ADVERTISEMENT

ನಾಯಕಿಯ ಆಟಕ್ಕೆ ಒಲಿದ ಗೆಲುವು

ಮಹಿಳಾ ಕ್ರಿಕೆಟ್‌: ಇಂಡಿಯಾ ಬ್ಲ್ಯೂ ತಂಡದ ಫೈನಲ್ ಆಸೆ ಜೀವಂತ, ಮಿಂಚಿದ ಕೌರ್‌

ಕೆ.ಓಂಕಾರಮೂರ್ತಿ
Published 15 ಜೂನ್ 2015, 19:37 IST
Last Updated 15 ಜೂನ್ 2015, 19:37 IST

ಮೈಸೂರು: ವಿಶ್ವವಿದ್ಯಾಲಯದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಅಚ್ಚಹಸಿರಿನ ಮಧ್ಯೆ ಅಲ್ಲಲ್ಲಿ ಗುಂಪು ಕಟ್ಟಿಕೊಂಡು ಕುಳಿತು ಆಟಗಾರ್ತಿಯರನ್ನು ಹುರಿದುಂಬಿಸು ತ್ತಿದ್ದರು. ವಿಕೆಟ್‌ ಬಿದ್ದಾಗ, ಬೌಂಡರಿ ಗಳಿಸಿದಾಗ ಚಪ್ಪಾಳೆ ತಟ್ಟಿ ಜೋರಾಗಿ ಶೀಟಿ ಹಾಕುತ್ತಿದ್ದರು. ಆಟದ ಮಧ್ಯೆ ಮಳೆ ಹಾಗೂ ಬಿಸಿಲಿನ ಕಣ್ಣಾಮುಚ್ಚಾಲೆ ಬೇರೆ.

ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಸೋಮವಾರ ಮಹಿಳಾ ಕ್ರಿಕೆಟ್‌ಗೆ ಒಂಥರಾ ಕಳೆ ಬಂದಿತ್ತು. ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಹಾಗೂ ಕರ್ನಾಟಕದ ವೇದಾ ಕೃಷ್ಣಮೂರ್ತಿ ಬ್ಯಾಟಿಂಗ್ ಕೂಡ ಜೋರಾಗಿತ್ತು. ಇದರ ಲಾಭ ಪಡೆದ ಇಂಡಿಯಾ ಬ್ಲ್ಯೂ ತಂಡದವರು ಮಹಿಳೆಯರ ಚಾಲೆಂಜರ್‌ ಟ್ರೋಫಿ ಏಕದಿನ
ಕ್ರಿಕೆಟ್‌ ಟೂರ್ನಿಯ ಎರಡನೇ ಪಂದ್ಯದಲ್ಲಿ 47 ರನ್‌ಗಳ ಜಯಭೇರಿ ಮೊಳಗಿಸಿದರು.

ಮೊದಲು ಬ್ಯಾಟ್‌ ಮಾಡಿದ ಬ್ಲ್ಯೂ ತಂಡ 50 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 201 ರನ್‌ ಗಳಿಸಿತು. ಈ ಸವಾಲಿನ ಮೊತ್ತದ ಎದುರು ಇಂಡಿಯಾ ಗ್ರೀನ್‌ ಬಳಗದವರು 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ ಗಳಿಸಿದ್ದು ಕೇವಲ 154 ರನ್‌.

ಸಾರಿಕಾ ಆಟದ ಸೊಬಗು: ಟಾಸ್‌ ಗೆದ್ದು ಮೊದಲು ಬ್ಯಾಟ್‌್ ಮಾಡಲು ಮುಂದಾದ ಇಂಡಿಯಾ ಬ್ಲ್ಯೂಗೆ ಸಾರಿಕಾ ಉತ್ತಮ ಅಡಿಪಾಯ ಹಾಕಿಕೊಟ್ಟರು. ಕವರ್ ಡ್ರೈವ್ ಬೌಂಡರಿಗಳ ಮೂಲಕ ಚಪ್ಪಾಳೆ ಗಿಟ್ಟಿಸಿಕೊಂಡರು.

ತಂಡದ ಸ್ಕೋರ್‌ 67 ರನ್‌ ಆಗಿದ್ದಾಗ ಸಾರಿಕಾ ಔಟಾದರು. ಅಷ್ಟರಲ್ಲಿ ವೈಯಕ್ತಿಕವಾಗಿ 42 ರನ್‌ ಗಳಿಸಿದ್ದು ವಿಶೇಷ. ಅಷ್ಟೇ ಅಲ್ಲ, ಆರು ಬೌಂಡರಿಗಳಿದ್ದವು. 9 ಹಾಗೂ 30 ಗಳಿಸಿದ್ದಾಗ ಅವರಿಗೆ ಜೀವದಾನ ಲಭಿಸಿದವು.

ಕೌರ್‌–ವೇದಾ ಜುಗಲ್‌ಬಂದಿ: ಪಂದ್ಯದ ಪ್ರಮುಖ ಘಟ್ಟವೆಂದರೆ ಹರ್ಮನ್‌ಪ್ರೀತ್‌ ಹಾಗೂ ವೇದಾ ಜೊತೆಯಾಟ. ಒಂಟಿ ಹಾಗೂ ಎರಡು ರನ್‌ ತೆಗೆಯುತ್ತಾ ಎದುರಾಳಿ ಬೌಲರ್‌ಗಳನ್ನು ಸತಾಯಿಸಿದರು.

ಇವರಿಬ್ಬರು ನಾಲ್ಕನೇ ವಿಕೆಟ್‌ಗೆ 82 ರನ್‌ (123 ಎಸೆತ) ಸೇರಿಸಿದರು. ಈ ಜೋಡಿಯನ್ನು ಬೇರ್ಪಡಿಸಲು ಗ್ರೀನ್‌ ತಂಡದ ನಾಯಕಿ ದೇವಿಕಾ ವೈದ್ಯ ತುಂಬಾ ಪ್ರಯತ್ನಿಸಿದರು. ವೇದ ಕಲೆಹಾಕಿದ್ದು 36 ರನ್‌. ಆಕ್ರಮಣಕಾರಿಯಾಗಿದ್ದ ಅವರು ಮೂರು ಬೌಂಡರಿ ಗಳಿಸಿದರು.

ಕೌರ್‌ ಆಟದ ವೈಭವ: ಇಂಡಿಯಾ ರೆಡ್‌ ವಿರುದ್ಧ ಎದುರಾದ ಸೋಲಿನಿಂದ ಕಂಗೆಟ್ಟಿದ್ದ ನಾಯಕಿ ಹರ್ಮನ್‌ಪ್ರೀತ್‌ ಈ ಪಂದ್ಯದಲ್ಲಿ ಜವಾಬ್ದಾರಿಯುತ ಇನಿಂಗ್ಸ್‌ ಕಟ್ಟಿದರು. ದೇವಿಕಾ ಬೌಲಿಂಗ್‌ನಲ್ಲಿ ಒಂಟಿ ರನ್‌ ತೆಗೆದು ಅರ್ಧ ಶತಕದ ಗೆರೆ ಮುಟ್ಟಿದರು.

114 ನಿಮಿಷ ಕ್ರೀಸ್‌ನಲ್ಲಿದ್ದ ಅವರು 63 ರನ್‌ ಗಳಿಸಿದರು. 94 ಎಸೆತ ಎದುರಿಸಿ 5 ಬೌಂಡರಿ ಬಾರಿಸಿದರು. ಚುರುಕಿನಿಂದ ರನ್‌ ಗಳಿಸಿ ತಂಡದ ಮೊತ್ತ ಹೆಚ್ಚಾಗಲು ಕಾರಣರಾದರು.

ನಿಧಾನವೇ ಪ್ರಧಾನ: ಸವಾಲಿನ ಗುರಿ ಎದುರು ಇಂಡಿಯಾ ಗ್ರೀನ್‌ ತಂಡದವರು (19 ವರ್ಷದೊಳಗಿನವರು) ನಿಧಾನಗತಿಯ ಆಟಕ್ಕೆ ಮೊರೆ ಹೋದರು. ವಿಕೆಟ್‌ ಕಾಯ್ದುಕೊಳ್ಳಲು ಹೆಚ್ಚು ಒತ್ತು ನೀಡಿದ್ದರಿಂದ ರನ್‌ ಬರಲಿಲ್ಲ.

ಅಷ್ಟೇ ಅಲ್ಲ, ಈ ತಂಡದ ಆಟಗಾರ್ತಿಯರು ಅಪಾಯಕಾರಿ ಹೊಡೆತಕ್ಕೆ ಕೈಹಾಕಲಿಲ್ಲ. ಬದಲಾಗಿ ರಕ್ಷಣಾತ್ಮಕವಾಗಿ ಆಡುತ್ತಾ ಒಂಟಿ ಹಾಗೂ ಎರಡು ರನ್‌ ಗಳಿಸಿದರು.

ಗ್ರೀನ್ ತಂಡಕ್ಕೆ ಆಸರೆಯಾಗಿದ್ದು ತಾನಿಯಾ ಭಾಟಿಯಾ (67). ಈ ಪಂದ್ಯದ ಹೆಚ್ಚಿನ ಸ್ಕೋರರ್‌ ಕೂಡ. 107 ನಿಮಿಷ ಕ್ರೀಸ್‌ನಲ್ಲಿದ್ದ ಮಧ್ಯಮ ಕ್ರಮಾಂಕದ ಈ ಆಟಗಾರ್ತಿ 101 ಎಸೆತ ಎದುರಿಸಿ 9 ಬೌಂಡರಿ ಗಳಿಸಿದರು.

ಬ್ಲ್ಯೂ ತಂಡದ ಬಿಗಿ ಬೌಲಿಂಗ್‌ನಿಂದಾಗಿ ಎದುರಾಳಿ ತಂಡದ ಹಾದಿ ಕಷ್ಟವಾಯಿತು. ಪ್ರೀತಿ ಬೋಸ್‌ ನಾಲ್ಕು ವಿಕೆಟ್‌ ಪಡೆದು ಒತ್ತಡ ಹೇರಿದರು. ಎಡಗೈ ಸ್ಪಿನ್ನರ್‌ ಏಕ್ತಾ ಬಿಸ್ತ್‌ ತಮ್ಮ ಮೊದಲ ನಾಲ್ಕು ಓವರ್‌ಗಳಲ್ಲಿ ಯಾವುದೇ ರನ್‌ ನೀಡಲಿಲ್ಲ.

ಇಂಡಿಯಾ ಬ್ಲೂ 7 ಕ್ಕೆ 201   (50 ಓವರ್‌ಗಳಲ್ಲಿ)

ಸಾರಿಕಾ ಸಿ ಅಂಡ್‌ ಬಿ ದೇವಿಕಾ ವೈದ್ಯ  42
ತಿರುಷ್‌ ಕಾಮಿನಿ ಸ್ಟಂಪ್ಡ್‌ ತಾನಿಯಾ ಭಾಟಿಯಾ ಬಿ ದೀಪ್ತಿ ಶರ್ಮ  09
ರಕ್ಷಿತಾ ಕೆ. ಕಾಳೇಗೌಡ ಸಿ ದೀಪ್ತಿ ಶರ್ಮ ಬಿ ಸುಶ್ರೀ ಪ್ರಧಾನ್‌  10
ಹರ್ಮನ್‌ಪ್ರೀತ್‌ ಕೌರ್‌ ಸಿ ತೇಜಲ್‌ ಬಿ ದೀಪ್ತಿ ಶರ್ಮ  63
ವೇದಾ ಕೃಷ್ಣಮೂರ್ತಿ ಸಿ ತಾನಿಯಾ ಭಾಟಿಯಾ ಬಿ ಪೂಜಾ ವಸ್ತ್ರಕರ್‌  36
ನಿರಂಜನಾ ನಾಗರಾಜನ್‌ ರನ್‌ಔಟ್‌ (ಪೂಜಾ ವಸ್ತ್ರಕರ್‌)  13
ಅನುಜಾ ಪಾಟೀಲ್‌ ಔಟಾಗದೆ  14
ಸುಷ್ಮಾ ವರ್ಮ ಸಿ ಪುಷ್ಪಾ ಕಿರೇಸೂರ್‌ ಬಿ ಸುಶ್ರೀ ಪ್ರಧಾನ್‌  01
ಏಕ್ತಾ ಬಿಸ್ತ್‌ ಔಟಾಗದೆ  02
ಇತರೆ: (ಲೆಗ್‌ಬೈ–1, ವೈಡ್‌–10)  11
  ವಿಕೆಟ್ ಪತನ:  1–38 (ತಿರುಷ್‌; 6.3); 2–67 (ಸಾರಿಕಾ; 18.2); 3–73 (ರಕ್ಷಿತಾ; 21.6); 4–155 (ವೇದಾ; 42.3); 5–172 (ನಿರಂಜನಾ; 44.4);  6–189 (ಹರ್ಮನ್‌ಪ್ರೀತ್‌; 47.4); 7–192 (ಸುಷ್ಮಾ; 48.3)
ಬೌಲಿಂಗ್ ವಿವರ: ಪೂಜಾ ವಸ್ತ್ರಕರ್‌ 10–1–48–1 (ವೈಡ್‌–5), ಪುಷ್ಪಾ ಕಿರೇಸೂರ್‌ 3–0–21–0 (ವೈಡ್‌–5), ದೀಪ್ತಿ ಶರ್ಮ 10–1–32–2, ಸೈಕಾ ಇಷ್ಕಿಯು  8–2–28–0, ದೇವಿಕಾ ವೈದ್ಯ 8–1–32–1, ಸುಶ್ರೀ ಪ್ರಧಾನ್‌ 7–0–23–2, ತೇಜಲ್‌ 4–0–16–0

ಇಂಡಿಯಾ ಗ್ರೀನ್‌ 9 ಕ್ಕೆ 154  (50 ಓವರ್‌ಗಳಲ್ಲಿ)
ದಿವ್ಯಾ ಜ್ಞಾನಾನಂದ ಸಿ ಸುಷ್ಮಾ ವರ್ಮ ಬಿ ಕವಿತಾ ಪಾಟೀಲ್‌  04
ರಮ್ಯಾ ಡೊಲಿ ಸಿ ಏಕ್ತಾ ಬಿಸ್ತ್‌ ಬಿ ಕವಿತಾ ಪಾಟೀಲ್  09
ಜೆಮಿಮಾ ರಾಡ್ರಿಗಾಸ್ ಸಿ ತಿರುಷ್‌ ಕಾಮಿನಿ ಬಿ ಪ್ರೀತಿ ಬೋಸ್‌  16
ದೇವಿಕಾ ವೈದ್ಯ ಬಿ ಅನುಜಾ ಪಾಟೀಲ್‌  04
ದೀಪ್ತಿ ಶರ್ಮ ಸ್ಟಂಪ್ಡ್‌ ಸುಷ್ಮಾ ವರ್ಮ ಬಿ ಹರ್ಮನ್‌ಪ್ರೀತ್‌ ಕೌರ್‌  20
ತಾನಿಯಾ ಭಾಟಿಯಾ ಸಿ ಸುಷ್ಮಾ ವರ್ಮ ಬಿ ಪ್ರೀತಿ ಬೋಸ್‌  67 
ತೇಜಲ್‌ ಸಿ ಹರ್ಮನ್‌ಪ್ರೀತ್‌ ಕೌರ್‌ ಬಿ ಪ್ರೀತಿ ಬೋಸ್‌  08
ಪೂಜಾ ವಸ್ತ್ರಕರ್‌ ಸಿ ಅನುಜಾ ಪಾಟೀಲ್‌ ಬಿ ಪ್ರೀತಿ ಬೋಸ್‌  11
ಪುಷ್ಪಾ ಕಿರೇಸೂರ್‌ ಸಿ ವೇದಾ ಕೃಷ್ಣಮೂರ್ತಿ ಬಿ ಏಕ್ತಾ ಬಿಸ್ತ್‌  02
ಸುಶ್ರೀ ಪ್ರಧಾನ್‌ ಔಟಾಗದೆ  00
ಸೈಕಾ ಇಷ್ಕಿಯು ಔಟಾಗದೆ  01
ಇತರೆ: (ವೈಡ್‌–12)  12
ವಿಕೆಟ್ ಪತನ:  1–12 (ರಮ್ಯಾ 3.5), 2–13 (ದಿವ್ಯಾ; 7.1), 3–33 (ಜೆಮಿಮಾ; 15.3); 4–37 (ದೇವಿಕಾ;19.5); 5–95 (ದೀಪ್ತಿ; 34.4); 6–124 (ತೇಜಲ್; 41.6); 7– 147 (ಪೂಜಾ; 47.1); 8–152 (ಪುಷ್ಪಾ; 48.2); 9–153 (ಭಾಟಿಯಾ; 49.4)
ಬೌಲಿಂಗ್ ವಿವರ: ನಿರಂಜನಾ ನಾಗರಾಜನ್‌ 6–0–22–0 (ವೈಡ್‌–1), ಕವಿತಾ ಪಾಟೀಲ್‌ 5– 2–15–2 (ವೈಡ್‌–2), ಏಕ್ತಾ ಬಿಸ್ತ್‌ 10–4–27–1, ಅನುಜಾ ಪಾಟೀಲ್‌ 10–0–21–1 (ವೈಡ್‌–1), ಪ್ರೀತಿ ಬೋಸ್‌ 10–1–23–4, ಹರ್ಮನ್‌ಪ್ರೀತ್‌ ಕೌರ್‌ 5–0–21–1 (ವೈಡ್‌–3), ಸಾರಿಕಾ 2–0–8–0 (ವೈಡ್‌–1), ವೇದಾ ಕೃಷ್ಣಮೂರ್ತಿ 2–0–17–0 (ವೈಡ್‌–4)
ಫಲಿತಾಂಶ: ಬ್ಲ್ಯೂ ತಂಡಕ್ಕೆ 47 ರನ್‌ಗಳ ಗೆಲುವು ಹಾಗೂ 4 ಪಾಯಿಂಟ್‌. ಮುಂದಿನ ಪಂದ್ಯ: ಇಂಡಿಯಾ ರೆಡ್‌–ಇಂಡಿಯಾ ಗ್ರೀನ್‌ (ಜೂನ್‌ 16)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT