (18) ದೊಡ್ಡ ಮೊತ್ತ ಗಳಿಸಲು ವಿಫಲರಾದರು. ಈ ಮೂವರೂ ತಂಡದ ಒಟ್ಟು ಮೊತ್ತ 97 ಆಗುವಷ್ಟರಲ್ಲಿ ವಿಕೆಟ್‌ ಒಪ್ಪಿಸಿದ್ದರು.

ಆರ್‌ಸಿಬಿ ಈ ಪಂದ್ಯದಲ್ಲಿ ಜಯ ಪಡೆಯಲಿಲ್ಲವಾದರೂ, ಅಭಿಮಾನಿಗಳ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಯಿತು. ಇದಕ್ಕೆ ಕಾರಣವಾಗಿದ್ದು ಡಿವಿಲಿಯರ್ಸ್ ಎಂಬ ದೈತ್ಯ ಶಕ್ತಿ.

ಕೇವಲ 11 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಮೂರು ಸಿಕ್ಸರ್‌ ಸೇರಿದಂತೆ 41 ರನ್‌ ಗಳಿಸಿದ ಡಿವಿಲಿಯರ್ಸ್‌ ಜಯದ ಆಸೆ ಮೂಡಿಸಿದ್ದರು. ಲಸಿತ್‌ ಮಾಲಿಂಗ್‌ ಬೌಲಿಂಗ್‌ನ ಒಂದೇ ಓವರ್‌ನಲ್ಲಿ 24 ರನ್‌ ಸಿಡಿಸಿದರು. ಡಿವಿಲಿಯರ್ಸ್‌ ಕ್ರೀಸ್‌ನಲ್ಲಿ ಇದ್ದಷ್ಟು ಹೊತ್ತು ಆರ್‌ಸಿಬಿ ಗೆಲುವು ಪಡೆಯಬಹುದು ಎನ್ನುವ ನಿರೀಕ್ಷೆ ಬಲವಾಗಿತ್ತು. ಆದರೆ, ಜಸ್‌ಪ್ರೀತ್‌ ಬೂಮ್ರಾ ಎಸೆತದಲ್ಲಿ ಡಿವಿಲಿಯರ್ಸ್ ಔಟಾಗುತ್ತಿದ್ದಂತೆ ಆರ್‌ಸಿಬಿ ಜಯದ ಕನಸು ಕಮರಿ ಹೋಯಿತು. ಈ ವೇಳೆಗಾಗಲೇ ಅಭಿಮಾನಿಗಳು ಕ್ರೀಡಾಂಗಣದಿಂದ ಹೊರನಡೆಯಲು ಆರಂಭಿಸಿದರು.

25 ಎಸೆತಗಳಲ್ಲಿ 47 ರನ್‌ ಬಾರಿಸಿದ ಡೇವಿಡ್‌ ವೈಸಿ ತಂಡಕ್ಕೆ ಮತ್ತೆ ಗೆಲುವಿನ ಆಸೆ ಮೂಡಿಸಿದ್ದರು. 19ನೇ ಓವರ್‌ನಲ್ಲಿ ಲಸಿತ್‌ ಮಾಲಿಂಗ ಚುರುಕಿನ ಬೌಲಿಂಗ್ ಮಾಡಿದರು. ಕೊನೆಯ ಓವರ್‌ನಲ್ಲಿ ಪೊಲಾರ್ಡ್‌ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸಿದರು.

ಅಭಿಮಾನಿಗಳ ದಂಡು: ಸನ್‌ರೈಸರ್ಸ್‌ ಹೈದರಾಬಾದ್ ಎದುರು ಇಲ್ಲಿ ಕೊನೆ ಪಂದ್ಯ ನಡೆದಾಗ ಗ್ಯಾಲರಿ ಭಾಗದಲ್ಲಿ ಮಾತ್ರ ಹೆಚ್ಚು ಅಭಿಮಾನಿಗಳಿದ್ದರು. ಎರಡು ಬಲಿಷ್ಠ ತಂಡಗಳ ನಡುವಿನ ಹೋರಾಟವಾಗಿದ್ದ ಕಾರಣ ಈ ಪಂದ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಕೆಟ್‌ ಪ್ರೇಮಿಗಳು ಬಂದಿದ್ದರು. ಎಲ್ಲೆಲ್ಲೂ ಆರ್‌ಸಿಬಿ ಧ್ವಜಗಳೇ ರಾರಾಜಿಸಿದವು. ‘ಮೆಕ್ಸಿಕನ್‌’ ಅಲೆಯಲ್ಲಿ ಅಭಿಮಾನಿಗಳ ಸಂಭ್ರಮ ಪುಟಿದೆದ್ದಿತು.
ಎಲ್ಲಕ್ಕಿಂತ ಹೆಚ್ಚಾಗಿ ಮುಂಬೈ ತಂಡದಲ್ಲಿ ನಾಲ್ವರು ಕರ್ನಾಟಕದ ಆಟಗಾರರು ಇದ್ದರು. ಅವರನ್ನು ಬೆಂಬಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದರು. ಆದರೆ, ರಾಜ್ಯದ ಒಬ್ಬ ಆಟಗಾರನಿಗೂ ಅಂತಿಮ ತಂಡದಲ್ಲಿ ಸ್ಥಾನ ಸಿಕ್ಕಿರಲಿಲ್ಲ!

ಕನ್ನಡಿಗರಿಲ್ಲದ ಪಂದ್ಯ
ಆರ್‌ಸಿಬಿ ಮತ್ತು ಮುಂಬೈ ಎರಡೂ ತಂಡಗಳಲ್ಲಿ ಕರ್ನಾಟಕದ ಒಟ್ಟು ಐವರು ಆಟಗಾರರಿದ್ದಾರೆ. ಆದರೆ, ಒಬ್ಬ ಆಟಗಾರನಿಗೂ ತವರಿನ ಅಂಗಳದಲ್ಲಿ ಅಂತಿಮ ಹನ್ನೊಂದರಲ್ಲಿ ಸ್ಥಾನ ಸಿಗಲಿಲ್ಲ.

ನೈಟ್‌ ರೈಡರ್ಸ್ ತಂಡದಿಂದ ಮುಂಬೈ ಸೇರಿರುವ ವಿನಯ್‌ ಕುಮಾರ್‌ ಕೂಡಾ ಬೆಂಚ್‌ ಕಾಯ ಬೇಕಾಯಿತು. ಲೆಗ್‌ ಸ್ಪಿನ್ನರ್‌ ಶ್ರೇಯಸ್ ಗೋಪಾಲ್‌, ಈ ಸಲದ ಐಪಿಎಲ್‌ನಲ್ಲಿ ಒಂದೂ ಪಂದ್ಯ ವಾಡದ ಅಭಿಮನ್ಯು ಮಿಥುನ್‌ ಮತ್ತು ಸ್ಪಿನ್ನರ್‌ ಜೆ. ಸುಚಿತ್‌ ಅವರನ್ನೂ ಭಾನುವಾರದ ಪಂದ್ಯ ದಿಂದ ಕೈಬಿಡಲಾಗಿತ್ತು. ಆರ್‌ಸಿಬಿ ತಂಡದಲ್ಲಿರುವ ಶಿಶಿರ್‌ ಭವಾನೆ ಕೂಡಾ ಒಂದೂ ಪಂದ್ಯ ಆಡಿಲ್ಲ.

ಸ್ಕೋರ್ ಕಾರ್ಡ್

ಮುಂಬೈ ಇಂಡಿಯನ್ಸ್‌  7ಕ್ಕೆ 209 (20 ಓವರ್‌)
ಲಿಂಡ್ಲ್‌ ಸಿಮನ್ಸ್‌ ಸಿ ವರುಣ್‌ ಆ್ಯರನ್ ಬಿ ಯಜುವೇಂದ್ರ ಚಾಹಲ್‌  59
ಪಾರ್ಥೀವ್‌ ಪಟೇಲ್‌ ಬಿ ಡೇವಿಡ್‌ ವೈಸ್  12
ಉನ್ಮುಕ್ತ್ ಚಾಂದ್‌ ಸಿ ವಿರಾಟ್‌ ಕೊಹ್ಲಿ ಬಿ ಯುಜುವೇಂದ್ರ ಚಾಹಲ್‌  58
ರೋಹಿತ್‌ ಶರ್ಮಾ ಸಿ ಮತ್ತು ಬಿ ಡೇವಿಡ್‌ ವೈಸ್‌  42
ಕೀರನ್‌ ಪೊಲಾರ್ಡ್ ಸಿ ಯಜುವೇಂದ್ರ ಚಾಹಲ್‌ ಬಿ ಡೇವಿಡ್‌ ವೈಸ್‌್  05
ಅಂಬಟಿ ರಾಯುಡು ಸಿ ಯಜುವೇಂದ್ರ ಚಾಹಲ್‌ ಬಿ ಡೇವಿಡ್‌ ವೈಸ್   00
ಹರಭಜನ್‌ ಸಿಂಗ್‌ ರನ್‌ಔಟ್‌  (ಬಿಸ್ಲಾ/ಅಹ್ಮದ್)  00
ಹಾರ್ದಿಕ್‌ ಪಾಂಡೆ ಔಟಾಗದೆ  16
ಇತರೆ:  (ವೈಡ್‌-13, ಲೆಗ್‌ ಬೈ-4)   17
ವಿಕೆಟ್‌ ಪತನ: 1-47 (ಪಾರ್ಥೀವ್‌; 5.5), 2-119 (ಸಿಮನ್ಸ್‌; 13.3), 3-182 (ಚಾಂದ್; 17.4), 4-188 (ಪೊಲಾರ್ಡ್; 18.2), 5-188 (ರಾಯುಡು; 18.3), 6-192 (ರೋಹಿತ್‌; 18.5), 7-209 (ಹರಭಜನ್‌; 19.6)
ಬೌಲಿಂಗ್‌:  ಇಕ್ಬಾಲ್‌ ಅಬ್ದುಲ್ಲಾ 4-0-35-0, ವರುಣ್‌ ಆ್ಯರನ್‌ 4-0-50-0, ಅಬು ನೇಚಿಮ್‌ 4-0-59-0, ಡೇವಿಡ್ ವೈಸ್‌ 4-0-33-4, ಯುಜುವೇಂದ್ರ ಚಾಹಲ್‌ 4-0-28-2.

ADVERTISEMENT

ಆರ್‌ಸಿಬಿ 7ಕ್ಕೆ 191 (20 ಓವರ್‌)
ಕ್ರಿಸ್‌ ಗೇಲ್ ಬಿ ಹರಭಜನ್‌ ಸಿಂಗ್‌  10
ಮನ್ವೀಂದರ್‌ ಬಿಸ್ಲಾ ಬಿ ಹರಭಜನ್‌ ಸಿಂಗ್‌  20
ವಿರಾಟ್‌ ಕೊಹ್ಲಿ ಸಿ ಅಂಬಟಿ ರಾಯುಡು ಬಿ ಮೆಕ್‌ಲಾಗೆನ್‌  18
ದಿನೇಶ್ ಕಾರ್ತಿಕ್‌ ಸಿ ಉನ್ಮುಕ್ತ್ ಚಾಂದ್‌ ಬಿ ಲಸಿತ್‌ ಮಾಲಿಂಗ್  18
ಎಬಿ ಡಿವಿಲಿಯರ್ಸ್‌ ಸಿ ಕೀರನ್‌ ಪೊಲಾರ್ಡ್‌ ಬಿ ಜಸ್‌ಪ್ರೀತ್‌ ಬೂಮ್ರಾ  41
ರಿಲೆ ರೊಸೊ ಬಿ ಹರಭಜನ್‌ ಸಿಂಗ್‌  00
ಡೇವಿಡ್‌ ವೈಸಿ ಔಟಾಗದೆ  47
ಇಕ್ಬಾಲ್‌ ಅಬ್ದುಲ್ಲಾ ರನ್‌ ಔಟ್‌ (ಶರ್ಮಾ/ಪೋಲಾರ್ಡ್‌)  20
ಅಬು ನೇಚಿಮ್‌ ಅಹ್ಮದ್ ಔಟಾಗದೆ  01
ಇತರೆ: (ಲೆಗ್‌ ಬೈ-1, ವೈಡ್‌-13, ನೋ ಬಾಲ್‌-2)  16

ವಿಕೆಟ್‌ ಪತನ:  1-26 (ಬಿಸ್ಲಾ: 4.6), 2-48 (ಗೇಲ್‌; 8.1), 3-62 (ಕೊಹ್ಲಿ; 10.3), 4-97 (ಕಾರ್ತಿಕ್‌; 12.1), 5-119 (ರೊಸೊ; 13.1), 6-125 (ಡಿವಿಲಿಯರ್ಸ್‌; 14.2), 7-183 (ಇಕ್ಬಾಲ್‌; 19.1).
ಬೌಲಿಂಗ್‌:  ಮಿಷೆಲ್‌ ಮೆಕ್‌ಲಾಗೆನ್‌ 4-0-43-1, ಲಸಿತ್‌ ಮಾಲಿಂಗ 4-1-35-1, ಹರಭಜನ್‌ ಸಿಂಗ್‌ 4-0-27-3, ಜಸ್‌ಬ್ರೂತ್‌ ಬೂಮ್ರಾ 4-0-39-1, ಹರ್ದಿಕ್ ಪಾಂಡೆ 3-0-37-0, ಕೀರನ್‌ ಪೊಲಾರ್ಡ್‌ 1-0-9-0.
ಫಲಿತಾಂಶ: ಮುಂಬೈ ಇಂಡಿಯನ್ಸ್‌ ತಂಡಕ್ಕೆ 18 ರನ್‌ಗೆಲುವು

ಪಂದ್ಯಶ್ರೇಷ್ಠ: ಹರಭಜನ್‌ ಸಿಂಗ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.