ADVERTISEMENT

ದೆಹಲಿ ಎದುರಿನ ರಣಜಿ ಪಂದ್ಯ : ರನ್‌ ಗೋಪುರ ಕಟ್ಟಿದ ಆತಿಥೇಯರು

ಸ್ಟುವರ್ಟ್‌ ಬಿನ್ನಿ ಶತಕ; ಶ್ರೇಯಸ್‌–ಮಿಥುನ್‌ ಜೊತೆಯಾಟ

ಜಿ.ಶಿವಕುಮಾರ
Published 10 ನವೆಂಬರ್ 2017, 19:11 IST
Last Updated 10 ನವೆಂಬರ್ 2017, 19:11 IST
ದೆಹಲಿ ಎದುರಿನ ರಣಜಿ ಪಂದ್ಯ : ರನ್‌ ಗೋಪುರ ಕಟ್ಟಿದ ಆತಿಥೇಯರು
ದೆಹಲಿ ಎದುರಿನ ರಣಜಿ ಪಂದ್ಯ : ರನ್‌ ಗೋಪುರ ಕಟ್ಟಿದ ಆತಿಥೇಯರು   

ಬೆಂಗಳೂರು: ಉದ್ಯಾನ ನಗರಿಯ ಹೊರ ವಲಯದಲ್ಲಿರುವ ಆಲೂರಿನ ಮೈದಾನದಲ್ಲಿ ಶುಕ್ರವಾರ ಸ್ಟುವರ್ಟ್‌ ಬಿನ್ನಿ (118; 155ಎ, 18ಬೌಂ) ಮತ್ತು ಶ್ರೇಯಸ್‌ ಗೋಪಾಲ್‌ (92; 165ಎ, 11ಬೌಂ, 1ಸಿ) ಬ್ಯಾಟಿಂಗ್‌ ಸೊಬಗು ಅನಾವರಣಗೊಂಡಿತು.

ಇವರ ಮಿಂಚಿನ ಆಟದ ಬಲದಿಂದ ಕರ್ನಾಟಕ ತಂಡ ದೆಹಲಿ ವಿರುದ್ಧದ ರಣಜಿ ಟ್ರೋಫಿ ‘ಎ’ ಗುಂಪಿನ ಪಂದ್ಯದಲ್ಲಿ ರನ್‌ ಗೋಪುರ ಕಟ್ಟಿತು.

4 ವಿಕೆಟ್‌ಗೆ 348ರನ್‌ಗಳಿಂದ ಆಟ ಮುಂದುವರಿಸಿದ ಆರ್‌.ವಿನಯ್‌ ಕುಮಾರ್‌ ಬಳಗ ಮೊದಲ ಇನಿಂಗ್ಸ್‌ನಲ್ಲಿ 172.2 ಓವರ್‌ಗಳಲ್ಲಿ 649ರನ್‌ ಗಳಿಸಿತು. 1981–82ರ ನಂತರ ದೆಹಲಿ ವಿರುದ್ಧ ಕರ್ನಾಟಕ ತಂಡ ರಣಜಿಯಲ್ಲಿ ದಾಖಲಿಸಿದ ಗರಿಷ್ಠ ಮೊತ್ತ ಇದು. ಪ್ರಥಮ ಇನಿಂಗ್ಸ್‌ ಶುರು ಮಾಡಿರುವ ರಿಷಭ್‌ ಪಡೆ ದಿನದಾಟದ ಅಂತ್ಯಕ್ಕೆ 5 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 20ರನ್‌ ಗಳಿಸಿದೆ.

ADVERTISEMENT

ಕಮರಿದ ದ್ವಿಶತಕದ ಕನಸು: ದಿನದಾಟ ಆರಂಭಿಸಿದ ಆತಿಥೇಯರಿಗೆ 95ನೇ ಓವರ್‌ನಲ್ಲಿ ಆಘಾತ ಎದುರಾಯಿತು. ವಿಕಾಸ್‌ ಟೋಕಸ್‌ ಹಾಕಿದ ಮೂರನೇ ಎಸೆತವನ್ನು ಪಾಯಿಂಟ್‌ನತ್ತ ತಳ್ಳಿದ ಮಯಂಕ್‌ ಅಗರವಾಲ್‌ (176; 250ಎ, 24ಬೌಂ,3ಸಿ) ರನ್‌ ಗಳಿಸಲು ಓಡಿದರು. ಇನ್ನೊಂದು ತುದಿಯಲ್ಲಿದ್ದ ಬಿನ್ನಿ ಇದಕ್ಕೆ ಸ್ಪಂದಿಸಲಿಲ್ಲ. ಮಯಂಕ್‌ ಕ್ರೀಸ್‌ಗೆ ಮರಳುವುದರೊಳಗೆ ನಿತಿಶ್‌ ರಾಣಾ ಚೆಂಡನ್ನು ನೇರವಾಗಿ ವಿಕೆಟ್‌ಗೆ ಎಸೆದು ದೆಹಲಿ ಪಾಳಯದಲ್ಲಿ ಖುಷಿ ಮೂಡುವಂತೆ ಮಾಡಿದರು. ಹೀಗಾಗಿ ಮಯಂಕ್‌ ದ್ವಿಶತಕದ ಕನಸು ಕಮರಿತು. 41ರನ್‌ಗಳ ಐದನೇ ವಿಕೆಟ್‌ ಜೊತೆಯಾಟವೂ ಅಂತ್ಯವಾಯಿತು.

ಬಿನ್ನಿ–ಗೌತಮ್‌ ಮೋಡಿ: ಈ ಹಂತದಲ್ಲಿ ಒಂದಾದ ಬಿನ್ನಿ ಮತ್ತು ಸಿ.ಎಂ.ಗೌತಮ್‌ (46; 81ಎ, 8ಬೌಂ) ಜವಾಬ್ದಾರಿಯುತ ಇನಿಂಗ್ಸ್‌ ಕಟ್ಟಿದರು. ರಿಷಭ್‌ ಪಂತ್‌ ಬಳಗದ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಇವರು 80 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಟ ಪೂರೈಸಿದರು. ಹೀಗಾಗಿ 106ನೇ ಓವರ್‌ನಲ್ಲಿ ತಂಡದ ಮೊತ್ತ 400ರ ಗಡಿ ಮುಟ್ಟಿತು. ಆ ನಂತರವೂ ಈ ಜೋಡಿಯ ಆಟ ರಂಗೇರಿತು. ಮನನ್‌ ಶರ್ಮಾ ಹಾಕಿದ 110ನೇ ಓವರ್‌ನ ಮೂರನೇ ಎಸೆತವನ್ನು ಬೌಂಡರಿಗಟ್ಟಿದ ಬಿನ್ನಿ ಅರ್ಧಶತಕದ ಸಂಭ್ರಮ ಆಚರಿಸಿದರು. 170 ನಿಮಿಷ ಕ್ರೀಸ್‌ನಲ್ಲಿದ್ದ ಅವರು 86 ಎಸೆತಗಳಲ್ಲಿ 6ಬೌಂಡರಿ ಸಿಡಿಸಿ ತವರಿನ ಅಭಿಮಾನಿಗಳನ್ನು ರಂಜಿಸಿದರು.

ಕುಲವಂತ್‌ ಖೇಜ್ರೋಲಿಯಾ ಬೌಲ್‌ ಮಾಡಿದ 112ನೇ ಓವರ್‌ನ 2 ಮತ್ತು 3ನೇ ಎಸೆತಗಳನ್ನು ಬಿನ್ನಿ ಬೌಂಡರಿ ಗೆರೆ ದಾಟಿಸಿದ ರೀತಿ ಮನ ಸೆಳೆಯುವಂತಿದ್ದವು. 117.3 ಓವರ್‌ಗಳಲ್ಲಿ 450 ರನ್‌ ದಾಖಲಿಸಿದ್ದ ರಾಜ್ಯ ತಂಡಕ್ಕೆ 122ನೇ ಓವರ್‌ನಲ್ಲಿ ಮತ್ತೊಂದು ನಿರಾಸೆ ಕಾಡಿತು. ಮನನ್‌ ಶರ್ಮಾ ಎಸೆತವನ್ನು ಗೌತಮ್‌ ಸ್ವೀಪ್‌ ಮಾಡಿದರು. ಶಾರ್ಟ್‌ ಫೈನ್‌ ಲೆಗ್‌ನಲ್ಲಿದ್ದ ಮಿಲಿಂದ್‌ ಕುಮಾರ್‌ ಚೆಂಡನ್ನು ಹಿಡಿತಕ್ಕೆ ಪಡೆಯುತ್ತಿದ್ದಂತೆ ದೆಹಲಿ ಪಾಳಯದಲ್ಲಿ ಸಂಭ್ರಮ ಗರಿಗೆದರಿತು. ಗೌತಮ್‌ ಪೆವಿಲಿಯನ್‌ ಸೇರುವ ಮುನ್ನ ಬಿನ್ನಿ ಜೊತೆ ಐದನೇ ವಿಕೆಟ್‌ಗೆ 162 ಎಸೆತಗಳಲ್ಲಿ 111ರನ್‌ ಸೇರಿಸಿ ತಂಡದ ಮೊತ್ತ ಹೆಚ್ಚಿಸಿದ್ದರು.

34 ಓವರ್‌ಗಳ ಮೊದಲ ಅವಧಿಯಲ್ಲಿ ವಿನಯ್‌ ಕುಮಾರ್‌ ಬಳಗ 2 ವಿಕೆಟ್‌ ಕಳೆದುಕೊಂಡು 132ರನ್‌ ಕಲೆಹಾಕಿದ್ದು ವಿಶೇಷ.

ಬಿನ್ನಿ ಮೊದಲ ಶತಕ:ಊಟದ ವಿರಾಮಕ್ಕೂ ಮುನ್ನ 91 ರನ್‌ ದಾಖಲಿಸಿದ್ದ ಬಿನ್ನಿ, ವೇಗದ ಬೌಲರ್‌ ನವದೀಪ್‌ ಸೈನಿ ಹಾಕಿದ 128ನೇ ಓವರ್‌ನ ಐದನೇ ಎಸೆತದಲ್ಲಿ ಬೌಂಡರಿ ಗಳಿಸಿ ಮೂರಂಕಿಯ ಗಡಿ ದಾಟಿದರು. ಅವರು ಕಟ್‌ ಮಾಡಿದ ಚೆಂಡನ್ನು ಮೊದಲ ಸ್ಲಿಪ್‌ನಲ್ಲಿದ್ದ ಉನ್ಮುಕ್ತ್‌ ಚಾಂದ್‌ ಹಿಡಿತಕ್ಕೆ ಪಡೆಯಲು ವಿಫಲರಾದರು. ಹೀಗಾಗಿ ಬಿನ್ನಿಗೆ ಈ ಬಾರಿ ಮೊದಲ ಶತಕ ದಾಖಲಿಸುವ ಅದೃಷ್ಟ ಒಲಿಯಿತು.

ಆ ನಂತರ ಬಿರುಸಿನ ಆಟಕ್ಕೆ ಮುಂದಾದ ಸ್ಟುವರ್ಟ್‌, ವಿಕಾಸ್‌ ಟೋಕಸ್‌ ಬೌಲ್‌ ಮಾಡಿದ 136ನೇ ಓವರ್‌ನಲ್ಲಿ ಅವರಿಗೇ ಕ್ಯಾಚ್‌ ನೀಡಿದರು. ಅವರು ಶ್ರೇಯಸ್‌ ಗೋಪಾಲ್‌ ಜೊತೆ ಐದನೇ ವಿಕೆಟ್‌ಗೆ 55ರನ್‌ ಸೇರಿಸಿದರು.

ಬಳಿಕ ಬಂದ ಕೆ.ಗೌತಮ್‌ (12; 29ಎ, 2ಬೌಂ) ದೊಡ್ಡ ಮೊತ್ತ ಕಲೆಹಾಕಲು ವಿಫಲರಾದರು. 5ರನ್‌ ಗಳಿಸಿದ್ದ ವೇಳೆ ಮನನ್‌ ಶರ್ಮಾ ಅವರಿಂದ ಜೀವದಾನ ಪಡೆದಿದ್ದ ಅವರು ಇದರ ಲಾಭ ಎತ್ತಿಕೊಳ್ಳಲಿಲ್ಲ. ನಾಯಕ ವಿನಯ್‌ ಸೊನ್ನೆ ಸುತ್ತಿದರು.

ಕಾಡಿದ ಶ್ರೇಯಸ್‌–ಮಿಥುನ್‌:ರಾಜ್ಯ ತಂಡ 548ರನ್‌ಗಳಿಗೆ 9 ವಿಕೆಟ್‌ ಕಳೆದುಕೊಂಡಿದ್ದರಿಂದ ರಿಷಭ್‌ ಪಂತ್‌ ಪಡೆ 560ರ ಗಡಿಯೊಳಗೆ ಎದುರಾಳಿಗಳನ್ನು ಕಟ್ಟಿಹಾಕುವ ಕನಸು ಕಂಡಿತ್ತು. ಆದರೆ ಶ್ರೇಯಸ್‌ ಗೋಪಾಲ್‌ ಮತ್ತು ಅಭಿಮನ್ಯು ಮಿಥುನ್‌ (ಔಟಾಗದೆ 35; 70ಎ, 4ಬೌಂ, 1ಸಿ) ಪ್ರವಾಸಿ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು.

ಮೈದಾನದಲ್ಲಿ ಬೌಂಡರಿ, ಸಿಕ್ಸರ್‌ಗಳ ಚಿತ್ತಾರ ಬಿಡಿಸಿದ ಈ ಜೋಡಿ 10ನೇ ವಿಕೆಟ್‌ಗೆ ಶತಕದ ಜೊತೆಯಾಟ ಆಡಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿತು.

96 ನಿಮಿಷ ಕ್ರೀಸ್‌ನಲ್ಲಿದ್ದ ಇವರು 161 ಎಸೆತಗಳನ್ನು ಎದುರಿಸಿದರು. 173ನೇ ಓವರ್‌ ಬೌಲ್‌ ಮಾಡಿದ ವಿಕಾಸ್‌ ಮಿಶ್ರಾ, ಶ್ರೇಯಸ್‌ ಅವರನ್ನು ಬೌಲ್ಡ್‌ ಮಾಡಿ ಆತಿಥೇಯರ ಇನಿಂಗ್ಸ್‌ಗೆ ತೆರೆ ಎಳೆದರು.

ಕೋಚ್‌ ಮುರಳಿ ಮನದ ಮಾತು: ‘ಇದು ಮಯಂಕ್‌ ವೃತ್ತಿ ಬದುಕಿನ ಶ್ರೇಷ್ಠ ಇನಿಂಗ್ಸ್‌’

ಬೆಂಗಳೂರು: ‘ದೆಹಲಿ ವಿರುದ್ಧದ ಹೋರಾಟದಲ್ಲಿ ಮಯಂಕ್‌ ಆಡಿದ ರೀತಿ ಮೆಚ್ಚುವಂತಹದ್ದು. ನನ್ನ ಪ್ರಕಾರ ಇದು ಆತನ ವೃತ್ತಿ ಬದುಕಿನ ಶ್ರೇಷ್ಠ ಇನಿಂಗ್ಸ್‌ಗಳಲ್ಲಿ ಒಂದು. ಇದು ಆತನ ಪ್ರಬುದ್ಧತೆಗೆ ಹಿಡಿದ ಕೈಗನ್ನಡಿ’ ಎಂದು ಮಯಂಕ್‌ ಅಗರವಾಲ್‌ ಅವರ ಕೋಚ್‌ ಆರ್‌.ಎಕ್ಸ್‌.ಮುರಳಿ ಮೆಚ್ಚುಗೆ ವ್ಯಕ್ತಪಡಿಸಿದರು.

ಮಯಂಕ್ ಆಟ ನೋಡಲು ಶುಕ್ರವಾರ ಆಲೂರಿನ ಎರಡನೇ ಮೈದಾನಕ್ಕೆ ಬಂದಿದ್ದ ಅವರು ಪತ್ರಕರ್ತರ ಜೊತೆ ಮಾತನಾಡಿದರು.

‘ಮಯಂಕ್‌ ನನ್ನ ಬಳಿ ತರಬೇತಿಗೆ ಸೇರಿದಾಗ ತಾಂತ್ರಿಕ ಕೌಶಲಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದೆ. ಇದರಿಂದ ಆತ ತುಂಬಾ ಒತ್ತಡಕ್ಕೆ ಒಳಗಾಗುತ್ತಿದ್ದುದ್ದು ಕ್ರಮೇಣ ಅರಿವಿಗೆ ಬಂತು. ಆದ್ದರಿಂದ ಅವನ ಇಷ್ಟದಂತೆಯೇ ಆಡಲು ಸೂಚಿಸಿದ್ದೆ. ದೆಹಲಿ ಎದುರು ಆತ 70ರ ಸ್ಟ್ರೈಕ್‌ ರೇಟ್ ಹೊಂದಿದ್ದು ಖುಷಿ ನೀಡಿತು’ ಎಂದರು.

‘ಶುಕ್ರವಾರ ಮಯಂಕ್‌ ಸೂಕ್ತ ಯೋಜನೆ ರೂಪಿಸಿ ಕಣಕ್ಕಿಳಿದಂತೆ ಕಾಣಲಿಲ್ಲ. ರನ್‌ಔಟ್‌ ಆಗದಿದ್ದರೆ ಖಂಡಿತವಾಗಿಯೂ ದ್ವಿಶತಕ ದಾಖಲಿಸುತ್ತಿದ್ದ. ಮಾನಸಿಕವಾಗಿ ಸಾಕಷ್ಟು ಸದೃಢನಾಗಿರುವುದು ಆತನ ಆಟದಲ್ಲಿ ಎದ್ದು ಕಾಣುತ್ತಿತ್ತು. ಮುಂದಿನ ಪಂದ್ಯಗಳಲ್ಲೂ ಅವರು ಇದೇ ರೀತಿ ಆಡಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.