ADVERTISEMENT

ಚಿನ್ನ ಗೆದ್ದ ರಾಜ್ಯದ ಆದ್ಯ, ವಿದಿತ್‌

ರಾಷ್ಟ್ರೀಯ ಸಬ್‌ ಜೂನಿಯರ್ ಈಜು

​ಪ್ರಜಾವಾಣಿ ವಾರ್ತೆ
Published 29 ಜೂನ್ 2016, 19:30 IST
Last Updated 29 ಜೂನ್ 2016, 19:30 IST
100 ಮೀಟರ್ಸ್‌ ಬಟರ್‌ಫ್ಲೇ ವಿಭಾಗದಲ್ಲಿ ಚಿನ್ನ ಗೆದ್ದ ಆದ್ಯ ನಾಯಕ್‌ ಗುರಿಯತ್ತ ಮುನ್ನುಗ್ಗಿದ ರೀತಿ  ಪ್ರಜಾವಾಣಿ ಚಿತ್ರ
100 ಮೀಟರ್ಸ್‌ ಬಟರ್‌ಫ್ಲೇ ವಿಭಾಗದಲ್ಲಿ ಚಿನ್ನ ಗೆದ್ದ ಆದ್ಯ ನಾಯಕ್‌ ಗುರಿಯತ್ತ ಮುನ್ನುಗ್ಗಿದ ರೀತಿ ಪ್ರಜಾವಾಣಿ ಚಿತ್ರ   

ಬೆಂಗಳೂರು:  ಮೊದಲ ದಿನವೇ ಚುರು ಕಿನ ಸಾಮರ್ಥ್ಯ ನೀಡಿದ ಕರ್ನಾಟಕದ ಆದ್ಯ ನಾಯಕ್‌ ಮತ್ತು ವಿದಿತ್ ಎಸ್‌. ಶಂಕರ್ ಅವರು 33ನೇ ರಾಷ್ಟ್ರೀಯ ಸಬ್‌ ಜೂನಿಯರ್ ಈಜು ಚಾಂಪಿಯನ್‌ ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.

ಬಸವನಗುಡಿ ಈಜು ಕೇಂದ್ರದಲ್ಲಿ ಬುಧವಾರ ಆರಂಭವಾದ ಚಾಂಪಿಯನ್‌ಷಿಪ್‌ನ ಬಾಲಕಿಯರ ವಿಭಾಗದ ಗುಂಪು –3ರ ಸ್ಪರ್ಧೆಯಲ್ಲಿ ಆದ್ಯ ಈ ಸಾಧನೆ ಮಾಡಿದರು.

100 ಮೀಟರ್ಸ್‌ ಬಟರ್‌ಫ್ಲೇ ಸ್ಪರ್ಧೆಯಲ್ಲಿ ಒಂದು ನಿಮಿಷ 11.15 ಸೆಕೆಂಡುಗಳನ್ನು ಗುರಿ ತಲುಪಿ ಚಿನ್ನದ ಒಡತಿಯಾದರು. ಅಸ್ಸಾಂನ ಅಸ್ತಾ ಚೌಧರಿ (ಕಾಲ: 1:12.17ಸೆ.) ಬೆಳ್ಳಿ ಗೆದ್ದರೆ, ಈ ವಿಭಾಗದ ಕಂಚು ಮಹಾರಾಷ್ಟ್ರದ ಅಯೆಕಾ ಚಿತ್ರಾ (ಕಾಲ: 1: 13.53ಸೆ.) ಪಾಲಾಯಿತು.

ರಾಜ್ಯ ತಂಡಕ್ಕೆ ಎರಡನೇ ಚಿನ್ನ ಬಾಲಕರ ಗುಂಪು–5ರ ಸ್ಪರ್ಧೆಯಲ್ಲಿ ಲಭಿಸಿತು. 50 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌ ವಿಭಾಗದಲ್ಲಿ ವಿದಿತ್‌ 36.56 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.

ವಿದಿತ್‌ ಅವರನ್ನು ಹಿಂದಿಕ್ಕಿ ಚಿನ್ನ ಗೆಲ್ಲಲು ತಮಿಳುನಾಡಿನ ಎಚ್‌. ನಿತಿನ್‌ ಭಾರಿ ಪೈಪೋಟಿ ಒಡ್ಡಿದರು. ಆದರೆ ಇವರಿಗೆ 36.98 ಸೆಕೆಂಡುಗಳಿಗಿಂತ ಬೇಗನೆ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ. ಕಂಚು ಜಯಿಸಿದ ಅಸ್ಸಾಂನ ರೆಹಾನ್‌ ಮಿರ್ಜಾ (ಕಾಲ: 37:55ಸೆ.) ಗುರಿ ಮುಟ್ಟಿದರು.

ಬೆಳ್ಳಿ ಗೆದ್ದ ಕಪಿಲ್‌: ರಾಜ್ಯದ ಇನ್ನೊಬ್ಬ ಈಜು ಸ್ಪರ್ಧಿ ಕಪಿಲ್‌ ಶೆಟ್ಟಿ 200 ಮೀಟರ್ಸ್‌ ಫ್ರೀಸ್ಟೈಲ್‌ ವಿಭಾಗದಲ್ಲಿ ಬೆಳ್ಳಿ ಪಡೆದರು.
ಬಾಲಕರ ಗುಂಪು–3ರ ವಿಭಾಗದ ಪೈಪೋಟಿಯಲ್ಲಿ ಅವರು ಎರಡು ನಿಮಿಷ 11: 70 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಮಣಿಪುರದ ಹಿರೆನ್‌ ಶಾಘೊಲ್ಸೆಮ್‌ (ಕಾಲ: 2:09.51ಸೆ.) ಚಿನ್ನ ಜಯಿಸಿದರೆ, ಗುಜರಾತ್‌ನ ಆರ್ಯನ್‌ ನೆಹ್ರಾ ಕಂಚು ಪಡೆದರು. ನೆಹ್ರಾ ಎರಡು ನಿಮಿಷ 12.35 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.

ಇದೇ ಗುಂಪಿನ 100 ಮೀಟರ್ಸ್ ಬಟರ್‌ ಫ್ಲೈ ವಿಭಾಗದಲ್ಲಿ ಅಸ್ಸಾಂನ ಬಿಕಾರಮ್‌ ಚಾಂಗ್‌ಮಯ್‌ (ಕಾಲ: 1:06.85ಸೆ.) ಚಿನ್ನ ಜಯಿಸಿದರು. ಈ ಸ್ಪರ್ಧೆಯ ಉಳಿದ ಎರಡು ಪದಕಗಳನ್ನು ರಾಜ್ಯದ ಸ್ಪರ್ಧಿಗಳು ತಮ್ಮದಾಗಿಸಿಕೊಂಡರು.

ರಾಜ್ಯದ ಶಾನ್‌ ಗಂಗೂಲಿ ಒಂದು ನಿಮಿಷ 07.40 ಸೆಕೆಂಡುಗಳಲ್ಲಿ ಬೆಳ್ಳಿ ಜಯಿಸಿದರೆ, ಸಮರ್ಥ್‌ ಸುಬ್ರಮಣ್ಯ (ಕಾಲ: 1:08.71ಸೆ.) ಕಂಚು ಪಡೆದರು.
ರಾಜ್ಯದ ದಾಖಲೆ ಪತನ: ಬಾಲಕರ 4X50 ಮೀ. ಫ್ರೀಸ್ಟೈಲ್‌ ರಿಲೇ ತಂಡ ವಿಭಾಗದಲ್ಲಿ ಅಸ್ಸಾಂ ನೂತನ ಕೂಟ ದಾಖಲೆಯೊಂದಿಗೆ ಚಿನ್ನ ಜಯಿಸಿತು.

ಈ ತಂಡದವರು ಒಂದು ನಿಮಿಷ 51.13ಸೆಕೆಂಡುಗಳಲ್ಲಿ ಗುರಿ ಮುಟ್ಟಿ 2014ರಲ್ಲಿ ಕರ್ನಾಟಕ (ಕಾಲ: 1:54.54ಸೆ.) ನಿರ್ಮಿಸಿದ್ದ ದಾಖಲೆ ಅಳಿಸಿ ಹಾಕಿದರು. ಈ ವಿಭಾಗದಲ್ಲಿ ರಾಜ್ಯದ ಸ್ಪರ್ಧಿಗಳು ಬೆಳ್ಳಿ ಗೆಲ್ಲುವಲ್ಲಿ ಯಶ ಕಂಡರು. ಒಂದು ನಿಮಿಷ 57.06ಸೆ. ಗುರಿ ತಲುಪಿ ಈ ಸಾಧನೆ ಮಾಡಿದರು. ಕಂಚು ಮಹಾರಾಷ್ಟ್ರ (ಕಾಲ: 1:57.67ಸೆ.) ಜಯಿಸಿದರು.

ಬಾಲಕರ 4X50 ಮೀಟರ್ಸ್‌ ಫ್ರೀಸ್ಟೈಲ್‌ ರಿಲೇ ತಂಡದಲ್ಲಿ ರಾಜ್ಯ ತಂಡ   ಎರಡು ನಿಮಿಷ 09.06ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಚಿನ್ನ ಜಯಿಸಿತು. ತಮಿಳುನಾಡು (ಕಾಲ: 2:12.06ಸೆ.) ಬೆಳ್ಳಿ ಗೆದ್ದರೆ, ಮಹಾರಾಷ್ಟ್ರ (ಕಾಲ: 2:12.52ಸೆ.) ಕಂಚು ಜಯಿಸಿತು.

ಬಾಲಕಿಯರ 4X50ಮೀ. ಫ್ರೀಸ್ಟೈಲ್‌ ವಿಭಾಗದಲ್ಲಿ ಕರ್ನಾಟಕ ಕಂಚು ಪಡೆಯಿತು. ಈ ತಂಡದವರು ಎರಡು ನಿಮಿಷ 05.54ಸೆಕೆಂಡುಗಳಲ್ಲಿ ಗುರಿ ತಲುಪಿದರು. 4X50ಮೀ. ಫ್ರೀಸ್ಟೈಲ್‌ ರಿಲೇಯಲ್ಲಿ ರಾಜ್ಯ ತಂಡ (ಕಾಲ: 2:18.32ಸೆ.) ಬೆಳ್ಳಿ ಜಯಿಸಿತು.

ಬಾಲಕರ ಡೈವಿಂಗ್ ವಿಭಾಗದಲ್ಲಿ ರಾಜ್ಯದ ಸಂದೀಪ್‌ ಕುಮಾರ್ ಪ್ರಜಾಪತಿ  290.90 ಪಾಯಿಂಟ್ಸ್ ಗಳಿಸಿ ಬೆಳ್ಳಿ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.