ADVERTISEMENT

ಟೆನಿಸ್‌ ದಿಗ್ಗಜರ ಪೈಪೋಟಿಗೆ ವೇದಿಕೆ ಸಜ್ಜು

ಇಂದಿನಿಂದ ಫ್ರೆಂಚ್‌ ಓಪನ್‌ ಟೂರ್ನಿ; ಹೊಸಬರ ಮೇಲೆ ಭರವಸೆ

ಏಜೆನ್ಸೀಸ್
Published 27 ಮೇ 2017, 19:30 IST
Last Updated 27 ಮೇ 2017, 19:30 IST
ಸ್ಪೇನ್‌ನ ರಫೆಲ್‌ ನಡಾಲ್‌ ತಾಲೀಮು – ಎಎಫ್‌ಪಿ ಚಿತ್ರ
ಸ್ಪೇನ್‌ನ ರಫೆಲ್‌ ನಡಾಲ್‌ ತಾಲೀಮು – ಎಎಫ್‌ಪಿ ಚಿತ್ರ   

ಪ್ಯಾರಿಸ್‌ (ರಾಯಿಟರ್ಸ್‌/ಎಎಫ್‌ಪಿ/ ಎಪಿ): ಟೆನಿಸ್‌ ಲೋಕದ ದಿಗ್ಗಜರಾದ ಆ್ಯಂಡಿ ಮರ್ರೆ, ರಫೆಲ್‌ ನಡಾಲ್‌, ನೊವಾಕ್‌ ಜೊಕೊವಿಚ್‌ ಮತ್ತು ಸ್ಟಾನಿಸ್ಲಾಸ್‌ ವಾವ್ರಿಂಕ ಅವರು ಭಾನುವಾರದಿಂದ ಆರಂಭವಾಗುವ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ.

ಹೊಸ ತಲೆಮಾರಿನ ಆಟಗಾರರಾದ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ಮತ್ತು ಆಸ್ಟ್ರಿಯಾದ ಡೊಮಿನಿಕ್‌ ಥಿಯೆಮ್‌ ಅವರೂ ಟೆನಿಸ್‌ ಪ್ರಿಯರ ಆಕರ್ಷಣೆಯಾಗಿದ್ದಾರೆ.

20 ವರ್ಷದ ಅಲೆಕ್ಸಾಂಡರ್‌ ಹೋದ ವಾರ ನಡೆದಿದ್ದ ಇಟಾಲಿಯನ್‌ ಓಪನ್‌ ಫೈನಲ್‌ನಲ್ಲಿ ಜೊಕೊವಿಚ್‌ಗೆ ಆಘಾತ ನೀಡಿದ್ದರೆ, 23 ವರ್ಷದ ಡೊಮಿನಿಕ್‌, ನಡಾಲ್‌ ಅವರನ್ನು ಮಣಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು.

ರೋಲಾಂಡ್‌ ಗ್ಯಾರೊಸ್‌ನಲ್ಲಿ ಸ್ಪೇನ್‌ನ ಆಟಗಾರ ನಡಾಲ್‌ ಹತ್ತನೇ ಟ್ರೋಫಿ ಎತ್ತಿ ಹಿಡಿಯುವ ತವಕದಲ್ಲಿದ್ದರೆ, ಸರ್ಬಿಯಾದ ಆಟಗಾರ ಮತ್ತು ಹಾಲಿ ಚಾಂಪಿಯನ್‌ ಜೊಕೊವಿಚ್‌,  ಪ್ರಶಸ್ತಿ ಉಳಿಸಿಕೊಳ್ಳುವ ಛಲ ಹೊಂದಿದ್ದಾರೆ.

2015ರ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಜೊಕೊವಿಚ್‌ ವಿರುದ್ಧ ಸೋತಿದ್ದ ‘ರಫಾ’, ಹೋದ ವರ್ಷ ಮೂರನೇ ಸುತ್ತಿನ ಪಂದ್ಯದ ವೇಳೆ ಗಾಯಗೊಂಡು ಅಂಗಳ ತೊರೆದಿದ್ದರು.

ಈ ವರ್ಷ ನಡೆದ ಮಾಂಟೆ ಕಾರ್ಲೊ ಮತ್ತು ಬಾರ್ಸಿಲೋನಾ ಓಪನ್‌ ಟೂರ್ನಿ ಗಳಲ್ಲಿ ಪ್ರಶಸ್ತಿ ಗೆದ್ದು ವಿಶ್ವಾಸದಿಂದ ಪುಟಿ ಯುತ್ತಿರುವ 30 ವರ್ಷದ ನಡಾಲ್‌, ಗಟ್ಟಿ ಮಣ್ಣಿನಂಕಣದಲ್ಲಿ ಉತ್ತಮ ಗೆಲುವಿನ ದಾಖಲೆ ಹೊಂದಿದ್ದಾರೆ. 72 ಪಂದ್ಯ ಗಳಲ್ಲಿ ಜಯದ ಸಿಹಿ ಸವಿದಿರುವ ಅವರು ಎರಡು ಪಂದ್ಯಗಳಲ್ಲಿ ಸೋತಿದ್ದಾರೆ.

ಮೊದಲ ಸುತ್ತಿನ ಪಂದ್ಯದಲ್ಲಿ ಬೆನೊ ಯಿಟ್‌ ಪಿಯೆರೆ ವಿರುದ್ಧ ಸೆಣಸಲಿರುವ ನಡಾಲ್‌, ಸೆಮಿಫೈನಲ್‌ನಲ್ಲಿ ಜೊಕೊ ವಿಚ್ ಸವಾಲು ಎದುರಿಸುವ ಸಾಧ್ಯತೆ ಇದೆ.

ಹೋದ ವರ್ಷದ ಫೈನಲ್‌ನಲ್ಲಿ ಬ್ರಿಟನ್‌ನ ಮರ್ರೆ ವಿರುದ್ಧ ಗೆದ್ದು ಟ್ರೋಫಿ ಎತ್ತಿಹಿಡಿದಿದ್ದ ನೊವಾಕ್‌, ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 76ನೇ ಸ್ಥಾನದಲ್ಲಿರುವ ಮಾರ್ಷೆಲೊ ಗ್ರಾನೊಲ್ಲರ್ಸ್‌ ವಿರುದ್ಧ ಆಡುವ ಮೂಲಕ ಟೂರ್ನಿಯಲ್ಲಿ ಅಭಿಯಾನ ಆರಂಭಿಸಲಿದ್ದಾರೆ.

ಮರ್ರೆ ಕೂಡಾ ಈ ಬಾರಿ ಪ್ರಶಸ್ತಿ ಗೆದ್ದು ಹಿಂದಿನ ನಿರಾಸೆ ಮರೆಯುವ ಆಲೋಚನೆ ಹೊಂದಿದ್ದಾರೆ. ವಿಶ್ವ ಕ್ರಮಾಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಅವರು ಮೊದಲ ಸುತ್ತಿನಲ್ಲಿ ಆ್ಯಂಡ್ರೆ ಕುಜ್ನೆತ್ಸೋವ್‌ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.

ಮುಗುರುಜಾ ಆಕರ್ಷಣೆ: ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ  ಹಾಲಿ ಚಾಂಪಿಯನ್‌ ಗಾರ್ಬೈನ್‌ ಮುಗು ರುಜಾ ಎಲ್ಲರ ಆಕರ್ಷಣೆಯಾಗಿದ್ದಾರೆ.
ಮೊದಲ ಸುತ್ತಿನ ಹಣಾಹಣಿಯಲ್ಲಿ ಅವರು, 2010ರಲ್ಲಿ ಚಾಂಪಿಯನ್‌ ಆಗಿದ್ದ ಫ್ರಾನ್ಸೆಸ್ಕಾ ಶಿಯಾವೊನ್‌ ವಿರುದ್ಧ ಆಡುವರು.

ಅಗ್ರಶ್ರೇಯಾಂಕದ ಆಟಗಾರ್ತಿ ಏಂಜಲಿಕ್‌ ಕೆರ್ಬರ್‌ ಅವರು 40ನೇ ಶ್ರೇಯಾಂಕದ ಏಕ್ತರಿನಾ ಮಕರೋವಾ ವಿರುದ್ಧ ಹಣಾಹಣಿ ನಡೆಸಲಿದ್ದು ಜಯದ ಮಂತ್ರ ಜಪಿಸುತ್ತಿದ್ದಾರೆ.

ಮೂರನೇ ಶ್ರೇಯಾಂಕಿತೆ ಸಿಮೊನಾ ಹಲೆಪ್‌ ಕೂಡ ಪ್ರಶಸ್ತಿಯ ಕನಸು ಕಾಣುತ್ತಿ ದ್ದಾರೆ. ರುಮೇನಿಯಾದ ಆಟಗಾರ್ತಿ ಸಿಮೊನಾ, ಆರಂಭಿಕ ಸುತ್ತಿನಲ್ಲಿ ಜನಾ ಸೆಪೆಲೊವಾ ವಿರುದ್ಧ ಆಡಲಿದ್ದಾರೆ.

ಜೆಕ್‌ಗಣರಾಜ್ಯದ ಐದನೇ ಶ್ರೇಯಾಂ ಕದ ಆಟಗಾರ್ತಿ ಪೆಟ್ರಾ ಕ್ವಿಟೋವಾ, ವಿಕ್ಟೋರಿಯಾ ಅಜರೆಂಕಾ ಕೂಡ ಪ್ರಶಸ್ತಿ ಗೆಲ್ಲುವ ನೆಚ್ಚಿನ ಸ್ಪರ್ಧಿಗಳೆನಿಸಿದ್ದಾರೆ.
*
ನಡಾಲ್‌   ಈ ಬಾರಿ ಫ್ರೆಂಚ್‌ ಓಪನ್‌ ಗರಿ ಮುಡಿಗೇರಿಸಿಕೊ ಳ್ಳುವ ನೆಚ್ಚಿನ ಆಟಗಾರ ಆಗಿದ್ದಾರೆ. ನೊವಾಕ್‌ ಮತ್ತು ಮರ್ರೆ ಅವರಿಗೂ ಪ್ರಶಸ್ತಿ ಗೆಲ್ಲುವ ಸಾಮರ್ಥ್ಯವಿದೆ.
ಡೊಮಿನಿಕ್‌ ಥಿಯೆಮ್‌
ಆಸ್ಟ್ರಿಯಾದ ಆಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.