ADVERTISEMENT

ಜೋಶ್ನಾ ಎದುರು ಗೆದ್ದ ದೀಪಿಕಾ

ಭಾರತಕ್ಕೆ ಎರಡು ಪದಕ ಖಚಿತ, ಸೆಮಿಗೆ ಘೋಷಾಲ್‌

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2014, 19:30 IST
Last Updated 21 ಸೆಪ್ಟೆಂಬರ್ 2014, 19:30 IST

ಇಂಚೆನ್‌ (ಪಿಟಿಐ): ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತದ ಸಾಧನೆಯ ಪಟ್ಟಿಗೆ ಮತ್ತೆರಡು ಪದಕ ಸೇರುವುದು ಖಚಿತವಾಗಿದೆ. ಆ ಸಾಧನೆಗೆ ಕಾರಣವಾಗಿರುವುದು ಸ್ಕ್ವಾಷ್‌ ಆಟಗಾರರಾದ ದೀಪಿಕಾ ಪಳ್ಳಿಕಲ್‌ ಹಾಗೂ ಸೌರವ್‌ ಘೋಷಾಲ್‌.

ಯೆರುಮಲ್‌ ಸ್ಕ್ವಾಷ್‌ ಅಂಗಳದಲ್ಲಿ ಭಾನುವಾರ ಭಾರೀ ಕುತೂಹಲ ಮೂಡಿಸಿದ್ದ ಕ್ವಾರ್ಟರ್‌ ಫೈನಲ್‌ ಹೋರಾಟದಲ್ಲಿ ಗೆಲುವಿನ ನಗು ಬೀರಿದ್ದು ದೀಪಿಕಾ. ಸ್ನೇಹಿತೆ ಹಾಗೂ ತಮ್ಮೂರಿನವರೇ ಆದ ಜೋಶ್ನಾ ಚಿನ್ನಪ್ಪ ಅವರನ್ನು ಮಣಿಸಿದ ದೀಪಿಕಾ, ಸಿಂಗಲ್ಸ್‌ನಲ್ಲಿ ಸೆಮಿಫೈನಲ್‌ ತಲುಪಿದರು.

ಕ್ಷಣ ಕ್ಷಣಕ್ಕೂ ತಿರುವು ಪಡೆಯುತ್ತಾ ಸಾಗಿದ ಸುದೀರ್ಘ ಹೋರಾಟದಲ್ಲಿ ದೀಪಿಕಾ 7–11, 11–9, 11–8, 15–17, 11–9ರಲ್ಲಿ ಜೋಶ್ನಾ ಅವರನ್ನು ಮಣಿಸಿದರು. ಮೊದಲ ಗೇಮ್‌ನಲ್ಲಿಯೇ ಸೋಲು ಕಂಡ ದೀಪಿಕಾ ನಂತರ ತಿರುಗೇಟು ನೀಡುವಲ್ಲಿ ಯಶಸ್ವಿಯಾದರು. 23 ವರ್ಷ ವಯಸ್ಸಿನ ಅವರು ನಾಲ್ಕರ ಘಟ್ಟದ ಪಂದ್ಯದಲ್ಲಿ ಮಲೇಷ್ಯಾದ ನಿಕೋಲ್‌ ಡೇವಿಡ್‌ ಎದುರು ಪೈಪೋಟಿ ನಡೆಸಲಿದ್ದಾರೆ.

ಏಷ್ಯನ್‌ ಕೂಟದ ಸ್ಕ್ವಾಷ್‌ನಲ್ಲಿ ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಭಾರತ ಈ ಹಿಂದೆ ಪದಕ ಗೆದ್ದಿರಲಿಲ್ಲ. ಆದರೆ, ದೀಪಿಕಾ ಅವರ ಅಮೋಘ ಆಟದ ಮೂಲಕ ಪದಕದ ಕನಸು ನನಸಾಗಿದೆ. ಅವರು ಸೆಮಿಫೈನಲ್‌ ಹೋರಾಟದಲ್ಲಿ ಸೋತರೂ ಪದಕ ಲಭಿಸಲಿದೆ. ಏಕೆಂದರೆ ಸ್ಕ್ವಾಷ್‌ನಲ್ಲಿ ಸೆಮಿಫೈನಲ್‌ ತಲುಪಿದರೆ ಪದಕ ಖಚಿತ.

ಪುರುಷರ ಸಿಂಗಲ್ಸ್‌ನಲ್ಲಿ ಸೌರವ್‌ ಅವರು ಸೆಮಿಫೈನಲ್‌ ಪ್ರವೇಶಿಸಿದರು. ಅವರು 11–6, 9–11, 11–2, 11–9ರಲ್ಲಿ ಪಾಕಿಸ್ತಾನದ ನಾಸಿರ್ ಇಕ್ಬಾಲ್‌ ಅವರನ್ನು ಸೋಲಿಸಿದರು.ಸೌರವ್‌ ಮುಂದಿನ ಪಂದ್ಯದಲ್ಲಿ ಮಲೇಷ್ಯಾದ ಓಂಗ್‌ ಬೆಂಗ್‌ ಹೀ ಎದುರು ಆಡಲಿದ್ದಾರೆ. ಬೆಂಗ್‌ 2006ರಲ್ಲಿ ಏಷ್ಯನ್‌ ಕೂಟದಲ್ಲಿ ಚಿನ್ನ ಜಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.