ADVERTISEMENT

ನಿರಾಸೆ ಅನುಭವಿಸಿದ ಕಶ್ಯಪ್‌

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2014, 19:30 IST
Last Updated 24 ಅಕ್ಟೋಬರ್ 2014, 19:30 IST

ಪ್ಯಾರಿಸ್‌: ಭಾರತದ ಪರುಪಳ್ಳಿ ಕಶ್ಯಪ್‌ ಇಲ್ಲಿ ನಡೆಯುತ್ತಿರುವ ಫ್ರೆಂಚ್‌ ಓಪನ್‌ ಸೂಪರ್‌ ಸೀರಿಸ್‌ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ನಿರಾಸೆ ಅನುಭವಿಸಿದ್ದಾರೆ. ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಕಶ್ಯಪ್‌ 21–15, 13–21, 21–13ರಲ್ಲಿ ಚೀನಾದ ವಾಂಗ್‌ ಜೆಂಗ್‌ಮಿಂಗ್ ಎದುರು ಸೋತು ಹೊರಬಿದ್ದರು.

ಇಲ್ಲಿ ಐದನೇ ಶ್ರೇಯಾಂಕ ಹೊಂದಿ ರುವ ವಾಂಗ್‌ ಒಂದು ಗಂಟೆ ಐದು ನಿಮಿಷದ ಹೋರಾಟದ ಬಳಿಕ ಗೆಲುವು ಒಲಿಸಿಕೊಂಡರು. ಮೊದಲ ಗೇಮ್‌ನಲ್ಲಿ ಸೋಲು ಅನುಭವಿಸಿದ ಕಶ್ಯಪ್‌ ಎರಡನೇ ಗೇಮ್‌ ಗೆದ್ದು ಸಮಬಲ ಸಾಧಿಸಿದರು. ಆದರೆ ನಿರ್ಣಾಯಕ ಗೇಮ್‌ನಲ್ಲಿ ಶಿಸ್ತಿನ ಆಟ ತೋರಿದ ವಾಂಗ್‌ ಸೆಮಿಫೈನಲ್‌ಗೆ ಮುನ್ನಡೆದರು.

ಇದೀಗ ಈ ಟೂರ್ನಿಯಲ್ಲಿ ಸೈನಾ ನೆಹ್ವಾಲ್‌ ಮಾತ್ರ ಭಾರತದ ಭರವಸೆ ಎನಿಸಿಕೊಂಡಿದ್ದಾರೆ. ಹೈದರಾಬಾದ್‌ನ ಆಟಗಾರ್ತಿ ಮಹಿಳೆಯರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಚೀನಾದ ಶಿಕ್ಸಿಯಾನ್‌ ವಾಂಗ್‌ ಅವರ ಸವಾಲನ್ನು ಎದುರಿಸಲಿದ್ದಾರೆ. ಅಶ್ವಿನಿ– ಜ್ವಾಲಾಗೆ ಸೋಲು: ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲು ಅನುಭವಿಸಿತು.

ಗುರುವಾರ ನಡೆದ ಪಂದ್ಯದಲ್ಲಿ ಭಾರತದ ಜೋಡಿ 6–21, 8–21ರಲ್ಲಿ ಚೀನಾದ ವಾಂಗ್‌ ಕ್ಸಿಯೋಲಿ ಮತ್ತು ಯು ವಾಂಗ್ ಎದುರು ಪರಾಭವ ಗೊಂಡಿತು. ಇಲ್ಲಿ ಏಳನೇ ಶ್ರೇಯಾಂಕ ಹೊಂದಿರುವ ಚೀನಾದ ಜೋಡಿ ಕೇವಲ 23 ನಿಮಿಷಗಳಲ್ಲಿ ಗೆಲುವು ಒಲಿಸಿ ಕೊಂಡಿತು. ಪುರುಷರ ಡಬಲ್ಸ್‌ನಲ್ಲಿ ಪ್ರಣವ್‌ ಜೆರ್ರಿ ಚೋಪ್ರಾ ಮತ್ತು ಅಕ್ಷಯ್‌ ದೇವಾಲ್ಕರ್‌ ಜೋಡಿ ಕೂಡ ನಿರಾಸೆ ಕಂಡಿತು.ಚೀನಾ ತೈಪೆಯ ಶೆಂಗ್‌ ಲೀ–ಚಿಯಾ ಸಿನ್‌ 21–15, 19–21, 21–15 ರಲ್ಲಿ ಭಾರತದ ಜೋಡಿಯನ್ನು ಮಣಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.