ADVERTISEMENT

ಕೊಹ್ಲಿಗೆ ಎರಡನೇ ಸ್ಥಾನ

ಐಸಿಸಿ ಏಕದಿನ ರ್‍ಯಾಂಕಿಂಗ್‌

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2014, 19:30 IST
Last Updated 20 ಅಕ್ಟೋಬರ್ 2014, 19:30 IST

ದುಬೈ (ಪಿಟಿಐ): ವೆಸ್ಟ್‌ಇಂಡೀಸ್‌ ಎದುರಿನ ಏಕದಿನ ಸರಣಿಯಲ್ಲಿ ಭರವಸೆಯ ಪ್ರದರ್ಶನ ತೋರಿದ ಭಾರತದ ವಿರಾಟ್‌ ಕೊಹ್ಲಿ ಐಸಿಸಿ ರ್‍ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ.

ಬೌಲಿಂಗ್‌ ವಿಭಾಗದಲ್ಲಿ  ಭುವನೇಶ್ವರ್‌ ಕುಮಾರ್‌ ಮೊದಲ ಬಾರಿಗೆ ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ.

ವೆಸ್ಟ್‌ಇಂಡೀಸ್‌ ಎದುರು ಈಚೆಗೆ ನಡೆದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದು ಭಾರತ ಸರಣಿ ಜಯಿಸಿತ್ತು. ಈ ಪಂದ್ಯಗಳಲ್ಲಿ 127 ರನ್ ಸೇರಿದಂತೆ ಒಟ್ಟು 191 ರನ್‌ ಕಲೆಹಾಕಿದ್ದ ವಿರಾಟ್‌ ಕೊಹ್ಲಿ ರ್‍ಯಾಂಕಿಂಗ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದ್ದಾರೆ.
ದ. ಆಫ್ರಿಕಾದ ಹಶಿಮ್‌ ಅಮ್ಲಾ ಮೂರನೇ ಸ್ಥಾನ ಹಾಗೂ ಎಬಿ ಡಿವಿಲಿಯರ್ಸ್‌ ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ.

ಭಾರತ ಕ್ರಿಕೆಟ್‌ ತಂಡದ ನಾಯಕ ಮಹೇಂದ್ರ ಸಿಂಗ್‌ ದೋನಿ ಯಾವುದೇ ಬದಲಾವಣೆ ಇಲ್ಲದೇ ಆರನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಸುರೇಶ್‌ ರೈನಾ ಮೂರು ಸ್ಥಾನ ಮೇಲೇರಿ 15ನೇ ಸ್ಥಾನ ಪಡೆದುಕೊಂಡಿದ್ದಾರೆ.

ವಿಂಡೀಸ್‌ ಎದುರಿನ ಸರಣಿಯಲ್ಲಿ ಕೇವಲ ಎರಡು ವಿಕೆಟ್‌ ಪಡೆದ ಭುವನೇಶ್ವರ್‌ ಕುಮಾರ್‌ ಏಳು ಸ್ಥಾನ ಮೇಲೇರಿ, ಏಳನೇ ಸ್ಥಾನ ಗಳಿಸಿದ್ದಾರೆ. ಭರವಸೆಯ ಆಲ್‌ರೌಂಡರ್‌ ರವೀಂದ್ರ ಜಡೇಜ ಬೌಲಿಂಗ್‌ನಲ್ಲಿ ಆರರಿಂದ ಐದನೇ ಸ್ಥಾನಕ್ಕೆ ಏರಿದ್ದಾರೆ.

ತಂಡ ವಿಭಾಗದಲ್ಲಿ 113 ಪಾಯಿಂಟ್ಸ್‌ ಗಳಿಸಿರುವ ಭಾರತ ಏಕದಿನ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಎರಡನೇ ಸ್ಥಾನ ಹೊಂದಿದೆ.
114 ಪಾಯಿಂಟ್ಸ್‌ಗಳಿಂದ ಆಸ್ಟ್ರೇಲಿಯ ಅಗ್ರ ಸ್ಥಾನದಲ್ಲಿದೆ. ಬುಧವಾರ ನ್ಯೂಜಿಲೆಂಡ್‌ ಎದುರು ಪ್ರಾರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಗೆಲುವು ಸಾಧಿಸಿದರೆ  ಮೊದಲ ಸ್ಥಾನಕ್ಕೇರುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.